ವೈದ್ಯರ ಬಳಿ ಯಾವಾಗ ಹೋಗಬೇಕು? ಮನೆಯಲ್ಲೇ ಯಾವಾಗ ಆರೈಕೆ ಮಾಡಬಹುದು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್.

ಬೆಂಗಳೂರು: “ಆರೋಗ್ಯವೇ ಭಾಗ್ಯ” ಎಂಬ ಮಾತು ನಮಗೆಲ್ಲ ತಿಳಿದಿದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ನಾವು ಸಾಮಾನ್ಯವಾಗಿ ಮನೆಯಲ್ಲೇ ಇರುವ ಮದ್ದುಗಳನ್ನು ಮಾಡಿ ಸುಮ್ಮನಾಗುತ್ತೇವೆ. ಆದರೆ, ದೇಹದಲ್ಲಿ ಕಾಣಿಸಿಕೊಳ್ಳುವ ಕೆಲವು ಅನಿರೀಕ್ಷಿತ ಬದಲಾವಣೆಗಳನ್ನು ಅಸಡ್ಡೆ ಮಾಡಿದರೆ, ಅದು ಮುಂದೊಂದು ದಿನ ಪ್ರಾಣಾಪಾಯಕ್ಕೆ ಕಾರಣವಾಗಬಹುದು ಎಂದು ತಜ್ಞರಎಚ್ಚರಿಸಿದ್ದಾರೆ.

ಯಾವ ಸಂದರ್ಭದಲ್ಲಿ ನಾವು ಮನೆಯ ಆರೈಕೆಯನ್ನು ಬಿಟ್ಟು ನೇರವಾಗಿ ವೈದ್ಯರ ಬಳಿ ಓಡಬೇಕು ಎಂಬುದರ ಕುರಿತು ಮಹತ್ವದ ಮಾಹಿತಿ ಇಲ್ಲಿದೆ .

1. ಹಠಾತ್ ಪ್ರಜ್ಞೆ ತಪ್ಪುವುದು (Fainting): ಯಾವುದೇ ಮುನ್ಸೂಚನೆ ಇಲ್ಲದೆ ಹಠಾತ್ ಆಗಿ ಪ್ರಜ್ಞೆ ತಪ್ಪಿ ಬೀಳುವುದನ್ನು ಹಗುರವಾಗಿ ಪರಿಗಣಿಸಬಾರದು. ಮೆದುಳಿಗೆ ರಕ್ತ ಸಂಚಾರದಲ್ಲಿ ವ್ಯತ್ಯಯವಾದಾಗ ಅಥವಾ ರಕ್ತದೊತ್ತಡದಲ್ಲಿ (BP) ಏರುಪೇರಾದಾಗ ಹೀಗಾಗುವ ಸಾಧ್ಯತೆ ಇರುತ್ತದೆ. ಇಂತಹ ಲಕ್ಷಣಗಳು ಕಂಡ ತಕ್ಷಣ ವೈದ್ಯಕೀಯ ತಪಾಸಣೆ ಅತ್ಯಗತ್ಯ.

2. ಎದೆನೋವು ಮತ್ತು ಉಸಿರಾಟದ ಸಮಸ್ಯೆ: ಅನೇಕರು ಎದೆನೋವು ಬಂದ ತಕ್ಷಣ ಅದು ‘ಗ್ಯಾಸ್ಟ್ರಿಕ್’ ಎಂದು ಭಾವಿಸಿ ಸೋಡಾ ಅಥವಾ ಇನ್ಯಾವುದೋ ಪಾನೀಯ ಕುಡಿದು ಸುಮ್ಮನಾಗುತ್ತಾರೆ. ಆದರೆ,ತಜ್ಞರ ಪ್ರಕಾರ, ಎದೆನೋವಿನ ಜೊತೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡರೆ, ಅದು ಶ್ವಾಸಕೋಶದ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಲಕ್ಷಣವಾಗಿರಬಹುದು. ಅಥವಾ ಹೃದಯ ಸಂಬಂಧಿ ಕಾಯಿಲೆಯ ಮುನ್ಸೂಚನೆಯೂ ಆಗಿರಬಹುದು. ಇಂತಹ ಸಮಯದಲ್ಲಿ ಮನೆಮದ್ದು ಮಾಡುತ್ತಾ ಕಾಲಹರಣ ಮಾಡುವುದು ಅಪಾಯಕಾರಿ.

3. ಈ ಲಕ್ಷಣಗಳಿದ್ದರೆ ನಿರ್ಲಕ್ಷ್ಯ ಬೇಡ: ಕೇವಲ ಗಂಭೀರ ಕಾಯಿಲೆಗಳಲ್ಲ, ದಿನನಿತ್ಯದ ಈ ಕೆಳಗಿನ ಸಮಸ್ಯೆಗಳು ಪದೇ ಪದೇ ಬಾಧಿಸುತ್ತಿದ್ದರೆ ತಜ್ಞರ ಸಲಹೆ ಪಡೆಯುವುದು ಸೂಕ್ತ:

  • ತಲೆನೋವು: ಪದೇ ಪದೇ ವಿಪರೀತ ತಲೆನೋವು ಬರುತ್ತಿದ್ದರೆ, ನೀವಾಗಿಯೇ ಮೆಡಿಕಲ್ ಶಾಪ್‌ಗಳಲ್ಲಿ ಮಾತ್ರೆ ತೆಗೆದುಕೊಂಡು ನುಂಗಬೇಡಿ. ಇದು ಬೇರೆ ಯಾವುದೋ ಸಮಸ್ಯೆಯ ಲಕ್ಷಣವಾಗಿರಬಹುದು.
  • ತೂಕ ಇಳಿಕೆ: ನೀವು ಡಯಟ್ ಮಾಡದಿದ್ದರೂ ಅಥವಾ ವ್ಯಾಯಾಮ ಮಾಡದಿದ್ದರೂ ನಿಮ್ಮ ತೂಕ ತಾನಾಗಿಯೇ ಕಡಿಮೆಯಾಗುತ್ತಿದ್ದರೆ ಎಚ್ಚರ ವಹಿಸಿ.
  • ನಿರಂತರ ಜ್ವರ: ಪದೇ ಪದೇ ಜ್ವರ ಬರುವುದು ಮತ್ತು ಸದಾ ಅನಾರೋಗ್ಯದಿಂದ ಬಳಲುತ್ತಿದ್ದರೆ ರೋಗನಿರೋಧಕ ಶಕ್ತಿ ಕುಂದಿರುವ ಸಾಧ್ಯತೆ ಇರುತ್ತದೆ.
  • ಹೊಟ್ಟೆಯ ಸಮಸ್ಯೆ: ಹಸಿವಾಗದಿರುವುದು, ತಿಂದ ಆಹಾರ ಜೀರ್ಣವಾಗದಿರುವುದು ಅಥವಾ ವಿಪರೀತ ಹೊಟ್ಟೆನೋವು ಇದ್ದರೆ ಗ್ಯಾಸ್ಟ್ರೋಎಂಟರಾಲಜಿಸ್ಟ್ (Gastroenterologist) ಅವರನ್ನು ಭೇಟಿ ಮಾಡಿ.
  • ಕೂದಲು ಉದುರುವುದು: ಅತಿಯಾದ ಕೂದಲು ಉದುರುವಿಕೆ ಮತ್ತು ನಡೆಯುವಾಗ ಅಥವಾ ಕೆಲಸ ಮಾಡುವಾಗ ದೇಹದ ಸಮತೋಲನ (Stability) ಕಳೆದುಕೊಳ್ಳುವುದು ನರಗಳ ದೌರ್ಬಲ್ಯದ ಸೂಚನೆಯಾಗಿರಬಹುದು.

ಆರೋಗ್ಯದಲ್ಲಿ ಏರುಪೇರಾದಾಗ ಸ್ವಯಂ ವೈದ್ಯ ಪದ್ಧತಿಗಿಂತ, ತಜ್ಞರ ಸಲಹೆ ಪಡೆಯುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *