ಚಿತ್ರದುರ್ಗ ಜು. 01
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಜಗತ್ತಿನಲ್ಲಿ ಕೇವಲ ಸಮಾಜ, ರಾಷ್ಟ್ರ ಅಥವಾ ವಿಶ್ವ ಎಂಬುದು ಸ್ವತಂತ್ರವಾಗಿ ಅಸ್ತಿತ್ವದಲ್ಲಿಲ್ಲ. ನೀವೊಬ್ಬರು, ನಾನೊಬ್ಬರು ಸೇರಿದರೆ ಮಾತ್ರ ಇಲ್ಲಿ ಸಮಾಜ ನಿರ್ಮಾಣವಾಗುತ್ತದೆ. ವ್ಯಕ್ತಿಗತವಾಗಿ ನಮ್ಮಲ್ಲಿ ಪ್ರೀತಿ, ಕರುಣೆ ಹಾಗೂ ಅರಿವು ಮೂಡಿದಾಗ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಈಶಾ ಫೌಂಡೇಶನ್ ಸಂಸ್ಥಾಪಕ ಶ್ರೀ ಸದ್ಗುರು ಜಗ್ಗಿ ವಾಸುದೇವ್ ಅವರು ಅಭಿಪ್ರಾಯಪಟ್ಟಿದ್ದಾರೆ.

ನಗರದ ಹೂರವಲಯದ ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ ಅವರು, ಕೇವಲ ವೇದಿಕೆಗಳ ಮೇಲೆ, ಬೀದಿಗಳಲ್ಲಿ ‘ವಿಶ್ವ ಶಾಂತಿ’ ಎಂದು ಘೋಷಣೆ ಕೂಗುವುದರಿಂದ ಜಗತ್ತು ಬದಲಾಗುವು ದಿಲ್ಲ. ಸನ್ನಿವೇಶಗಳು ಹೇಗೆಯೇ ಇರಲಿ, ನಾವು ಪ್ರೀತಿಯಿಂದ, ನೆಮ್ಮದಿಯಿಂದ ಇರುವುದನ್ನು ಕಲಿಯಬೇಕು. ಈ ಪರಿವರ್ತನೆ ಇಂದಿನ ಯುವ ಪೀಳಿಗೆಯಲ್ಲಿ ಆರಂಭವಾಗಬೇಕಿದೆ. ಯುವಕರೆಂದರೆ ಕೇವಲ ವಯಸ್ಸಿನ ಮಿತಿಯಲ್ಲ, ನಮ್ಮಲ್ಲಿ ಜೀವಂತಿಕೆ ಇರುವವರೆಗೂ ನಾವೆಲ್ಲರೂ ಯುವಕರೇ,” ಎಂದು ಸದ್ಗುರು ಕಿವಿಮಾತು ಹೇಳಿದರು.
“ಮಾನವನು ಕೇವಲ ಪ್ರಾಣಿಜನ್ಯ ಪ್ರವೃತ್ತಿಗಳಿಂದ ಬದುಕುವ ಕೇವಲ `ಜೀವಿ’ ಅಲ್ಲ. ಆತ ತಾನು ಹೇಗೆ ಬಾಳಬೇಕು ಎಂಬುದನ್ನು ಅರಿತಿರುವ `ಅಸ್ತಿತ್ವದ ಸ್ವರೂಪ’ ಪ್ರಾಣಿಗಳು ಕೇವಲ ಪ್ರಚೋದನೆಗಳಿಗೆ ಪ್ರತಿಕ್ರಿಯಿಸುತ್ತಾ ಪ್ರಕೃತಿಯ ಸಹಜ ಪ್ರವೃತ್ತಿಯಂತೆ ಬದುಕುತ್ತವೆ. ಆದರೆ ಮಾನವನಿಗೆ ಜೀವನದಲ್ಲಿ ಎದುರಾಗುವ ಯಾವುದೇ ಸನ್ನಿವೇಶದಲ್ಲೂ ತಾನು ಹೇಗೆ ಇರಬೇಕು ಎಂದು ನಿರ್ಧರಿಸುವ ಅದ್ಭುತ ಸಾಮಥ್ರ್ಯವಿದೆ,” ಜೀವ ವಿಕಾಸದ ಹಾದಿಯಲ್ಲಿ ಅನೇಕ ಹಂತಗಳನ್ನು ದಾಟಿ ನಾವಿಂದು ಅತ್ಯುನ್ನತ ಮಟ್ಟದ ಪ್ರಜ್ಞೆಯನ್ನು ಪಡೆದುಕೊಂಡಿದ್ದೇವೆ. ಆದರೆ ಇಂದಿನ ಆಧುನಿಕ ವಿಜ್ಞಾನ ಹಾಗೂ ಡಿಎನ್‍ಎ ಸಂಶೋಧನೆಗಳು ಹೇಳುವಂತೆ, ಮಾನವ ಮತ್ತು ಚಿಂಪಾಂಜಿಯ ಡಿಎನ್‍ಎ ರಚನೆಗಳ ನಡುವೆ ಕೇವಲ ಶೇ 1.23 ರಷ್ಟು ಮಾತ್ರ ವ್ಯತ್ಯಾಸವಿದೆ. ಶಾರೀರಿಕವಾಗಿ ನಾವು ಚಿಂಪಾಂಜಿಗೆ ಅತ್ಯಂತ ಹತ್ತಿರವಾಗಿದ್ದರೂ, ಬುದ್ಧಿಶಕ್ತಿ ಹಾಗೂ ಜಾಗೃತಿಯಲ್ಲಿ ಜಗತ್ತಿನಲ್ಲಿಯೇ ಭಿನ್ನ ಹಾಗೂ ಉನ್ನತ ಸ್ಥಾನದಲ್ಲಿದ್ದೇವೆ. ಆದರೆ, ಈ ಅದ್ಭುತ ಬುದ್ಧಿಶಕ್ತಿಯನ್ನು ನಾವಿಂದು ಹೇಗೆ ಬಳಸಿಕೊಳ್ಳುತ್ತಿದ್ದೇವೆ ಎಂಬುದು ಚಿಂತಿಸಬೇಕಾದ ವಿಷಯವಾಗಿದೆ. ನಮ್ಮ ಬುದ್ಧಿಶಕ್ತಿಯೇ ನಮಗೆ ಸಮಸ್ಯೆಯಾಗಬಾರದು, ಅದು ನಮ್ಮ ಏಳ್ಗೆಯ ಪರಿಹಾರವಾಗಬೇಕು,” ಎಂದು ಕರೆ ನೀಡಿದರು.
ಮನುಷ್ಯ ಜನ್ಮ ಅತ್ಯುನ್ನತ ತಂತ್ರಜ್ಞಾನ; ಬಳಕೆದಾರರ ಕೈಪಿಡಿ ಓದಿಕೊಳ್ಳಿ ? ಸದ್ಗುರು ಜಗ್ಗಿ ವಾಸುದೇವ್ ಕರೆ
ಚಿತ್ರದುರ್ಗ: “ಭೂಮಿಯ ಮೇಲಿರುವ ಎಲ್ಲಾ ಯಂತ್ರೋಪಕರಣ ಹಾಗೂ ತಂತ್ರಜ್ಞಾನಗಳಿಗಿಂತ ಮನುಷ್ಯನ ದೇಹ ಮತ್ತು ಮನಸ್ಸಿನ ತಂತ್ರಜ್ಞಾನವೇ ಅತ್ಯಂತ ಶ್ರೇಷ್ಠ ಹಾಗೂ ಅತ್ಯುನ್ನತವಾದುದಾಗಿದೆ. ಆದರೆ, ಇದರ ಸರಿಯಾದ ಬಳಕೆಯ ವಿಧಾನ ತಿಳಿಯದೆ ನಾವಿಂದು ಬದುಕಿನುದ್ದಕ್ಕೂ ಹೆಣಗಾಡುತ್ತಿದ್ದೇವೆ,” “ಒಮ್ಮೆ ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರಿಗೂ ಬದುಕಿನಲ್ಲಿ ಕೆಲವು ಅನಿವಾರ್ಯತೆಗಳು ಎದುರಾಗುತ್ತವೆ. ಪ್ರಾಣಿಗಳಾಗಿದ್ದರೆ ತಮಗೆ ಇಷ್ಟಬಂದ ಹಾಗೆ ತಿಂದು, ತಮಗೆ ಬೇಕಾದ ಕಡೆ ಮಲಗಿ, ಸಂತಾನೋತ್ಪತ್ತಿ ನಡೆಸಿ ಕೊನೆಗೆ ಮರಣ ಹೊಂದುತ್ತಿದ್ದವು. ಅದರಲ್ಲಿ ಯಾವುದೇ ಗೊಂದಲಗಳಿರುವುದಿಲ್ಲ. ಆದರೆ, ಮನುಷ್ಯನಿಗೆ ಅಷ್ಟೇ ಸಾಲುವುದಿಲ್ಲ. ಪ್ರಾಣಿಗಳಂತೆ ದಿನನಿತ್ಯದ ಕ್ರಿಯೆಗಳನ್ನು ನಡೆಸಿದರೂ ಬದುಕಿನಲ್ಲಿ ಏನೋ ಒಂದು ಅಪೂರ್ಣತೆಯ ಭಾವ ಕಾಡುತ್ತಲೇ ಇರುತ್ತದೆ. ಏಕೆಂದರೆ ತಿನ್ನುವುದು, ಮಲಗುವುದು, ಸಂತಾನೋತ್ಪತ್ತಿ ಮಾಡುವುದು ಕೇವಲ ನಮ್ಮ ದೈಹಿಕ ಮತ್ತು ಮಾನಸಿಕ ಅಸ್ತಿತ್ವದ ಪ್ರಕ್ರಿಯೆಗಳಷ್ಟೇ ಹೊರತು ಇಡೀ ಜೀವ ಬದುಕುವ ಸಂಪೂರ್ಣ ಮಾರ್ಗವಲ್ಲ” ಎಂದು ಸದ್ಗುರುಗಳು ಅಭಿಪ್ರಾಯಪಟ್ಟರು.
ದೇಹ ಮತ್ತು ಮನಸ್ಸು ಎಂಬ ಈ ಎರಡೂ ಅದ್ಭುತ ಪರಿಕರಗಳನ್ನು ಪ್ರಕೃತಿ ನಮಗೆ ನೀಡಿದೆ. ಆದರೆ ಇವುಗಳನ್ನು ಹೇಗೆ ನಿರ್ವಹಿಸಬೇಕೆಂಬ ಕೈಪಿಡಿಯನ್ನು ಓದಿಕೊಳ್ಳದೆ ನಾವು ಬದುಕಿನ ಸಂಕೀರ್ಣ ಯಂತ್ರವನ್ನು ಚಲಾಯಿಸಲು ಹೊರಟಿದ್ದೇವೆ. ಪರಿಣಾಮವಾಗಿ ದೈನಂದಿನ ಜೀವನದಲ್ಲಿ ಅನೇಕ ತಪ್ಪುಗಳು, ಅಪಘಾತಗಳು ಮತ್ತು ನೋವುಗಳು ಸಂಭವಿಸುತ್ತಿವೆ” ಎಂದು ವಿಶ್ಲೇಷಿಸಿ ಮನಸ್ಸು ಮತ್ತು ದೇಹ ನಮ್ಮ ಅಧೀನದಲ್ಲಿ ಇರಬೇಕು. ಈ ಇಬ್ಬರು ಸಹಾಯಕರು ನಮ್ಮ ಜೊತೆ ಸಹಕರಿಸದಿದ್ದರೆ ಜೀವನ ಸಾಗಿಸುವುದು ಕಷ್ಟಕರವಾಗುತ್ತದೆ. ಇವುಗಳು ಕೆಲಸ ಮಾಡುವುದನ್ನು ನಿಲ್ಲಿಸಿದಾಗ ನಾವು ಸಾವನ್ನಪ್ಪಿದ್ದೇವೆ ಎನ್ನುತ್ತೇವೆ. ನಾವು ಬದುಕಿರುವ ಅವಧಿಯಲ್ಲಿ ಹಂತ ಹಂತವಾಗಿ ಈ ದೇಹ ಮತ್ತು ಮನಸ್ಸನ್ನು ನಾವೇ ರೂಪಿಸಿಕೊಂಡಿದ್ದೇವೆ. ತಾಯಿಯ ಗರ್ಭದಲ್ಲಿ ಅತ್ಯಂತ ಸಣ್ಣ ಜೀವಿಯಾಗಿದ್ದ ನಾವು, ಇಂದು ಇಷ್ಟು ದೊಡ್ಡ ಶರೀರವನ್ನು ಹೊಂದಿದ್ದೇವೆ ಎಂದರೆ, ನಾವು ಹೊರಗಿನಿಂದ ಆಹಾರವನ್ನು ಪಡೆದು ಈ ದೇಹವನ್ನು ನಿರ್ಮಿಸಿ ಕೊಂಡಿದ್ದೇವೆ ಎಂದರ್ಥ. ಹಾಗಾಗಿ ಇದು ನಾವು ಶೇಖರಿಸಿದ ಸಂಪತ್ತು ಮಾತ್ರ. ಈ ಶೇಖರಣೆಯನ್ನು ಅದ್ಭುತವಾಗಿ ಬಳಸಿಕೊಳ್ಳುವುದು ಅಥವಾ ದುರ್ಬಳಕೆ ಮಾಡಿಕೊಂಡು ದುಃಖ ಪಡುವುದು ಸಂಪೂರ್ಣವಾಗಿ ನಮ್ಮ ಕೈಯಲ್ಲೇ ಇದೆ” ಎಂದು ಕಿವಿಮಾತು ಹೇಳಿದರು.
“ಬುದ್ಧಿಶಕ್ತಿ ನಮಗೆ ಪೂರಕವಾಗಿ ಕೆಲಸ ಮಾಡಿದರೆ ಮಾತ್ರ ಅದು ಪರಿಹಾರ. ನಮ್ಮದೇ ಆದ ಆಲೋಚನೆಗಳು ನಮಗೆ ವಿರುದ್ಧವಾಗಿ ವರ್ತಿಸಿದರೆ, ಅದೇ ದೊಡ್ಡ ಸಮಸ್ಯೆಯಾಗುತ್ತದೆ. ಇಂದಿನ ದಿನಗಳಲ್ಲಿ ಮನುಷ್ಯನಿಗೆ ನೆಮ್ಮದಿಯಿಂದ, ಪ್ರೀತಿಯಿಂದ ಇರುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದಕ್ಕೆ ಕಾರಣ ನಮ್ಮ ಮೆದುಳು ಮತ್ತು ಅರಿವನ್ನು ನಾವು ಸರಿಯಾಗಿ ನಿರ್ವಹಿಸದಿರುವುದು. ವಿಕಾಸದ ಹಾದಿಯಲ್ಲಿ ನಮಗೆ ದೊರೆತಿರುವ ಈ ಅದ್ಭುತ ಜ್ಞಾನಶಕ್ತಿಯನ್ನು ನಮ್ಮ ಮತ್ತು ಸಮಾಜದ ಉನ್ನತಿಗೆ ಬಳಸಿಕೊಳ್ಳಬೇಕಿದೆ. ಮನುಷ್ಯ ತನ್ನ ಒಳಗಿನ ನೆಮ್ಮದಿಯನ್ನು ಕಂಡುಕೊಳ್ಳಲು ತನ್ನ ಬೌದ್ಧಿಕ ಸಂಪತ್ತನ್ನು ಸಕಾರಾತ್ಮಕವಾಗಿ ಬಳಸಬೇಕು,” ಎಂದ ಅವರು. “ಆಧ್ಯಾತ್ಮ ಎಂದರೆ ಕೇವಲ ದೇವಸ್ಥಾನ, ಚರ್ಚ್ ಅಥವಾ ಮಸೀದಿಗಳಿಗೆ ಭೇಟಿ ನೀಡುವುದಲ್ಲ. ಕಲೆ, ಕ್ರೀಡೆ ಅಥವಾ ಯಾವುದೇ ಕೆಲಸದಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದೇ (ನಿಜವಾದ ಆಧ್ಯಾತ್ಮಿಕ ಪ್ರಕ್ರಿಯೆ,” ಕಲೆ, ಸಂಗೀತ ಮತ್ತು ಕ್ರೀಡೆಗಳು ನಮ್ಮಿಂದ ಇಂತಹ ಪರಮಾವಧಿಯ ತೊಡಗಿಸಿಕೊಳ್ಳುವಿಕೆಯನ್ನು ಬೇಡುತ್ತವೆ. ಈ ಆಳವಾದ ತೊಡಗಿಸಿಕೊಳ್ಳುವಿಕೆಯೇ ಆಧ್ಯಾತ್ಮ,” ಎಂದು ಸ್ಪಷ್ಟಪಡಿಸಿದರು.
ಚಿತ್ರದುರ್ಗ ಜಿಲ್ಲೆಯು ಕರ್ನಾಟಕದ ಕೇಂದ್ರ ಭಾಗದಲ್ಲಿದ್ದು, ರಾಷ್ಟ್ರೀಯ ಹೆದ್ದಾರಿಗಳು ಇಲ್ಲಿ ಹಾದು ಹೋಗುತ್ತವೆ. ಚಿಕ್ಕಬಳ್ಳಾಪುರದಲ್ಲಿ ಆದಿಯೋಗಿ ಸನ್ನಿಧಿ ನಿರ್ಮಾಣವಾಗಿರುವ ಮಾದರಿಯಲ್ಲೇ ಚಿತ್ರದುರ್ಗ ದಲ್ಲೂ ಭವ್ಯ ಆಧ್ಯಾತ್ಮಿಕ ಕೇಂದ್ರವೊಂದು ನಿರ್ಮಾಣವಾಗಬೇಕು ಎಂದು ಸ್ಥಳೀಯ ಭಕ್ತರು ಹಾಗೂ ಪೀಠದ ಅನುಯಾಯಿಗಳು ಸದ್ಗುರುಗಳಲ್ಲಿ ಆಶಯ ವ್ಯಕ್ತಪಡಿಸಿದರು. ಆರಂಭದಲ್ಲಿ ಶಿವಶರಣ ಮಾದಾರ ಚನ್ನಯ್ಯನವರನ್ನು ಸ್ಮರಿಸುತ್ತಾ `ಮಹಾಕಾಲ ಯೋಗೀಶ್ವರ…’ ಎಂಬ ಶ್ಲೋಕವನ್ನು ಹಾಡುವ ಮೂಲಕ ಸದ್ಗುರುಗಳು ಸಭಿಕರನ್ನು ಮಂತ್ರಮುಗ್ಧಗೊಳಿಸಿದರು. ನಂತರ ತಮ್ಮದೇ ಆದ ವಿಶಿಷ್ಟ ಹಾಸ್ಯ ಹಾಗೂ ಆಳವಾದ ಆಧ್ಯಾತ್ಮಿಕ ಚಿಂತನೆಗಳ ಮೂಲಕ ನೆರೆದಿದ್ದವರ ಗಮನ ಸೆಳೆದರು.
“ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಒಳ್ಳೆಯ ಸಾವು ಅಥವಾ ಕೆಟ್ಟ ಸಾವು ಎಂಬ ಪರಿಕಲ್ಪನೆ ಇಲ್ಲ. ಬದಲಿಗೆ ‘ಕಾಲ ಮೃತ್ಯು’ (ಸಮಯಕ್ಕೆ ಸರಿಯಾಗಿ ಸಂಭವಿಸುವ ಸಾವು) ಮತ್ತು ‘ಅಕಾಲ ಮೃತ್ಯು’ (ಅಕಾಲಿಕ ಸಾವು) ಎಂಬ ಚಿಂತನೆ ಇದೆ. ಮನುಷ್ಯ ತನ್ನ ಪೂರ್ಣ ಆಯುಷ್ಯವನ್ನು ಅನುಭವಿಸಿ, ದೇಹ ಬಲಹೀನಗೊಂಡು ಪಕ್ವವಾದ ಹಣ್ಣಿನಂತೆ ಉದುರುವುದು ನೈಸರ್ಗಿಕ ಸಾವು. ವಯಸ್ಸಿನ ಲೆಕ್ಕಾಚಾರಕ್ಕಿಂತ ಮನುಷ್ಯನ ಬದುಕಿನ ಗುಣಮಟ್ಟ ಮತ್ತು ಆತನ ಜೈವಿಕ ವ್ಯವಸ್ಥೆಯ ಪೂರ್ಣತೆ ಇಲ್ಲಿ ಮುಖ್ಯವಾಗುತ್ತದೆ,” ಎಂದು ಸದ್ಗುರು ಮಾರ್ಗದರ್ಶನ ನೀಡಿದರು.
ವೇಧಿಕೆ ಕಾರ್ಯಕ್ರಮದಲ್ಲಿ ಮುರುಘಾ ಮಠದ ಡಾ ಬಸವಕುಮಾರ ಸ್ವಾಮೀಜಿ, ಅಥಣಿ ಶಿವಯೋಗಾಶ್ರಮದ ಶಿವಬಸವ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ಕಬೀರಾನಂದ ಮಠದ ಶಿವಲಿಂಗಾನಂದ ಶ್ರೀಗಳು ಉಪಸ್ಥಿತರಿದ್ದರು.