ನವೆಂಬರ್ 1ರ ಬೆಳಗ್ಗೆ 6ರಿಂದ ಮರುದಿನ ಬೆಳಗ್ಗೆ 6ರವರೆಗೆ ಕನ್ನಡ ನಾಡು-ನುಡಿ, ಸಾಹಿತ್ಯ, ಕಲೆ, ಸಂಸ್ಕೃತಿಯ ಕುರಿತು ವಿಶೇಷ ಕಾರ್ಯಕ್ರಮ; ಪ್ರತಿ ಗಂಟೆಗೂ ಪ್ರಶ್ನೆ, ಆಕರ್ಷಕ ಬಹುಮಾನ!
ಕನ್ನಡ ರಾಜ್ಯೋತ್ಸವದ ಅಂಗವಾಗಿ ರೇಡಿಯೋ ಶಿವಮೊಗ್ಗ 90.8 ಎಫ್ಎಂ ವತಿಯಿಂದ 24 ಗಂಟೆಗಳ ನಿರಂತರ ನೇರಪ್ರಸಾರ ಕಾರ್ಯಕ್ರಮ ಆಯೋಜಿಸಲಾಗಿದೆ. ನವೆಂಬರ್ 1ರ ಬೆಳಗ್ಗೆ 6 ಗಂಟೆಯಿಂದ ನವೆಂಬರ್ 2ರ ಬೆಳಗ್ಗೆ 6 ಗಂಟೆಯವರೆಗೆ ನಡೆಯಲಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಕನ್ನಡ ನಾಡು, ನುಡಿ, ಸಾಹಿತ್ಯ, ಕಲೆ, ವಾಸ್ತುಶಿಲ್ಪ ಸೇರಿದಂತೆ ಕನ್ನಡದ ವಿವಿಧ ಆಯಾಮಗಳ ಕುರಿತು ಚರ್ಚೆ ನಡೆಯಲಿದೆ.
ಕನ್ನಡ ಮಾಧ್ಯಮ ಲೋಕದಲ್ಲಿ ಪ್ರಪ್ರಥಮ ಬಾರಿಗೆ ಇಂತಹ 24 ಗಂಟೆಗಳ ನಿರಂತರ ನೇರಪ್ರಸಾರ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ರೇಡಿಯೋ ಶಿವಮೊಗ್ಗದ ಪ್ರಕಟಣೆ ತಿಳಿಸಿದೆ. ರಾಜ್ಯ, ರಾಷ್ಟ್ರ ಹಾಗೂ ವಿದೇಶಗಳಲ್ಲಿರುವ ಕನ್ನಡಾಭಿಮಾನಿಗಳು ದೂರವಾಣಿ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡ ರಾಜ್ಯೋತ್ಸವದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಕನ್ನಡದ ವೈವಿಧ್ಯಮಯ ವಿಷಯಗಳ ಕುರಿತು ಚರ್ಚೆ
ಚಿತ್ರದುರ್ಗದ ಎಸ್.ಆರ್.ಎಸ್. ಶಿಕ್ಷಣ ಸಂಸ್ಥೆಯಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿರುವ ಸಿ. ಚೇತನ್ ಕುಮಾರ್ ಅವರು 24 ಗಂಟೆಗಳ ಕಾಲ ನೇರಪ್ರಸಾರದಲ್ಲಿ ಭಾಗವಹಿಸಲಿದ್ದಾರೆ. ಇವರೊಂದಿಗೆ ರೇಡಿಯೋ ನಿಲಯದ ಆರ್ಜೆಗಳಾದ ಶ್ವೇತಾ, ಮಹಾಲಕ್ಷ್ಮಿ, ಪವಿತ್ರಾ ದಿನೇಶ್, ಅರ್ಪಿತಾ, ರಕ್ಷಿತಾ ಮತ್ತು ಶ್ರೀಧರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕನ್ನಡದ ರಾಜಮನೆತನಗಳು, ಭಾಷೆಯ ಬೆಳವಣಿಗೆ, ಕನ್ನಡ ಸಾಹಿತ್ಯ, ಪ್ರಸಿದ್ಧ ಕವಿಗಳು, ನಾಡಿನ ಪರಿಸರ, ಪ್ರೇಕ್ಷಣೀಯ ಸ್ಥಳಗಳು, ಕ್ರೀಡೆ, ರಂಗಭೂಮಿ, ಸಿನಿಮಾ, ಕಲೆ ಮತ್ತು ವಾಸ್ತುಶಿಲ್ಪ, ಸಮೂಹ ಮಾಧ್ಯಮ ಹಾಗೂ ಕನ್ನಡದ ಸಾಧಕರ ಕುರಿತು ಕಾರ್ಯಕ್ರಮದಲ್ಲಿ ಮಾಹಿತಿ ಮತ್ತು ವಿಚಾರಗಳನ್ನು ಹಂಚಿಕೊಳ್ಳಲಾಗುತ್ತದೆ.


ಪ್ರತಿ ಗಂಟೆಗೂ ಪ್ರಶ್ನೆ, ಉತ್ತರಿಸಿದವರಿಗೆ ಬಹುಮಾನ
ಕಾರ್ಯಕ್ರಮವನ್ನು ಮತ್ತಷ್ಟು ಆಸಕ್ತಿದಾಯಕವಾಗಿಸಲು ಪ್ರತಿ ಒಂದು ಗಂಟೆಗೊಮ್ಮೆ ಕನ್ನಡದ ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಕೇಳುಗರು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ ಬಹುಮಾನ ಗೆಲ್ಲಬಹುದು. ದಿನದ ಎಲ್ಲಾ ಪ್ರಶ್ನೆಗಳಿಗೆ ಹೆಚ್ಚು ಸರಿಯಾದ ಉತ್ತರಗಳನ್ನು ನೀಡುವವರಿಗೆ ವಿಶೇಷ ಬಹುಮಾನ ನೀಡುವ ವ್ಯವಸ್ಥೆಯನ್ನೂ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸುವುದು ಹೇಗೆ?
ಕನ್ನಡ ರಾಜ್ಯೋತ್ಸವದ ಈ ವಿಶೇಷ ನೇರಪ್ರಸಾರ ಕಾರ್ಯಕ್ರಮದಲ್ಲಿ ಮಾತನಾಡಲು ಅಥವಾ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು 9686096279 ಸಂಖ್ಯೆಗೆ ಕರೆ ಮಾಡಬಹುದು. ಸಾಮಾನ್ಯ ಎಫ್ಎಂ ರೇಡಿಯೋ ಮೂಲಕ ಮಾತ್ರವಲ್ಲದೆ, ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ರೇಡಿಯೋ ಶಿವಮೊಗ್ಗ 90.8 ಎಫ್ಎಂ ಆ್ಯಪ್ ಮೂಲಕವೂ ಕಾರ್ಯಕ್ರಮವನ್ನು ಆಲಿಸಬಹುದು.
ರೇಡಿಯೋ ಶಿವಮೊಗ್ಗದ ನಿರ್ದೇಶಕ ಜನಾರ್ಧನ್ ಜಿ.ಎಲ್., ರಾಜ್ಯ ಸಮುದಾಯ ಬಾನುಲಿಗಳ ಸಂಘದ ರಾಜ್ಯಾಧ್ಯಕ್ಷ ಗುರುಪ್ರಸಾದ್, ನಿಲಯದ ಕಾರ್ಯಕ್ರಮ ಅಧಿಕಾರಿ ಮಂಜುನಾಥ್ ಹಾಗೂ ಪತ್ರಕರ್ತ ಹಾಲಸ್ವಾಮಿ ಆರ್.ಎಸ್. ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಮೂಡಿಬರಲಿದೆ ಎಂದು ಪ್ರಕಟಣೆ ತಿಳಿಸಿದೆ.
ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಜನರಿಗೆ ಮತ್ತಷ್ಟು ಹತ್ತಿರವಾಗಿಸುವ ಉದ್ದೇಶದಿಂದ ಆಯೋಜಿಸಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು