
ಅಹಮದಾಬಾದ್ನಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ (India Vs Australia) ನಡುವಿನ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಅಂತಿಮ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಈ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ 2-1 ಅಂತರದಿಂದ ವಶಪಡಿಸಿಕೊಂಡಿದೆ. ಪಂದ್ಯದ ಐದನೇ ದಿನದಂದು ಬಿರುಸಿನ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಪಂದ್ಯವನ್ನು ಡ್ರಾಕ್ಕೆ ಕೊಂಡೊಯಿತು. ಇದರೊಂದಿಗೆ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದುಕೊಂಡಿದೆ. ಅಲ್ಲದೆ ಈ ಸರಣಿಯನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವುದರೊಂದಿಗೆ ತವರಿನಲ್ಲಿ ಸತತ 16ನೇ ಸರಣಿ ಗೆದ್ದ ದಾಖಲೆಯನ್ನೂ ಟೀಂ ಇಂಡಿಯಾದ ಬರೆದಿದೆ.
ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 480 ರನ್ಗಳಿಗೆ ಆಲೌಟ್ ಆಗಿತ್ತು. ಉಸ್ಮಾನ್ ಖವಾಜಾ ಆಸ್ಟ್ರೇಲಿಯಾ ಪರ ಗರಿಷ್ಠ 180 ರನ್ ಗಳಿಸಿದರು. ಇವರಲ್ಲದೆ ಬಿರುಸಿನ ಇನ್ನಿಂಗ್ಸ್ ಆಡಿದ ಕ್ಯಾಮರೂನ್ ಗ್ರೀನ್ ಕೂಡ 114 ರನ್ ಬಾರಿಸಿದ್ದರು. ಉಸ್ಮಾನ್ ಮತ್ತು ಗ್ರೀನ್ 208 ರನ್ಗಳ ಜೊತೆಯಾಟವನ್ನು ಹಂಚಿಕೊಳ್ಳುವುದರೊಂದಿಗೆ ಆಸೀಸ್ ಬಿಗ್ ಟಾರ್ಗೆಟ್ ಸೆಟ್ ಮಾಡುವುದರಲ್ಲಿ ನೆರವಾದರು. ಈ ಇಬ್ಬರನ್ನು ಹೊರತುಪಡಿಸಿ ಮೊದಲ ಇನ್ನಿಂಗ್ಸ್ನಲ್ಲಿ ಟಾಡ್ ಮರ್ಫಿ ಅಜೇಯ 41 ರನ್ ಗಳಿಸಿದರು.
ಇನ್ನು ನಾಯಕ ಸ್ಟೀವನ್ ಸ್ಮಿತ್ 38 ರನ್ ಗಳಿಸಿದರೆ, ನಾಥನ್ ಲಿಯಾನ್ ಕೂಡ 34 ರನ್ಗಳ ಕೊಡುಗೆ ನೀಡಿದ್ದರು. ಟ್ರಾವಿಸ್ ಹೆಡ್ 32 ರನ್ ಬಾರಿಸಿದ್ದರೆ, ಪೀಟರ್ ಹ್ಯಾಂಡ್ಸ್ಕಾಂಬ್ 17, ಮಿಚೆಲ್ ಸ್ಟಾರ್ಕ್ 6 ಮತ್ತು ಮಾರ್ನಸ್ ಲ್ಯಾಬುಸ್ಚಾಗ್ನೆ 3 ರನ್ ಗಳಿಸಿದರು. ಟೀಂ ಇಂಡಿಯಾ ಪರ ಅಶ್ವಿನ್ 6 ವಿಕೆಟ್ ಪಡೆದು ಮಿಂಚಿದರೆ, ಮೊಹಮ್ಮದ್ ಶಮಿ 2 ವಿಕೆಟ್, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದರು.