ವಿದ್ಯಾರ್ಥಿಗಳ ಸೃಜನಶೀಲತೆಗೆ ವೇದಿಕೆಯಾದ ವಿದ್ಯಾ ವಿಕಾಸ ಶಾಲೆಯ ಕಲಾ ಮತ್ತು ವಿಜ್ಞಾನ ಪ್ರದರ್ಶನ.
ಚಿತ್ರದುರ್ಗ: ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ 2026-27ನೇ ಸಾಲಿನ ಕಲಾ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಒಂದರಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳು ಸಿದ್ಧಪಡಿಸಿದ ಸುಮಾರು 506 ವಿವಿಧ ಕಲಾ ಮತ್ತು ವಿಜ್ಞಾನ ಮಾದರಿಗಳು ಪ್ರದರ್ಶನಗೊಂಡು ಎಲ್ಲರ ಗಮನ ಸೆಳೆದವು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಯಟ್ನ ಅಭಿವೃದ್ಧಿ ವಿಭಾಗದ ಉಪನಿರ್ದೇಶಕ ನಾಗಭೂಷಣ್ ಎಸ್. ಮಾತನಾಡಿ, ಮಗುವಿನ ಬೆಳವಣಿಗೆ ಕೇವಲ ಉತ್ತಮ ಅಂಕಗಳು ಅಥವಾ ಗ್ರೇಡ್ಗಳಿಗೆ ಸೀಮಿತವಾಗಬಾರದು. ಪ್ರತಿಯೊಂದು ಮಗುವಿನಲ್ಲಿಯೂ ವಿಶೇಷ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಹೊರತರುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ವಿದ್ಯಾ ವಿಕಾಸ ಶಾಲೆಯು ಇಂತಹ ಉತ್ತಮ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
21ನೇ ಶತಮಾನದಲ್ಲಿ ಜಗತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳಲ್ಲಿಯೂ ಸೃಜನಶೀಲತೆ ಮತ್ತು ವೈಜ್ಞಾನಿಕ ಚಿಂತನೆ ಬೆಳೆಸಬೇಕು. ವಿದ್ಯಾರ್ಥಿಗಳು ಸಿದ್ಧಪಡಿಸುವ ಅತ್ಯುತ್ತಮ ಮಾದರಿಗಳು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಳ್ಳುವಂತಾಗಬೇಕು. ಇಂತಹ ಮಾದರಿಗಳನ್ನು ಶಿಕ್ಷಣ ಇಲಾಖೆ ಗುರುತಿಸಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಿದೆ. ವಿದ್ಯಾರ್ಥಿಗಳು ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ಉಪನ್ಯಾಸಕ ಹಾಗೂ ಚಳ್ಳಕೆರೆ ಕುದಾಪುರ ಕೇಂದ್ರದ ಡಾ. ರಾಘವೇಂದ್ರ ಎಸ್. ಅವರು, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸ್ಥಾಪನೆಗೆ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸುಮಾರು 371 ಎಕರೆ ಜಮೀನು ದಾನವಾಗಿ ನೀಡಿದ್ದರು. ಜಮ್ಸೆಟ್ಜಿ ಟಾಟಾ ಹಾಗೂ ಸ್ವಾಮಿ ವಿವೇಕಾನಂದರ ಕನಸಿನ ಫಲವಾಗಿ 1909ರ ಮೇ 27ರಂದು ಸಂಸ್ಥೆ ಅಸ್ತಿತ್ವಕ್ಕೆ ಬಂದಿತು ಎಂದು ವಿವರಿಸಿದರು.
ನಂತರ ಚಿತ್ರದುರ್ಗ ಜಿಲ್ಲೆಯ ಕುದಾಪುರದಲ್ಲಿ 2011ರ ಫೆಬ್ರವರಿ 26ರಂದು ಸುಮಾರು 1500 ಎಕರೆ ಪ್ರದೇಶದಲ್ಲಿ ವಿಜ್ಞಾನ ಸಂಸ್ಥೆ ಸ್ಥಾಪನೆಯಾಯಿತು. ಈ ಕೇಂದ್ರದ ಮೂಲಕ ಸುಮಾರು 24 ಸಾವಿರ ಶಿಕ್ಷಕರಿಗೆ ವೈಜ್ಞಾನಿಕ ತರಬೇತಿ ನೀಡಲಾಗಿದೆ. ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ ಕಲಾ ಮತ್ತು ವಿಜ್ಞಾನ ವಸ್ತು ಪ್ರದರ್ಶನವು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಬಿ. ವಿಜಯಕುಮಾರ್ ಮಾತನಾಡಿ, ಶಾಲೆಯ ವಿದ್ಯಾರ್ಥಿಗಳು ಈ ಬಾರಿ ಅತ್ಯಂತ ವಿಭಿನ್ನ ಹಾಗೂ ಅಪರೂಪದ ಮಾದರಿಗಳನ್ನು ಸಿದ್ಧಪಡಿಸಿರುವುದು ಸಂತಸದ ಸಂಗತಿಯಾಗಿದೆ. ಇವುಗಳನ್ನು ರೂಪಿಸುವಲ್ಲಿ ಶಿಕ್ಷಕರು ಮತ್ತು ಪೋಷಕರ ಪರಿಶ್ರಮ ಶ್ಲಾಘನೀಯವಾಗಿದೆ. ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಒಳಗಾಗದೆ ಇಂತಹ ಚಟುವಟಿಕೆ ಆಧಾರಿತ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಅವರ ಬೌದ್ಧಿಕ ಸಾಮರ್ಥ್ಯ ಹಾಗೂ ಸೃಜನಶೀಲತೆ ಹೆಚ್ಚುತ್ತದೆ ಎಂದು ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಎನ್.ಜಿ. ತಿಪ್ಪೇಸ್ವಾಮಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ವಿಜ್ಞಾನ ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿನ ಕಲಾ ಪ್ರತಿಭೆ ಮತ್ತು ವೈಜ್ಞಾನಿಕ ಆಸಕ್ತಿಯನ್ನು ಗುರುತಿಸಿ, ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ವೇದಿಕೆಯಾಗಲಿವೆ. ಭವಿಷ್ಯದಲ್ಲಿ ಮನುಕುಲಕ್ಕೆ ಉಪಯುಕ್ತವಾದ ಕೊಡುಗೆಗಳನ್ನು ನೀಡಲು ಇವು ಪ್ರೇರಣೆ ನೀಡುತ್ತವೆ ಎಂದರು.
ಪ್ರದರ್ಶನದಲ್ಲಿ ಒಂದರಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳು ಸುಮಾರು 506 ವಿವಿಧ ಕಲಾ ಮತ್ತು ವಿಜ್ಞಾನ ಮಾದರಿಗಳನ್ನು ಸಿದ್ಧಪಡಿಸಿ ಪ್ರದರ್ಶಿಸಿದರು. ವಿವಿಧ ಶಾಲೆಗಳಿಂದ ಆಗಮಿಸಿದ್ದ ಏಳು ಮಂದಿ ಶಿಕ್ಷಕರು ಮಾದರಿಗಳನ್ನು ಕೂಲಂಕಷವಾಗಿ ವೀಕ್ಷಿಸಿ ತೀರ್ಪು ನೀಡಿದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಪ್ರದರ್ಶನವನ್ನು ವೀಕ್ಷಿಸಿ ವಿದ್ಯಾರ್ಥಿಗಳ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅನರ್ಘ್ಯ ಪ್ರಾರ್ಥಿಸಿದರು. ಕೃಷ್ಣವೇಣಿ.ಡಿ ಸ್ವಾಗತಿಸಿದರು. ವೈಶಾಲಿ ಬೆನ್ನಡಿ ನಿರೂಪಿಸಿದರು. ಭರತ್ ಎಸ್.ಎನ್. ವಂದಿಸಿದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು