
ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಯಾರು ಮುನ್ನಡೆಸಲಿದ್ದಾರೆ? ಎಂಬ ಪ್ರಶ್ನೆಗೆ ಅಂತಿಮವಾಗಿ ಉತ್ತರ ಸಿಕ್ಕಿದೆ. 16ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ದಿನಗಳು ಹತ್ತಿರವಾಗುತ್ತಿದ್ದಂತೆ ಮಹತ್ವದ ನಿರ್ಧಾರ ತೆಗೆದುಕೊಂಡಿರವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮ್ಯಾನೇಜ್ಮೆಂಟ್ ತಂಡದ ನೂತನ ನಾಯಕನಾಗಿ ಎಡಗೈ ಬ್ಯಾಟ್ಸ್ಮನ್ ನಿತೀಶ್ ರಾಣಾ ಅವರನ್ನು ಆಯ್ಕೆ ಮಾಡಿದೆ. ಈ ಬಗ್ಗೆ ತನ್ನ ಟ್ವಿಟರ್ ಖಾತೆಯಲ್ಲಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಕೆಕೆಆರ್, ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಕೋಲ್ಕತ್ತಾ ತಂಡವನ್ನು ನಿತೀಶ್ ರಾಣಾ ಮುನ್ನಡೆಸಲಿದ್ದಾರೆ ಎಂದು ಬರೆದುಕೊಂಡಿದೆ. ಇತ್ತೀಚೆಗೆ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ ಪಂದ್ಯದಲ್ಲಿ ಅಂದರೆ ಅಹಮದಾಬಾದ್ ಟೆಸ್ಟ್ನಲ್ಲಿ ಶ್ರೇಯಸ್ ಗಾಯದ ಕಾರಣದಿಂದಾಗಿ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು. ಆ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿಯೂ ಶ್ರೇಯಸ್ ಆಡಲಾಗಲಿಲ್ಲ. ಹೀಗಾಗಿ ಐಪಿಎಲ್ನಲ್ಲೂ ಶ್ರೇಯಸ್ ಆಡುವ ಬಗ್ಗೆ ಅನುಮಾನಗಳಿದ್ದವು. ಆದ್ದರಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮ್ಯಾನೇಜ್ಮೆಂಟ್ ನಾಯಕನನ್ನು ಆಯ್ಕೆ ಮಾಡಬೇಕಾದ ಒತ್ತಡಕ್ಕೆ ಸಿಲುಕಿತ್ತು.
Official statement. @NitishRana_27 #AmiKKR #KKR #Nitish #NitishRana pic.twitter.com/SeGP5tBoql
— KolkataKnightRiders (@KKRiders) March 27, 2023
ರಾಣಾಗೂ ಮೊದಲು ಕೆಕೆಆರ್ ತಂಡದ ನಾಯಕತ್ವ ಯಾರ ಹೆಗಲೆರಲಿದೆ ಎಂಬ ಪ್ರಶ್ನೆಗೆ ತುಂಬಾ ಹತ್ತಿರವಾಗಿದ್ದ ಉತ್ತರವೆಂದರೆ ಅದು ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ಸುನೀಲ್ ನರೈನ್. 2012 ರಲ್ಲಿ ಫ್ರಾಂಚೈಸಿಗೆ ಸೇರಿದ ಸುನಿಲ್ ನರೈನ್ ಜೊತೆಗೆ ಹಂಗಾಮಿ ನಾಯಕತ್ವದ ರೇಸ್ನಲ್ಲಿ ರಾಣಾ ಕೂಡ ಒಬ್ಬರಾಗಿದ್ದರು. ನರೈನ್, ಇತ್ತೀಚೆಗೆ ನಡೆದ ILT20 ಲೀಗ್ನಲ್ಲಿ ಅಬುಧಾಬಿ ನೈಟ್ ರೈಡರ್ಸ್ ತಂಡವನ್ನು ನರೈನ್ ಮುನ್ನಡೆಸಿದ್ದರು. ಆ ಟೂರ್ನಿಯಲ್ಲಿ ಆಡಿದ 8 ಪಂದ್ಯಗಳಲ್ಲಿ 2 ರಲ್ಲಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಗಳಿಸಿತ್ತು. ಅಲ್ಲದೆ ಈ ತಂಡ ಕೆಕೆಆರ್ ಒಡೆತನದ ಮತ್ತೊಂದು ತಂಡವಾಗಿರುವುದರಿಂದ ನರೈನ್ಗೆ ನಾಯಕತ್ವ ಸಿಗಲಿದೆ ಎಂಬ ಮಾತು ಕೇಳಲಾರಂಭಿಸಿತ್ತು.