ಚಿತ್ರದುರ್ಗ ಜು. 22
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಅಪ್ಪರ್ ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗುವುದಕ್ಕೆ ರಾಜ್ಯದಿಂದ ಗೆಲುವು ಸಾಧಿಸಿರುವ ಯಾವುದೇ ಸಂಸದರು ಸಹಕಾರ ನೀಡುತ್ತಿಲ್ಲ. ಕೇಂದ್ರ ಸರ್ಕಾರ ಎರಡು ವರ್ಷ ಕಳೆದರೂ ಹಣವನ್ನು ನೀಡದೇ ನಿಬಂಧನೆಗಳನ್ನು ಏರುತಿದೆ. ಇದರಿಂದ ಅಪ್ಪರ್ ಭದ್ರಾ ಮೇಲ್ದಂಡೆ ಯೋಜನೆ ಕುಂಠಿತಗೊಂಡಿದೆ ಎಂದು ಸವೋದಯ ಪಕ್ಷದ ಜಿಲ್ಲಾಧ್ಯಕ್ಷರಾದ ಯಾದವರೆಡ್ಡಿರವರು ಕೇಂಧ್ರ ಸರ್ಕಾರವನ್ನು ದೂರಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರವು ಸಹ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಣೆ ಮಾಡಿ 5300 ಕೋಟಿ ರೂ ಹಣವನ್ನು ನೀಡುವುದಾಗಿ ಹೇಳಿತ್ತು. ಮೊದಲು ಈ ಯೋಜನೆಯು ಅನುಷ್ಠಾನಗೊಂಡಾಗ ಇದ್ದಂತಹ ವೆಚ್ಚವು ಈಗ ಹೆಚ್ಚಾಗಿದೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ.. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಮೇಲೆ.. ಯೋಜನೆಗೆ ಸಂಬಂಧಪಟ್ಟಂತೆ ಆರೋಪ ಮಾಡುತ್ತಿವೆ ಹೊರತು ಇಬ್ಬರೂ ಸಹ ಸಹಕಾರ ನೀಡುತ್ತಿಲ್ಲ.ರಾಜ್ಯ ಸರ್ಕಾರವು ಸಹ ಈ ಯೋಜನೆಯ ಬಗ್ಗೆ ಅಷ್ಟಾಗಿ ಗಮನಹರಿಸುತ್ತಿಲ್ಲ. ರಾಜ್ಯದ ಬೇರೆ ನೀರಾವರಿ ಯೋಜನೆಗಳಿಗೆ ನೀಡಿದಷ್ಟು ಪ್ರಾತಿನಿಧ್ಯತೆಯನ್ನು ಅಪ್ಪರ್ ಭದ್ರಾ ಮೇಲ್ದಂಡೆ ಯೋಜನೆಗೆ ನೀಡುತ್ತಿಲ್ಲ ಎಂದು ದೂರಿದರು.
ಚಿತ್ರದುರ್ಗ ಸಂಸದರು ಕೇಂದ್ರದಿಂದ ಬರುವಂತಹ 5300 ಕೋಟಿ ರೂ ಹಣವನ್ನು ಕೊಡಿಸುವುದಾಗಿ ಭರವಸೆ ನೀಡಿದ್ದರೂ ಸಹ ಅದು ಇದುವರೆಗೂ ಈಡೇರಿಲ್ಲ.ಕೇಂದ್ರ ಸರ್ಕಾರ ಮುಂದಿನ ಬಜೆಟ್ ಲ್ಲಿ ಯಾವುದೇ ಸಬೂಬುಗಳನ್ನು ಹೇಳದೇ ಕೊಟ್ಟ ಮಾತಿನಂತೆ 5300 ಕೋಟಿ ರೂಗಳನ್ನು ನೀಡಲು ಮುಂದಾಗಬೇಕು.ಜುಲೈ – 25ರಂದು ಚಿತ್ರದುರ್ಗಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳು ಜಿಲ್ಲೆಗೆ ಅಪ್ಪರ್ ಭದ್ರಾ ನೀರನ್ನು ಯಾವಾಗ ಹರಿಸುತ್ತಿರಿ ಎಂದು ನಿರ್ದಿಷ್ಟವಾಗಿ ದಿನಾಂಕವನ್ನು ತಿಳಿಸಬೇಕು ಯಾವುದೇ ಸಬೂಬು ಹೇಳಬಾರದು ಎಂದು ಆಗ್ರಹಿಸಿದರು.
ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾದ ಸುರೇಶ್ ಬಾಬು ಮಾತನಾಡಿ, ಚಿತ್ರದುರ್ಗ ಜಿಲ್ಲೆಯ ಪ್ರತಿಯೊಂದು ಕೆರೆಗೂ ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ತುಂಬಿಸಬೇಕು.ಚಿತ್ರದುರ್ಗ ಜಿಲ್ಲೆಯು ಸಂಪೂರ್ಣವಾಗಿ ಬರ ಆವರಿಸಿದ್ದು ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಿ ವಿಶೇಷವಾದ ಆರ್ಥಿಕ ಪ್ಯಾಕೇಜ್ ನ್ನು ಘೋಷಣೆ ಮಾಡಬೇಕು.ದನ ಕರುಗಳಿಗೆ ಕುಡಿಯುವ ನೀರಿಗಾಗಿ ಮತ್ತು ಜನರು ಗೂಳೆ ಹೋಗುವುದನ್ನು ತಪ್ಪಿಸಲು ಮೋಡ ಬಿತ್ತನೆ ಮಾಡಬೇಕು..ಜುಲೈ -25ರಂದು ಚಿತ್ರದುರ್ಗಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳು ಭದ್ರಾ ಮೇಲ್ದಂಡೆ ಯೋಜನೆಯ ಮುಖಾಂತರ ಗೋನೂರಿಗೆ ನೀರು ಹರಿಸುವ ದಿನಾಂಕವನ್ನು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ ಮಾತನಾಡುತ್ತ ಕೇಂದ್ರ ರಾಜ್ಯ ಸರ್ಕಾರಗಳು ಒಬ್ಬರ ಮೇಲೊಬ್ಬರು ಹೇಳಿಕೊಂಡು ಕಾಲಹರಣ ಮಾಡಬಾರದು. ರೈತರ ತೋಟಗಳು ಒಣಗುತ್ತಿವೆ. ಜಾನುವಾರುಗಳಿಗೆ ಮೇವು, ನೀರಿಲ್ಲದಂತಾಗಿದೆ. ಬಡ ಜನರು ಗುಳೆ ಹೋಗುತ್ತಿದ್ದಾರೆ. ಬೆಳೆ ನಷ್ಟಕ್ಕೊಳಗಾಗಿರುವ ರೈತರಿಗೆ ಪರಿಹಾರ ಘೋಷಿಸಿ ಮೋಡ ಬಿತ್ತನೆ ಮಾಡಬೇಕೆಂದರು. ಎಪಿಎಂಸಿ. ಹಮಾಲರ ಸಂಘದ ಅಧ್ಯಕ್ಷ ಬಸವರಾಜ್ ಮಾತನಾಡಿ ಭದ್ರಾ ಮೇಲ್ದಂಡೆ ಯೋಜನೆ ರಾಜಕಾರಣಿಗಳ ಪೊಳ್ಳು ಆಶ್ವಾಸನೆಯಿಂದ ಬರಿ ಕನಸಾಗಿ ಉಳಿದಿದೆ. ದಿನನಿತ್ಯದ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರವರು ಜು.25 ರಂದು ಚಿತ್ರದುರ್ಗದಲ್ಲಿ ವಿಭಾಗ ಮಟ್ಟದ ಸಭೆಗೆ ಆಗಮಿಸುತ್ತಿದ್ದು, ಜಿಲ್ಲೆಗೆ ನೀರು ಯಾವಾಗ ಹರಿಸುತ್ತೇವೆನ್ನುವುದನ್ನು ಹೇಳಬೇಕೆಂದು ಒತ್ತಾಯಿಸಿದರು.
ರೈತ ಮುಖಂಡ ಬಸ್ತಿಹಳ್ಳಿ ಜಿ.ಸುರೇಶ್ಬಾಬು ಮಾತನಾಡುತ್ತ ಚಿತ್ರದುರ್ಗ ಮತ್ತು ತುಮಕೂರು ಸಂಸದರುಗಳು ಆದಷ್ಟು ಬೇಗನೆ ಜಿಲ್ಲೆಗೆ ನೀರು ಹರಿಯಲಿದೆ ಎಂದು ಭರವಸೆ ನೀಡಿದರೆ ವಿನಃ ಕಾಮಗಾರಿ ಪೂರ್ಣಗೊಂಡು ನೀರು ಹರಿಯುವುದು ಯಾವಾಗ ಎನ್ನುವ ಅನುಮಾನ ಜಿಲ್ಲೆಯ ರೈತರನ್ನು ಕಾಡುತ್ತಿದೆ. ಸಂಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ಪಾವತಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಜವಾಬ್ದಾರಿಯನ್ನರಿತು ಜಿಲ್ಲೆಯ ಅಭಿವೃದ್ದಿಗೆ ಕೈಜೋಡಿಸಬೇಕೆಂದು ವಿನಂತಿಸಿದರು.
ರೈತ ಮಲ್ಲಾಪುರದ ತಿಪ್ಪೇಸ್ವಾಮಿ ಮಾತನಾಡಿ ಸಕಲ ಜೀವರಾಶಿಗಳಿಗೂ ನೀರು ಸಿಗಬೇಕೆಂಬ ದೂರದೃಷ್ಟಿಯಿಂದ ಪಾಳೆಯಗಾರರು ಚಿತ್ರದುರ್ಗದಲ್ಲಿ ಅನೇಕ ಹೊಂಡ ಕೆರಗಳನ್ನು ನಿರ್ಮಿಸಿದ್ದಾರೆ. ಅದೇ ರೀತಿ ಮೈಸೂರು ಮಹಾರಾಜರು ಡ್ಯಾಂಗಳನ್ನು ಕಟ್ಟಿಸಿದ್ದಾರೆ. ಈಗಿನ ಆಳುವ ಪಕ್ಷಗಳಿಗೆ ಇಂತಹ ಕಾಳಜಿಯೇಕಿಲ್ಲ ಎಂದು ಪ್ರಶ್ನಿಸಿದರು? ಬರಗಾಲಕ್ಕೆ ತುತ್ತಾಗಿರುವ ಚಿತ್ರದುರ್ಗ ಜಿಲ್ಲೆಗೆ ಮೊದಲು ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಹರಿಸಬೇಕೆಂದರು.
ರೈತ ಮಹಿಳೆ ಲಕ್ಷ್ಮಿ, ಕಾಂ.ಈ.ಸತ್ಯಕೀರ್ತಿ ಇವರುಗಳು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j