ಹರಳಯ್ಯ ಶ್ರೀಗಳಿಗೆ ಪೊಲೀಸ್ ರಕ್ಷಣೆ ನೀಡಿ: ಹಲ್ಲೆಗಾರನಿಗೆ ಕಠಿಣ ಶಿಕ್ಷೆ ಆಗಲಿ – ಎಚ್.ಆಂಜನೇಯ

ಚಿತ್ರದುರ್ಗ, ಜು.24:

ಪೋಟೋ ಮತ್ತು ವರದಿ ಮಾರುತಿ

ಮಾದಿಗ ಸಮುದಾಯವನ್ನು ಶೈಕ್ಷಣಿಕ, ಸಾಮಾಜಿಕವಾಗಿ ಮುಂಚೂಣಿಗೆ ತರಲು ಅವಿರತವಾಗಿ ಶ್ರಮಿಸುತ್ತಿದ್ದ ಹರಳಯ್ಯ ಮಠದ ಶ್ರೀ ಬಸವ ಹರಳಯ್ಯ ಸ್ವಾಮೀಜಿ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ ವ್ಯಕ್ತಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಕಾನೂನು ಕ್ರಮಕೈಗೊಳ್ಳಬೇಕಿದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಆಗ್ರಹಿಸಿದರು.

ಐಮಂಗಲ ಸಮೀಪದ ಹರಳಯ್ಯ ಮಠದ ಜಮೀನು ವಿವಾದ ತೀವ್ರ ಸ್ವರೂಪ ಪಡೆದು ಹರಳಯ್ಯ ಶ್ರೀಗಳ
ಮೇಲೆ ಈಚೆಗೆ ಸ್ಥಳೀಯ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದನು. ಗಂಭೀರವಾಗಿ ಗಾಯಗೊಂಡಿದ್ದ
ಶ್ರೀಗಳನ್ನು ಜಿಲ್ಲಾಸ್ಪತ್ರೆ ಬಳಿಕ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ವಲ್ಪ ಗುಣಮುಖರಾದ ಬಳಿಕ ಚಿತ್ರದುರ್ಗ ಬಸವೇಶ್ವರ ಆಸ್ಪತ್ರೆಗೆ ದಾಖಲಾಗಿದ್ದ
ಶ್ರೀಗಳನ್ನು ಭೇಟಿ ಮಾಡಿದ ಆಂಜನೇಯ, ಸಾಂತ್ವಾನದ ಜೊತೆಗೆ ಆತ್ಮಸ್ಥೈರ್ಯದಿಂದ
ಇರುವಂತೆ ಹೇಳಿದರು.

ಬಳಿಕ ಮಾತನಾಡಿ, ಮುರುಘ ಮಠದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರ ಆಶಯ,
ಸಹಕಾರದೊಂದಿಗೆ ಐಮಂಗಲ ಸಮೀಪ ಹರಳಯ್ಯ ಮಠ ಸ್ಥಾಪಿಸಿಕೊಂಡು ಮಾದಿಗ ಸಮುದಾಯದ ಪ್ರಗತಿಗೆ ಶ್ರಮಿಸುತ್ತಿದ್ದ ಶ್ರೀಗಳು, ಶಿಕ್ಷಣ ಸಂಸ್ಥೆ ಸ್ಥಾಪಿಸಿಕೊಂಡು ಸುತ್ತಮುತ್ತಲ ಬಡ
ಮಕ್ಕಳಿಗೆ ಅಕ್ಷರ ಕಲಿಕೆ, ಜ್ಞಾನ ಬಿತ್ತುವ ಕೆಲಸ ಮಾಡುತ್ತಿದ್ದರು. ಇಂತಹ ಶ್ರೀಗಳ ಸೇವಾ ಕಾರ್ಯಕ್ಕೆ ಬೆಂಬಲವಾಗಿ ನಿಲ್ಲಬೇಕಾಗಿದ್ದ ವ್ಯಕ್ತಿಯೊಬ್ಬ ದಬ್ಬಾಳಿಕೆ ಪ್ರದರ್ಶಿಸಿದ್ದಾನೆ ಎಂದರು.

ಶೋಷಿತ, ಅತ್ಯಂತ ಹಿಂದುಳಿದ ಸಮುದಾಯದ ಧಾರ್ಮಿಕ ಮುಖ್ಯಸ್ಥರಾಗಿರುವ ಹರಳಯ್ಯ ಶ್ರೀಗಳ
ಮೇಲೆ ಅಮಾನವೀಯವಾಗಿ ವರ್ತಿಸಲಾಗಿದೆ. ಠಾಣೆಗೆ ನುಗ್ಗಿ ದೂರು ನೀಡುತ್ತಿದ್ದ ಶ್ರೀಗಳ ಎದೆಗೆ ಕಾಲಿನಿಂದ ಒದ್ದು, ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ. ಪರಿಣಾಮ ಶ್ರೀಗಳ ಬೆನ್ನುಮೂಳೆಗೆ ತೀವ್ರ ಪೆಟ್ಟಾಗಿದ್ದು, ಇನ್ನಷ್ಟು ದಿನಗಳ ಕಾಲ ಚಿಕಿತ್ಸೆ ಪಡೆಯಬೇಕಾಗಿದೆ ಎಂದು ತಿಳಿಸಿದರು.

ತಕ್ಷಣವೇ ಹರಳಯ್ಯ ಶ್ರೀಗಳಿಗೆ ಪೊಲೀಸ್ ರಕ್ಷಣೆ ನೀಡಬೇಕು. ದೌರ್ಜನ್ಯ ನಡೆಸಿದ ವ್ಯಕ್ತಿಗೆ ಕಠಿಣ ಶಿಕ್ಷೆ ಆಗುವ ರೀತಿ ಪೊಲೀಸರು ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಬೇರೆ ಬೇರೆ ಸ್ಥಳದಲ್ಲಿ ಸೇವಾ
ಕಾರ್ಯದಲ್ಲಿ ತೊಡಗಿರುವ ಮಠಾಧೀಶರ ಮೇಲೂ ಇಂತಹ ಹಲ್ಲೆಗಳು ನಡೆಯುವ ಸಾಧ್ಯತೆ ಅವಕಾಶ ಕಲ್ಪಿಸಿದಂತೆ ಆಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಶ್ರೀಗಳ ಮೇಲೆ ಹಲ್ಲೆ ನಡೆಸಿರುವ ದುಷ್ಕೃತ್ಯವನ್ನು ನಾಡಿನ ಮಠಾಧೀಶರೆಲ್ಲರೂ ಒಕ್ಕೊರಲ ಧ್ವನಿಯಿಂದ ಖಂಡಿಸಬೇಕು. ಮುಖ್ಯವಾಗಿ ಹರಳಯ್ಯ ಶ್ರೀಗಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದು ಕೋರಿದರು.

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸ್ಥಳಕ್ಕೆ ಭೇಟಿ ನೀಡಿ ಒಂದು ಗುಂಟೆ
ಖರಾಬ್ ಜಮೀನನ್ನು ಸರ್ಕಾರ ಸಾರ್ವಜನಿಕ ಹಿತಾಸಕ್ತಿಯಡಿ ವಶಪಡಿಸಿಕೊಂಡು ಹರಳಯ್ಯ ಮಠದ ಸುಪರ್ದಿಗೆ ನೀಡಬೇಕು. ಆಕಸ್ಮಿಕ ತುಂಡು ಭೂಮಿಗೆ ಮಾಲೀಕನಿದ್ದರೇ ಆತನಿಗೆ ಸರ್ಕಾರದಿಂದ
ಪರಿಹಾರ ನೀಡಿ ಧಾರ್ಮಿಕ ಕಾರ್ಯಕ್ಕೆ ಜಮೀನು ಒಪ್ಪಿಸಬೇಕೆಂದು ತಿಳಿಸಿದರು.

Leave a Reply

Your email address will not be published. Required fields are marked *