ಹಿರೇಗುಂಟನೂರು ಗ್ರಾಮದಲ್ಲಿ ವಿಶ್ವ ಮಲೇರಿಯಾ ದಿನಾಚರಣೆ, ಜಾಗೃತಿ ಜಾಥ ಕಾರ್ಯಕ್ರಮ.

ಹಿರೇಗುಂಟನೂರು/ಚಿತ್ರದುರ್ಗ: ಏಪ್ರಿಲ್:27.
ನಮ್ಮ ಭಾರತ ದೇಶವನ್ನು ಮಲೇರಿಯಾ ಮುಕ್ತ ದೇಶವನ್ನಾಗಿ ನಿರ್ಮಿಸಲು ಪ್ರತಿ ಗ್ರಾಮದ ಪ್ರತಿಯೊಬ್ಬ ನಾಗರೀಕರು ಈ ಮಾರಣಾಂತಿಕ ಮಲೇರಿಯಾ ರೋಗದ ಬಗ್ಗೆ ಜಾಗೃತಿ ವಹಿಸಿ ಮನೆಯ ಸುತ್ತಮುತ್ತ ಸೊಳ್ಳೆಗಳು ವಾಸಿಸದಂತೆ ಎಚ್ಚರ ವಹಿಸಬೇಕು ರೋಗ ಲಕ್ಷಣಗಳು ಕಂಡುಬಂದರೆ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದು ಹಿರೇಗುಂಟನೂರು ಸರ್ಕಾರಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಮೇಘನಾ ಕರೆ ನೀಡಿದರು.


ಜಿಲ್ಲಾ ಪಂಚಾಯತ್ ಚಿತ್ರದುರ್ಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ ಸಹಯೋಗದೊಂದಿಗೆ ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಸೋಮವಾರ ವಿಶ್ವ ಮಲೇರಿಯಾ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಾ ಮಲೇರಿಯಾವು ಜೀವಕ್ಕೆ ಅಪಾಯಕಾರಿ ಕಾಯಿಲೆಯಾಗಿದ್ದು, ಮಲೇರಿಯಾವು ಸೋಂಕಿತ ಹೆಣ್ಣು ಅನಾಫಿಲಿಸ್ ಸೊಳ್ಳೆ ಕಡಿತದಿಂದ ಬರುವ ತೀವ್ರ ಜ್ವರವಾಗಿದೆ. ಇದರ ಮುಖ್ಯ ಲಕ್ಷಣಗಳೆಂದರೆ ನಡುಕದೊಂದಿಗೆ ಅಧಿಕ ಜ್ವರ, ತಲೆನೋವು, ವಿಪರೀತ ಬೆವರುವುದು, ಸ್ನಾಯು ನೋವು, ವಾಕರಿಕೆ, ವಾಂತಿ ಮತ್ತು ಆಯಾಸ.


ಸೊಳ್ಳೆ ಕಚ್ಚಿದ 7-15 ದಿನಗಳ ನಂತರ ಈ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ ಯಾರಿಗಾದರೂ ಇಂತಹ ಜ್ವರದ ಲಕ್ಷಣಗಳು ಕಂಡುಬಂದರೆ ತಕ್ಷಣವೇ ನಿಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿನೀಡಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಬೋಧಿಸಿದ ಆರೋಗ್ಯ ನಿರೀಕ್ಷಣಾಧಿಕಾರಿ ಏಕಾಂತ್ ಕುಮಾರ್ ಮಾತನಾಡಿ ಈ ಬಾರಿಯ ಘೋಷವಾಕ್ಯವಾದ”ಮಲೇರಿಯಾ ಅಂತ್ಯದತ್ತ ಪಯಣ: ಈಗ ನಮಗೆ ಸಾಧ್ಯವಿದೆ. ಈಗ ನಾವು ಮಾಡಲೇಬೇಕು.” ಅರ್ಥಾತ್ ಇದು ನಮ್ಮ ಜವಾಬ್ದಾರಿಯನ್ನು ನೆನಪಿಸುತ್ತದೆ. ಸಂಪನ್ಮೂಲಗಳು ಮತ್ತು ಜ್ಞಾನವಿದ್ದರೂ ನಾವು ಕಾರ್ಯಪ್ರವೃತ್ತರಾಗದಿದ್ದರೆ, ಈ ರೋಗ ಮತ್ತೆ ಮರುಕಳಿಸಬಹುದು. ಇದು ತುರ್ತು ನಿರ್ಧಾರದ ಸಮಯ ನಾವೆಲ್ಲರೂ ರೋಗದ ಬಗ್ಗೆ ಜಾಗೃತರಾಗಿ ಇದನ್ನು ನಿಯಂತ್ರಿಸಲೇಬೇಕು ಮತ್ತು ಆ ಕೆಲಸವನ್ನು ನಾವು ಮಾಡೇ ತೀರುತ್ತೇವೆ ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ಹಿರೇಗುಂಟನೂರು ಗ್ರಾಮದಲ್ಲಿ ನಡೆಸಲಾದ ಮಲೇರಿಯಾ ನಿಯಂತ್ರಣ ಜನಜಾಗೃತಿ ಜಾಥ ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯಧಿಕಾರಿಗಳಾದ ,ಪುನೀತ್, ಪ್ರಿಯಾ, ಶಿವಕುಮಾರ್, ಆರೋಗ್ಯ ಸುರಕ್ಷಣಾಧಿಕಾರಿಗಳಾದ ವೀರಮ್ಮ, ಗೀತಾ, ಸಿಂಧು, ಜ್ಞಾನೇಶ್ವರಿ, ಪುಷ್ಪವತಿ, ಗಂಗಮ್ಮ, ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಶಾಂತಮ್ಮ , ಯೋಗ ತರಬೇತುದಾರ ರವಿ ಕೆ.ಅಂಬೇಕರ್ ಹಾಗೂ ಹಲವಾರು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.