ಆಸ್ಟಿಯೊಪೊರೋಸಿಸ್ (ಮೂಳೆ ಸವೆತ) ಎಂಬುದು ಇತ್ತೀಚಿನ ದಿನಗಳಲ್ಲಿ ಲಕ್ಷಾಂತರ ಭಾರತೀಯ ಮಹಿಳೆಯರನ್ನು ಕಾಡುತ್ತಿರುವ ಗಂಭೀರ ಸಮಸ್ಯೆಯಾಗಿದೆ. ಇದೊಂದು ‘ನಿಶ್ಯಬ್ದ ಕಾಯಿಲೆ’ಯಾಗಿದ್ದು, ಆರಂಭಿಕ ಹಂತದಲ್ಲಿ ಯಾವುದೇ ರೀತಿಯ ಲಕ್ಷಣಗಳನ್ನು ತೋರಿಸುವುದಿಲ್ಲ. ಮೂಳೆಗಳು ಒಳಗಿನಿಂದಲೇ ಟೊಳ್ಳಾಗುತ್ತಿದ್ದರೂ, ದೈನಂದಿನ ಚಟುವಟಿಕೆಗಳಲ್ಲಿ ಯಾವುದೇ ಬದಲಾವಣೆ ಕಾಣಿಸುವುದಿಲ್ಲ. ಬಹುಪಾಲು ಮಹಿಳೆಯರಿಗೆ ಸಣ್ಣದಾಗಿ ಎಡವಿ ಬಿದ್ದಾಗ ಮೂಳೆ ಮುರಿತವಾದಾಗಲೇ ತಮಗೆ ಈ ಸಮಸ್ಯೆ ಇರುವುದು ಅರಿವಿಗೆ ಬರುತ್ತದೆ. ಆ ಹೊತ್ತಿಗಾಗಲೇ ಮೂಳೆಯ ಸಾಂದ್ರತೆ ಗಣನೀಯವಾಗಿ ಕಡಿಮೆಯಾಗಿರುತ್ತದೆ.
ಮೂಳೆ ಸವೆತಕ್ಕೆ ಪ್ರಮುಖ ಕಾರಣಗಳು ಮಹಿಳೆಯರಲ್ಲಿ ಮೂಳೆ ಸಾಂದ್ರತೆ ಕಡಿಮೆಯಾಗಲು ಹಾರ್ಮೋನುಗಳ ಬದಲಾವಣೆ, ಪೋಷಕಾಂಶಗಳ ಕೊರತೆ ಹಾಗೂ ಆಧುನಿಕ ಜೀವನಶೈಲಿ ಪ್ರಮುಖ ಕಾರಣಗಳಾಗಿವೆ.
- ಋತುಬಂಧದ ಪ್ರಭಾವ: ಮಹಿಳೆಯರು ಋತುಬಂಧದ (Menopause) ಹಂತವನ್ನು ತಲುಪಿದಾಗ ದೇಹದಲ್ಲಿ ಈಸ್ಟ್ರೊಜೆನ್ ಹಾರ್ಮೋನ್ ಉತ್ಪಾದನೆ ಕಡಿಮೆಯಾಗುತ್ತದೆ. ಇದು ಮೂಳೆಗಳ ದೌರ್ಬಲ್ಯಕ್ಕೆ ನೇರ ಕಾರಣವಾಗುತ್ತದೆ.
- ವಯಸ್ಸಿನ ಅಂಶ: ೩೫-೪೦ನೇ ವಯಸ್ಸಿನಿಂದಲೇ ಮೂಳೆ ಸವೆತ ಪ್ರಕ್ರಿಯೆ ಶುರುವಾದರೂ, ೪೫-೫೦ ವರ್ಷಗಳ ಆಸುಪಾಸಿನಲ್ಲಿ (ಋತುಬಂಧದ ಸಮಯದಲ್ಲಿ) ಸಮಸ್ಯೆ ಉಲ್ಬಣಗೊಳ್ಳುತ್ತದೆ.
- ಜೀವನಶೈಲಿ ಹಾಗೂ ಇತರೆ ಕಾರಣಗಳು: ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಕೊರತೆ, ದೈಹಿಕ ವ್ಯಾಯಾಮವಿಲ್ಲದ ಜೀವನಶೈಲಿ, ಅತಿಯಾದ ಕೆಫೀನ್, ಮದ್ಯಪಾನ, ಧೂಮಪಾನ, ಥೈರಾಯ್ಡ್ ಸಮಸ್ಯೆಗಳು ಹಾಗೂ ದೀರ್ಘಕಾಲದ ಸ್ಟೀರಾಯ್ಡ್ ಬಳಕೆ ಈ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತವೆ.
ರಕ್ಷಣೆ ಮತ್ತು ತಡೆಗಟ್ಟುವಿಕೆ ಹೇಗೆ? ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಜೀವನಶೈಲಿ ಅತ್ಯಗತ್ಯ.
- ಪೌಷ್ಟಿಕ ಆಹಾರ: ಕ್ಯಾಲ್ಸಿಯಂ ಸಮೃದ್ಧವಾಗಿರುವ ಹಾಲು ಮತ್ತು ಹಾಲಿನ ಉತ್ಪನ್ನಗಳು, ಹಸಿರು ಸೊಪ್ಪುಗಳು, ಮತ್ತು ಬೀಜಗಳನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬೇಕು.
- ವಿಟಮಿನ್ ಡಿ: ಮೂಳೆಗಳು ಕ್ಯಾಲ್ಸಿಯಂ ಅನ್ನು ಸರಿಯಾಗಿ ಹೀರಿಕೊಳ್ಳಲು ವಿಟಮಿನ್ ಡಿ ಬಹಳ ಮುಖ್ಯ. ಸೂರ್ಯನ ಎಳೆಬಿಸಿಲಿಗೆ ಮೈಯೊಡ್ಡುವುದು ಅಥವಾ ವೈದ್ಯರ ಸಲಹೆಯಂತೆ ಪೂರಕ ಔಷಧಿಗಳನ್ನು ತೆಗೆದುಕೊಳ್ಳುವುದು ಉತ್ತಮ.
- ವ್ಯಾಯಾಮ: ವಾಕಿಂಗ್, ಜಾಗಿಂಗ್, ನೃತ್ಯ ಮತ್ತು ಬಲವರ್ಧಕ ವ್ಯಾಯಾಮಗಳು (Strength training) ಮೂಳೆಗಳನ್ನು ಗಟ್ಟಿಗೊಳಿಸಿ, ಮೂಳೆ ಸಾಂದ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
ಸೊಂಟದ ಮೂಳೆ ಮುರಿತದ ಅಪಾಯ ಆಸ್ಟಿಯೊಪೊರೋಸಿಸ್‌ನಿಂದಾಗಿ ಬೆನ್ನುಮೂಳೆ ಮತ್ತು ಮಣಿಕಟ್ಟಿನ ಮುರಿತಗಳು ಸಾಮಾನ್ಯವಾಗಿ ಸಂಭವಿಸುತ್ತವೆ. ಆದರೆ, ವಯಸ್ಸಾದ ಮಹಿಳೆಯರಲ್ಲಿ ಸೊಂಟದ ಮೂಳೆ ಮುರಿತವು (Hip fracture) ಅತ್ಯಂತ ಅಪಾಯಕಾರಿಯಾಗಿದೆ. ಇದು ಅವರನ್ನು ದೀರ್ಘಕಾಲದವರೆಗೆ ಹಾಸಿಗೆ ಹಿಡಿಯುವಂತೆ ಮಾಡಬಹುದು ಮತ್ತು ಅನೇಕ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆಯ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ.
ಕಾಲಕಾಲಕ್ಕೆ ತಪಾಸಣೆ (Screening) ಅತ್ಯಗತ್ಯ ದುರ್ಬಲ ಮೂಳೆಗಳ ರೋಗನಿರ್ಣಯಕ್ಕೆ ‘DEXA ಸ್ಕ್ಯಾನ್’ ಅತ್ಯುತ್ತಮ ವಿಧಾನವಾಗಿದೆ. ಇದು ನೋವುರಹಿತ ಮತ್ತು ತ್ವರಿತ ಪ್ರಕ್ರಿಯೆಯಾಗಿದ್ದು, ಮೂಳೆಯ ಸಾಂದ್ರತೆಯನ್ನು ನಿಖರವಾಗಿ ಅಳೆಯಲು ವೈದ್ಯರಿಗೆ ಸಹಾಯ ಮಾಡುತ್ತದೆ.
30 ವರ್ಷ ದಾಟಿದ ಮಹಿಳೆಯರು, ವಿಶೇಷವಾಗಿ ಕುಟುಂಬದಲ್ಲಿ ಆಸ್ಟಿಯೊಪೊರೋಸಿಸ್ ಇತಿಹಾಸವಿರುವವರು, ಕಡಿಮೆ ತೂಕ ಹೊಂದಿರುವವರು ನಿಯಮಿತವಾಗಿ ಮೂಳೆ ತಪಾಸಣೆ ಮಾಡಿಸಿಕೊಳ್ಳುವುದು ಒಳಿತು. ಋತುಬಂಧದ ಸಮಯದಲ್ಲಿ ಮಹಿಳೆಯರು ಕಡ್ಡಾಯವಾಗಿ ಈ ಸ್ಕ್ರೀನಿಂಗ್ ಮಾಡಿಸಿಕೊಳ್ಳುವುದರಿಂದ ಭವಿಷ್ಯದ ಮೂಳೆ ಮುರಿತದ ಅನಾಹುತಗಳನ್ನು ತಡೆಗಟ್ಟಬಹುದು.

