ಫೋಟೋ ಮತ್ತು ವರದಿ: ಕುಮಾರ ಜಿ.ಎನ್ (9945712918)
ಬಳ್ಳಾರಿ, ಮಾರ್ಚ್ 05: “ಬಾಲ್ಯ ವಿವಾಹ ತಡೆಗೆ ಎಲ್ಲರೂ ಕೈಜೋಡಿಸಿ, ಮಕ್ಕಳ ರಕ್ಷಣೆಗೆ ನಮ್ಮ ಸರ್ಕಾರ ಸದಾ ಸಿದ್ಧವಿದೆ” ಎಂದು ಬಳ್ಳಾರಿ ಸಂಸದರಾದ ಶ್ರೀ ಈ. ತುಕಾರಾಂ ಅವರು ತಿಳಿಸಿದರು.

ಬಾಲ್ಯವಿವಾಹ ಮುಕ್ತ ಭಾರತಕ್ಕಾಗಿ ಹಮ್ಮಿಕೊಂಡಿರುವ 100 ದಿನಗಳ ಅಭಿಯಾನದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ 1098/112 ಮತ್ತು ರೀಚ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಗುರುವಾರ ಜಿಲ್ಲಾಧಿಕಾರಿಗಳ ಕಛೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಬಾಲ್ಯವಿವಾಹ ಮುಕ್ತಿ ರಥ ಜಾಥಾಕ್ಕೆ ಅವರು ಚಾಲನೆ ನೀಡಿದರು.
ಬಾಲ್ಯ ವಿವಾಹ ನಿಷೇಧದ ಜಾಗೃತಿ
ಕಾರ್ಯಕ್ರಮದಲ್ಲಿ “ಬಾಲ್ಯ ವಿವಾಹ ನಿಷೇಧಿಸಿದೆ, ಎಚ್ಚರ” ಎಂಬ ಬಿತ್ತಿಪತ್ರ ಬಿಡುಗಡೆ ಮಾಡಿದ ಸಂಸದರು, “ಬಾಲ್ಯ ವಿವಾಹವು ಶಿಕ್ಷಾರ್ಹ ಅಪರಾಧವಾಗಿದ್ದು, ಇದರಿಂದ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಬಾಲ್ಯವಿವಾಹ ತಡೆಗಟ್ಟಲು ಎಲ್ಲರ ಪಾತ್ರ ಬಹು ಮುಖ್ಯವಾಗಿದೆ. ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿದ್ದು, ನಮ್ಮ ಜಿಲ್ಲೆಯ ಎಲ್ಲಾ ದಿಶಾ ಹಾಗೂ ಕೆಡಿಪಿ ಸಭೆಗಳಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಜಿಲ್ಲೆಯ ಎಲ್ಲಾ ಇಲಾಖೆಯ ಸಿಬ್ಬಂದಿಗಳು ಇದರ ವಿರುದ್ಧ ತಡೆಯುವ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದರು.
ಪ್ರತಿಜ್ಞಾ ವಿಧಿ ಬೋಧನೆ
ಜಾಥಾದ ಸಂದರ್ಭದಲ್ಲಿ ಈ ಕೆಳಗಿನಂತೆ ಪ್ರತಿಜ್ಞೆಯನ್ನು ಬೋಧಿಸಲಾಯಿತು:
“ಬಾಲ್ಯವಿವಾಹದ ವಿರುದ್ಧ ಎಲ್ಲಾ ಸಾಧ್ಯವಾದ ಪ್ರಯತ್ನಗಳನ್ನು ಮಾಡುತ್ತೇನೆ. ನನ್ನ ಕುಟುಂಬ, ಬಡಾವಣೆ ಅಥವಾ ಸಮುದಾಯದಲ್ಲಿ ಯಾವುದೇ ಬಾಲ್ಯವಿವಾಹ ನಡೆಯದಂತೆ ನೋಡಿಕೊಳ್ಳುತ್ತೇನೆ. ಬಾಲ್ಯವಿವಾಹದ ಯಾವುದೇ ಪ್ರಯತ್ನದ ಬಗ್ಗೆ ಮಕ್ಕಳ ಸಹಾಯವಾಣಿ -1098, 112, ಪಂಚಾಯತ್ ಮತ್ತು ಸರ್ಕಾರಿ ಅಧಿಕಾರಿಗಳಿಗೆ ವರದಿ ಮಾಡುತ್ತೇನೆ. ಎಲ್ಲಾ ಮಕ್ಕಳ ಶಿಕ್ಷಣ ಮತ್ತು ಸುರಕ್ಷತೆಗಾಗಿ ನನ್ನ ಧ್ವನಿಯನ್ನು ಎತ್ತುತ್ತೇನೆ ಮತ್ತು ಬಾಲ್ಯವಿವಾಹ ಮುಕ್ತ ಭಾರತ ನಿರ್ಮಾಣಕ್ಕೆ ನಾನು ಬೆಂಬಲಿಸುತ್ತೇನೆ.”
ಕಾನೂನು ಮತ್ತು ಶಿಕ್ಷೆಯ ಅರಿವು
ಬಾಲ್ಯವಿವಾಹ ಮುಕ್ತಿ ರಥಕ್ಕೆ ಹಸಿರು ನಿಶಾನೆ ತೋರಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ|| ಸುಮನ್ ಡಿ ಪೆನ್ನೇಕರ್ ಮಾತನಾಡಿ, “18 ವರ್ಷದೊಳಗಿನ ಹೆಣ್ಣು ಮಕ್ಕಳಲ್ಲಿ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಸಮಯವಿದು. ಮಕ್ಕಳ ಬಾಲ್ಯವು ಅತ್ಯಮೂಲ್ಯವಾಗಿದ್ದು, ಅವರಿಗೆ ಸೂಕ್ತ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಮತ್ತು ಕರ್ನಾಟಕ ತಿದ್ದುಪಡಿ-2016ರ ಕಾಯ್ದೆಗಳು ಜಾರಿಯಲ್ಲಿವೆ. ಬಾಲ್ಯ ವಿವಾಹ ನೆರವೇರಿಸಿದವರಿಗೆ, ಪ್ರೋತ್ಸಾಹಿಸಿದವರಿಗೆ ಮತ್ತು ಪಾಲ್ಗೊಂಡವರಿಗೂ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ” ಎಂದು ಎಚ್ಚರಿಸಿದರು.
2030ಕ್ಕೆ ಬಾಲ್ಯ ವಿವಾಹ ಮುಕ್ತ ಸಮಾಜದ ಗುರಿ
ರೀಚ್ ಸಂಸ್ಥೆಯ ಕಾರ್ಯದರ್ಶಿ ಜಿ.ಎನ್.ಸಿಂಹ ಮಾತನಾಡಿ, “ನವಂಬರ್ 27, 2024 ರಂದು ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಸಚಿವಾಲಯವು ‘ಬಾಲ್ಯ ವಿವಾಹ ಮುಕ್ತ ಭಾರತ’ ಅಭಿಯಾನ ಪ್ರಾರಂಭಿಸಿದೆ. 2030ಕ್ಕೆ ಬಾಲ್ಯ ವಿವಾಹ ಮುಕ್ತ ಸಮಾಜ ನಿರ್ಮಾಣ ಮಾಡುವುದು ನಮ್ಮ ಗುರಿ. ಈ ರಥವು ಬಳ್ಳಾರಿಯ ಆಯ್ದ ತಾಲ್ಲೂಕುಗಳ ಸುಮಾರು 30 ರಿಂದ 50 ಹಳ್ಳಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಿದೆ” ಎಂದರು.
ಉಪಸ್ಥಿತ ಗಣ್ಯರು: ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ ಕೆ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಜೂಬೈರ್ ಎನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೈರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯಕ ಎಂ, ಮಕ್ಕಳ ರಕ್ಷಣಾಧಿಕಾರಿ ಚೆನ್ನಬಸಪ್ಪ, ರೀಚ್ ಸಂಸ್ಥೆಯ ಸಿಬ್ಬಂದಿಗಳು ಹಾಗೂ ವಾಡ್ಲ ಮತ್ತು ಸರಕಾರಿ ಪ್ರೌಢ ಶಾಲೆಯ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.