ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಯೋಗವು ಭಾರತೀಯ ಸಂಸ್ಕೃತಿಯ ಅಮೂಲ್ಯ ಕೊಡುಗೆಗಳಲ್ಲಿ ಒಂದು. ಇದು ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವನ್ನು ಸಾಧಿಸುವ ಪ್ರಾಚೀನ ಶಿಸ್ತಾಗಿದ್ದು, ವಿಶ್ವದಾದ್ಯಂತ ಅದರ ಮಹತ್ವವನ್ನು ಇತ್ತೀಚಿನ ದಿನಗಳಲ್ಲಿ ಎಲ್ಲರೂ ಅರಿಯತೊಡಗಿದ್ದಾರೆ. 12ನೇ ಅಂತರಾಷ್ಟ್ರೀಯ ಯೋಗ ದಿನವನ್ನು 2026ರ ಜೂನ್ 21 ಭಾನುವಾರದಂದು ಆಚರಿಸ ಲಾಗುತ್ತಿದೆ.
ಈ ವರ್ಷದ ಮುಖ್ಯ ಕಾರ್ಯಕ್ರಮವು ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜರುಗಲಿದೆ. ಈ ವರ್ಷದ ಅಂತರಾಷ್ಟ್ರೀಯ ಯೋಗ ದಿನವನ್ನು “ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ” ಎಂಬ ವಿಷಯದಡಿ ಆಚರಿಸಲಾಗುತ್ತಿದೆ. ಇದು ವಯಸ್ಸಾದಂತೆ ದೈಹಿಕ ಕ್ಷಮತೆ, ಸ್ವಾತಂತ್ರ್ಯ ಮತ್ತು ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಯೋಗದ ಮಹತ್ವವನ್ನು ಒತ್ತಿಹೇಳುತ್ತದೆ. ಭಾರತದಾದ್ಯಂತ ಸುಮಾರು 2,500ಕ್ಕೂ ಅಧಿಕ ಸ್ಥಳಗಳಲ್ಲಿ ಏಕಕಾಲಕ್ಕೆ ಯೋಗಾಭ್ಯಾಸ ನಡೆಯ ಲಿದ್ದು, ಕರ್ನಾಟಕದ ಐತಿಹಾಸಿಕ ತಾಣವಾದ ಹಂಪಿಯ ಆವರಣದಲ್ಲೂ ವಿಶೇಷ ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿದೆ. ಸರಕಾರದ ವತಿಯಿಂದ, ಬೆಂಗಳುರಿನ ವಿಧಾನ ಸೌಧದಲ್ಲಿ ವಿಶೇಷ ಕಾರ್ಯಕ್ರಮ ನಿಯೋಜಿಸಲಾಗಿದೆ.
ಉದ್ದೇಶ: ದೈಹಿಕ ಸದೃಢತೆ, ಮಾನಸಿಕ ನೆಮ್ಮದಿ ಮತ್ತು ಸಮಗ್ರ ಆರೋಗ್ಯವನ್ನು ಉತ್ತೇಜಿಸುವುದು ಈ ಜಾಗತಿಕ ಆಚರಣೆಯ ಮುಖ್ಯ ಉದ್ದೇಶವಾಗಿದೆ.ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರತಿ ವರ್ಷ ಜೂನ್ 21ರಂದು ಆಚರಿಸಲಾಗುತ್ತದೆ. 2014ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಭಾರತ ಸಂಘಟಿತ ರಾಷ್ಟ್ರಗಳ ಸಂಘದಲ್ಲಿ ಯೋಗದ ಮಹತ್ವವನ್ನು ವಿಶ್ವ ಸಮುದಾಯಕ್ಕೆ ಪರಿಚಯಿಸಿ, ಯೋಗ ದಿನಾಚರಣೆಗೆ ಪ್ರಸ್ತಾವನೆ ನೀಡಿದರು. ಈ ಪ್ರಸ್ತಾವನೆಯನ್ನು ವಿಶ್ವದ ಅನೇಕ ರಾಷ್ಟ್ರಗಳು ಬೆಂಬಲಿಸಿ, 2015ರಿಂದ ಪ್ರತಿ ವರ್ಷ ಜೂನ್ 21ರಂದು ‘ಅಂತಾರಾಷ್ಟ್ರೀಯ ಯೋಗ ದಿನ‘ವನ್ನು ಆಚರಿಸಲು ನಿರ್ಧರಿಸಲಾಯಿತು. ಯೋಗದ ಉಪಯೋಗಗಳು ಅಪಾರ. ಇದು ಶ್ವಾಸ ನಿಯಂತ್ರಣ, ಧ್ಯಾನ, ಆಸನಗಳ ಮೂಲಕ ದೇಹದ ಸ್ಥಿರತೆ, ಮನಸ್ಸಿನ ಶಾಂತಿ ಮತ್ತು ಆರೋಗ್ಯವನ್ನು ಒದಗಿಸುತ್ತದೆ.
ಮನುಷ್ಯನ ದೈನಂದಿನ ಜೀವನದಲ್ಲಿ ಯೋಗದ ಅಭ್ಯಾಸವು ಒತ್ತಡ ನಿವಾರಣೆ, ರೋಗ ನಿರೋಧಕ ಶಕ್ತಿಯ ಹೆಚ್ಚಳ ಮತ್ತು ಮನೋಬಲದ ವೃದ್ಧಿಗೆ ಕಾರಣವಾಗುತ್ತದೆ. ಯೋಗ ದಿನಾಚರಣೆಯಂದು ಶಾಲೆಗಳಲ್ಲಿ, ಕಾಲೇಜುಗಳಲ್ಲಿ, ಕಚೇರಿಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮಗಳು ನಡೆಯುತ್ತವೆ. ಜನರಲ್ಲಿ ಯೋಗದ ಬಗ್ಗೆ ಅರಿವು ಮೂಡಿಸಲು ಉಪನ್ಯಾಸಗಳು, ಕಾರ್ಯಾಗಾರಗಳು ಮತ್ತು ಮಾಧ್ಯಮಗಳ ಮೂಲಕ ಜಾಗೃತಿ ಕಾರ್ಯಗಳು ನಡೆಸಲಾಗುತ್ತವೆ. ಯೋಗವು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಬೇಕು. ಕೇವಲ ಒಂದು ದಿನ ಮಾತ್ರವಲ್ಲ, ಪ್ರತಿದಿನವೂ ಕೆಲ ನಿಮಿಷಗಳನ್ನು ಯೋಗಕ್ಕೆ ಮೀಸಲಿಡುವುದರಿಂದ ನಮ್ಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯದಲ್ಲಿ ಮಹತ್ತರವಾದ ಬದಲಾವಣೆಗಳನ್ನು ಕಾಣಬಹುದು.
ಯೋಗದ ಶಕ್ತಿ ನಮ್ಮೊಳಗಿನ ಶಕ್ತಿ – ಇದನ್ನು ಅರಿತು, ಅನುಸರಿಸೋಣ.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp:
https://whatsapp.com/channel/0029VbDbOsBD8SE2H0L3d40j
