ಸಂಘಟನೆ ಇಲ್ಲದಿದ್ದರೆ ದೇಶಕ್ಕೆ ಅಪಾಯ: ಹಿಂದೂ ಸಂಗಮದಲ್ಲಿ ಶ್ರೀ ಬಸವಮೂರ್ತಿ ಶ್ರೀಗಳ ಎಚ್ಚರಿಕೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 7

ಮತಾಂತರದ ವಿಷಯವಾಗಿ ಹಿಂದುಗಳು ಒಗ್ಗಟ್ಟಾಗಬೇಕಿದೆ, ಹಿಂದೂಗಳು ಸಂಘಟಿತರಾಗದಿದ್ದರೆ ಮುಂದೆ ದೊಡ್ಡ ಅಪಾಯವನ್ನು ಎದುರಿಸಬೇಕಾಗುತ್ತದೆ. ಸಂಘಟನೆ ಇಲ್ಲದಿದ್ದರೆ ದೇಶವನ್ನು ಉಳಿಸಲು ಸಾಧ್ಯವಿಲ್ಲ. ಹೀಗಾಗಿ ಹಿಂದುಗಳನ್ನು ಸಂಘಟಿಸುವ ಕೆಲಸ ಆಗಬೇಕಿದೆ ಎಂದು ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಶ್ರೀಗಳು ತಿಳಿಸಿದರು.

ಲಕ್ಷ್ಮೀಸಾಗರ ಗ್ರಾಮಪಂಚಾಯಿತಿ ವ್ಯಾಪ್ತಿಯ ಐನಳ್ಳಿ ಲಕ್ಷ್ಣಿಸಾಗರದಲ್ಲಿ ಶುಕ್ರವಾರ ನಡೆದ ಹಿಂದೂ ಸಂಗಮ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಮಾನಸಿಕ ಸ್ಥಿರತೆ ಕಾಪಾಡಿಕೊಳ್ಳುವಲ್ಲಿ ಭಾರತೀಯರು ವಿಫಲರಾಗಿದ್ದೇವೆ. ಇದರ ಪರಿಣಾಮದಿಂದಾಗಿ ಒಗ್ಗಟ್ಟು ಸಾಧಿಸಲು ಸಾಧ್ಯವಾಗುತ್ತಿಲ್ಲ. ಇಂದು ಮಕ್ಕಳಿಗೆ ಭಾರತೀಯತೆ, ದೇಶಭಕ್ತಿ ಕಲಿಸುತ್ತೇವೆಂದರೆ, ಭಗವದ್ಗೀತೆ ಶ್ಲೋಕ, ರಾಮಾಯಣ, ಮಹಾಭಾರತವನ್ನು ಹೇಳಿ ಕೊಡುತ್ತೇವೆಂದರೆ ವಿರೋಧ ಮಾಡುವವರು ನಮ್ಮ ನಡುವೆಯೇ ಇದ್ದಾರೆ. ಇಂತಹ ಮಾನಸಿಕತೆಗಳಿಂದಾಗಿ ಹಿಂದುಗಳು ವಿಭಜನೆಯಾಗುವಂತಾಗಿದೆ ಎಂದು ವಿಷಾದಿಸಿದರು.

ಇಂದು ನಾವು ಮಾಡುತ್ತಿರುವ ಹಿಂದೂ ಸಂಗಮವನ್ನು ಅಂದೇ ಸ್ವಾಮಿ ವಿವೇಕಾನಂದರು ಮಾಡಿದ್ದರು. ಶಿವಾಜಿ ಮಹಾರಾಜ್ ಮೊಘಲರ ಧ್ವಜ ಕೆಳಗಿಳಿಸಿ ಭಗವಾಧ್ವಜ ಆ ಸ್ಥಳದಲ್ಲಿ ಹಾರಿಸುವ ಚಿಂತನೆ ಮಾಡಿದ್ದರು ಎಂಬುದನ್ನು ಗಮನಿಸಬೇಕಿದೆ ದೇಶ, ಧರ್ಮದ ಪ್ರಶ್ನೆ ಬಂದಾಗ ಯಾವುದೇ ಕಾರ್ಯಗಳಿದ್ದರೂ ಅದನ್ನು ಬಿಟ್ಟು ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ. ಇದನ್ನು ಅಂದೇ ಶಿವಾಜಿ ನಿರೂಪಿಸಿದ್ದಾರೆ. ನಿನ್ನ ಕೈಯಲ್ಲಾದ ಬೆಳಕು ಹಚ್ಚು. ಅದರ ಮೂಲಕ ಬೇರೆಯವರ ಬದುಕು ಬೆಳಗುವಂತಾಗಲಿ ಎಂದು ಸನಾತನ ಧರ್ಮ ಹೇಳಿದೆ. ಅದನ್ನು ಪಾಲಿಸುವ ಕೆಲಸ ಎಲ್ಲರದ್ದಾಗಬೇಕು. ಸೇವೆ, ಸಹಕಾರ, ಅನುಸರಣೆ ಆಗಬೇಕಿದೆ. ನಾವು ರಕ್ಷಿಸಿದ ಧರ್ಮವೇ ನನ್ನನ್ನು ರಕ್ಷಣೆ ಮಾಡುತ್ತದೆ. ನಾವು ಬದುಕಿದ್ದಾಗ ಈ ದೇಶಕ್ಕೆ ಏನು ಕೊಡುಗೆ ನೀಡುತ್ತೇವೆ ಎನ್ನುವುದು ಬಹಳ ಮುಖ್ಯವಾಗುತ್ತದೆ. ಆರ್‍ಎಸ್‍ಎಸ್ ವ್ಯಕ್ತಿ ನಿರ್ಮಾಣದ ಮೂಲಕ ದೇಶ ನಿರ್ಮಾಣ ಮಾಡುತ್ತಿದೆ. ಹಿಂದೂಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ಸಾಮಾಜಿಕ ಸಾಮರಸ್ಯ ಸಂಘದಲ್ಲಿ ಕೆಲಸ ಮಾಡುತ್ತಿದೆ. ಪರಿಸರ ಸಂರಕ್ಷಣೆಗೆ ಸಂಘ ಕೆಲಸ ಮಾಡುತ್ತಾ ಆಲದ ಮರವಾಗಿ ಸಂಘ ಬೆಳೆದಿದೆ ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಮಚಂದ್ರ ಹೊರನೇಬೈಲು ಮಾತನಾಡಿ ಹಿಂದೂಗಳು ಬೇರೆ ಯಾರಿಗೂ ತೊಂದರೆ ಕೊಟ್ಟಿಲ್ಲ. ಆದರೂ ವಿದೇಶಿಯರು ನಿರಂತರವಾಗಿ ಅಕ್ರಮಣ ಮಾಡುತ್ತಲೇ ಬಂದಿದ್ದಾರೆ. ಅದನ್ನು ತಿಳಿದುಕೊಂಡು ಎಲ್ಲರೂ ಒಗ್ಗಟ್ಟಾಗಿ ಹೋಗಬೇಕೆಂದು ಹೇಳಿದರು. ಹಿಂದೂ ಎಂದರೆ ಅದೊಂದು ರಿಲೀಜಿಯನ್ ಎಂದು ಭಾವಿಸಿಲ್ಲ. ಅದೊಂದು ಜೀವನ ಪದ್ಧತಿ. ಈ ಪದ್ಧತಿ ಯಾರನ್ನೂ ದೂಷಿಸುವುದಿಲ್ಲ. ಘರ್ಷಣೆ ಇಲ್ಲ ಎಂಬುದನ್ನು ನಿರೂಪಿಸಬೇಕಿದೆ. ನಾವೆಲ್ಲರೂ ಒಟ್ಟಿಗೆ ಸೇರಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕಿದೆ ಎಂದರು. ಜಗತ್ತಿನ ಯಾವುದೇ ರಾಷ್ಟ್ರದ ಬೆದರಿಕೆಗೆ ಭಾರತ ಹೆದರುವುದಿಲ್ಲ. ಜಗ್ಗುವುದೂ ಇಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಬಲಿಷ್ಠವಾಗಿ ಮುನ್ನಡೆಯುತ್ತಿದೆ. ಇದಕ್ಕೆ ಎಲ್ಲರೂ ಇನ್ನಷ್ಟು ಕೈ ಜೋಡಿಸಬೇಕಿದೆ ಎಂದ ಅವರು. ಹಿಂದೂಗಳ ಒಗ್ಗೂಡುವಿಕೆ ಸ್ವಾಮಿ ವಿವೇಕಾನಂದರ ವಿಚಾರಗಳ ಬಗ್ಗೆ ತಿಳಿಸಿದರು.

ಹಿಂದೂ ಸಂಗಮ ಆಯೋಜನಾ ಸಮಿತಿ ಗ್ರಾಮಾಂತರ ಅಧ್ಯಕ್ಷರಾದ ಜಿಎಸ್ ಅನಿತ್‍ಕುಮಾರ್ ಪಂಚ ಪರಿವರ್ತನೆಯ ಕುಟುಂಬ ಪ್ರಬೋಧಿನಿ ,ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ನಾಗರಿಕ ಕರ್ತವ್ಯ ,ಸ್ವದೇಶಿ ವಸ್ತುಗಳ ಬಳಕೆ ವಿಷಯಗಳ ಬಗ್ಗೆ ಮಾತನಾಡಿದರು.

ಶೋಭಾಯಾತ್ರೆಯು ಲಕ್ಷ್ಮಿ ಸಾಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಆಂಜನೇಯ ಸ್ವಾಮಿ ದೇವಾಲಯದ ಹತ್ತಿರ ವೇದಿಕೆ ಕಾರ್ಯಕ್ರಮ ನಡೆಯಿತು

Leave a Reply

Your email address will not be published. Required fields are marked *