IPL 2026 Final: ಎರಡನೇ ಟ್ರೋಫಿಗಾಗಿ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಹೈವೋಲ್ಟೇಜ್ ಕದನ.

ಸಮಗ್ರ ಸುದ್ದಿ ಮೇ 31: ​ಐಪಿಎಲ್ 2026ರ ರೋಚಕ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಅಹಮದಾಬಾದ್‌ನ ಐತಿಹಾಸಿಕ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಗುಜರಾತ್ ಟೈಟಾನ್ಸ್ (GT) ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಮುಖಾಮುಖಿಯಾಗಲಿವೆ. ವಿಶೇಷವೆಂದರೆ, ಎರಡೂ ಬಲಿಷ್ಠ ತಂಡಗಳು ತಮ್ಮ ಎರಡನೇ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವ ತವಕದಲ್ಲಿ ಕಣಕ್ಕಿಳಿಯುತ್ತಿವೆ.

ಫೈನಲ್ ಹಾದಿ:

ಲೀಗ್ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದ ಆರ್‌ಸಿಬಿ, ಕ್ವಾಲಿಫೈಯರ್-1 ಪಂದ್ಯದಲ್ಲಿ ಇದೇ ಗುಜರಾತ್ ತಂಡವನ್ನು ಮಣಿಸಿ ದರ್ಪದಿಂದ ನೇರವಾಗಿ ಫೈನಲ್ ಪ್ರವೇಶಿಸಿತ್ತು. ಮತ್ತೊಂದೆಡೆ, ಗುಜರಾತ್ ಟೈಟಾನ್ಸ್ ತಂಡವು ಕ್ವಾಲಿಫೈಯರ್-2 ರಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿ ಫೈನಲ್ ಟಿಕೆಟ್ ಖಚಿತಪಡಿಸಿಕೊಂಡಿದ್ದು, ಇದೀಗ ಆರ್‌ಸಿಬಿ ವಿರುದ್ಧ ಸೇಡು ತೀರಿಸಿಕೊಳ್ಳುವ ವಿಶ್ವಾಸದಲ್ಲಿದೆ.

ಮುಖಾಮುಖಿ ಲೆಕ್ಕಾಚಾರ:

ಪ್ರಸಕ್ತ ಆವೃತ್ತಿಯಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗುತ್ತಿರುವ ನಾಲ್ಕನೇ ಪಂದ್ಯ ಇದಾಗಿದೆ. ಈ ಹಿಂದಿನ ಮೂರು ಹಣಾಹಣಿಗಳಲ್ಲಿ ಆರ್ ಸಿ ಬಿ ಮೇಲುಗೈ ಸಾಧಿಸಿದ್ದು, ಎರಡು ಬಾರಿ ಜಯಭೇರಿ ಬಾರಿಸಿದೆ. ಗುಜರಾತ್ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿದೆ. ಎರಡೂ ತಂಡಗಳು ಸಮಬಲದ ಹೋರಾಟ ನೀಡುವ ಸಾಮರ್ಥ್ಯ ಹೊಂದಿದ್ದು, ಈ ರೋಚಕ ಫೈನಲ್ ಪಂದ್ಯವು ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Leave a Reply

Your email address will not be published. Required fields are marked *