‘ಸಂಘಟನಾ ಸೃಜನ್ ಅಭಿಯಾನ’ದಿಂದ ಕಾಂಗ್ರೆಸ್ ಬಲವರ್ಧನೆ: ಕೆಳಹಂತದ ಕಾರ್ಯಕರ್ತರಿಗೆ ಆದ್ಯತೆ ಎಂದ ರಿಪುನ್ ಬೋರಾ.

ಚಿತ್ರದುರ್ಗ ಜು. 27

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಪಕ್ಷವನ್ನು ಬೂತ್ ಹಾಗೂ ಪಂಚಾಯಿತಿ ಮಟ್ಟದಿಂದ ಅತ್ಯಂತ ಬಲವಾಗಿ ಸಂಘಟಿಸುವ ಹಾಗೂ ಕಾರ್ಯಕರ್ತರಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ‘ಸಂಘಟನಾ ಸೃಜನ್ ಅಭಿಯಾನ’ವನ್ನು ಕೈಗೊಳ್ಳಲಾಗಿದೆ ಎಂದು ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರು, ಮಾಜಿ ಸಂಸದರು, ಮಾಜಿ ಮಂತ್ರಿಗಳು ಹಾಗೂ ಎಐಸಿಸಿ ಚಿತ್ರದುರ್ಗ ಜಿಲ್ಲಾ ಸಂಘಟನ್ ಶ್ರೀಜನ್ ಅಭಿಯಾನ ಉಸ್ತುವಾರಿಗಳಾದ ರಿಪುನ್ ಬೋರಾ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದರು.

ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಭಾಂಗಣದಲ್ಲಿ ಸೋಮವಾರ ಪಕ್ಷ ಸಂಘಟನೆ ಸಂಬಂಧ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಕೇವಲ ಸಮೂಹ ಆಧಾರಿತ (ಮಾಸ್‍ಬೇಸ್ಡ್) ಪಕ್ಷವಾಗಿ ಉಳಿಯದೆ, ಕೆಳಹಂತದಿಂದ ಕೆಡರ್ ಆಧಾರಿತ (ಕೇಡರ್‍ಬೇಸ್ಡ್) ಪಕ್ಷವಾಗಿ ಹೊರಹೊಮ್ಮಬೇಕು ಎಂಬುದು ರಾಹುಲ್ ಗಾಂಧಿ ಅವರ ಆಶಯವಾಗಿದೆ ಈ ಕನಸನ್ನು ಸಾಕಾರಗೊಳಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ಮಾರ್ಗದರ್ಶನದಲ್ಲಿ ಈ ಸೃಜನ್ ಅಭಿಯಾನ ನಡೆಯುತ್ತಿದೆ ಎಂದು ಹೇಳಿ ಈ ಹಿಂದೆ ಶಾಸಕರು ಅಥವಾ ಸಂಸದರು ಹೇಳಿದವರು ಮಾತ್ರ ಬ್ಲಾಕ್ ಅಥವಾ ಜಿಲ್ಲಾ ಮಟ್ಟದ ಅಧ್ಯಕ್ಷರಾಗುತ್ತಿದ್ದರು. ಅವರು ಪಕ್ಷ ಬಿಟ್ಟು ಹೋದಾಗ ಸಂಘಟನೆಗೆ ಹಿನ್ನಡೆಯಾಗುತ್ತಿತ್ತು. ಆದರೆ, ಇನ್ಮುಂದೆ ಅಂತಹ ವ್ಯವಸ್ಥೆ ಇರುವುದಿಲ್ಲ. ಕೆಳಹಂತದಲ್ಲಿ ಪ್ರಾಮಾಣಿಕವಾಗಿ ಹಾಗೂ ಲಾಯಲ್ ಆಗಿ ದುಡಿಯುವ ಕೆಡರ್ ಕಾರ್ಯಕರ್ತರನ್ನು ಮಾತ್ರ ಗುರುತಿಸಿ ಹುದ್ದೆ ನೀಡಲಾಗುತ್ತದೆ ಎಂದರು.

ಬೋರ್ಡ್ ಹಾಗೂ ಕಾರ್ಪೊರೇಶನ್ ನೇಮಕಾತಿ ಅಥವಾ ಬ್ಲಾಕ್ ಮಟ್ಟದ ಪದಾಧಿಕಾರಿಗಳ ಆಯ್ಕೆಯ ಲಿಸ್ಟ್ ಅನ್ನು ವೀಕ್ಷಕರು ಹಾಗೂ ಹಿರಿಯ ನಾಯಕರು ಸಿದ್ಧಪಡಿಸಲಿದ್ದಾರೆ. ಈ ವರದಿಯನ್ನು ನೇರವಾಗಿ ಹೈಕಮಾಂಡ್ ಅತ್ಯಂತ ಗೌಪ್ಯವಾಗಿ ಪರಿಶೀಲಿಸಿ, ಪಕ್ಷಕ್ಕೆ ದುಡಿದವರನ್ನು ಮಾತ್ರ ಗುರುತಿಸಿ ಆಯ್ಕೆ ಮಾಡಲಿದೆ. ಒಬಿಸಿ, ಪರಿಶಿಷ್ಟ ಜಾತಿ (ಎಸ್.ಸಿ), ಮಹಿಳೆಯರು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳ ಕಾರ್ಯಕರ್ತರಿಗೂ ಪಕ್ಷದ ಸಂಘಟನೆಯಲ್ಲಿ ಸರಿಸಮಾನ ಅಧಿಕಾರ ಹಾಗೂ ಪ್ರಾತಿನಿಧ್ಯ ನೀಡಲಾಗುವುದು. ಸ್ಥಳೀಯ ಮಟ್ಟದ ನಾಯಕರು ಹಾಗೂ ಕಾರ್ಯಕರ್ತರು ಯಾವುದೇ ಮುಜುಗರ ಅಥವಾ ಭಯವಿಲ್ಲದೆ, ಏಕಾಂಗಿಯಾಗಿ ವೀಕ್ಷಕರನ್ನು ಭೇಟಿ ಮಾಡಿ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಈ ವರದಿಗಳು ನೇರವಾಗಿ ಹೈಕಮಾಂಡ್‍ಗೆ ತಲುಪಲಿವೆ. ಮುಂದಿನ ದಿನಗಳಲ್ಲಿ ವೀಕ್ಷಕರು ಹಾಗೂ ನಾಯಕರು ಪ್ರತೀ ಕ್ಷೇತ್ರ ಹಾಗೂ ಬ್ಲಾಕ್ ಹಂತಕ್ಕೂ ಖುದ್ದು ಭೇಟಿ ನೀಡಲಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಲಭ್ಯವಿದ್ದು, ಕಾರ್ಯಕರ್ತರ ಸಮಾಲೋಚನೆ ನಡೆಸಲಿದ್ದಾರೆ ಎಂದರು.

ಕೆಪಿಸಿಸಿ ಉಸ್ತುವಾರಿಗಳು ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ಸೈಯದ್ ಅಹಮದ್ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಕೆಳಹಂತದ ಬೂತ್ ಮಟ್ಟದಿಂದ ತಳಪೂರಿತವಾಗಿ ಗಟ್ಟಿಗಳಿಸಿ, ರಾಷ್ಟ್ರಮಟ್ಟದಲ್ಲಿ ಬಲಿಷ್ಠವಾಗಿ ರೂಪಿಸುವುದೇ ಈ ಅಭಿಯಾನದ ಪ್ರಮುಖ ತೀರ್ಮಾನವಾಗಿದೆ. ಯಾವುದೇ ಭಿನ್ನಾಭಿಪ್ರಾಯ ಗಳಿಲ್ಲದೆ, ಸಾಮಥ್ರ್ಯ ಮತ್ತು ತಂತ್ರಗಾರಿಕೆ ಹೊಂದಿರುವ ನಿಜವಾದ ಕಾರ್ಯಕರ್ತರನ್ನು ಬೆಳೆಸಲು ಎಲ್ಲಾ ನಾಯಕರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಸಹಕರಿಸಬೇಕೆಂದು ಮನವಿ ಮಾಡಿ ಕಾಂಗ್ರೆಸ್ ಪಕ್ಷದ ಶಕ್ತಿ ಅದರ ನಿಷ್ಠಾವಂತ ಕಾರ್ಯಕರ್ತರು ಹಾಗೂ ಮುಖಂಡರಲ್ಲಿದೆ. ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿ ಬಲಪಡಿಸುವ ಕೆಲಸ ಶೀಘ್ರವೇ ನಡೆಯಲಿದ್ದು, ಪ್ರತಿಯೊಬ್ಬ ಕಾರ್ಯಕರ್ತರಿಗೂ ಸೂಕ್ತ ಗುರ್ತಿಸುವಿಕೆ ಮತ್ತು ಸ್ಥಾನಮಾನ ಸಿಗಲಿದೆ ಎಂದು ತಿಳಿಸಿದರು.

ಗುಜರಾತ್‍ನ ಅಹಮದಾಬಾದ್‍ನಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡ ಮಾದರಿಯಂತೆಯೇ ರಾಜ್ಯದಲ್ಲೂ ಪಕ್ಷದ ಸಂಘಟನಾ ಪ್ರಕ್ರಿಯೆ ಜಾರಿಯಲ್ಲಿದೆ ಈ ಪ್ರಕ್ರಿಯೆಯ ಮುಖ್ಯ ಉದ್ದೇಶವೆಂದರೆ ಸುದೀರ್ಘ 20-30 ವರ್ಷಗಳಿಂದ ಪಕ್ಷಕ್ಕಾಗಿ ಸದ್ದಿಲ್ಲದೆ ಶ್ರಮಿಸುತ್ತಿರುವ, ಹಿನ್ನೆಲೆಯಲ್ಲಿ ಉಳಿದುಹೋಗಿರುವ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಮುನ್ನೆಲೆಗೆ ತರುವುದು ಹಾಗೂ ಸೂಕ್ತ ಸ್ಥಾನಮಾನ ನೀಡಲಾಗುವುದು. ಪಕ್ಷಕ್ಕೆ ಹೊಸದಾಗಿ ಸೇರ್ಪಡೆಯಾಗುವವರಿಗೂ ಸ್ವಾಗತವಿದೆ; ಆದರೆ ವರ್ಷಗಳಿಂದ ರಕ್ತ ಬೆವರು ಹರಿಸಿ ದುಡಿದ ಸಕ್ರಿಯ ಕಾಂಗ್ರೆಸ್ಸಿಗರ ಹಿತಾಸಕ್ತಿಗೆ ಧಕ್ಕೆ ತಾರದಂತೆ, ಪಕ್ಷಕ್ಕಾಗಿ ಶ್ರಮಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಯಾರೊಬ್ಬರಿಗೂ ಅನ್ಯಾಯವಾಗದಂತೆ ಈ ಪ್ರಕ್ರಿಯೆ ನಡೆಯಲಿದೆ. ಪಕ್ಷದಲ್ಲಿ ಶಿಸ್ತು ಅತ್ಯಂತ ಪ್ರಮುಖ. ಶಿಸ್ತಿನಿಂದ ಇರುವ ಕಾರ್ಯಕರ್ತರು ಮತ್ತು ನಾಯಕರನ್ನು ಮೇಲಾಧಿಕಾರಿಗಳು ತಕ್ಷಣ ಗಮನಿಸುತ್ತಾರೆ. ಪಕ್ಷದ ಚಟುವಟಿಕೆಗಳು ಹಾಗೂ ಮುಖಂಡರ ಕೆಲಸ ಕಾರ್ಯಗಳ ಕುರಿತು ಎಐಸಿಸಿ ಹಂತದಿಂದ ಸೂಕ್ಷ್ಮ ವೀಕ್ಷಣೆ (ಇಂಟೆಲಿಜೆನ್ಸ್/ಫೀಡ್‍ಬ್ಯಾಕ್) ನಡೆಯುತ್ತಿದ್ದು, ಪ್ರಾಮಾಣಿಕ ವರದಿಗಳ ಆಧಾರದ ಮೇಲೆ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಕೆಪಿಸಿಸಿ ಉಸ್ತುವಾರಿಗಳು ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ಎನ್ ರಮೇಶ್ ಮಾತನಾಡಿ, ರಾಜೀವ್ ಗಾಂಧಿಯವರ ಆಡಳಿತಾವಧಿಯಲ್ಲಿ ತಂದ ಸಂವಿಧಾನಾತ್ಮಕ ತಿದ್ದುಪಡಿಯನ್ನು ಸ್ಮರಿಸಿದ ನಾಯಕರು, “ಜನರಿಗೆ ಅಧಿಕಾರ” ಎಂಬ ತತ್ತ್ವದಂತೆ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಪುರಸಭೆ ಹಾಗೂ ಮಹಾನಗರ ಪಾಲಿಕೆಗಳ ಹಂತದವರೆಗೂ ಅಧಿಕಾರ ವಿಕೇಂದ್ರೀಕರಣಗೊಂಡಿದೆ. ಅದೇ ಮಾದರಿಯಲ್ಲಿ ಪಕ್ಷದ ಸಂಘಟನೆಯೂ ಡಿಸಿಸಿ ಹಾಗೂ ಬ್ಲಾಕ್ ಮಟ್ಟದವರೆಗೆ ಪಾರದರ್ಶಕವಾಗಿ ನಡೆಯಲಿದೆ. ಈ ಬಲವರ್ಧನೆ ಮತ್ತು ಆಯ್ಕೆ ಪ್ರಕ್ರಿಯೆಯು ಸುಮಾರು 7 ರಿಂದ 12 ದಿನಗಳ ಕಾಲ ನಡೆಯಲಿದ್ದು, ಕೆಪಿಸಿಸಿ ಹಾಗೂ ಎಐಸಿಸಿ ವೀಕ್ಷಕರು ಸ್ಥಳದಲ್ಲೇ ಇದ್ದು ಪ್ರತಿಯೊಬ್ಬರ ಅಭಿಪ್ರಾಯ ಆಲಿಸಲಿದ್ದಾರೆ. ಡಿಸಿಸಿ ಪದಾಧಿಕಾರಿಗಳು, ಪಿಸಿಸಿ ಸದಸ್ಯರು, ಶಾಸಕರು, ಮಾಜಿ ಶಾಸಕರು, ವಕೀಲರು, ನಾಗರಿಕ ಸಮಾಜದ ಪ್ರತಿನಿಧಿಗಳು ಹಾಗೂ ಸಾಮಾಜಿಕ ಸಂಸ್ಥೆಗಳ ಪ್ರಮುಖರೊಂದಿಗೆ ಮುಕ್ತವಾಗಿ ಸಮಾಲೋಚನೆ ನಡೆಸಲಾಗುವುದು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮತ್ತು ಪಕ್ಷದ ಹುದ್ದೆಗಳನ್ನು ಪಡೆಯಲು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಕಡ್ಡಾಯವಾಗಿದೆ. ಸದಸ್ಯತ್ವ ಇಲ್ಲದವರು ತಕ್ಷಣವೇ ಸದಸ್ಯತ್ವ ಪಡೆದುಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಯಾವುದೇ ರೀತಿಯ ಅಭಯ ಅಥವಾ ಭಯಕ್ಕೆ ಒಳಗಾಗುವ ಅಗತ್ಯವಿಲ್ಲ. ಜಾತಿ-ಪ್ರಾಂತೀಯ ಲೆಕ್ಕಾಚಾರಗಳಿಗಿಂತ ಹೆಚ್ಚಾಗಿ ನಿಷ್ಠೆ, ನ್ಯಾಯ ಮತ್ತು ಪಕ್ಷದ ಬಲವರ್ಧನೆಗೆ ಶ್ರಮಿಸುವ ನಿಲುವಿಗೆ ಮಾತ್ರ ಬೆಲೆ ಸಿಗಲಿದೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ, ಶಿಸ್ತಿನಿಂದ ಶ್ರಮಿಸಿ ಮುಂಬರುವ ಚುನಾವಣೆಯಲ್ಲಿ ಶಾಸಕರನ್ನು ಗೆಲ್ಲಿಸುವ ಹಾಗೂ ಸಂಸತ್ ಪ್ರತಿನಿಧಿಗಳನ್ನು (ಒP) ಆಯ್ಕೆ ಮಾಡುವ ನಿಟ್ಟಿನಲ್ಲಿ ತಳಮಟ್ಟದಿಂದ ಕಾಂಗ್ರೆಸ್ ಅನ್ನು ಬಲಪಡಿಸಬೇಕು. ತಳಮಟ್ಟದ ಕಾರ್ಯಕರ್ತರ ಧ್ವನಿಗೆ ಬೆಲೆ ನೀಡುವುದು ಮತ್ತು ಪಕ್ಷವನ್ನು ಸಶಕ್ತಗೊಳಿಸುವುದೇ ಈ ಇಡೀ ಪ್ರಕ್ರಿಯೆಯ ಪ್ರಮುಖ ಉದ್ದೇಶವಾಗಿದೆ ಎಂದರು.

ಪ್ರದೇಶ ಕಾಂಗ್ರೆಸ್ ಕಮಿಟಿ (ಪಿಸಿಸಿ) ಮಾಜಿ ಅಧ್ಯಕ್ಷರು ಹಾಗೂ ಮಾಜಿ ಸಂಸದರಾಗಿ ಜವಾಬ್ದಾರಿಯುತ ಸ್ಥಾನ ವಹಿಸಿದ್ದ ಬೊರಾ ಸಾಹೇಬ್ ಅವರು, ಪಕ್ಷದ ಸಂಘಟನೆಯನ್ನು ಬಲಪಡಿಸಲು ಅಸ್ಸಾಂನಿಂದ ಇಲ್ಲಿಗೆ ಆಗಮಿಸಿದ್ದಾರೆ. ಕಳೆದ ಮೂರು ದಿನಗಳಿಂದ ಸ್ಥಳೀಯ ಹಂತದಲ್ಲಿ ಎಲ್ಲರ ಅಭಿಪ್ರಾಯಗಳನ್ನು ಮುಕ್ತವಾಗಿ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿಸಿದರು.

ಸಂಘಟನ್ ಶ್ರೀಜನ್ ಅಭಿಯಾನ್ ಕೆಪಿಸಿಸಿ ಉಸ್ತುವಾರಿಗಳು ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ವಿ ಎಸ್ ಉಗ್ರಪ್ಪ, ಶ್ರೀಮತಿ ಸೌಗಂಧಿಕಾ ರಘುನಾಥ್ ಹಾಗೂ ಚಿತ್ರದುರ್ಗ ಜಿಲ್ಲಾ ಕೆಪಿಸಿಸಿ ಉಸ್ತುವಾರಿಗಳಾದ ಮುರಳೀಧರ ಹಾಲಪ್ಪ, ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಎಂ.ಕೆ.ತಾಜ್‍ಪೀರ್ ಕಾರ್ಯಾಧ್ಯಕ್ಷರಾದ ಕೆ ಎಂ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಪಿ. ಸಂಪತ್ ಕುಮಾರ್, ಮೈಲಾರಪ್ಪ, ಶ್ರೀಮತಿ ನಂದಿನಿ ಗೌಡ, ವೆಂಕಟೇಶ್, ಕುಮಾರ್ ಗೌಡ, ಯೋಗೀಶ್ ಬಾಬು, ಪ್ರಕಾಶ್ ಶಿವಣ್ಣ ಗಂಜಿಗಟ್ಟೆ, ಓ.ಶಂಕರ್, ಆರ್ ಕೆಸರ್ದಾರ್, ಲಕ್ಷ್ಮೀಕಾಂತ, ಜಿ.ಎಸ್.ಮಂಜುನಾಥ್, ಸೇತುರಾಂ, ಜಮೀರ್, ನರಸಿಂಹರಾಜು, ಆನಂತಕುಮಾರ್, ಅಂಜನಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *