ರಾಜ್ಯ ಸಂಪುಟ ವಿಸ್ತರಣೆ: ಬಿ.ಜಿ. ಗೋವಿಂದಪ್ಪಗೆ ಸಚಿವ ಸ್ಥಾನ ನೀಡುವಂತೆ ಕುರುಬರ ಸಂಘ ಆಗ್ರಹ.

ಚಿತ್ರದುರ್ಗ ಆ. 04

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ರಾಜ್ಯ ಸಂಪುಟ ವಿಸ್ತರಣೆಯಲ್ಲಿ ಕುರುಬ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ ಎಂದು ಆರೋಪಿಸಿ, ಚಿತ್ರದುರ್ಗದ ಹಿರಿಯ ಶಾಸಕ ಬಿ.ಜಿ. ಗೋವಿಂದಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಚಿತ್ರದುರ್ಗ ಜಿಲ್ಲಾ ಕುರುಬರ ಸಂಘವು ಆಗ್ರಹಿಸಿದೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಟಿ.ಜಗದೀಶ್, ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಟಿ.ರಘುಮೂರ್ತಿ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಜಿಲ್ಲೆಗೆ ಪ್ರಾತಿನಿಧ್ಯ ನೀಡಿರುವುದಕ್ಕೆ ಅಭಿನಂದನೆ ಹಾಗೂ ಧನ್ಯವಾದಗಳನ್ನು ಸಲ್ಲಿಸಿದರು. ಆದರೆ, ರಾಜ್ಯದಲ್ಲಿ ಕುರುಬ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರದಲ್ಲಿ ಸೂಕ್ತ ಪಾಲು ಹಾಗೂ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಂಪುಟ ವಿಸ್ತರಣೆಯ ಕೊನೆಯ ಕ್ಷಣದವರೆಗೂ ಗಾಯತ್ರಿ ಶಾಂತೇಗೌಡ ಅವರ ಹೆಸರು ಕೇಳಿಬಂದರೂ ಸಹ ಅವರಿಗೆ ಪ್ರಮಾಣವಚನ ಸ್ವೀಕರಿಸಲು ಅವಕಾಶ ಸಿಗಲಿಲ್ಲ. ಇದರಿಂದ ಇಡೀ ಕುರುಬ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಶೇಷವಾಗಿ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗಗಳಲ್ಲಿ ಕುರುಬ ಜನಾಂಗದ ಜನಸಂಖ್ಯೆ ಅತ್ಯಧಿಕವಾಗಿದ್ದು, ಈ ಭಾಗಗಳಿಗೆ ಹೆಚ್ಚಿನ ಆದ್ಯತೆ ದೊರೆಯಬೇಕಿತ್ತು ಎಂದು ಅಭಿಪ್ರಾಯಪಟ್ಟ ಅವರು. ಈ ಹಿನ್ನೆಲೆಯಲ್ಲಿ ನಾಲ್ಕು ಬಾರಿ ಹೊಸದುರ್ಗ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ, ಗ್ರಾಮ ಪಂಚಾಯಿತಿಯಿಂದ ತಾಲೂಕು ಪಂಚಾಯಿತಿಯವರೆಗೆ ಆಡಳಿತ ಅನುಭವ ಹೊಂದಿರುವ ಹಾಗೂ ಕಾಗಿನೆಲೆ ಕನಕಗುರು ಪೀಠದ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಹಿರಿಯ ರಾಜಕಾರಣಿ ಬಿ.ಜಿ. ಗೋವಿಂದಪ್ಪ ಅವರಿಗೆ ಸಚಿವ ಸಂಪುಟದಲ್ಲಿ ಉಳಿದಿರುವ ಸ್ಥಾನವನ್ನು ನೀಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿ 2013 ಮತ್ತು 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಕುರುವ ಸಮಾಜ ಅಧಿಕ ರೀತಿಯಲ್ಲಿ ಮತವನ್ನು ಹಾಕುವುದರ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಧಿಕಾರಕ್ಕೆ ಬರÀಲು ಕಾರಣವಾಗಿದೆ ಎಂದರು.

ಒಂದು ವೇಳೆ ಸಂಘದ ಈ ಮನವಿಯನ್ನು ಪರಿಗಣಿಸದಿದ್ದರೆ, ಚಿತ್ರದುರ್ಗ ಜಿಲ್ಲೆಯಾದ್ಯಂತ ಉಗ್ರ ಸ್ವರೂಪದ ಹೋರಾಟ ರೂಪಿಸುವುದಾಗಿ ಎಚ್ಚರಿಸಿದರು. ಅಷ್ಟೇ ಅಲ್ಲದೆ, ಪ್ರದೇಶ ಕುರುಬರ ಸಂಘದ ಗಮನಕ್ಕೆ ತಂದು ಇಡೀ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಸ್ಪಷ್ಟ ಎಚ್ಚರಿಕೆಯನ್ನು ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿ ಇದ್ದಲ್ಲದೆ ಬರುವ ದಿನಗಳಲ್ಲಿ ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳ ಎರಡನೇ ಅವಧಿಯ ನೇಮಕಾತಿಯಲ್ಲಿಯೂ ಸಹ ಜನಸಂಖ್ಯೆಗೆ ಅನುಗುಣವಾಗಿ ಕುರುಬ ಸಮುದಾಯಕ್ಕೆ ಹೆಚ್ಚಿನ ಸ್ಥಾನಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಕುರುಬ ಸಂಘದ ಗೌರವಾಧ್ಯಕ್ಷರು, ನಗರಸಭೆಯ ಮಾಜಿ ಅಧ್ಯಕ್ಷರಾದ ಹೆಚ್.ಮಂಜಪ್ಪ ಮಾತನಾಡಿ, ಜಿಲ್ಲಾ ಕುರುಬ ಸಮಾಜ ಗೋವಿಂದಪ್ಪ ಪರವಾಗಿ ನಿಂತಿದೆ, ಅವರಿಗೆ ಮುಂದಿನ ದಿನದಲ್ಲಿ ಸಚಿವ ಸ್ಥಾನ ಸಿಗಲಿದೆ ಎಂಬ ಆಶಾ ಭಾವನೆ ಇದೆ. ಈಗಿನ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಲ್ಲಿ ಲಿಂಗಾಯತ ಸಮುದಾಯ ದಿಂದ 7 ಜನ, ಒಕ್ಕಲಿಗರಿಂದ 6 ಎಸ್.ಸಿ. ಎಸ್,ಟಿ.ಯಿಂದ 7 ಜನ ಹಾಗೂ ಮುಸ್ಲಿಂ ಸಮುದಾಯದಿಂದ 3 ಜನ ಸಚಿವರಾಗಿದ್ದಾರೆ. ರಾಜ್ಯದಲ್ಲಿ ಜನಸಂಖ್ಯೆಯಲ್ಲಿ ಮೂರಷ್ಟು ಇರುವ ಕುರುಬ ಸಮುದಾಯಕ್ಕೆ ಬರೀ 2 ಸಚಿವ ಸ್ಥಾನವನ್ನು ಮಾತ್ರ ನೀಡಲಾಗಿದೆ, ಅವರು ಸಹಾ ಮೈಸೂರು ಮಂಡ್ಯಕ್ಕೆ ಸೀಮಿತವಾಗಿದ್ದಾರೆ ಎಂದು ದೂರಿದ್ದು ಮಧ್ಯ ಕರ್ನಾಟಕಕ್ಕೆ ನಮ್ಮ ಸಮುದಾಯದವರು ಯಾರು ಇಲ್ಲದಂತೆ ಆಗುತ್ತಿದೆ ಎಂದರು.

ಕುರುಬ ಸಂಘದ ಮಾಜಿ ಕಾರ್ಯದರ್ಶಿ ಮಲ್ಲಿಕಾರ್ಜನ್ ಮಾತನಾಡಿ, ಕುರುಬ ಸಮಾಜ ತಾಳ್ಮೆಯಿಂದ ಕಾಯುತ್ತಿದೆ ನಮ್ಮ ಪಾಲಿನ ಸಚಿವ ಸ್ಥಾನವನ್ನು ನೀಡಲೇ ಬೇಕಿದೆ, ಇದರ ಬಗ್ಗೆ ಪಕ್ಷದ ಮುಖಂಡರ ಗಮನ ಸೆಳೆಯಲಾಗುವುದು ನಮಗೆ ನಾಟಕ ಮಾಡಲು ಬರುವುದಿಲ್ಲ ಏನಿದ್ದರು ನೆರವಾಗಿ ನಮ್ಮ ಬೇಡಿಕೆಯನ್ನು ಇಡುತ್ತೇವೆ, ಒಂದು ಸಲ ಶಾಸಕರಾದವರಿಗೆ ಮಂತ್ರಿ ಸ್ಥಾನವನ್ನು ನಿಡಲಾಗಿದೆ 4 ಭಾರಿ ಶಾಸಕರಾದವರಿಗೆ ಮಂತ್ರಿ ಸ್ಥಾನವನ್ನು ನೀಡಲ್ಲ ನಮ್ಮ ಪರವಾಗಿ ಧ್ವನಿಯನ್ನು ಎತ್ತುವವರ ಸಂಖ್ಯೆ ಇಲ್ಲವಾಗಿದೆ ಎಂದರು.

ಪತ್ರಿಕಾ ಗೋಷ್ಟಿಯಲ್ಲಿ ಕುರುಬ ಸಂಘದ ಖಂಜಾಚಿ ಮೃತ್ಯುಂಜಯ, ನಿದೇಶಕರಾದ ಸುರೇಶ್, ಚಿತ್ರದುರ್ಗ ತಾಲ್ಲೂಕು ಸಂಘದ ಕಾರ್ಯದರ್ಶಿ ರಾಜು, ಉಪಾಧ್ಯಕ್ಷ ಉಮೇಶ್, ಮುಖಂಡರಾದ ಓಂಕಾರಪ್ಪ, ಸಂಪತ್ ಕುಮಾರ್ ಮಾಳೇಶ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *