ಚಿತ್ರದುರ್ಗ ಮೇ. 31
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ರಾಜ್ಯದಲ್ಲಿ ಮೂರನೆ ಅತಿ ದೊಡ್ಡ ಸಮುದಾಯ ಕುರುಬ ಸಮುದಾಯವಾಗಿದೆ. ಆದರೆ ನಮ್ಮ ಸಮುದಾಯಕ್ಕೆ ರಾಜ್ಯದಲ್ಲಿನ ರಾಜಕೀಯ ಪಕ್ಷಗಳು ಸರಿಯಾದ ಮಾನ್ಯತೆಯನ್ನು ನೀಡುತ್ತಿಲ್ಲ, ಮೂರು ಪಕ್ಷಗಳಲ್ಲಿ ನಮಗೆ ಅವಕಾಶ ಕಡಿಮೆಯಿದೆ. ವಿಧಾನಸಭೆ, ವಿಧಾನಪರಿಷತ್, ಲೋಕಸಭೆ, ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಸಮಾಜಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು. ಜೊತೆಗೆ ರಾಜ್ಯದಲ್ಲಿ ಎರಡನೆ ಅವಧಿಯ ನಿಗಮ ಮಂಡಳಿಗಳ ನೇಮಕದಲ್ಲಿ ನಮ್ಮ ಜನಾಂಗಕ್ಕೆ ಒತ್ತು ಕೊಡಬೇಕು ಎಂದು ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಟಿ.ಜಗದೀಶ್ ರಾಜಕೀಯ ಪಕ್ಷಗಳನ್ನು ಹಾಗೂ ಕಾಂಗ್ರೆಸ್ ಪಕ್ಷವನ್ನು ಆಗ್ರಹಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಹಿಂದ ಸಂಘಟಕ ಸಿದ್ದರಾಮಯ್ಯ ಕಾಂಗ್ರೆಸ್ಗೆ ಬಂದಾಗ ವರಿಷ್ಟರು ಸ್ವಾಗತಿಸಿ ಎರಡು ಬಾರಿ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿದರು. ಎರಡನೆ ಬಾರಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಬಡವರು, ದೀನ ದಲಿತರು, ಶೋಷಿತರು, ಧ್ವನಿಯಿಲ್ಲದವರಿಗೆ ಶಕ್ತಿ ತುಂಬಿದರು. ವರಿಷ್ಟರ ಸೂಚನೆಯಂತೆ ರಾಜಿನಾಮೆ ನೀಡಿರುವುದು ನಮಗೆಲ್ಲಾ ನೋವಾಗಿದ್ದರು. ಮತ್ತೊಂದು ಕಡೆ ಡಿ.ಕೆ.ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ಸ್ವಾಗತಿಸುತ್ತೇವೆಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ನೀಡಿರುವುದು ಕೇವಲ ಕುರುಬರಿಗಷ್ಟೆ ಅಲ್ಲ. ಇಡಿ ಅಹಿಂದ ವರ್ಗಕ್ಕೆ ನೋವುಂಟಾಗಿದೆ ಕುರಿ ಕಾಯುತ್ತಿದ್ದ ಹುಡುಗ ರಾಜ್ಯದ ಮುಖ್ಯಮಂತ್ರಿಯಾಗುವವರೆಗೆ ಬೆಳೆದಿದ್ದಾರೆಂದರೆ ಅವರ ಕಮ್ಮಿ ಸಾಧನೆಯಲ್ಲ. ನಾಲ್ಕು ಬಾರಿ ಶಾಸಕರಾಗಿರುವ ಬಿ.ಜಿ.ಗೋವಿಂದಪ್ಪನವರನ್ನು ರಾಜ್ಯ ಸಚಿವ ಸಂಪುಟದಲ್ಲಿ ಮಂತ್ರಿಯನ್ನಾಗಿ ಮಾಡಬೇಕು. ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಮೊಳಕಾಲ್ಮುರು ಶಾಸಕ ಎನ್.ವೈ.ಗೋಪಾಲಕೃಷ್ಣ, ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಇವರುಗಳಿಗೂ ಸಚಿವ ಸ್ಥಾನ ಕೊಡಬೇಕೆಂದು ವರಿಷ್ಟರನ್ನು ಒತ್ತಾಯಿಸಿದರು.
ಡಿ.ಕೆ.ಶಿವಕುಮಾರ್ರವರ ಮಂತ್ರಿ ಮಂಡಲದಲ್ಲಿ ಕುರುಬರಿಗೆ ಐದು ಸಚಿವ ಸ್ಥಾನ ಸಿಗಬೇಕು. ಏಳು ವಿಧಾನಪರಿಷತ್ ಸ್ಥಾನ ಖಾಲಿಯಾಗುತ್ತಿದೆ. ರಾಜ್ಯಸಭೆಗೂ ನಡೆಯುವ ಚುನಾವಣೆಯಲ್ಲಿ ಕುರುಬರಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಡಬೇಕೆಂದು ಬಿಜೆಪಿ. ಜೆಡಿಎಸ್.ನವರಿಗೂ ಆಗ್ರಹಿಸಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಕುರುಬ ಸಮುದಾಯದ ಸಮೀಕ್ಷೆಯನ್ನು ಸಿದ್ದರಾಮಯ್ಯನವರು ಸ್ವೀಕಾರ ಮಾಡಿರುವುದನ್ನು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಡಿ.ಕೆ.ಶಿವಕುಮಾರ್ ಅಂಗೀಕರಿಸಿ ಯಥಾವತ್ತಾಗಿ ಜಾರಿಗೊಳಿಸಬೇಕು. ಇದರಿಂದ ಹಿಂದುಳಿದ 104 ಜಾತಿಗಳಿಗೆ ಅನುಕೂಲವಾಗಲಿದೆ ಎಂದು ಜಗದೀಶ್ ತಿಳಿಸಿದರು.
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶ್ರೀರಾಂ ಮಾತನಾಡಿ ನೂತನವಾಗಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಡಿ.ಕೆ.ಶಿವಕುಮಾರ್ ಓಬಿಸಿ. ಪರಿಶಿಷ್ಟ ಜಾತಿಪರಿಶಿಷ್ಟ ವರ್ಗದವರನ್ನು ಸಮಾನವಾಗಿ ತೆಗೆದುಕೊಂಡು ಹೋಗಬೇಕು. ಜಿಲ್ಲೆಯ ನಾಲ್ವರು ಶಾಸಕರುಗಳಿಗೆ ಸಚಿವ ಸ್ಥಾನ ಸಿಗಬೇಕು. ತಳಮಟ್ಟದ ಕುರುಬ ಜನಾಂಗವನ್ನು ನಿಮ್ಮ ಜೊತೆ ವಿಶ್ವಾಸದಲ್ಲಿಟ್ಟುಕೊಂಡು ಹೆಚ್ಚಿನ ಸ್ಥಾನಮಾನ ಕಲ್ಪಿಸುವಂತೆ ಮನವಿ ಮಾಡಿದರು.
ಜಿಲ್ಲಾ ಕುರುಬರ ಸಂಘದ ಗೌರವಾಧ್ಯಕ್ಷ ಹೆಚ್.ಮಂಜಪ್ಪ ಮಾತನಾಡುತ್ತ ಹಿರಿಯ ಶಾಸಕರಾದ ಬಿ.ಜಿ.ಗೋವಿಂದಪ್ಪನವರಿಗೆ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ಕೊಡಬೇಕು. ನಾಲ್ಕು ಬಾರಿ ಶಾಸಕರಾಗಿರುವ ಇವರಿಗೆ ರಾಜಕಾರಣದಲ್ಲಿ ಅಪಾರ ಅನುಭವವಿದೆ. ಹಾಗಾಗಿ ಪರಿಗಣನೆಗೆ ತೆಗೆದುಕೊಂಡು ಕುರುಬ ಸಮಾಜಕ್ಕೆ ಸಾಮಾಜಿಕ ನ್ಯಾಯ ನೀಡಬೇಕೆಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಖಂಜಾಚಿ ಮುತ್ತು, ಕುರುಬರ ಸಂಘದ ನಿರ್ದೇಶಕ ಹೊಸದುರ್ಗದ ಲಿಂಗಮೂರ್ತಿ, ಸಮಾಝದ ಮುಖಂಡರಾದ ಸುರೇಶ್ ಮಾಳೇಶ್, ಉಮೇಶ್ ಹಾಜರಿದ್ದರು.