ಮತದಾರರ ಪರಿಷ್ಕರಣೆಯಲ್ಲಿ ಪಾಲ್ಗೊಳ್ಳಿ, ನಿರ್ಲಕ್ಷ ವಹಿಸಿದರೆ, ಸೌಲಭ್ಯದಿಂದ ದೂರ: ಹೆಚ್ ಆಂಜನೇಯ.

ಹೊಳಲ್ಕೆರೆ, ಜೂ.30:

ಪೋಟೋ ಮತ್ತು ವರದಿ ಮಾರುತಿ
ದೇಶದ ನಾಗರಿಕ, ಪೌರತ್ವ ಸಾಬೀತುಪಡಿಸಲು ಮತಪಟ್ಟಿಯೇ ಪ್ರಮುಖ
ದಾಖಲೆ ಅಗಲಿದ್ದು, ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸಿದರೆ ದೇಶದಲ್ಲಿ ಬದುಕುವ
ಹಕ್ಕನ್ನೇ ಕಳೆದಕೊಳ್ಳಬೇಕಾಗುತ್ತದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಎಚ್ಚರಿಸಿದರು.

ನಗರದಲ್ಲಿ ಮಂಗಳವಾರ ಮತದಾರರ ಪರಿಕ್ಷರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮತದಾರರ
ಪರಿಷ್ಕರಣೆ ಜು.30ರ ವರೆಗೆ ನಡೆಯಲಿದ್ದು, ಈ ಕಾರ್ಯದಲ್ಲಿ ಪ್ರತಿ ನಾಗರಿಕನು
ಪಾಲ್ಗೊಳ್ಳಬೇಕು ಎಂದರು.

ದೇಶದ ಪ್ರಜೆಯಾಗಿ ಬದುಕಲು ಪೌರತ್ವವೇ ಅತಿಮುಖ್ಯ. ಅಂತಹ ಪೌರತ್ವವನ್ನು, ಮತದಾನದ
ಹಕ್ಕನ್ನು ಉಳಿಸಿಕೊಳ್ಳಲು ಜುಲೈ 30ರವರೆಗೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ. ಈ ಅವಕಾಶವನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಚುನಾವಣಾ ಆಯೋಗದ ಸೂಚನೆಯಂತೆ ಬೂತ್ ಮಟ್ಟದ ಅಧಿಕಾರಿಗಳಾದ ಬಿಎಲ್‌ಒಗಳು ಪ್ರತಿ ಮನೆಗೂ
ಖುದ್ದು ಭೇಟಿ ನೀಡಲಿದ್ದಾರೆ. ಮತದಾರರ ಅರ್ಜಿ ನಮೂನೆ ವಿತರಿಸಿ,ಭರ್ತಿ ಮಾಡಿಸಿಕೊಂಡು
ಸ್ವೀಕೃತಿ ನೀಡಲಿದ್ದಾರೆ. ಆಧಾರ್ ಕಾರ್ಡ್, ವಿಳಾಸ ದೃಢೀಕರಣ, ವಯಸ್ಸಿನ ದಾಖಲೆ,
ಭಾವಚಿತ್ರ ಸೇರಿ ಅಗತ್ಯ ದಾಖಲೆಗಳನ್ನು ಬಿಎಲ್‌ಒಗಳಿಗೆ ನೀಡುವುದು ಕಡ್ಡಾಯ. ದಾಖಲೆ
ನೀಡಿದವರ ಹೆಸರು ಮಾತ್ರ ಮತದಾರರ ಪಟ್ಟಿಯಲ್ಲಿ ಉಳಿಯಲಿದೆ ಎಂದರು.

ಮತದಾರರ ಪಟ್ಟಿಯಲ್ಲಿ ಹೆಸರು ಇರುವವರಿಗೆ ಮಾತ್ರ ಕೇಂದ್ರ-ರಾಜ್ಯ ಸರ್ಕಾರದ ಎಲ್ಲ
ಸೌಲಭ್ಯಗಳು ದೊರೆಯಲಿವೆ. ಪಡಿತರ ಚೀಟಿ, ಪಿಂಚಣಿ, ವಸತಿ ಯೋಜನೆ, ಆರೋಗ್ಯ ವಿಮೆ, ರೈತ ಸಾಲ ಮನ್ನಾ ಸೇರಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೂರಾರು ಯೋಜನೆಗಳಿಗೆ ಮತದಾರರ
ಗುರುತಿನ ಚೀಟಿಯೇ ಆಧಾರ. ಮತಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ನೀವು ದೇಶದ ನಾಗರಿಕರೇ ಅಲ್ಲ ಎಂಬಂತಾಗುತ್ತದೆ. ಸಿಟಿಜನ್‌ಶಿಪ್ ಇಲ್ಲದಿದ್ದರೆ ದೇಶದಲ್ಲಿ ವಾಸ ಮಾಡುವ
ಯೋಗ್ಯತೆಯನ್ನೇ ಕಳೆದುಕೊಳ್ಳುತ್ತೀರಿ ಎಂದು ಎಚ್ಚರಿಸಿದರು.

ಈ ಹಿನ್ನೆಲೆಯಲ್ಲಿ ಕ್ಷೇತ್ರಾದ್ಯಂತ ಬಿಎಲ್‌ಒಗಳು ತೀವ್ರಗತಿಯಲ್ಲಿ
ಕಾರ್ಯನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಪ್ರತಿ ಬೂತ್‌ಗೂ ಸ್ವಯಂ
ಸೇವಕರನ್ನು ನೇಮಿಸಲಾಗಿದೆ. ಅವರು ಮನೆ ಮನೆಗೆ ತೆರಳಿ ಅರ್ಜಿ ತುಂಬಲು, ದಾಖಲೆ
ಜೋಡಿಸಲು ನೆರವು ನೀಡಲಿದ್ದಾರೆ. ವಯಸ್ಸಾದವರಿಗೆ, ಅಂಗವಿಕಲರಿಗೆ ವಿಶೇಷ ಸಹಕಾರ ನೀಡುತ್ತಾರೆ ಎಂದರು.

ಎಲ್ಲ ಕೆಲಸ ಬಿಟ್ಟು ಕೇವಲ ಒಂದು ಗಂಟೆ ಸಮಯ ಮೀಸಲಿಟ್ಟರೆ ಸಾಕು ನಿಮ್ಮ ಪೌರತ್ವ, ನಾಗರಿಕತ್ವ ಭದ್ರವಾಗುತ್ತದೆ. ನಿಮ್ಮ ಮಕ್ಕಳ ಭವಿಷ್ಯಕ್ಕೂ ಇದು ಅಗತ್ಯ. ಆದ್ದರಿಂದ ಬಿಎಲ್‌ಒ ಬಂದಾಗ ನಿರ್ಲಕ್ಷ್ಯ ಮಾಡಬೇಡಿ. ಕೇಳುವ ದಾಖಲೆಗಳನ್ನು ತಕ್ಷಣ ನೀಡಿ ಎಂದು
ತಿಳಿಸಿದರು.

ಸಾರ್ವಜನಿಕರು 1950 ಸಹಾಯವಾಣಿಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು. ಜುಲೈ 30
ಕೊನೆಯ ದಿನ. ತಪ್ಪದೇ ನಿಮ್ಮ ಹೆಸರು ಖಚಿತಪಡಿಸಿಕೊಳ್ಳಿ ಎಂದರು.

ಮತದಾರರ ಜಾಗೃತಿ ಕಾರ್ಯದಲ್ಲಿ ತೊಡಗಿರುವ ಉಪ ತಹಸೀಲ್ದಾರ್ ಸನಾವುಲ್ಲ ಖಾನ್ ಅವರನ್ನು
ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *