Rohit Sharma: ದಿನದಾಟ ಮುಗಿಯಲು 7 ಎಸೆತ ಬಾಕಿಯಿದ್ದಾಗ ರಾಹುಲ್ ಔಟ್: ಕೋಪದಲ್ಲಿ ರೋಹಿತ್ ಏನು ಮಾಡಿದ್ರು ನೋಡಿ

Rohit Sharma and KL Rahul

ಭಾರತ ಕ್ರಿಕೆಟ್ ತಂಡ ಸದ್ಯ ಆಸ್ಟ್ರೇಲಿಯಾ (India vs Australia) ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿಯ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಪೈಕಿ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆಯುತ್ತಿದೆ. ಮೊದಲ ದಿನವೇ ಭಾರತೀಯ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ಕೇವಲ 177 ರನ್​ಗೆ ಆಲೌಟ್ ಆಯಿತು. ಸುಮಾರು ಆರು ತಿಂಗಳ ಬಳಿಕ ಟೀಮ್ ಇಂಡಿಯಾಕ್ಕೆ ಕಮ್​ಬ್ಯಾಕ್ ಮಾಡಿದ ರವೀಂದ್ರ ಜಡೇಜಾ ಮೊದಲ ಪಂದ್ಯದಲ್ಲೇ ಮ್ಯಾಜಿಕ್ ಮಾಡಿದರು. ಆಸೀಸ್ ಪತನದ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 77 ರನ್ ಗಳಿಸಿದೆ. ಕೆಎಲ್ ರಾಹುಲ್ (KL Rahul) 71 ಎಸೆತಗಳಲ್ಲಿ 20 ರನ್ ಗಳಿಸಿ ಔಟಾದರೆ, ರೋಹಿತ್ (Rohit Sharma)-ಅಶ್ವಿನ್ ಕ್ರೀಸ್​ನಲ್ಲಿದ್ದಾರೆ.

ಉಪ ನಾಯಕ ಕೆಎಲ್ ರಾಹುಲ್ ಕಳಪೆ ಫಾರ್ಮ್​ ಟೆಸ್ಟ್​ನಲ್ಲೂ ಮುಂದುವರೆಯಿತು. ವಿವಾಹದ ಬಳಿಕ ತಂಡಕ್ಕೆ ಮರಳಿದ ರಾಹುಲ್ ಬ್ಯಾಟ್​ನಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಲಾಗಿತ್ತು. ಯಾಕೆಂದರೆ ಟೆಸ್ಟ್ ಆರಂಭವಾಗುವ ಒಂದು ವಾರ ಮುನ್ನವೇ ರಾಹುಲ್ ನೆಟ್​ನಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದ್ದರು. ಕೋಚ್ ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿಯಿಂದ ಬ್ಯಾಟಿಂಗ್ ಟಿಪ್ಸ್ ಪಡೆದುಕೊಂಡಿದ್ದರು. ಆದರೆ, ರಾಹುಲ್ ಆಟ 20 ರನ್​ಗೆ ಅಂತ್ಯವಾಯಿತು. ಅದರಲ್ಲೂ ಮೊದಲ ದಿನದಾಟ ಮುಗಿಯಲು ಕೇವಲ 7 ಬಾಲ್​ಗಳು ಬಾಕಿ ಇದ್ದಾಗ ರಾಹುಲ್ ನಿರ್ಗಮಿಸಿದ್ದು ನಾಯಕ ರೋಹಿತ್ ಶರ್ಮಾ ಅವರಿಗೆ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ.

23ನೇ ಓವರ್​ನಲ್ಲಿ ಸ್ಪಿನ್ನರ್ ಟಾಡ್ ಮರ್ಫಿ ಬೌಲಿಂಗ್​ನ 5ನೇ ಎಸೆತದಲ್ಲಿ ರಾಹುಲ್ ಚೆಂಡನ್ನು ನೇರವಾಗಿ ಹೊಡೆಯಲು ಯತ್ನಿಸಿದರು. ಆದರೆ, ಚೆಂಡು ಬೌಲರ್ ಕೈಗೆ ಸೇರಿತು. ಈ ಮೂಲಕ ಮರ್ಫಿ ಚೊಚ್ಚಲ ಟೆಸ್ಟ್ ವಿಕೆಟ್ ಪಡೆದರು. ಅತ್ತ ನಾನ್​ಸ್ಟ್ರೈಕ್​ನಲ್ಲಿದ್ದ ನಾಯಕ ರೋಹಿತ್ ಶರ್ಮಾ ಕೋಪಗೊಂಡು ಆಕಾಶ ನೋಡಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

Virat Kohli: ಟೀಮ್ ಇಂಡಿಯಾ ಪಾಲಿಗೆ ದುಬಾರಿಯಾದ ಕಿಂಗ್ ಕೊಹ್ಲಿ ಕೈಬಿಟ್ಟ ಕ್ಯಾಚ್..!

 

ಮೊದಲ ದಿನದಾಟ ಹೇಗಿತ್ತು?:

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಎರಡು ರನ್​ಗೆ ಎರಡು ವಿಕೆಟ್ ಕಳೆದುಕೊಂಡಿತು. ಡೇವಿಡ್ ವಾರ್ನರ್​ರನ್ನು (1) ಶಮಿ ಪೆವಿಲಿಯನ್​ಗೆ ಅಟ್ಟಿದರೆ ಉಸ್ಮಾನ್ ಖ್ವಾಜಾ (1) ಅವರನ್ನು ಮೊಹಮ್ಮದ್ ಸಿರಾಜ್ ಔಟ್ ಮಾಡಿದರು. ಈ ಸಂದರ್ಭ ಜೊತೆಯಾದ ಮಾರ್ನಸ್ ಲಾಬುಶೇನ್ ಹಾಗೂ ಸ್ಟೀವ್ ಸ್ಮಿತ್ ತಂಡಕ್ಕೆ ಆಸರೆಯಾಗಿ ನಿಂತರು. ಎಚ್ಚರಿಕೆಯ ಆಟವಾಡಿದ ಈ ಜೋಡಿ 82 ರನ್​ಗಳ ಕಾಣಿಕೆ ನೀಡಿತು. ಇವರ ಜೊತೆಯಾಟಕ್ಕೆ ಬ್ರೇಕ್ ಹಾಕಿದ್ದು ರವೀಂದ್ರ ಜಡೇಜಾ. ಕ್ರೀಸ್ ಕಚ್ಚಿ ಆಡುತ್ತಿದ್ದ ಲಾಬುಶೇನ್​ಗೆ ಜಡೇಜಾ ಕೆಡ್ಡಾ ತೋರಿದರು. 123 ಎಸತಗಳಲ್ಲಿ 49 ರನ್ ಗಳಿಸಿ ಮಾರ್ನಸ್ ಔಟಾದರೆ, ಅತ್ತ ಅಪಾಯಕಾರಿ ಗೋಚರಿಸಿದ ಸ್ಮಿತ್​ಗೂ (37) ಜಡೇಜಾ ಪೆವಿಲಿಯನ್ ಹಾದಿ ತೋರಿದರು.

ನಂತರ ಬಂದ ಬ್ಯಾಟರ್​ಗಳ ಪೈಕಿ ಹ್ಯಾಂಡ್ಸ್​ಕಾಂಬ್ 31 ಹಾಗೂ ಅಲೆಕ್ಸ್ ಕ್ಯಾರಿ 36 ರನ್ ಗಳಿಸಿದ್ದು ಬಿಟ್ಟರೆ ಉಳಿದವರ ಸ್ಕೋರ್ ಎರಡಂಕಿ ದಾಟಲಿಲ್ಲ. ಮೂವರು ಬ್ಯಾಟರ್​ಗಳು ಸೊನ್ನೆ ಸುತ್ತಿದರು. ಆಸ್ಟ್ರೇಲಿಯಾ 63.5 ಓವರ್​ಗಳಲ್ಲಿ 177 ರನ್​ಗೆ ಆಲೌಟ್ ಆಯಿತು. ಭಾರತ ಪರ ಭರ್ಜರಿ ಕಮ್​ಬ್ಯಾಕ್ ಮಾಡಿದ ರವೀಂದ್ರ ಜಡೇಜಾ 22 ಓವರ್​​ಗೆ 47 ರನ್ ನೀಡಿ 5 ವಿಕೆಟ್ ಕಿತ್ತರೆ, ಆರ್. ಅಶ್ವಿನ್ 3, ಶಮಿ ಹಾಗೂ ಸಿರಾಜ್ ತಲಾ 1 ವಿಕೆಟ್ ಪಡೆದರು.

ನಂತರ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಭರ್ಜರಿ ಆರಂಭ ಪಡೆದುಕೊಂಡಿತು. ರೋಹಿತ್ ಬಿರುಸಿನ ಬ್ಯಾಟಿಂಗ್ ನಡೆಸಿದರೆ ಕೆಎಲ್ ರಾಹುಲ್ ಉತ್ತಮ ಸಾಥ್ ನೀಡಿದರು. ಆದರೆ, ಇವರಿಬ್ಬರ ಜೊತೆಯಾಟ 76 ರನ್​ಗೆ ಅಂತ್ಯವಾಯಿತು. ರಾಹುಲ್ 71 ಎಸೆತಗಳಲ್ಲಿ 20 ರನ್​ಗೆ ಔಟಾದರು. ಹೀಗೆ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 1 ವಿಕೆಟ್ ಕಳೆದುಕೊಂಡು 77 ರನ್ ಕಲೆಹಾಕಿದೆ. ರೋಹಿತ್ 69 ಎಸೆತಗಳಲ್ಲಿ 56 ರನ್ ಗಳಿಸಿ ಹಾಗೂ ರವಿಚಂದ್ರನ್ ಅಶ್ವಿನ್ 5 ಎಸೆತಗಳಲ್ಲಿ ಖಾತೆ ತೆರೆಯದೆ ದ್ವಿತೀಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/rohit-sharma-looked-up-in-the-sky-in-angry-when-kl-rahul-got-out-ind-vs-aus-1st-test-viral-video-vb-au48-517709.html

Leave a Reply

Your email address will not be published. Required fields are marked *