ಚಿತ್ರದುರ್ಗ ಜು. 25
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕೈಬಿಟ್ಟು ಹೋಗುವ ಅಥವಾ ವೋಟ್ ಮಿಸ್ ಆಗುವ ಸಾಧ್ಯತೆಯನ್ನು ತಪ್ಪಿಸಲು ಸಾರ್ವಜನಿಕರು ಎನುಮರೇಷನ್ ಫಾರಂಗಳನ್ನು ತಕ್ಷಣ ಸಲ್ಲಿಸಿ ಈ ವಿಷಯಕ್ಕೆ ಹೆಚ್ಚಿನ ಗಮನ ನೀಡಬೇಕು ಎಂದು ಬಿಜೆಪಿಯ ಉಪಾಧ್ಯಕ್ಷರು, ಬಿ.ಎಲ್.ಎಯಾದ ಡಾ.ಸಿದ್ದಾರ್ಥ ಗುಡಾರ್ಪಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಎಸ್‍ಆರ್‍ಆರ್’ಗೆ ಸಂಬಂಧಪಟ್ಟಂತೆ ಶನಿವಾರ 20ನೇ ವಾರ್ಡನಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಎಸ್.ಐ.ಆರ್ ಅಭಿಯಾನದ ಅಂಗವಾಗಿ ಬಿಜೆಪಿ ನಗರಘಟಕದವತಿಯಿಂದ ಮನೆ ಮನೆ ಬೇಟಿ ಮಹಾಸಂಪರ್ಕ ಅಭಿಯಾನವನ್ನು ನಗರದ ಗೋಪಾಲಪುರ ರಸ್ತೆಯ ತಿಪ್ಪಿನಘಟ್ಟಮ್ಮ ದೇವಸ್ಥಾನದಿಂದ ಪ್ರಾರಂಭಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಕಳೆದ 20 ದಿನಗಳಿಂದ ಚುನಾವಣಾ ಆಯೋಗ, ಸರ್ಕಾರ ಹಾಗೂ ಎಲ್ಲ ರಾಜಕೀಯ ಪಕ್ಷಗಳು ಜಂಟಿಯಾಗಿ ಮತದಾರರ ಪಟ್ಟಿಯ `ಎಸ್‍ಆರ್ ಆರ್'(ವಿಶೇಷಸಂಕ್ಷಿಪ್ತಪರಿಷ್ಕರಣೆ) ಕಾರ್ಯವನ್ನು ನಡೆಸುತ್ತಿವೆ. ಈ ಅಭಿಯಾನದ ಭಾಗವಾಗಿ ಸಾರ್ವಜನಿಕರು ತಮ್ಮ ಮತದಾರರ ವಿವರಗಳ ಫಾರಂಗಳನ್ನು ತಕ್ಷಣವೇ ಸಲ್ಲಿಸುವಂತೆ ಕೋರಿ ರಾಜ್ಯದಲ್ಲಿ ಈಗಾಗಲೇ ಶೇಕಡಾ 60 ರಿಂದ 65 ರಷ್ಟು ಜನರ ಎನುಮರೇಷನ್ ಫಾರಂಗಳು ವಾಪಸ್ ಮುಟ್ಟಿದ್ದು, ಅವುಗಳನ್ನು ಚುನಾವಣಾ ಆಯೋಗವು ಡಿಜಿಟಲೀಕರಣಗೊಳಿಸಿದೆ ಎಂದು ತಿಳಿಸಿದರು.
ಇನ್ನೂ ಯಾರು ಮತದಾರರ ಫಾರಂಗಳನ್ನು ವಾಪಸ್ ನೀಡದಿರುವಿರೋ ಅಥವಾ ಮಾಹಿತಿ ಹುಡುಕಲು ಕಷ್ಟಪಡುತ್ತಿದ್ದೀರೋ, ಅವರು ತಕ್ಷಣವೇ ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಗಳನ್ನು (ಬಿಎಲ್‍ಒ) ಅಥವಾ ಭಾರತೀಯ ಜನತಾ ಪಾರ್ಟಿಯ ಬಿಎಲ್‍ಎ-2 (ಬೂತ್‍ಮಟ್ಟದಏಜೆಂಟ್) ಅವರನ್ನು ಸಂಪರ್ಕಿಸುವಂತೆ ಮನವಿ ಮಾಡಿದರು. ಅರ್ಧ ಗಂಟೆ ಸಮಯ ಮೀಸಲಿಟ್ಟು ಅಗತ್ಯ ಮಾಹಿತಿ ಹುಡುಕಿ, ಫಾರಂ ಭರ್ತಿ ಮಾಡಿ ತಕ್ಷಣ ಸಲ್ಲಿಸಬೇಕಾಗಿದೆ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕೈಬಿಟ್ಟು ಹೋಗುವ ಅಥವಾ ವೋಟ್ ಮಿಸ್ ಆಗುವ ಸಾಧ್ಯತೆಯನ್ನು ತಪ್ಪಿಸಲು ಸಾರ್ವಜನಿಕರು ಈ ವಿಷಯಕ್ಕೆ ಹೆಚ್ಚಿನ ಗಮನ ನೀಡಬೇಕು ಎಂದು ಅವರು ಎಚ್ಚರಿಸಿದರು. ಪ್ರತಿಯೊಬ್ಬ ನಾಗರಿಕನ ಭಾಗವಹಿಸುವಿಕೆಯಿಂದ ಮಾತ್ರ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಇನ್ನಷ್ಟು ಶಕ್ತಿಗೊಳಿಸಲು ಸಾಧ್ಯ ಎಂದು ತಿಳಿಸಿದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಕಳೆದ ಇಪ್ಪತ್ತು ವರ್ಷಗಳಿಂದ ಮತದಾರರ ಪಟ್ಟಿಯು ಸೂಕ್ತವಾಗಿ ಪರಿಷ್ಕರಣೆಯಾಗಿರಲಿಲ್ಲ ಈ ಹಿನ್ನೆಲೆಯಲ್ಲಿ 2026-27ನೇ ಸಾಲಿನಲ್ಲಿ ದೇಶಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ. ಮತದಾರರ ಪಟ್ಟಿಯನ್ನು ವ್ಯವಸ್ಥಿತವಾಗಿ ನವೀಕರಿಸಲು ಬಿಎಲ್‍ಒ ಗಳನ್ನು ನೇಮಿಸಲಾಗಿದ್ದು, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸೇರಿದಂತೆ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಕಡೆಯಿಂದ ಬಿಎಲ್‍ಒ-1 ಮತ್ತು ಬಿಎಲ್‍ಒ-2 ಪ್ರತಿನಿಧಿಗಳನ್ನು ನಿಯೋಜಿಸಿವೆ ಎಂದು ತಿಳಿಸಿದರು.
ಈ ಅಭಿಯಾನದ ಭಾಗವಾಗಿ ತಿಪ್ಪಾರೆಡ್ಡಿ ಅವರ ಕ್ಷೇತ್ರದಲ್ಲಿ ಮನೆ-ಮನೆ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ 11,000ಕ್ಕೂ ಹೆಚ್ಚು ನಕಲಿ ಅಥವಾ ಅನರ್ಹ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇನ್ನು ಸುಮಾರು 13,000ದಷ್ಟು ಸಂಶಯಾಸ್ಪದ ಅಥವಾ ದ್ವಿಗುಣ (ಡಬಲ್) ಹೆಸರುಗಳು ಕಂಡುಬಂದಿದ್ದು, ತಿಪ್ಪಾರೆಡ್ಡಿ ಅವರ ಪುತ್ರ ಡಾಕ್ಟರ್ ಸಿದಾರ್ಥ ಅವರ ನೇತೃತ್ವದಲ್ಲಿ ಪರಿಶೀಲನೆ ನಡೆಸಿ, ಈ ಮಾಹಿತಿಯನ್ನು ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತಕ್ಕೆ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಮುಂದಿನ 20 ವರ್ಷಗಳ ಕಾಲ ಮತದಾರರ ಪಟ್ಟಿ ಪಾರದರ್ಶಕವಾಗಿರಬೇಕು ಎಂಬ ಉದ್ದೇಶದಿಂದ ಈ ಕಾರ್ಯ ಸಾಗುತ್ತಿದ್ದು, ರಾಜ್ಯದ ಮುಖ್ಯಮಂತ್ರಿಗಳು ಸಹ ಇದಕ್ಕೆ ಸಹಕಾರ ನೀಡುತ್ತಿದ್ದಾರೆ ಆಗಸ್ಟ್ 8 ಅರ್ಜಿ ಸಲ್ಲಿಸಲು/ತಿದ್ದುಪಡಿಗೆ ಕೊನೆಯ ದಿನವಾಗಿರುವುದರಿಂದ, ಸಾರ್ವಜನಿಕರು ಹಾಗೂ 18 ವರ್ಷ ತುಂಬಿದ ಪ್ರತಿಯೊಬ್ಬ ಯುವಕ-ಯುವತಿಯರು ಜಾಗೃತಿಯಿಂದ ತಮ್ಮ ಹೆಸರನ್ನು ಪಟ್ಟಿಗೆ ಸೇರಿಸಿಕೊಳ್ಳಬೇಕು ಎಂದು ವಿನಂತಿಸಿದರು. ಹಳೆಯ ಪಟ್ಟಿಯು ಮುಂದೆ ರದ್ದಾಗುವುದರಿಂದ, ಸರ್ಕಾರದ ಸೌಲಭ್ಯಗಳು ಹಾಗೂ ಯೋಜನೆಗಳ ಪ್ರಯೋಜನ ಪಡೆಯಲು ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಕಡ್ಡಾಯವಾಗಿದೆ ಎಂದು ಸಂಸದರು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರವು ಅಕ್ರಮ ನಿವಾಸಿಗಳಿಗೆ/ವಲಸಿಗರಿಗೆ ‘ನಿವಾಸಿ ಪ್ರಮಾಣಪತ್ರ’ ನೀಡಲು ಮುಂದಾಗಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಸಂಪೂರ್ಣ ಸಂವಿಧಾನ ವಿರೋಧಿ ನೀತಿ ಎಂದು ಕಟುವಾಗಿ ಖಂಡಿಸಿ ಪೌರತ್ವ ಅಥವಾ ನಿವಾಸದ ಕುರಿತು ನಿರ್ಣಯ ಕೈಗೊಳ್ಳುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರವೇ ಹೊರತು ರಾಜ್ಯ ಸರ್ಕಾರಕ್ಕಲ್ಲ. ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಇತರ ಹೊರದೇಶಗಳಿಂದ ಬಂದು ಅಕ್ರಮವಾಗಿ ನೆಲೆಸಿರುವವರಿಗೆ ನೆರವಾಗಲು ಮತ್ತು ಜನರಿಗೆ ಮೋಸ ಮಾಡಲು ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರದ ಈ ನಡವಳಿಕೆಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಹಾಗೂ ಇದನ್ನು ಖಂಡಿಸುವುದಾಗಿ ತಿಳಿಸಿ ಮತದಾರರ ಪಟ್ಟಿ ನವೀಕರಣ ಕಾರ್ಯದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ ತಮ್ಮ ಹಕ್ಕನ್ನು ಕಾಯ್ದುಕೊಳ್ಳಬೇಕು. ಸಂವಿಧಾನ ವಿರೋಧಿ ನಿವಾಸಿ ಪ್ರಮಾಣಪತ್ರ ನೀಡುವ ನಿರ್ಧಾರವನ್ನು ತಕ್ಷಣವೇ ಕೈಬಿಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಬರ ಪರಿಸ್ಥಿತಿ ಹಾಗೂ ಜಾನುವಾರುಗಳ ರಕ್ಷಣೆ
ಜಿಲ್ಲೆಯ ಬರ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಂಸದರು, ಜಿಲ್ಲೆಯಲ್ಲಿ ಸುಮಾರು 20 ಲಕ್ಷ ಜಾನುವಾರುಗಳಿದ್ದು, ಅದರಲ್ಲಿ 17 ಲಕ್ಷ ಕುರಿ-ಮೇಕೆಗಳಿವೆ. ಮಧ್ಯ ಕರ್ನಾಟಕದ ಕೃಷಿ ಕ್ಷೇತ್ರದ ಮುಖ್ಯ ಭಾಗವಾಗಿರುವ ಕುರಿ ಸಾಕಾಣಿಕೆ ನೆಚ್ಚಿಕೊಂಡಿರುವ ಗೊಲ್ಲರ ಸಮುದಾಯ ಮತ್ತು ಬಡ ರೈತರು ಇಂದು ಮೇವು ಹಾಗೂ ಕುಡಿಯುವ ನೀರಿಲ್ಲದೆ ಸಂಕಷ್ಟದಲ್ಲಿದ್ದಾರೆ. ಜಿಲ್ಲೆಯ 240ಕ್ಕೂ ಹೆಚ್ಚು ಹಳ್ಳಿಗಳಲ್ಲಿ ತೀವ್ರ ಕುಡಿಯುವ ನೀರಿನ ಅಭಾವವಿದೆ. ಜನರ ಉದ್ಯೋಗ ಅರಸಿ ಬೇರೆ ಜಿಲ್ಲೆಗಳಿಗೆ ಗುಳೆ ಹೋಗುತ್ತಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಜಾನುವಾರುಗಳಿಗೆ ಹಾಗೂ ಕುರಿಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆ ಮಾಡಬೇಕು. ಗೋಶಾಲೆಗಳನ್ನು ಪ್ರಾರಂಭಿಸಬೇಕು.ಜನರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಬೇಕು. ಪ್ರತಿಯೊಂದು ಜಿಲ್ಲೆಗೆ 25 ಕೋಟಿ ರೂಪಾಯಿ ತುರ್ತು ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಈ ಕುರಿತು ಈಗಾಗಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿರುವುದಾಗಿ ತಿಳಿಸಿದ ಅವರು. ರಾಜ್ಯ ಸರ್ಕಾರವು ರಾಜಕೀಯ ಗಿಮಿಕ್‍ಗಳನ್ನು ಬಿಟ್ಟು ಜಿಲ್ಲೆಯ ಬರ ಪರಿಸ್ಥಿತಿಗೆ ತಕ್ಷಣವೇ ಸ್ಪಂದಿಸಿ ರೈತರು, ಜಾನುವಾರುಗಳು ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಬೇಕು
ಈ ಸಂದರ್ಭದಲ್ಲಿ ಬಿಜೆಪಿ ,ಜಿಲ್ಲಾಧ್ಯಕ್ಷರಾದ ಕೆ.ಟಿ ಕುಮಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ್ ಯಾದವ್ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಾಳೆಕಾಯಿ ರಾಮದಾಸ್, ಗ್ರಾಮಾಂತರ ಅಧ್ಯಕ್ಷರಾದ ನಾಗರಾಜ್, ಜಿಲ್ಲಾ ಕಾರ್ಯದರ್ಶಿಗಳಾದ ರೇಖಾ, ಜಿಲ್ಲಾ ವಾಕ್ತಾರರಾದ ನಾಗರಾಜ್ ಬೇದ್ರೆ, ಜಿಲ್ಲಾ ಸಹವಕ್ತಾರರಾದ ನವೀನ್ ಚಾಲುಕ್ಯ, ನಗರ ಪ್ರಧಾನ ಕಾರ್ಯದರ್ಶಿಗಳಾದ ಲೀಲಾವತಿ ಬಸವೇಶ್, ಎಸ್.ಸಿ. ಮೋರ್ಚಾ ಅಧ್ಯಕ್ಷ ಪರಶುರಾಮ್, ದಿಶಾ ಸಮಿತಿ ಸದಸ್ಯ ಭರತ್, ಯುವ ಮೋರ್ಚಾ ನಗರಧ್ಯಕ್ಷರಾದ ಡಾ.ವಸಂತ್ ಆಚಾರ್, ಗ್ರಾಮಾಂತರ ಯುವ ಮೋರ್ಚಾ ಅಧ್ಯಕ್ಷರಾದ ಸಿದ್ದೇಶ ಯಾದವ್, ಜಿಲ್ಲಾ,ನಗರ, ಹಾಗೂ ಗ್ರಾಮಾಂತರ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.