ಚಿತ್ರದುರ್ಗ|ಕನ್ನಡ ನಾಡಿನ ಪುನರುದಯದ ಸ್ಮರಣೆಯೇ ರಾಜ್ಯೋತ್ಸವದ ಮುಖ್ಯ ಉದ್ದೇಶ- ಜಿ.ಎಸ್. ಉಜ್ಜನಪ್ಪ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ, ನ. 19: ಒಂದು ಕಾಲದಲ್ಲಿ ಕರ್ನಾಟಕವು ಕಾವೇರಿಯಿಂದ ಗೋದಾವರಿಯವರೆಗೆ ಹರಡಿದ್ದ ವಿಶಾಲ ನಾಡಾಗಿತ್ತು. ಆದರೆ ಐತಿಹಾಸಿಕ ಘಟನೆಗಳ ಪರಿಣಾಮವಾಗಿ ರಾಜಕೀಯ ಪಲ್ಲಟದಿಂದ ಈ ರಾಜ್ಯವು ಮರಾಠರು, ಇಂಗ್ಲೀಷರು ,ನಿಜಾಮ, ತೆಲುಗರು ಮೊದಲಾದವರ ಆಳ್ವಿಕೆಗೆ ಸೇರಿ ಛಿದ್ರ ಛಿದ್ರವಾಯಿತು. ಆದರೂ ಕನ್ನಡಿಗರಲ್ಲಿ ಸಾಂಸ್ಕೃತಿಕ ಏಕತೆ ಮಾತ್ರ ಏಕ ಪ್ರಕಾರವಾಗಿತ್ತು ಎಂದು ಸಾಹಿತಿ, ಪತ್ರಕರ್ತ ,ವಾಗ್ಮಿ ಜಿ.ಎಸ್. ಉಜ್ಜನಪ್ಪ ನುಡಿದರು.

ಚಿತ್ರದುರ್ಗದ ಜೆಸಿಆರ್ ಬಡಾವಣೆಯ ಶ್ರೀ ಗಣಪತಿ ದೇವಾಲಯ ಸೇವಾ ಸಮಿತಿ, ಗಮಕ ಕಲಾಭಿಮಾನಿಗಳ ಸಂಘ, 22ನೇ ವಾರ್ಡಿನ ಕ್ಷೇಮಾಭಿವೃದ್ಧಿ ಸಂಘ ,ಸ್ವರಾತ್ಮಿಕಾ ಸಂಗೀತ ಶಾಲೆ, ಹಾಗೂ ಶ್ರೀ ಶಾರದ ಕಲಾ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ 69ನೇ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಾ ಈ ಪರಿಸ್ಥಿತಿಯನ್ನು ಕಂಡು ಅನೇಕ ಜನ ಕನ್ನಡದ ಮಹನೀಯರು ಮರುಗಿ ಕೊರಗಿದರು. ಈ ಸಾಂಸ್ಕೃತಿಕ ಏಕತೆ ರಾಜಕೀಯ ಏಕತೆಯಾದರೆ ಮತ್ತೆ ಕನ್ನಡ ನಾಡು ಉದಯವಾಗುವುದಲ್ಲಾ ಎಂದು ಹಂಬಲಿಸಿದರು. ಇಂತಹ ಮಹನೀಯರಲ್ಲಿ ಡೆಪ್ಯೂಟಿ ಚನ್ನಬಸಪ್ಪನವರು ,ಆಲೂರು ವೆಂಕಟರಾಯರು ಪ್ರಾತಃಸ್ಮರಣೀಯರು. ಮುಂದೆ ಅವರ ಚಿಂತನೆ ಕರ್ನಾಟಕ ಏಕೀಕರಣ ಚಳುವಳಿಗೆ ಕಾರಣವಾಗಿ 1956 ರ ನವಂಬರ್ ನಂದು ನವ ಮೈಸೂರು ರಾಜ್ಯ ಉದಯವಾದದ್ದು, 1973 ರಲ್ಲಿ ಕರ್ನಾಟಕವೆಂದು ಕರೆದುದು ಕಾರಣವಾಯಿತಷ್ಟೇ. ಇಂತಹ ಮಹತ್ಕಾರ್ಯಕ್ಕೆ ಕಾರಣರಾದ ಸರ್ವ ಮಹನೀಯರನ್ನು, ಪ್ರಮುಖ ಘಟನೆಗಳನ್ನು ಸ್ಮರಿಸುವುದು ಹಾಗೂ ಕರ್ನಾಟಕದ ಸರ್ವತೋಮುಖ ಕಲ್ಯಾಣಕ್ಕೆ ಕಂಕಣಬದ್ಧ ರಾಗುವುದು ರಾಜ್ಯೋತ್ಸವದ ಪ್ರಮುಖ ಉದ್ದೇಶ ಎಂದು ಉಜ್ಜನಪ್ಪ ನುಡಿದರು.

ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಜಿ.ಎಸ್ .ಉಜ್ಜನಪ್ಪ ಮತ್ತು ಸುರೇಶ್ ಪಟ್ಟಣ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ನಾಡಗೀತೆಯೊಂದಿಗೆ ಆರಂಭವಾದ ಸಭೆಯಲ್ಲಿ ಕವಿ ಡಿ.ಎಸ್. ಕರ್ಕಿ ಅವರ ಹಚ್ಚೇವು ಕನ್ನಡದ ದೀಪ ಎಂಬ ಗೀತೆಯಸಾಮೂಹಿಕ ಗಾಯನದೊಂದಿಗೆ ಕನ್ನಡಾಂಬೆಗೆ ಆರತಿ ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ಸುಂದರವಾಗಿ ಅಲಂಕೃತವಾದ ಸಾಕ್ಷಿ ,ವೈಷ್ಣವಿ, ಗಾನವಿ, ಮತ್ತು ದ್ಯುತಿ ಅವರು ಕಳಸ ಸಹಿತ ದೀಪ ಧಾರಣೀಯರಾಗಿ
ಈ ಕಾರ್ಯಕ್ರಮಕ್ಕೆ ಶೋಭೆಯನ್ನು ತಂದರು.ಶ್ರೀ ಶಾರದಾ ಕಲಾ ಕೇಂದ್ರದ ವಿ// ಮೀನಾಕ್ಷಿ ಭಟ್ ತಮ್ಮ ಶಿಷ್ಯರೊಂದಿಗೆ ಕನ್ನಡವೆಂದರೆ
ಬರಿ ನುಡಿಯಲ್ಲ, ಹಿರಿದಿದೆ ಅದರರ್ಥ, ಕನ್ನಡ ಕನ್ನಡ ಕನ್ನಡ ಎಂಬ ನಾಡಗೀತೆಗಳನ್ನು ಹಾಡಿದರು. ಸ್ವರಾತ್ಮಿಕಾ ಸಂಗೀತ ಶಾಲೆಯ ವಿ//
ಚಂಪಕಾ ಶ್ರೀಧರ್ ಅವರು ತಮ್ಮ ಸಂಗಡಿಗರೊಂದಿಗೆ ದೀಪದಿಂದ ದೀಪವ ಹಚ್ಚಬೇಕು ಮಾನವ, ಅಕ್ಕ ಕೇಳೇ ನಾನೊಂದು ಕನಸ ಕಂಡೆ
,ರಾಜ್ಯೋತ್ಸವದ ಶುಭೋದಯ ಎಂಬ ಗೀತೆಗಳನ್ನು ಹಾಡಿ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಗಳನ್ನು ಎತ್ತಿ ಹಿಡಿಯುವ ಗೀತೆಗಳನ್ನು
ಹಾಡಿದರು. ಗಣಪತಿ ದೇವಾಲಯದ ಮಾರುತಿ ಭಜನಾ ಮಂಡಳಿಯವರು ಜೋಗದ ಸಿರಿ ಬೆಳಕಿನಲ್ಲಿ ತುಂಗಿಯ ತೆನೆ ಬಳುಕಿನಲ್ಲಿ,
ನಿಂಬೀಯಾ ಬನದ ಮ್ಯಾಗಳ ಎಂಬ ಗೀತೆಗಳನ್ನು ಹಾಡಿ ಕನ್ನಡ ಪ್ರೇಮವನ್ನು ಉದ್ದೀಪಿಸಿದರು.

ಕಾರ್ಯಕ್ರಮದಲ್ಲಿ ಪ್ರಿಶಾ ,ಸಂತೃಪ್ತಿ ,ಅಮೋಘಾ ಎಂಬ ಪುಟ್ಟ ಬಾಲಕಿಯರು ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು ಎಂಬ ಗೀತೆಗೆ ಮಾಡಿದ ನೃತ್ಯ ಸಭಿಕರ ಮನ ಸೆಳೆಯಿತು. 22 ನೇ ವಾರ್ಡಿನ ಕಾಲಾವತಿ ಮತ್ತು ಭವ್ಯ ಅವರು ಚೆಲುವಯ್ಯ ಚೆಲುವೋ ಎಂಬ ಜಾನಪದ ಗೀತೆಗೆ ಕೋಲಾಟ ಪ್ರದರ್ಶಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಉತ್ಸಾಹಿ ಮಹಿಳೆಯರು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ
ಡಾ. ರಾಜ್ ಅವರ ಅಮರ ಗೀತೆಯ ಗಾಯನಕ್ಕೆ ಸಂಭ್ರಮದ ಸಮೂಹ ನೃತ್ಯ ಪ್ರದರ್ಶಿಸಿದರು.

22ನೇ ವಾರ್ಡಿನ ಕ್ಷಮಾಭಿವೃದ್ಧಿ ಸಂಘದ ಸುರೇಶ್ ಬಾಬು ಸ್ವಾಗತಿಸಿದರು. ಜಿ .ಆರ್. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ನಗರ ಸಭೆಯ
ಸದಸ್ಯ ರೋಹಿಣಿ ನವೀನ್ ಮತ್ತು ಮುರುಗೇಶ್ ಗೌಡ ಮುಖ್ಯ ಅತಿಥಿಗಳಾಗಿದ್ದರು. ಸಂಘದ ಅಧ್ಯಕ್ಷರಾದ ಕೆ. ಆರ್ .ರಮಾದೇವಿ
ವೆಂಕಣ್ಣಾಚಾರ್ ಶರಣು ಸಮರ್ಪಣೆ ಮಾಡಿದರು. ಬಿ .ಎಲ್ .ಉಮಾ ಕಾರ್ಯಕ್ರಮ ನಿರ್ವಹಿಸಿದರು.
…….
ಮುಂದಿನ ಅಂದರೆ 17ನೆಯ ಮಾಸಿಕ ಗಮಕ ಕಾರ್ಯಕ್ರಮವು ಡಿಸೆಂಬರ್ 27ರ ಭಾನುವಾರ ಸಂಜೆ 6 ಗಂಟೆಗೆ ಜೆಸಿಆರ್ ಬಡಾವಣೆಯ
ಗಣಪತಿ ದೇವಾಲಯದ ಆವರಣದಲ್ಲಿ ನಡೆಯಲಿದ್ದು. ಕುಮಾರವ್ಯಾಸ ಭಾರತದ “ಕರ್ಣ ಭೇದನ” ಕಥಾ ಭಾಗದ ವಾಚನ ,ವ್ಯಾಖ್ಯಾನ
ನಡೆಯಲಿದೆ. ಶ್ರೀಮತಿ ಅಂಶು ಆನಂತ್ ಮತ್ತು ಡಾ. ರಾಜೀವಲೋಚನ ಅವರುಗಳು ನಡೆಸಿ ಕೊಡುವರು ಎಂದು ಸಂಘದ ಪ್ರಕಟಣೆ
ತಿಳಿಸಿದೆ.

Leave a Reply

Your email address will not be published. Required fields are marked *