ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ಡಿ.17:
ಚಳ್ಳಕೆರೆ ತಾಲ್ಲೂಕಿನ ನಾಲ್ಕು ಹೋಬಳಿಗಳಲ್ಲಿ ಮಳೆಯ ಕೊರತೆಯಿಂದ ಬೆಳೆ ತೀವ್ರವಾಗಿ ಹಾನಿಯಾಗಿದ್ದು, ಇಳುವರಿ ಮತ್ತು ಬೆಳೆ ಪ್ರಮಾಣ ಒಂದಕ್ಕೊಂದು ತಾಳೆಯಾಗದ ಸ್ಥಿತಿಯಾಗಿದೆ. ಬೆಳೆ ವಿಮೆ ಪಾವತಿಸಿರುವ ಎಲ್ಲ ರೈತ ವಿಮೆದಾರರಿಗೂ ಅನ್ಯಾಯವಾಗುತ್ತಿರುವುದರಿಂದ ರೈತರು ಹೀನಾಯ ಪರಿಸ್ಥಿತಿಗೆ ತಲುಪಿದ್ದಾರೆ. ಈ ವಿಚಾರವನ್ನು ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಓರಿಯಂಟಲ್ ಇನ್ಸುರೆನ್ಸ್ ಕಂಪನಿಗೆ ಮಧ್ಯಂತರ ಬೆಳೆ ವಿಮೆ ಪರಿಹಾರ ನೀಡುವಂತೆ ಕಟ್ಟಪ್ಪಣೆ ಮಾಡಬೇಕು ಎಂದು ಚಳ್ಳಕೆರೆ ತಾಲ್ಲೂಕು ಕಸಬಾ ಹೋಬಳಿ ಶೇಂಗಾ ಹಾಗೂ ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ. ಸಿ. ಶಿವಲಿಂಗಪ್ಪ ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 3ರಂದು ಚಳ್ಳಕೆರೆಯಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ವಿಮಾ ಕಂಪನಿಯ ಅಧಿಕಾರಿಗಳೊಂದಿಗೆ ರೈತ ಮುಖಂಡರ ಸಭೆ ನಡೆಸಿ, ಐದು ವಾರ ಮಳೆ ಇಲ್ಲದ ಕಾರಣ ಮಧ್ಯಂತರ ಪರಿಹಾರ ನೀಡುವ ಸಾಧ್ಯತೆ ಇದೆ ಎಂದು ತೀರ್ಮಾನಿಸಲಾಗಿತ್ತು. ಆದರೆ ಆ ನಿರ್ಧಾರ ಕಾಗದದಲ್ಲೇ ಉಳಿದು, ಇದುವರೆಗೂ ರೈತರಿಗೆ ಯಾವುದೇ ಮಧ್ಯಂತರ ಪರಿಹಾರ ದೊರಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳು ಜಂಟಿ ಸಮೀಕ್ಷೆ ನಡೆಸುವಂತೆ ಸೂಚಿಸಿದರೂ, ಅದರ ಫಲಿತಾಂಶ ರೈತರಿಗೆ ಉಪಯೋಗವಾಗಿಲ್ಲ. ಬೆಳೆ ವಿಮೆ ಓರಿಯಂಟಲ್ ಇನ್ಸುರೆನ್ಸ್ ಕಂಪನಿಯವರು ಸಭೆಗಳಿಗೆ ಹಾಜರಾಗದೆ ನಿರ್ಲಕ್ಷ್ಯ ತೋರಿದ್ದಾರೆ. ಸಮೀಕ್ಷೆ ವರದಿಗೂ ಸಹಿ ಹಾಕಿಲ್ಲ. ಕೊನೆಯ ಕಟಾವು ಹಾಗೂ ಮಧ್ಯಂತರ ಪರಿಹಾರಕ್ಕೆ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು ರೈತರಿಗೆ ತೀವ್ರ ಅನ್ಯಾಯವಾಗಿದೆ. ಮಳೆ ಇಲ್ಲ, ಬೆಳೆಯೂ ಇಲ್ಲ ಎಂಬ ಸಂಕಷ್ಟದ ನಡುವೆ ರೈತರು ಅನಾಥ ಸ್ಥಿತಿಗೆ ತಲುಪಿದ್ದಾರೆ ಎಂದು ಹೇಳಿದರು.
ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ಕೃಷಿಗೆ ರೈತರು ಅಪಾರ ಶ್ರಮ ಹೂಡಿದರೂ ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ವಿದ್ಯುತ್ ಇಲಾಖೆಗಳ ಜವಾಬ್ದಾರಿಯಿಲ್ಲದ ಕಾರ್ಯವೈಖರಿಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು. ಇಂದಿನ ಬೆಳೆ ಸಮೀಕ್ಷೆ ಅವೈಜ್ಞಾನಿಕವಾಗಿದ್ದು, ಯಾರೋ ಬಂದು ನಡೆಸುವ ಸಮೀಕ್ಷೆಯಿಂದ ರೈತರಿಗೆ ಮೋಸವಾಗುತ್ತಿದೆ. ಕಳೆದ ಎರಡುವರೆ ವರ್ಷಗಳಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಆಹಾರ ಭದ್ರತೆ ಬಗ್ಗೆ ಅಧಿಕಾರಿಗಳಿಗೆ ಯಾವುದೇ ಸಂವೇದನೆ ಇಲ್ಲ ಎಂದು ಕಿಡಿಕಾರಿದರು. ಹೀಗಾಗಿ ಅವೈಜ್ಞಾನಿಕ ಸಮೀಕ್ಷೆ ರದ್ದಾಗಬೇಕು ಎಂದು ಆಗ್ರಹಿಸಿದರು.
ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾ ಸಂಚಾಲಕ ಜೆ. ಯಾದವರೆಡ್ಡಿ ಮಾತನಾಡಿ, ಕೃಷಿ ಇಲಾಖೆ ಜಂಟಿ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳು ಸೇರಿಕೊಂಡು ರೈತರಿಗೆ ನ್ಯಾಯಬದ್ದವಾಗಿ ಸಿಗಬೇಕಾದ ಮಧ್ಯಂತರ ಪರಿಹಾರವನ್ನು ವಿಳಂಬಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು. ವಿಮಾ ಕಂಪನಿಗಳು ರೈತರಿಂದ ವಿಮೆ ಹಣ ಪಡೆದು ವ್ಯವಸ್ಥಿತವಾಗಿ ಮೋಸ ಮಾಡುತ್ತಿದ್ದು, ಇದರಿಂದ ರೈತರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ. ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆ ಹಾಗೂ ವಿಮಾ ಕಂಪನಿಗಳು ಜಂಟಿಯಾಗಿ ವೈಜ್ಞಾನಿಕ ಸಮೀಕ್ಷೆ ನಡೆಸಿದಾಗ ಮಾತ್ರ ರೈತರಿಗೆ ನ್ಯಾಯ ಸಿಗಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಚಳ್ಳಕೆರೆ ತಾಲ್ಲೂಕು ಕಸಬಾ ಹೋಬಳಿ ಶೇಂಗಾ ಮತ್ತು ತೊಗರಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಎಂ. ಕರಿಯಪ್ಪ, ಕಾರ್ಯದರ್ಶಿ ಎಸ್. ಪ್ರಕಾಶ್, ಸಹ ಕಾರ್ಯದರ್ಶಿ ಡಾ. ಆರ್.ಎ. ದಯಾನಂದ್, ಯರ್ರಿಸ್ವಾಮಿ, ಆರ್ಥಿಕ ಚಿಂತಕ ಜಿ.ಎನ್. ಮಲ್ಲಿಕಾರ್ಜುನಪ್ಪ ಸೇರಿದಂತೆ ಹಲವರು ಹಾಜರಿದ್ದರು.