ಜೂನ್ 1ರಂದು ಭೀಮಸಮುದ್ರದಿಂದ ಪಾದಯಾತ್ರೆ: ಗಣಿ ಬಾಧಿತ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಆಗ್ರಹ.

ಭೀಮಸಮುದ್ರ, ಮೇ 31:

ವರದಿ ಮತ್ತು ಫೋಟೋ ಕೃಪೆ ವೇದಮೂರ್ತಿ ಭೀಮಸಮುದ್ರ ಮೊ : 8088076203

ಗಣಿ ಬಾಧಿತ ಪರಿಸರ ಮತ್ತು ಜನ ಬದುಕಿನ ಪುನರ್ಚೇತನ ಹೋರಾಟ ಸಮಿತಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಭೀಮಸಮುದ್ರ ಘಟಕದ ವತಿಯಿಂದ ಜೂನ್ 1, 2026ರಂದು ಬೆಳಿಗ್ಗೆ 7 ಗಂಟೆಗೆ ಭೀಮಸಮುದ್ರದಿಂದ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.

ಭೀಮಸಮುದ್ರ, ವಿ.ಪಾಳ್ಯ, ಬೊಮ್ಮೇನಹಳ್ಳಿ, ಬೆದರು ಬೊಮ್ಮನಹಳ್ಳಿ, ಮೇಗಳಹಳ್ಳಿ, ಕಡ್ಲೆಗುಡ್ಡು, ಹಿರೇಗುಂಟನೂರು, ಹಳ್ಳಿಯೂರು, ಮಾನಂಗಿ, ಸಿದ್ದಾಪುರ, ಮಾಳಪ್ಪನಟ್ಟಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಹಾಗೂ ಹೋರಾಟ ಸಮಿತಿಯ ಸದಸ್ಯರು ಈ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

ಗಣಿ ಬಾಧಿತ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಉದ್ದೇಶದಿಂದ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಹಲವು ವರ್ಷಗಳಿಂದ ಗಣಿ ಲಾರಿಗಳ ನಿರಂತರ ಸಂಚಾರದಿಂದ ರಸ್ತೆ ಹಾಳಾಗಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ, ಗಣಿಗಾರಿಕೆಯಿಂದ ಸಂಗ್ರಹವಾಗಿರುವ ಸಿಎಸ್ಆರ್ (CSR) ನಿಧಿಯಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸೌಲಭ್ಯಗಳು ದೊರಕುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಸಿಎಸ್ಆರ್ ನಿಧಿಯನ್ನು ಬಳಸಿ ಗಣಿ ಬಾಧಿತ ಪ್ರದೇಶಗಳಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಯುವಕರಿಗೆ ಉದ್ಯೋಗಾವಕಾಶ, ಕೃಷಿಭೂಮಿಗಳಿಗೆ ನೀರಾವರಿ ಅಭಿವೃದ್ಧಿ, ಶಿಕ್ಷಣ ಕ್ಷೇತ್ರದ ಸುಧಾರಣೆ ಹಾಗೂ ಆರೋಗ್ಯ ತಪಾಸಣಾ ಕೇಂದ್ರಗಳ ಸ್ಥಾಪನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ.

ರೈತ ಸಂಘದ ಸದಸ್ಯ ಡಿ.ಎಂ. ಪ್ರಸನ್ನಕುಮಾರ್ ಮಾತನಾಡಿ, “ಜೂನ್ 1ರಂದು ಬೆಳಿಗ್ಗೆ 7 ಗಂಟೆಗೆ ಭೀಮಸಮುದ್ರ ಗ್ರಾಮದಿಂದ ಪಾದಯಾತ್ರೆ ಆರಂಭವಾಗಲಿದ್ದು, ಸುಮಾರು 15 ಗ್ರಾಮಗಳ ರೈತರು ಹಾಗೂ ಗ್ರಾಮಸ್ಥರು ಭಾಗವಹಿಸಲಿದ್ದಾರೆ. ಗಣಿ ಕಂಪನಿಗಳ ಚಟುವಟಿಕೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಸರ್ಕಾರದ ಗಮನಕ್ಕೆ ತರಲು ಈ ಹೋರಾಟ ನಡೆಸಲಾಗುತ್ತಿದೆ” ಎಂದು ಹೇಳಿದರು.

ಪಾಳ್ಯದಿಂದ ಭೀಮಸಮುದ್ರದವರೆಗೆ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಹಲವಾರು ಬಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಪಾದಯಾತ್ರೆಯ ಮೂಲಕ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಪಾದಯಾತ್ರೆಯಲ್ಲಿ ರೈತರು, ಯುವಕರು, ಮಹಿಳೆಯರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *