IPL 2026: ಸಿಎಸ್​ಕೆ ವಿರುದ್ಧ ಗುಜರಾತ್ ಟೈಟಾನ್ಸ್‌ಗೆ ಭರ್ಜರಿ ಜಯ; ಟೂರ್ನಿಯಿಂದ ಹೊರಬಿದ್ದ ಚೆನ್ನೈ!

​ಐಪಿಎಲ್ 2026ರ 66ನೇ ಹಾಗೂ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಗುಜರಾತ್ ಟೈಟಾನ್ಸ್ (GT) 89 ರನ್‌ಗಳ ಬೃಹತ್ ಗೆಲುವು ಸಾಧಿಸಿದೆ. ಈ ಅಮೋಘ ಗೆಲುವಿನೊಂದಿಗೆ ಗುಜರಾತ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದರೆ, ಹೀನಾಯ ಸೋಲುಂಡ ಚೆನ್ನೈ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ. ಹಾಲಿ ಚಾಂಪಿಯನ್ ಆರ್​ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಗುಜರಾತ್ ಟೈಟಾನ್ಸ್ ಬ್ಯಾಟಿಂಗ್ ಅಬ್ಬರ

​ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಗುಜರಾತ್ ತಂಡ, ನಿಗದಿತ 20 ಓವರ್‌ಗಳಲ್ಲಿ 229 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಆರಂಭಿಕರಾದ ನಾಯಕ ಶುಭಮನ್ ಗಿಲ್ (64 ರನ್, 37 ಎಸೆತ) ಮತ್ತು ಸಾಯಿ ಸುದರ್ಶನ್ (84 ರನ್, 53 ಎಸೆತ) ಮೊದಲ ವಿಕೆಟ್‌ಗೆ ಭರ್ಜರಿ 125 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಇನ್ನಿಂಗ್ಸ್‌ನ ಅಂತಿಮ ಓವರ್‌ಗಳಲ್ಲಿ ಅಬ್ಬರಿಸಿದ ಜೋಸ್ ಬಟ್ಲರ್ ಕೇವಲ 27 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅಜೇಯ 57 ರನ್ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಸಿಎಸ್​ಕೆ ಪರ ಬೌಲಿಂಗ್‌ನಲ್ಲಿ ಸ್ಪೆನ್ಸರ್ ಜಾನ್ಸನ್, ಅನ್ಶುಲ್ ಕಾಂಬೋಜ್ ಹಾಗೂ ಮುಖೇಶ್ ಚೌಧರಿ ತಲಾ ಒಂದೊಂದು ವಿಕೆಟ್ ಪಡೆದರಾದರೂ ರನ್ ನಿಯಂತ್ರಿಸುವಲ್ಲಿ ವಿಫಲರಾದರು.

ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ವೈಫಲ್ಯ

​230 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭದಲ್ಲೇ ತೀವ್ರ ಆಘಾತ ಅನುಭವಿಸಿತು. ಮೊಹಮ್ಮದ್ ಸಿರಾಜ್ ತಮ್ಮ ಮೊದಲ ಓವರ್‌ನಲ್ಲೇ ಸಂಜು ಸ್ಯಾಮ್ಸನ್ (0) ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ಆ ಬಳಿಕ ರುತುರಾಜ್ ಗಾಯಕ್ವಾಡ್ ಮತ್ತು ಉರ್ವಿಲ್ ಪಟೇಲ್ ಕೂಡ ಸಿರಾಜ್‌ಗೆ ಬಲಿಯಾದರು. ಸಿರಾಜ್ ತಮ್ಮ ಮೊದಲ ಎರಡು ಓವರ್‌ಗಳಲ್ಲಿ ಮೂರು ವಿಕೆಟ್ ಕಬಳಿಸಿ ಚೆನ್ನೈ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಅವರಿಗೆ ಸಾಥ್ ನೀಡಿದ ಕಗಿಸೊ ರಬಾಡ ಹಾಗೂ ರಶೀದ್ ಖಾನ್ ಕೂಡ ತಲಾ 3 ವಿಕೆಟ್ ಪಡೆದು ಸಿಎಸ್​ಕೆ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

​ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ ಕೇವಲ 17 ಎಸೆತಗಳಲ್ಲಿ 47 ರನ್ ಸಿಡಿಸಿ ಏಕಾಂಗಿ ಹೋರಾಟ ನಡೆಸಿದರೂ, ತಂಡವನ್ನು ಭಾರಿ ಸೋಲಿನಿಂದ ಪಾರುಮಾಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಚೆನ್ನೈ ಕೇವಲ 13.4 ಓವರ್‌ಗಳಲ್ಲಿ 140 ರನ್‌ಗಳಿಗೆ ಸರ್ವಪತನ ಕಂಡಿತು.

Leave a Reply

Your email address will not be published. Required fields are marked *