ಚಿತ್ರದುರ್ಗ ಜು 31:
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
2028 ರಲ್ಲಿ ನಡೆಯುವ ವಿಧಾನಸಭೆ ಹಾಗೂ 2029 ರಲ್ಲಿ ನಡೆಯುವ ಲೋಕಸಭೆ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎದುರಾಳಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸುವ ಸಾಮಥ್ರ್ಯವಿರುವವರನ್ನು ಹುಡುಕಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗುವುದು ಎಂದು ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ, ಮಾಜಿ ಸಂಸದ, ಜಿಲ್ಲಾ ವೀಕ್ಷಕರಾಗಿ ಆಗಮಿಸಿರುವ ರಿಪುನ್ ಬೊಹರಾ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಸಂಘಟನ್ ಸೃಜನ್ ಅಭಿಯಾನ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೋಮುವಾದಿ ಬಿಜೆಪಿ.ಯವರು ಜಾತಿ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತ ದೇಶವನ್ನು ವಿಭಜಿಸುವ ಕೆಲಸ ಮಾಡುತ್ತಿದ್ದಾರೆ. ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮವನ್ನು ವಿರೋಧಿಸಿ ದೆಹಲಿಯ ಜಂತರ್-ಮಂತರ್‍ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟಕ್ಕೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನಖರ್ಗೆ, ಪ್ರಿಯಾಂಕಗಾಂಧಿ ಇವರುಗಳು ಬೆಂಬಲಿಸಿ ಹೋರಾಟಕ್ಕೆ ಇಳಿದರು.
ಕಾಂಗ್ರೆಸ್ ತ್ಯಾಗ ಬಲಿದಾನದ ಇತಿಹಾಸವಿದೆ. ಬೇರೆ ಯಾವ ಪಕ್ಷಕ್ಕೂ ಇಂತಹ ಇತಿಹಾಸವಿಲ್ಲ ಎನ್ನುವುದನ್ನು ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಅರ್ಥಮಾಡಿಕೊಳ್ಳಬೇಕೆಂದ ಅವರು ಪದಾಧಿಕಾರಿಗಳು ಹಾಗೂ ನೈಜ ಕಾರ್ಯಕರ್ತರಿಂದ ಮಾಹಿತಿ ಸಂಗ್ರಹಿಸಿ ಕೆಪಿಸಿಸಿ. ಮೂಲಕ ಎಐಸಿಸಿಗೆ ಆಕಾಂಕ್ಷಿಗಳ ಹೆಸರುಗಳನ್ನು ರವಾನಿಸಲಾಗುವುದು. ಕರ್ನಾಟಕದವರೆ ಆಗಿರುವ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ. ಅಧ್ಯಕ್ಷರಾಗಿರುವುದರಿಂದ ಈ ರಾಜ್ಯಕ್ಕೆ ತನ್ನದೆ ಆದ ಪ್ರತಿಷ್ಠಿಯಿದೆ ಅದನ್ನು ಹಾಳು ಮಾಡುವುದು ಬೇಡ ಎಂದರು.
ಕೆಪಿಸಿಸಿ ಉಪಾಧ್ಯಕ್ಷರಾದ ವಿ.ಎಸ್.ಉಗ್ರಪ್ಪ ಮಾತನಾಡಿ ಕಾಂಗ್ರೆಸ್ ಎಂದರೆ ಶಿಸ್ತಿಗೆ ಹೆಸರುವಾಸಿಯಾದ ಪಕ್ಷ. ಶಿಸ್ತಿಲ್ಲದಿದ್ದರೆ ಪಕ್ಷವನ್ನು ಬೆಳೆಸಲು ಆಗಲ್ಲ. ಗೊಂದಲಗಳಿಂದ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅರ್ಹ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತದೆ. ಕಾಂಗ್ರೆಸ್ ಕಟ್ಟಾಳುಗಳಿಗೆ ಬದ್ದತೆ, ಪ್ರಾಮಾಣಿಕತೆ, ಪಕ್ಷ ನಿಷ್ಠೆಯಿರಬೇಕು. ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ, ಜೆಡಿಎಸ್.ಪಕ್ಷವನ್ನು ಎದುರಿಸಬೇಕಾಗಿರುವುದರಿಂದ ನೈಜ ಕಾರ್ಯಕರ್ತರು ಪದಾಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ಹೈಕಮಾಂಡ್‍ಗೆ ಕಳಿಸಿದ ನಂತರ ಜಿಲ್ಲಾ ಕಾಂಗ್ರೆಸ್‍ಗೆ ಅಧ್ಯಕ್ಷರನ್ನು ನೇಮಕ ಮಾಡಲಾಗುವುದೆಂದರು. ಭದ್ರಾ ಮೇಲ್ದಂಡೆ ಯೋಜನೆಗೆ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ನೀಡುವುದಾಗಿ ಕೇಂದ್ರ ಘೋಷಿಸಿರುವುದನ್ನು ಬಿಟ್ಟರೆ ಇದುವರೆವಿಗೂ ನಯಾ ಪೈಸೆಯನ್ನು ಕೊಟ್ಟಿಲ್ಲ. ಜಿಲ್ಲೆ ಬರಗಾಲಕ್ಕೆ ತುತ್ತಾಗಿದೆ. ಇಂತಹ ಅನೇಕ ಸಮಸ್ಯೆಗಳನ್ನು ಪಟ್ಟಿ ಮಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಸಾಮಾನ್ಯ, ಮಹಿಳೆ ಹೀಗೆ ಪ್ರತಿಯೊಬ್ಬರ ಮಾಹಿತಿಯನ್ನು ಕಲೆ ಹಾಕಿ ಹೆಸರುಗಳನ್ನು ವರಿಷ್ಟ ಮಂಡಳಿಗೆ ಶಿಫಾರಸ್ಸು ಮಾಡಲಾಗುವುದು. ಅರ್ಹರಿಗೆ ಚುನಾವಣೆಯಲ್ಲಿ ಟಿಕೇಟ್ ನೀಡಲಾಗುವುದೆಂದು ತಿಳಿಸಿದರು.
ಕೆಪಿಸಿಸಿ ಉಪಾಧ್ಯಕ್ಷ ಸೈಯದ್ ಅಹಮದ್ ಮಾತನಾಡುತ್ತ ಕಾರ್ಯಕರ್ತರು ಪದಾಧಿಕಾರಿಗಳೆ ಪಕ್ಷಕ್ಕೆ ನಿಜವಾದ ಶಕ್ತಿ. ನಿಮ್ಮ ಹೆಗಲ ಮೇಲೆ ಪಕ್ಷ ನಿಂತಿದೆ. ರಾಹುಲ್ ಗಾಂಧಿಯವರ ಮಾರ್ಗಸೂಚಿಯಂತೆ ಜಿಲ್ಲಾ ಕಾಂಗ್ರೆಸ್ ಗೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಸಂಘಟನ್ ಸೃಜನ್ ಅಭಿಯಾನ್ ಸಭೆಯನ್ನು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಮಾಡಿದ್ದೇವೆ. ಅಸೆಂಬ್ಲಿ ಚುನಾವಣೆಯನ್ನು ಸಮರ್ಥವಾಗಿ ಎದುರಿಸಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕಾಗಿರುವುದರಿಂದ ನಿಮ್ಮಗಳ ಅಭಿಪ್ರಾಯ ಸಂಗ್ರಹಿಸಲು ಬಂದಿದ್ದೇವೆ. ಇಲ್ಲಿ ಯಾರು ದೊಡ್ಡವರು ಯಾರು ಚಿಕ್ಕವರೂ ಅಲ್ಲ. ಎಲ್ಲರೂ ಸೇರಿದಾಗ ಮಾತ್ರ ಪಕ್ಷ ಎನ್ನುವುದನ್ನು ನೀವುಗಳು ಮರೆಯಬಾರದೆಂದು ಕಾರ್ಯಕರ್ತರು ಹಾಗೂ ಪದಾಧಿಕಾರಿಗಳಿಗೆ ಸೂಚಿಸಿ ನಿಮ್ಮ ವಿರುದ್ದ ನಾವುಗಳು ಬಂದಿಲ್ಲ. ನಿಮ್ಮ ಅಭಿಪ್ರಾಯ ಹೈಕಮಾಂಡ್ಗೆ ಹೋಗುತ್ತೆ. ಕಾಂಗ್ರೆಸ್ ಋಣ ನಿಮ್ಮ ಮೇಲಿದ್ದರೆ ಈ ಸಂದರ್ಭದಲ್ಲಿ ತೀರಿಸಿ. ನಿಮ್ಮ ಮನಸ್ಸಿನಲ್ಲಿರುವುದನ್ನು ತಿಳಿದುಕೊಳ್ಳಲು ಬಂದಿದ್ದೇವೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಕುಮಾರ್ ಮಾತನಾಡಿ ಐದು ತಾಲ್ಲೂಕುಗಳಲ್ಲಿ ಸಭೆ ಮುಗಿಸಿ ಕೊನೆಯದಾಗಿ ಚಿತ್ರದುರ್ಗಕ್ಕೆ ಬಂದಿದ್ದೇವೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ನೇಮಕಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬರ ಅಭಿಪ್ರಾಯ ಪಡೆದು ಪಕ್ಷದ ವರಿಷ್ಟರಿಗೆ ಕಳಿಸುತ್ತೇವೆ. ಅನಿಸಿಕೆಗಳನ್ನು ತಿಳಿಸಲು ಎಲ್ಲರಿಗೂ ಅವಕಾಶವಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಆರಕ್ಕೆ ಆರು ಕಾಂಗ್ರೆಸ್ ಪಕ್ಷ ಗೆಲ್ಲಬೇಕು. ಪಾರ್ಲಿಮೆಂಟ್ ಚುನಾವಣೆಯಲ್ಲಿಯೂ ಪಕ್ಷ ಅಧಿಕಾರ ಹಿಡಿಯಬೇಕು. ದೆಹಲಿಯ ಜಂತರ್-ಮಂತರ್Àನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟಕ್ಕೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಗಾಂಧಿ ಇವರುಗಳು ಬೆಂಬಲಸಿದ್ದರಿಂದ ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್ ತಲೆದಂಡವಾಯಿತು. ಜಾತಿ ಬೇಧ ಮರೆತು ಕಾಂಗ್ರೆಸ್ ಗೆಲ್ಲಿಸಿ ರಾಹುಲ್ ಗಾಂಧಿಯನ್ನು ದೇಶದ ಪ್ರಧಾನಿಯನ್ನಾಗಿ ಮಾಡಿ ಎಂದು ಕಾರ್ಯಕರ್ತರುಗಳಲ್ಲಿ ವಿನಂತಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ ಪೀರ್, ಕಾಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್ ಕುಮಾರ್, ಡಿ.ಎನ್.ಮೈಲಾರಪ್ಪ, ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಯು.ಲಕ್ಷ್ಮಿಕಾಂತ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ಮಾಜಿ ಶಾಸಕ ಎ.ವಿ.ಉಮಾಪತಿ ವೇದಿಕೆಯಲ್ಲಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.