ಭೀಮಸಮುದ್ರ, ಜು. 4:
ವರದಿ ಮತ್ತು ಫೋಟೋ ಕೃಪೆ ವೇದಮೂರ್ತಿ ಭೀಮಸಮುದ್ರ ಮೊ : 8088076203
ಹಂಪಾಪುರ ವಿದ್ಯುತ್ ಪ್ರಸರಣ (ಪವರ್ ಟ್ರಾನ್ಸ್ಮಿಷನ್) ಮಾರ್ಗವನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ಭೀಮಸಮುದ್ರ ಸಮೀಪದ ಹುಲ್ಲೂರು, ಸಿಂಗಾಪುರ ಹಾಗೂ ಬೆನಕನಹಳ್ಳಿ ಗ್ರಾಮಗಳ ರೈತರು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಿದರು.
ಜಗಳೂರು ತಾಲೂಕಿನ ಹಿರೇಮಲ್ಲಿನ ಹೊಳೆ ಪ್ರದೇಶಕ್ಕೆ ಸಂಬಂಧಿಸಿದ ಕೆಪಿಟಿಸಿಎಲ್ನ 400 ಕೆವಿ ವಿದ್ಯುತ್ ಪ್ರಸರಣ ಯೋಜನೆಯಡಿ ಈ ಮೂರು ಗ್ರಾಮಗಳ ವ್ಯಾಪ್ತಿಯ ಸುಮಾರು 100 ಎಕರೆ ಅಡಿಕೆ ತೋಟಗಳ ಮೇಲೆ ವಿದ್ಯುತ್ ಮಾರ್ಗ ಹಾದು ಹೋಗುವಂತೆ ಯೋಜನೆ ರೂಪಿಸಲಾಗಿದೆ ಎಂದು ರೈತರು ತಿಳಿಸಿದ್ದಾರೆ.
ಈ ಯೋಜನೆ ಜಾರಿಯಾದರೆ ಅಡಿಕೆ ತೋಟಗಳಿಗೆ ಗಂಭೀರ ಹಾನಿಯಾಗಲಿದ್ದು, ರೈತರು ತಮ್ಮ ಜೀವನೋಪಾಯವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಆದ್ದರಿಂದ ಕೃಷಿ ಭೂಮಿ ಹಾಗೂ ಅಡಿಕೆ ತೋಟಗಳಿಗೆ ಹಾನಿಯಾಗದ ರೀತಿಯಲ್ಲಿ ವಿದ್ಯುತ್ ಮಾರ್ಗವನ್ನು ಮರುಪರಿಶೀಲಿಸಿ, ಪರ್ಯಾಯ ಮಾರ್ಗದ ಮೂಲಕ ಸ್ಥಳಾಂತರಿಸಬೇಕು ಎಂದು ರೈತರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ರೈತರ ಮನವಿಯನ್ನು ಸ್ವೀಕರಿಸಿದ ಸಂಸದ ಗೋವಿಂದ ಕಾರಜೋಳ ಅವರು ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು ಎಂದು ರೈತರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರೈತರಾದ ಶಶಿಧರ್, ಗಂಗಾಧರಪ್ಪ, ಕಲ್ಲೇಶ್, ದಿನೇಶ್, ರಾಜು, ಸಂದೀಪ್, ಮಲ್ಲಿಕಾರ್ಜುನ್, ನಾರಪ್ಪ ಹಾಗೂ ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: