ಚಿತ್ರದುರ್ಗದಲ್ಲಿ ನೂತನ ಪದಾಧಿಕಾರಿಗಳಿಗೆ ಸನ್ಮಾನ; ಉಪನ್ಯಾಸಕರ ಸಂಘದ ಬಲವರ್ಧನೆಗೆ ಒತ್ತು.

ಚಿತ್ರದುರ್ಗ ಜೂ. 17

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ನಗರದ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಚಿತ್ರದುರ್ಗ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಎಚ್ ಬಸವರಾಜ್ ರವರನ್ನು ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್. ಲಕ್ಷ್ಮಣ ಸನ್ಮಾನಿಸಿದರು.

ಸನ್ಮಾನಿಸಿ ನಂತರ ಮಾತನಾಡಿ ಚುನಾವಣೆಯಲ್ಲಿ ಸೋಲು ಗೆಲುವು ಸಹಜ ತಾವುಗಳು ಚುನಾವಣೆಯ ವೈಶ್ಯಮ್ಯತೆಯನ್ನು ಮರೆತು ಎಲ್ಲಾರ ಸಹಕಾರ ವಿಶ್ವಾಸ ಪಡೆದುಕೊಂಡು ಜಿಲ್ಲಾ ಸಂಘವನ್ನು ಅಭಿವೃದ್ಧಿಪಡಿಸಿ ಸಂಘದ ಕೀರ್ತಿಗೆ ಪಾತ್ರರಾಗಿ ಎಂದು ಸಲಹೆ ನೀಡಿ ಸಂಘದ ಕಾರ್ಯ ಚಟುವಟಿಕೆಗಳಿಗೆ ಸದಾ ನನ್ನ ಸಹಕಾರವಿರುತ್ತದೆ ಎಂದು ತಿಳಿಸಿದರು. ನಾನು ಸುಮಾರು 6 ವರ್ಷಗಳ ಕಾಲ ಜಿಲ್ಲಾ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾಗಿ ರಾಜ್ಯ ಸಂಘದ ಕಾರ್ಯದರ್ಶಿ ಮತ್ತು ಸಹ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿರುತ್ತೇನೆ. ರಾಜ್ಯದಲ್ಲಿ ಉಪನ್ಯಾಸಕರ ಸಂಘ ಪ್ರಪ್ರಥಮವಾಗಿ 1988 ರಲ್ಲಿ ಸ್ಥಾಪನೆಯಾಗಿದ್ದು ಚಿತ್ರದುರ್ಗ ಜಿಲ್ಲೆಯಲ್ಲಿ ಎಂಬುದು ಮರೆಯುವಂತಿಲ್ಲ ಎಂದು ಸಂಘದ ಬೆಳವಣಿಗೆಯ ಹಿನ್ನೆಲೆಯನ್ನು ತಿಳಿಸಿದರು.

ಉಪನ್ಯಾಸಕರ ಸಂಘದ ಮೂಲಕ ಹೋರಾಟ ಮಾಡಿ ನನ್ನನ್ನು ಸೇರಿಕೊಂಡಂತೆ ಸಾವಿರಾರು ವಿದ್ಯಾವಂತರು ಸರ್ಕಾರದಿಂದ ಖಾಯಂ ಉಪನ್ಯಾಸಕರಾಗಿ ನೌಕರಿ ದೊರಕಿಸಿಕೊಂಡು ಜೀವನ ರೂಪಿಸಿಕೊಂಡಿದ್ದೇವೆ ಹಾಗಾಗಿ ನಾವೆಲ್ಲರೂ ಉಪನ್ಯಾಸಕರ ಸಂಘಕ್ಕೆ ಚಿರಋಣಿಯಾಗಿರುತ್ತೇವೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ವೇತನ ತಾರತಮ್ಯ ನಿವಾರಣೆಗಾಗಿ ಬೆಂಗಳೂರು ಫ್ರೀಡಂ ಪಾರ್ಕ್‍ನಲ್ಲಿ ಸಂಘದ ವತಿಯಿಂದ 18 ದಿನಗಳ ಕಾಲ ನಿರಂತರ ಹೋರಾಟ ಮಾಡಿ ಒಂದು ವಿಶೇಷ ವೇತನ ಬಡ್ತಿ ಪಡೆದುಕೊಂಡಿದ್ದು ಒಂದು ಐತಿಹಾಸಿಕ ದಾಖಲೆಯಾಗಿದೆ.2018 ರಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಶೈಕ್ಷಣಿಕ ಸಮಾವೇಶ ನಡೆದಿದ್ದು ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಒಂದು ದಿನದ ಸಾಂಕೇತಿಕ ಧರಣಿ ಹಾಗೂ ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆಗಾಗಿ ಮತ್ತು ಇತರೆ ಬೇಡಿಕೆಗಳ ಈಡೇರಿಕೆಗಾಗಿ ಅಗ್ಗಗೆ ಮಾಡಿದ ಹೋರಾಟಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.

ಸನ್ಮಾನಿತ ನೂತನ ಜಿಲ್ಲಾಧ್ಯಕ್ಷ ಹೆಚ್.ಬಿ.ಬಸವರಾಜ್ ಮಾತನಾಡಿ ನಮ್ಮ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಿ ನಮ್ಮ ತಂಡವನ್ನು ಆಯ್ಕೆ ಮಾಡಿದ್ದಾರೆ ಹಾಗಾಗಿ ಅವರುಗಳಿಗೆ ಮತ್ತು ಸಹಕರಿಸಿದ ಸ್ನೇಹಿತರಿಗೆ ನಮ್ಮ ತಂಡದ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ. ನೀವುಗಳನ್ನು ನಮ್ಮಗಳನ್ನು ಆಯ್ಕೆ ಮಾಡಿ ನಮ್ಮಗಳ ಜವಾಬ್ದಾರಿ ಹೆಚ್ಚಿಸಿದ್ದೀರಿ. ಸಮನ್ವಯತೆ ಇದ್ದಲ್ಲಿ ಸಂಘ ಸದೃಢವಾಗುತ್ತದೆ. ನನ್ನ ಅಧಿಕಾರವಧಿಯಲ್ಲಿ ಎಲ್ಲಾ ಪ್ರಾಚಾರ್ಯರ ಮತ್ತು ಉಪನ್ಯಾಸಕರ ಸಹಕಾರ ಸಲಹೆ ಮಾರ್ಗದರ್ಶನ ಪಡೆದುಕೊಂಡು ಸಂಘದ ಮೂಲಕ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ.

ಸಂಘದ ಮಾಜಿ ಅಧ್ಯಕ್ಷ ಎಸ್ ಲಕ್ಷ್ಮಣ ಹಿರಿಯರ ಪರಂಪರೆಯ ಕೊಂಡಿಯನ್ನು ಮುಂದುವರಿಸಿಕೊಂಡು ಇಂದು ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿರುವುದು ತುಂಬಾ ಸಂತೋಷ ತಂದಿದೆ. ಅವರು ತಮ್ಮ ಅಧಿಕಾರ ಅವಧಿಯಲ್ಲಿ ನಿಸ್ವಾರ್ಥತೆಯಿಂದ ಸಕ್ರೀಯವಾಗಿ ಯಶಸ್ವಿ ಕಾರ್ಯಗಳನ್ನು ಮಾಡುವುದರ ಮೂಲಕ ಜಿಲ್ಲಾ ಸಂಘದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರು ರಾಜ್ಯ ಸಂಘಟನೆಯಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ. ಹಾಗಾಗಿ ಅವರ ಸಹಕಾರ ಮಾರ್ಗದರ್ಶನ ನಮ್ಮ ಸಂಘಕ್ಕೆ ಅಗತ್ಯ ಎಂದು ತಿಳಿಸಿದರು.

ಪ್ರಾಚಾರ್ಯ ಬಿ. ಕೃಷ್ಣಪ್ಪ ಮಾತನಾಡಿ ಪ್ರಾಚಾರ್ಯರ ಸಂಘ ಮತ್ತು ಉಪನ್ಯಾಸಕರ ಸಂಘ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ನಾವುಗಳು ಒಗ್ಗಟ್ಟಿನಿಂದ ಉಪನ್ಯಾಸಕರುಗಳ ಉತ್ತಮ ನಿಯೋಜನೆಗೆ ಸಮಸ್ಯೆಗಳಿಗೆ ಪ್ರಯತ್ನಿಸೋಣ ಎಂದರು.

ಸಂಘದ ನೂತನ ಸಂಚಾಲಕ ಡಾ. ಜೆ ಮೋಹನ್ ಮಾತನಾಡಿ ಜಿಲ್ಲೆಯಲ್ಲಿ ಉಪನ್ಯಾಸಕರ ಸಂಘ ಸದೃಢವಾಗಿ ಇರಬೇಕೆಂದು ನಾನು ಸಂಘ ಪ್ರವೇಶಿಸಿದೆ. ಈ ನೂತನ ತಂಡದೊಂದಿಗೆ ಕೆಲಸ ಮಾಡಲು ನನಗೆ ತುಂಬಾ ಸಂತೋಷವಾಗಿದೆ. ನಮ್ಮ ನೂತನ ತಂಡ ಇತ್ತೀಚಿಗೆ ಮಾನ್ಯ ಉಪ ನಿರ್ದೇಶಕರನ್ನು ಭೇಟಿ ಮಾಡಿದಾಗ ಉಪ ನಿರ್ದೇಶಕರು ಮತ್ತು ಕಚೇರಿಯ ಸಿಬ್ಬಂದಿ ಉತ್ತಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು.

ನಮ್ಮ ತಂಡವು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಉರಿದುಂಬಿಸುವಂತಹ ಕಾರ್ಯಕ್ರಮಗಳನ್ನು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳುತ್ತೇವೆ ಎಂದರು. ಲಕ್ಷ್ಮಣ್ ರವರು ಪಾದರಸ ಇದ್ದಂತೆ ಅವರು ಸಂಘವನ್ನು ತುಂಬಾ ಪ್ರೀತಿಸುತ್ತಾರೆ ಅಂತಹ ಹಿರಿಯರ ಮಾರ್ಗದರ್ಶನ ಸಂಘಕ್ಕೆ ಅಗತ್ಯ ಎಂದು ತಿಳಿಸಿದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಪ್ರಾಚಾರ್ಯ ಡಾ. ತಿಮ್ಮಣ್ಣ ಹಿರಿಯ ಅರ್ಥಶಾಸ್ತ್ರ ಉಪನ್ಯಾಸಕ ಹೆಚ್. ಶ್ರೀನಿವಾಸ್, ವಿ. ಚನ್ನಬಸಪ್ಪ ಯುವ ಸಾಹಿತಿ ಕೆರೆಯಾಗಳಹಳ್ಳಿ ತಿಪ್ಪೇಸ್ವಾಮಿ ಮುಂತಾದವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಂಘದ ನೂತನ ಪದಾಧಿಕಾರಿಗಳಾದ ಕಾರ್ಯಾಧ್ಯಕ್ಷ ಎ.ಕಾಂತರಾಜ್ ಪ್ರಧಾನ ಕಾರ್ಯದರ್ಶಿ ಎನ್. ಕೆಂಚವೀರಪ್ಪ ಪ್ರಧಾನ ಸಂಘಟನಾ ಕಾರ್ಯದರ್ಶಿ ಹೆಚ್. ರುದ್ರಪ್ಪ ಉಪಾಧ್ಯಕ್ಷೆ ಶ್ರೀಮತಿ ಕೆ.ಎಸ್. ವೀಣಾ ಖಜಾಂಚಿ ಎನ್.ರಘು ಸಂಚಾಲಕರು ಡಾ.ಜೆ.ಮೋಹನ್ ಕಾರ್ಯದರ್ಶಿ ಹೆಚ್.ಎಸ್. ವಸಂತ್ ಕುಮಾರ್ ಜಂಟಿ ಕಾರ್ಯದರ್ಶಿ ಪಿ.ಬಸವರಾಜ್ ಇವರುಗಳನ್ನು ಸನ್ಮಾನಿಸಿ ಶುಭ ಹಾರೈಸಿದರು.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp:

https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *