ಪ್ರತಿದಿನ ಮೊಟ್ಟೆ ತಿಂದರೆ ಕೊಲೆಸ್ಟ್ರಾಲ್ ಹೆಚ್ಚಾಗುತ್ತಾ? ಆರೋಗ್ಯ ತಜ್ಞರು ಹೇಳುವುದೇನು?

ಮೊಟ್ಟೆ ನಮ್ಮ ದೈನಂದಿನ ಆಹಾರದ ಪ್ರಮುಖ ಹಾಗೂ ಜನಪ್ರಿಯ ಭಾಗ. ಕೈಗೆಟಕುವ ದರದಲ್ಲಿ ಲಭ್ಯವಿರುವ ಈ ಆಹಾರ, ಪೋಷಕಾಂಶಗಳ ಬಹುದೊಡ್ಡ ಖಜಾನೆಯಾಗಿದೆ. ಮೊಟ್ಟೆ ತಿಂದರೆ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಆದರೆ, ದಿನಕ್ಕೊಂದು ಮೊಟ್ಟೆ ಸೇವಿಸುವುದರಿಂದ ದೇಹಕ್ಕೆ ಆಗುವ ಲಾಭಗಳೇನು ಮತ್ತು ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಪೋಷಕಾಂಶಗಳ ಆಗರ ಒಂದು ಸಾಮಾನ್ಯ ಗಾತ್ರದ ಮೊಟ್ಟೆಯಲ್ಲಿ ಸರಾಸರಿ ೬ ರಿಂದ ೭ ಗ್ರಾಂ ಪ್ರೋಟೀನ್ ಮತ್ತು ೫ ಗ್ರಾಂ ನಷ್ಟು ಉತ್ತಮ ಕೊಬ್ಬಿನಾಂಶವಿರುತ್ತದೆ. ಇದರ ಜೊತೆಗೆ ವಿಟಮಿನ್ ಎ, ಬಿ೧೨, ಬಿ೬, ಡಿ, ಇ, ಫೋಲೇಟ್, ಸೆಲೆನಿಯಮ್ ಹಾಗೂ ರಂಜಕದಂತಹ ಅತ್ಯಗತ್ಯ ಖನಿಜಾಂಶಗಳು ಇದರಲ್ಲಿ ಅಡಗಿವೆ.

ಹೃದಯದ ಆರೋಗ್ಯ ಮತ್ತು ಕೊಲೆಸ್ಟ್ರಾಲ್ ಮೊಟ್ಟೆ ತಿಂದರೆ ಹೃದಯಕ್ಕೆ ತೊಂದರೆ ಎಂಬುದು ಕೇವಲ ಮಿಥ್ಯೆ ಎನ್ನುತ್ತಾರೆ ಆರೋಗ್ಯ ತಜ್ಞರು. ವಾಸ್ತವದಲ್ಲಿ, ಪ್ರತಿದಿನ ಮೊಟ್ಟೆ ಸೇವಿಸುವುದರಿಂದ ನಮ್ಮ ದೇಹದಲ್ಲಿರುವ ‘ಉತ್ತಮ ಕೊಲೆಸ್ಟ್ರಾಲ್’ (HDL) ಮಟ್ಟ ಹೆಚ್ಚಾಗುತ್ತದೆ. ಇದು ಹೃದಯದ ರಕ್ಷಾಕವಚದಂತೆ ಕೆಲಸ ಮಾಡುತ್ತದೆ. ಮೇಯೊ ಕ್ಲಿನಿಕ್ (Mayo Clinic) ವರದಿಗಳ ಪ್ರಕಾರ, ಯಾವುದೇ ಆರೋಗ್ಯವಂತ ವ್ಯಕ್ತಿ ವಾರಕ್ಕೆ ಏಳು ಮೊಟ್ಟೆಗಳನ್ನು ತಿಂದರೂ ಅವರ ಹೃದಯದ ಮೇಲೆ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ.

ಸಂಪೂರ್ಣ ಪ್ರೋಟೀನ್ ಮೂಲ ನಮ್ಮ ದೇಹದ ಸ್ನಾಯುಗಳ ನಿರ್ಮಾಣ, ಮೂಳೆಗಳ ಬಲವರ್ಧನೆ ಮತ್ತು ಹಾರ್ಮೋನ್‌ಗಳ ಸಮತೋಲನಕ್ಕೆ ಪ್ರೋಟೀನ್ ಅತ್ಯಗತ್ಯ. ಮೊಟ್ಟೆಯಲ್ಲಿ ದೇಹಕ್ಕೆ ಬೇಕಾದ ಎಲ್ಲಾ ಬಗೆಯ ಅಗತ್ಯ ಅಮೈನೋ ಆಮ್ಲಗಳು ಲಭ್ಯವಿವೆ. ಕೇವಲ ಮೊಟ್ಟೆಯ ಬಿಳಿ ಭಾಗದಲ್ಲಿ ಮಾತ್ರವಲ್ಲ, ಹಳದಿ ಭಾಗದಲ್ಲೂ ಸಮೃದ್ಧವಾದ ಪ್ರೋಟೀನ್, ವಿಟಮಿನ್ ಡಿ ಮತ್ತು ಬಿ೧೨ ಇದೆ ಎಂದು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ (NLM) ಸ್ಪಷ್ಟಪಡಿಸಿದೆ.

ಯಾವೆಲ್ಲಾ ಜೀವಸತ್ವಗಳು ಲಭ್ಯ?

  • ಕಣ್ಣಿನ ಆರೋಗ್ಯಕ್ಕೆ: ಹಾರ್ವರ್ಡ್ ಹೆಲ್ತ್ (Harvard Health) ಪ್ರಕಾರ, ಮೊಟ್ಟೆಯಲ್ಲಿರುವ ‘ಲುಟೀನ್’ ಮತ್ತು ‘ಜಿಯಾಕ್ಸಾಂಥಿನ್’ ಅಂಶಗಳು ಕಣ್ಣಿನ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
  • ಮೆದುಳಿನ ಚುರುಕುತನಕ್ಕೆ: ಇದರಲ್ಲಿರುವ ‘ಕೋಲೀನ್’ ಅಂಶವು ಮೆದುಳು ಹಾಗೂ ನರಮಂಡಲದ ಆರೋಗ್ಯವನ್ನು ವೃದ್ಧಿಸುತ್ತದೆ.
  • ಥೈರಾಯ್ಡ್ ನಿಯಂತ್ರಣಕ್ಕೆ: ‘ಸೆಲೆನಿಯಮ್’ ಅಂಶವು ಥೈರಾಯ್ಡ್ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಸುಧಾರಿಸುತ್ತದೆ.
  • ರಕ್ತ ಕಣಗಳ ರಚನೆಗೆ: ‘ವಿಟಮಿನ್ ಬಿ೧೨’ ನರಕೋಶಗಳ ಆರೋಗ್ಯ ಹಾಗೂ ರಕ್ತ ಕಣಗಳ ರಚನೆಗೆ ಬೆಂಬಲ ನೀಡುತ್ತದೆ.
  • ಮೂಳೆಗಳ ದೃಢತೆಗೆ: ಇದರಲ್ಲಿರುವ ‘ರಂಜಕ’ (Phosphorus) ಮೂಳೆ ಮತ್ತು ಹಲ್ಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಮೊಟ್ಟೆಯನ್ನು ಆಹಾರದಲ್ಲಿ ಹೇಗೆಲ್ಲಾ ಬಳಸಬಹುದು? ಮೊಟ್ಟೆಯನ್ನು ಬೇಯಿಸಿ ತಿನ್ನುವುದು ಅತ್ಯಂತ ಆರೋಗ್ಯಕರ ವಿಧಾನ.

  1. ನೇರ ಸೇವನೆ: ಬೇಯಿಸಿದ ಮೊಟ್ಟೆಯನ್ನು ಸಿಪ್ಪೆ ಸುಲಿದು, ಅರ್ಧ ಕತ್ತರಿಸಿ ಸ್ವಲ್ಪ ಉಪ್ಪು ಮತ್ತು ಕಾಳುಮೆಣಸಿನ ಪುಡಿ ಉದುರಿಸಿ ತಿನ್ನಬಹುದು.
  2. ಆರೋಗ್ಯಕರ ಸಲಾಡ್: ಬೇಯಿಸಿದ ಮೊಟ್ಟೆಯ ಚೂರುಗಳಿಗೆ ಈರುಳ್ಳಿ, ಟೊಮೆಟೊ, ಕೊತ್ತಂಬರಿ ಸೊಪ್ಪು ಮತ್ತು ಸ್ವಲ್ಪ ನಿಂಬೆರಸ ಬೆರೆಸಿ ಎಗ್ ಸಲಾಡ್ ಮಾಡಬಹುದು.
  3. ಬ್ರೇಕ್ಫಾಸ್ಟ್ ಟೋಸ್ಟ್: ಬೆಳಗಿನ ಉಪಾಹಾರಕ್ಕೆ ಬ್ರೆಡ್ ಟೋಸ್ಟ್ ಮೇಲೆ ಬೇಯಿಸಿದ ಮೊಟ್ಟೆಯ ಸ್ಲೈಸ್ ಗಳನ್ನಿಟ್ಟು ಸವಿಯಬಹುದು.
  4. ಮಸಾಲೆ ಕರಿ: ಅನ್ನ ಅಥವಾ ಚಪಾತಿ ಜೊತೆ ತಿನ್ನಲು ಮಸಾಲೆಭರಿತ ಎಗ್ ಕರಿ ಅಥವಾ ಪ್ರೈ ರೂಪದಲ್ಲೂ ತಯಾರಿಸಬಹುದು.

(ಸೂಚನೆ: ಈ ಮೇಲಿನ ಮಾಹಿತಿಯು ಸಾಮಾನ್ಯ ಜ್ಞಾನ ಮತ್ತು ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ನಿರ್ದಿಷ್ಟ ಆರೋಗ್ಯ ಸಮಸ್ಯೆಗಳಿದ್ದರೆ ಅಥವಾ ಡಯಟ್ ಕ್ರಮವನ್ನು ಬದಲಾಯಿಸುವ ಮುನ್ನ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)

Leave a Reply

Your email address will not be published. Required fields are marked *