RCB vs GT 2026 Match Highlights: ಚಿನ್ನಸ್ವಾಮಿಯಲ್ಲಿ ಆರ್​ಸಿಬಿಗೆ 50ನೇ ಗೆಲುವು, ಗುಜರಾತ್‌ಗೆ ಸೋಲು.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಗುಜರಾತ್ ಟೈಟಾನ್ಸ್ (GT) ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ವಿಜಯದೊಂದಿಗೆ ತವರಿನ ಮೈದಾನ ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ತನ್ನ 50ನೇ ಐತಿಹಾಸಿಕ ಗೆಲುವನ್ನು ದಾಖಲಿಸಿದ್ದು, ಐಪಿಎಲ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿ ಬೀಗಿದೆ. ಕಳೆದ ಪಂದ್ಯದಲ್ಲಿ ಇದೇ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತಿದ್ದ ಆರ್‌ಸಿಬಿ, ಇದೀಗ ಗುಜರಾತ್ ವಿರುದ್ಧ ಗೆಲ್ಲುವ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದೆ.

ಗುಜರಾತ್ ಬೃಹತ್ ಮೊತ್ತ: ಸಾಯಿ ಸುದರ್ಶನ್ ಆಕರ್ಷಕ ಶತಕ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಗುಜರಾತ್ ಟೈಟಾನ್ಸ್, ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 205 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಭದ್ರ ಬುನಾದಿ ಹಾಕಿದರು. ಈ ಜೋಡಿ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡಿ ತಂಡಕ್ಕೆ ಬೃಹತ್ ಮೊತ್ತದ ಮುನ್ಸೂಚನೆ ನೀಡಿತು.

ಆದರೆ, 32 ರನ್ ಗಳಿಸಿದ್ದ ಶುಭಮನ್ ಗಿಲ್ ಔಟಾಗುವ ಮೂಲಕ ಈ ಜೊತೆಯಾಟ ಅಂತ್ಯವಾಯಿತು. ಬಳಿಕ ಬಂದ ಜೋಸ್ ಬಟ್ಲರ್ 25 ರನ್ ಗಳಿಸಿ ಪೆವಿಲಿಯನ್ ಸೇರಿದರು. ಈ ಹಂತದಲ್ಲಿ ಗುಜರಾತ್ ಇನ್ನಿಂಗ್ಸ್ ಕೊಂಚ ಕುಸಿತ ಕಂಡರೂ, ಆರಂಭದಿಂದಲೂ ಕ್ರೀಸ್ ಕಚ್ಚಿ ನಿಂತು ಸ್ಪೋಟಕ ಬ್ಯಾಟಿಂಗ್ ಮುಂದುವರಿಸಿದ ಸಾಯಿ ಸುದರ್ಶನ್ ಆಕರ್ಷಕ ಶತಕ ಸಿಡಿಸಿ ಮಿಂಚಿದರು. ಕೊನೆಯ ಹಂತದಲ್ಲಿ ಜೇಸನ್ ಹೋಲ್ಡರ್ ಬಿರುಸಿನ 23 ರನ್ ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಆರ್‌ಸಿಬಿ ಪರ ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ ಮತ್ತು ಜೋಶ್ ಹ್ಯಾಜಲ್‌ವುಡ್ ತಲಾ 1 ವಿಕೆಟ್ ಪಡೆದು ಮಿಂಚಿದರು.

ಕೊಹ್ಲಿ-ಪಡಿಕ್ಕಲ್ ಆರ್ಭಟ: 19ನೇ ಓವರ್‌ನಲ್ಲಿ ಗುರಿ ಮುಟ್ಟಿದ ಆರ್‌ಸಿಬಿ ಗುಜರಾತ್ ನೀಡಿದ 206 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಆರ್‌ಸಿಬಿ ಆರಂಭದಲ್ಲೇ ಆಘಾತ ಅನುಭವಿಸಿತು. ಪ್ರಸಕ್ತ ಆವೃತ್ತಿಯ ಮೊದಲ ಪಂದ್ಯವನ್ನಾಡುತ್ತಿದ್ದ ಜಾಕೋಬ್ ಬೆಥೆಲ್ (14 ರನ್) ಅವರನ್ನು ಮೊಹಮ್ಮದ್ ಸಿರಾಜ್ ಬಲಿಪಡೆದರು. ಆದರೆ, ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ಸಿರಾಜ್ ಬೌಲಿಂಗ್‌ನಲ್ಲಿ ವಾಷಿಂಗ್ಟನ್ ಸುಂದರ್ ಅವರು ವಿರಾಟ್ ಕೊಹ್ಲಿಗೆ ಸುಲಭ ಕ್ಯಾಚ್ ಕೈಚೆಲ್ಲಿ ಜೀವದಾನ ನೀಡಿದ್ದು ಪಂದ್ಯದ ಗತಿಯನ್ನೇ ಬದಲಿಸಿತು.

ಈ ಜೀವದಾನದ ಸಂಪೂರ್ಣ ಲಾಭ ಪಡೆದ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಜೊತೆಗೂಡಿ ಗುಜರಾತ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಈ ಇಬ್ಬರೂ ಕೇವಲ 26 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟ ಪೂರೈಸಿದರು. ಆಕ್ರಮಣಕಾರಿ ಆಟವಾಡಿದ ಪಡಿಕ್ಕಲ್ ಕೇವಲ 20 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅರ್ಧಶತಕ ಸಿಡಿಸಿದರೆ, ವಿರಾಟ್ ಕೊಹ್ಲಿ 30 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು.

ಈ ಜೋಡಿ ಕೇವಲ 47 ಎಸೆತಗಳಲ್ಲಿ ಶತಕದ ಜೊತೆಯಾಟವಾಡಿ ಗುಜರಾತ್ ತಂಡವನ್ನು ಪಂದ್ಯದಿಂದ ಬಹುತೇಕ ಹೊರಹಾಕಿತು. ವಿರಾಟ್ ಕೊಹ್ಲಿ ಶತಕ ವಂಚಿತರಾದರೂ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿದರು. ಅಂತಿಮವಾಗಿ ಕೃನಾಲ್ ಪಾಂಡ್ಯ ಕ್ರೀಸ್‌ಗೆ ಬಂದು ಅಜೇಯ 23 ರನ್ ಸಿಡಿಸುವ ಮೂಲಕ 19ನೇ ಓವರ್‌ನಲ್ಲಿಯೇ ಆರ್‌ಸಿಬಿಗೆ 5 ವಿಕೆಟ್‌ಗಳ ರೋಚಕ ಜಯ ತಂದುಕೊಟ್ಟರು.

Leave a Reply

Your email address will not be published. Required fields are marked *