ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ,ಡಿ.31:
ಕೋಗಿಲು ಪ್ರದೇಶದಲ್ಲಿ ಬಡಾವಣೆ ನಿರ್ಮಾಣ ಬಿಜೆಪಿ ಅವರ ಆಡಳಿತದಲ್ಲೇ ಆಗಿರಬಹುದು ಎಂದು ಸಚಿವ ಸತೀಶ ಜಾರಕೀಹೊಳಿ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 29-30 ವರ್ಷಗಳಿಂದ ಎಲ್ಲಾ ಪಕ್ಷದ ಸರ್ಕಾರಗಳ ಆಡಳಿತ ನಡೆಸಿದ್ದು, ಯಾರ ಕಾಲದಲ್ಲಿ ಬಡಾವಣೆ ಆಗಿದೆ ? ಬಡಾವಣೆ ಆಗಿರೋದು ನಿಜ. ಆದರೆ ಯಾರು ಮಾಡಿದ್ದು ? ಹೇಗೆ ಗೊತ್ತಾಗುತ್ತದೆ ? ಬಿಜೆಪಿ ಆಡಳಿತಾವಧಿಯಲ್ಲಿಯೇ ಬಡಾವಣೆ ನಿರ್ಮಾಣ ಆಗಿರಬಹುದೇನೋ ? ಎಂದು ಪ್ರಶ್ನೆ ಮಾಡಿದರು.
ಕೋಗಿಲು ಪ್ರದೇಶದಲ್ಲಿ ಗುಡಿಸಲುಗಳು ಅನಧಿಕೃತ ಇರಬಹುದು ಹಾಗಾಗಿ ತೆರವುಗೊಳಿಸಿದ್ದಾರೆ. ಅದು ಚರ್ಚೆ ಮಾಡುವ ವಿಷಯವೇ ಅಲ್ಲ. ಅಲ್ಲದೆ ಪರಿಹಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿರುವುದರಿಂದ ಈ ವಿಷಯ ಪ್ರಸ್ತಾಪ ಅಪ್ರಸ್ತುತ ಎಂದರು. ಗುಡಿಸಲು ತೆರವುಗೊಳಿಸಿ ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. ಈ ವಿಚಾರದಲ್ಲಿ ಬಿಜೆಪಿ ಕೋರ್ಟ್ ಮೊರೆ ಹೋಗುತ್ತಿರುವ ಬಗ್ಗೆ ಅವರಿಗೆ ಕೇಳಿ ಎಂದು ಹೇಳಿದರು.
ಬಳ್ಳಾರಿಯಲ್ಲಿ 10 ಸಾವಿರ ಬಾಂಗ್ಲಾ ದೇಶದ ಪ್ರಜೆಗಳಿದ್ದಾರೆಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿಕೆ ವಿಚಾರವಾಗಿ ಮಾತನಾಡಿ, ಅನೇಕ ಕಡೆ ತೋಟಗಳಲ್ಲಿ ಕೆಲಸ ಮಾಡುತ್ತಾರೆ. ಅವರು ವೆಸ್ಟ್ ಬಂಗಾಳದವರಾ ? ಅಥವಾ ಬಾಂಗ್ಲಾ ದೇಶದವರಾ ? ಇದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಪತ್ತೆ ಮಾಡಬೇಕು ಎಂದು ಹೇಳಿದರು.
ಈ ವೇಳೆ ಮಾಜಿ ಸಚಿವರಾದ ಹೆಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಅನ್ವರ್ ಬಾಷಾ, ತಾಜ್ ಪೀರ್, ಹಾಲಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.