ಹೈಲೈಟ್ಸ್:
- ಈ ಮೊದಲು 8ನೇ ತರಗತಿಗೆ ಮಾತ್ರ ಸೀಮಿತವಾಗಿದ್ದ ಉಚಿತ ಶಿಕ್ಷಣ ಇದೀಗ 10ನೇ ತರಗತಿವರೆಗೆ ವಿಸ್ತರಣೆ.
- 2025-26ನೇ ಸಾಲಿನಲ್ಲಿ ಆರ್ಟಿಇ ಅಡಿ 8ನೇ ತರಗತಿ ಪೂರೈಸಿದ ಎಸ್ಸಿ/ಎಸ್ಟಿ ಮಕ್ಕಳಿಗೆ ಮಾತ್ರ ಈ ನಿಯಮ ಅನ್ವಯ.
- ಈಗಾಗಲೇ ಶುಲ್ಕ ಪಾವತಿಸಿದ್ದರೆ ಮರುಪಾವತಿ, ಟಿಸಿ (TC) ಪಡೆದವರಿಗೂ ಮರು ಸೇರ್ಪಡೆಗೆ ಅವಕಾಶ.
ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಜಾರಿಗೆ ಬಂದಿರುವ ಶಿಕ್ಷಣ ಹಕ್ಕು ಕಾಯ್ದೆಯಡಿ (RTE) ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಮಹತ್ವದ ಸಿಹಿಸುದ್ದಿ ನೀಡಿದೆ. ಈ ಹಿಂದೆ ಆರ್ಟಿಇ ಅಡಿಯಲ್ಲಿ ಕೇವಲ 8ನೇ ತರಗತಿಯವರೆಗೆ ಮಾತ್ರ ಇದ್ದ ಉಚಿತ ಶಿಕ್ಷಣದ ಸೌಲಭ್ಯವನ್ನು ಇದೀಗ 10ನೇ ತರಗತಿಯವರೆಗೆ (SSLC) ವಿಸ್ತರಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ನಿಯಮ ಯಾರಿಗೆ ಅನ್ವಯ?
ಆರ್ಟಿಇ ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ ಶೇ.25ರ ಮೀಸಲಾತಿಯಡಿ ಪ್ರವೇಶ ಪಡೆದ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳು 8ನೇ ತರಗತಿ ಪೂರೈಸಿದ ಬಳಿಕ, ಅದೇ ಶಾಲೆಯಲ್ಲಿ 9 ಮತ್ತು 10ನೇ ತರಗತಿಯನ್ನು ಉಚಿತವಾಗಿ ಮುಂದುವರಿಸಬಹುದಾಗಿದೆ. ಈ ಎರಡು ವರ್ಷಗಳ ಶಾಲಾ ಶುಲ್ಕವನ್ನು ಸರ್ಕಾರವೇ ನೇರವಾಗಿ ಶಾಲೆಗಳಿಗೆ ಭರಿಸಲಿದೆ.
ಶಿಕ್ಷಣ ಇಲಾಖೆ ಆಯುಕ್ತರ ಸುತ್ತೋಲೆಯ ಪ್ರಕಾರ, 2025-26ನೇ ಶೈಕ್ಷಣಿಕ ಸಾಲಿನಲ್ಲಿ ಆರ್ಟಿಇ ಅಡಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಪ್ರಸಕ್ತ 2026-27ನೇ ಸಾಲಿನಲ್ಲಿ 9ನೇ ತರಗತಿಗೆ ಹಾಗೂ ಮುಂದಿನ ವರ್ಷ 10ನೇ ತರಗತಿಗೆ ಈ ಉಚಿತ ಶಿಕ್ಷಣದ ಸೌಲಭ್ಯ ಅನ್ವಯವಾಗಲಿದೆ.
ಶುಲ್ಕ ಮರುಪಾವತಿ ಮತ್ತು ಟಿಸಿ ನಿಯಮ
- ಶುಲ್ಕ ಮರುಪಾವತಿಗೆ ಸೂಚನೆ: ಸರ್ಕಾರದ ಈ ಹೊಸ ಆದೇಶದ ಕುರಿತು ಮಾಹಿತಿ ಇಲ್ಲದೆ, ಪೋಷಕರು ಈಗಾಗಲೇ 9ನೇ ತರಗತಿಗೆ ಖಾಸಗಿ ಶಾಲೆಗಳಿಗೆ ದಾಖಲಾತಿ ಶುಲ್ಕ ಪಾವತಿಸಿದ್ದರೆ, ಆಯಾ ಶಾಲೆಗಳು ಆ ಹಣವನ್ನು ಕಡ್ಡಾಯವಾಗಿ ಪೋಷಕರಿಗೆ ಹಿಂದಿರುಗಿಸಬೇಕು.
- ಟಿಸಿ ಪಡೆದವರಿಗೂ ಮರು-ಅವಕಾಶ: 8ನೇ ತರಗತಿ ಮುಗಿದ ನಂತರ ಬೇರೆ ಶಾಲೆಗೆ ಹೋಗುವ ಉದ್ದೇಶದಿಂದ ಈಗಾಗಲೇ ವರ್ಗಾವಣೆ ಪತ್ರ (TC) ಪಡೆದುಕೊಂಡಿರುವ ವಿದ್ಯಾರ್ಥಿಗಳು, ಪೋಷಕರ ಸಮ್ಮತಿ ಇದ್ದರೆ ಮರಳಿ ಅದೇ ಖಾಸಗಿ ಶಾಲೆಗೆ ಸೇರಿ ಉಚಿತವಾಗಿ ಶಿಕ್ಷಣ ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ.
ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ
ಸರ್ಕಾರದ ಈ ಹೊಸ ನಿಯಮವನ್ನು ರಾಜ್ಯದ ಎಲ್ಲಾ ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳು ಕಡ್ಡಾಯವಾಗಿ ಪಾಲಿಸುವಂತೆ ನೋಡಿಕೊಳ್ಳುವುದು ಇಲಾಖೆಯ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಆಯಾ ಜಿಲ್ಲಾ ಉಪನಿರ್ದೇಶಕರು (DDPI) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO) ತಮ್ಮ ವ್ಯಾಪ್ತಿಯ ಶಾಲೆಗಳ ಮೇಲೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸಬೇಕು ಎಂದು ಶಿಕ್ಷಣ ಇಲಾಖೆ ಆಯುಕ್ತ ವಿಕಾಸ್ ಕಿಶೋರ್ ಸುರಳ್ಕರ್ ತಮ್ಮ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.