ಚಿತ್ರದುರ್ಗ ಜು. 19
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಗಾಣಿಗ ಸಮಾಜದ ಮುಖಂಡರೆಲ್ಲರೂ ಒಟ್ಟಾಗಿ ಸೇರಿ ಚಿತ್ರದುರ್ಗದಲ್ಲಿ ಒಂದು ಸಹಕಾರಿ ಬ್ಯಾಂಕನ್ನು ಸ್ಥಾಪಿಸುವ ಅಗತ್ಯವಿದೆ ಈ ಬ್ಯಾಂಕ್ ಸ್ಥಾಪನೆಗೆ ತಮ್ಮ ಕಡೆಯಿಂದ ಸಂಪೂರ್ಣ ಸಹಕಾರ ಹಾಗೂ ಬೆಂಬಲ ನೀಡುವುದಾಗಿ ಭರವಸೆ ನೀಡಿ ಚಿತ್ರದುರ್ಗದಲ್ಲಿ ಸಮಾಜದ ಕಲ್ಯಾಣ ಮಂಟಪ ಅಥವಾ ಯಾವುದೇ ಕಟ್ಟಡ ನಿರ್ಮಾಣಕ್ಕೆ ಮುಂದೆ ಬಂದರೆ, ತಮ್ಮ ಕಬ್ಬಿನ ಆದಾಯದಿಂದ 25 ಲಕ್ಷ ರೂಪಾಯಿಗಳ ಧನಸಹಾಯ ನೀಡುವುದಾಗಿ ಮಾಜಿ ಉಪಮುಖ್ಯಮಂತ್ರಿ ಶಾಸಕರಾದ ಲಕ್ಷ್ಮಣ್ ಸವದಿ ತಿಳಿಸಿದರು.
ಚಿತ್ರದುರ್ಗ ತಾಲೂಕು ಅಖಿಲ ಭಾರತ ಗಾಣಿಗರ ಸಂಘ (ರಿ)ವತಿಯಿಂದ ಭಾನುವಾರ ಶ್ರೀ ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಎಸ್,ಎಸ್.ಎಲ್.ಸಿ. ಮತ್ತು ಪಿಯು ವಿದ್ಯಾರ್ಥಿ ಗಳಿಗೆ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ, 2025- 26 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ಸಮುದಾಯದ ವೈದ್ಯರುಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ಜಾತಿ ಆಧಾರಿತವಾಗಿ ಯಾರೂ ಬೆಳೆಯಲು ಸಾಧ್ಯವಿಲ್ಲ. ತಮ್ಮ ಜಾತಿಯ ಬಗ್ಗೆ ಸ್ವಾಭಿಮಾನವಿರಬೇಕು ಮತ್ತು ಇತರ ಜಾತಿಗಳ ಬಗ್ಗೆ ಗೌರವ ಹಾಗೂ ಅಭಿಮಾನವಿರಬೇಕು. ಎಲ್ಲ ಸಮಾಜಗಳನ್ನು ಒಟ್ಟಾಗಿ ಕರೆದೊಯ್ದಾಗ ಮಾತ್ರ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಬೆಳೆಯಲು ಸಾಧ್ಯ ಎಂಬ ಮಹತ್ತರ ಸಂದೇಶವನ್ನು ನೀಡಿದರು.
ಚಿತ್ರದುರ್ಗದಲ್ಲಿ ಸಮಾಜದ ಕಲ್ಯಾಣ ಮಂಟಪ ಅಥವಾ ಯಾವುದೇ ಕಟ್ಟಡ ನಿರ್ಮಾಣಕ್ಕೆ ಮುಂದೆ ಬಂದರೆ, ತಮ್ಮ ಕಬ್ಬಿನ ಆದಾಯದಿಂದ 25 ಲಕ್ಷ ರೂಪಾಯಿಗಳ ಧನಸಹಾಯ ನೀಡುವುದಾಗಿ ತಿಳಿಸಿದ ಅವರು ಶಾಸಕ ವೀರೇಂದ್ರ ಪಪ್ಪಿ ಅವರೂ ಈ ಕಾರ್ಯಕ್ಕೆ ತಮ್ಮನ್ನು ಮೀರಿಸಿ ನೆರವು ನೀಡಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ವೈದ್ಯಕೀಯ ವೃತ್ತಿಯಲ್ಲಿರುವ ಸಮಾಜದ ಹಿರಿಯ ಮತ್ತು ಕಿರಿಯ ವೈದ್ಯರನ್ನು ಗುರುತಿಸಿ ಗೌರವಿಸಿದ ತಾಲೂಕು ಅಧ್ಯಕ್ಷರ ಕಾರ್ಯವನ್ನು ಶ್ಲಾಘಿಸಿದ ಅವರು, ಇದರಿಂದ ವೈದ್ಯರಿಗೆ ಸಮಾಜದ ಸೇವೆ ಮಾಡಲು ಹೊಸ ಪ್ರೇರಣೆ ಸಿಗುತ್ತದೆ ಸಮಾಜದ ಬಡ ರೋಗಿಗಳು ಬಂದಾಗ ಬೇರೆಯವರಿಗಿಂತ ಕಡಿಮೆ ದರದಲ್ಲಿ ಗುಣಮಟ್ಟದ ಚಿಕಿತ್ಸೆ ಮತ್ತು ಸೇವೆಯನ್ನು ಒದಗಿಸಬೇಕೆಂದು ವೈದ್ಯರಲ್ಲಿ ಕಳಕಳಿಯ ವಿನಂತಿ ಮಾಡಿ ಕೊಂಡರು.
ತಮ್ಮ ರಾಜಕೀಯ ಪ್ರವಾಸವನ್ನು ಸ್ಮರಿಸಿದ ಸವದಿ ಅವರು, ತಾವು ಪ್ರತಿನಿಧಿಸುವ ಅಥಣಿ ಕ್ಷೇತ್ರವು ಹಿಂದೆ ಸಂಪೂರ್ಣ ಬರಗಾಲ ಪೀಡಿತ ಪ್ರದೇಶವಾಗಿತ್ತು. ಆದರೆ ಕಳೆದ 25 ವರ್ಷಗಳಲ್ಲಿ ನಾಲ್ಕು ಪ್ರಮುಖ ನೀರಾವರಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಇಡೀ ಕ್ಷೇತ್ರವನ್ನು ನೂರಕ್ಕೆ ನೂರರಷ್ಟು ನೀರಾವರಿ ಪ್ರದೇಶವನ್ನಾಗಿ ಪರಿವರ್ತಿಸಲಾಗಿದೆ ಎಂದು ಹೆಮ್ಮೆಯಿಂದ ತಿಳಿಸಿ ಇಂದು ಅಥಣಿ ತಾಲೂಕು ಇಡೀ ಕರ್ನಾಟಕದಲ್ಲೇ ಅತಿ ಹೆಚ್ಚು ಕಬ್ಬು ಬೆಳೆಯುವ ತಾಲೂಕಾಗಿ ಹೊರಹೊಮ್ಮಿದ್ದು, ಪ್ರತಿವರ್ಷ ಸುಮಾರು 72 ಲಕ್ಷ ಟನ್ ಕಬ್ಬು ಬೆಳೆಯಲಾಗುತ್ತಿದೆ. ರೈತರ ಪರವಾದ ಯೋಜನೆಗಳು ಮತ್ತು ದೂರದೃಷ್ಟಿಯ ಕಾರ್ಯಕ್ರಮಗಳಿಂದಾಗಿ ತಾವು ಸತತ ಐದು ಬಾರಿ ಆಯ್ಕೆಯಾಗಲು ಸಾಧ್ಯವಾಗಿದೆ ಎಂದು ಲಕ್ಷ್ಮಣ್ ಸವದಿ ವಿವರಿಸಿದರು.
ಶಾಸಕರಾದ ಕೆ.ಸಿ.ವಿರೇಂದ್ರ ಪಪ್ಪಿ ಮಾತನಾಡಿ, ಸಮಾಜದ ಸಬಲೀಕರಣವು ನಮ್ಮ ಸ್ವಂತ ಮನೆಯನ್ನು ಬಲಪಡಿಸುವುದರಿಂದಲೇ ಆರಂಭವಾಗುತ್ತದೆ. ಆ ನಿಟ್ಟಿನಲ್ಲಿ ನಮ್ಮ ಸಮಾಜದ ಸಂಘಟನೆ ಮತ್ತು ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕಾಗಿದೆ ಸಮಾಜದ ಪ್ರಗತಿಗೆ ಕೇವಲ ಕಾಳಜಿ ಮಾತ್ರವಲ್ಲದೆ, ಸಾಂಸ್ಥಿಕ ಮತ್ತು ಆರ್ಥಿಕ ಮೂಲಸೌಕರ್ಯಗಳ ಸೃಷ್ಟಿಯೂ ಅತ್ಯಗತ್ಯವಾಗಿದೆ. ನೂರು ವರ್ಷಗಳ ಇತಿಹಾಸ: ನಮ್ಮ ಸಮಾಜದ ಸಂಘಟನೆಯು ನೂರು ವರ್ಷಗಳಿಗಿಂತಲೂ ಹೆಚ್ಚಿನ ಸುದೀರ್ಘ ಇತಿಹಾಸವನ್ನು ಹೊಂದಿದ್ದು, ಇಷ್ಟು ವರ್ಷಗಳ ಕಾಲ ಸಂಘಟನೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.
ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಹಾಗೂ ನೆರೆಯ ಕೂಡ್ಲಿಗಿಯಲ್ಲಿ ಈಗಾಗಲೇ ಗಾಣಿಗ ಭವನ, ಸಹಕಾರ ಸಂಘಗಳು ಮತ್ತು ಬ್ಯಾಂಕುಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಅದೇ ಮಾದರಿಯಲ್ಲಿ ನಮ್ಮ ಜಿಲ್ಲೆಯಲ್ಲೂ ಗಾಣಿಗ ಸಂಘದ ಅಧ್ಯಕ್ಷರಾದ ತಿಪ್ಪೇಸ್ವಾಮಿ ಅವರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಒಂದು ಸುಸಜ್ಜಿತ ಬ್ಯಾಂಕ್ ಹಾಗೂ ಗಾಣಿಗ ಭವನವನ್ನು ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿ ನೆರೆಯ ಹಿರಿಯೂರಿನಲ್ಲಿಯೂ ಈಗಾಗಲೇ ಸರಕಾರದಿಂದ ಸುಮಾರು ಮೂರು ಕೋಟಿ ರೂಪಾಯಿಗಳ ಅನುದಾನ ಪಡೆದು ಭವನ ನಿರ್ಮಿಸಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಜಿಲ್ಲೆಯಲ್ಲಿ ನಮ್ಮ ಸಮಾಜದ ಸುಮಾರು 65ಕ್ಕೂ ಹೆಚ್ಚು ವೈದ್ಯರು ಸಾರ್ವಜನಿಕರಿಗೆ ಆರೋಗ್ಯ ಸೇವೆಯನ್ನು ಒದಗಿಸುತ್ತಿರುವುದು ಶ್ಲಾಘನೀಯ. ಸಮಾಜದ ಆರೋಗ್ಯ ಕಾಪಾಡುವಲ್ಲಿ ನಿರತರಾಗಿರುವ ಈ ವೈದ್ಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸುತ್ತಿರುವುದು ಅತ್ಯಂತ ಸ್ತುತ್ಯರ್ಹ ಮತ್ತು ಉತ್ತಮ ಆಲೋಚನೆಯಾಗಿದೆ ಎಂದು ಪ್ರಶಂಸಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಎಷ್ಟೇ ಉನ್ನತ ಮಟ್ಟಕ್ಕೆ ಬೆಳೆದರೂ ತಮಗೆ ಆಸರೆಯಾದ ಸಮಾಜ, ಹೆತ್ತ ತಂದೆ-ತಾಯಿ ಹಾಗೂ ಒಡಹುಟ್ಟಿದವರನ್ನು ಮರೆಯದೆ, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಬೇಕು ಎಂದು ಕಿವಿಮಾತು ಹೇಳಿ ಸಮಾಜವು ಮುಂದಿನ ದಿನಗಳಲ್ಲಿ ಇನ್ನಷ್ಟು ಉಜ್ವಲವಾಗಿ ಬೆಳೆಯಬೇಕು. ಸಮಾಜ ಬಾಂಧವರ ಯಾವುದೇ ಕಷ್ಟ- ಕಾರ್ಪಣ್ಯಗಳು ಎದುರಾದರೂ, ಸದಾ ಅವರ ಜೊತೆಜೊತೆಯಾಗಿ ನಿಂತು ಬೆಂಬಲ ನೀಡಲಾಗುವುದು ಎಂಬ ದೃಢ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರು, ವನಶ್ರೀ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ಜಯಬಸವಕುಮಾರ ಸ್ವಾಮೀಜಿ ತಮ್ಮ ಆರ್ಶಿವಚನದಲ್ಲಿ ನಮ್ಮ ಸಮಾಜದ ಬಹುತೇಕ ಜನರ ಜಾತಿ ಪ್ರಮಾಣ ಪತ್ರದಲ್ಲಿ ಲಿಂಗಾಯತ ಎಂದೇ ನಮೂದಾಗಿದೆ. ಆದರೆ ಸಂವಿಧಾನದ ಅಡಿಯಲ್ಲಿ ಗಾಣಿಗ ಎಂದು ಉಲ್ಲೇಖವಿದ್ದರೆ ಮಾತ್ರ 2ಎ ಮೀಸಲಾತಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ. ಉತ್ತರ ಕರ್ನಾಟಕದ ಜನತೆ ಕಾನೂನು ಹೋರಾಟದ ಮೂಲಕ ಮೀಸಲಾತಿ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ತಾಂತ್ರಿಕ ದೋಷಗಳಿಂದ ನಮಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿಕೊಳ್ಳಬೇಕಿದೆ ಎಂದರು.
ಉತ್ತರ ಕರ್ನಾಟಕದ ಮಾದರ, ಮಡಿವಾಳ, ಹಡಪದ ಹಾಗೂ ಗಾಣಿಗ ಸೇರಿದಂತೆ ಪ್ರತಿಯೊಂದು ಸಣ್ಣ ಸಮುದಾಯದವರೂ ಲಿಂಗವನ್ನು ಧರಿಸುತ್ತಾರೆ. ಹೀಗಾಗಿ ಲಿಂಗಾಯತ ಎಂಬುದು ಯಾವುದೇ ನಿರ್ದಿಷ್ಟ ಜಾತಿಯನ್ನು ಸೂಚಿಸುವ ಶಬ್ದವಲ್ಲ, ಅದೊಂದು ತತ್ವ ಸೂಚಕ ಶಬ್ದ ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು. ಲಿಂಗಾಯತ ಒಳಪಂಗಡದ ನೆಪದಲ್ಲಿ ನಮ್ಮನ್ನು 2ಎ ಮೀಸಲಾತಿಯಿಂದ ಹೊರಗಿಡುವ ಪ್ರಯತ್ನ ನಡೆದರೆ ಅದರ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಮಾಜದ ಮಕ್ಕಳ ಶೈಕ್ಷಣಿಕ ಮತ್ತು ಉದ್ಯೋಗದ ಪ್ರಗತಿಗಾಗಿ ನಾವೆಲ್ಲರೂ ಒಗ್ಗಟ್ಟಾಗಬೇಕಿದೆ. ಬಳ್ಳಾರಿ, ಹಿರಿಯೂರು ಮತ್ತು ಖಾನಾವಸಳ್ಳಿಯ ಸಮಾಜದ ಮುಖಂಡರು ಸರ್ಕಾರ ಹಾಗೂ ದಾನಿಗಳ ನೆರೆ ಜಿಲ್ಲೆಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸುತ್ತಿರುವುದು ಶ್ಲಾಘನೀಯ. ಲಕ್ಷ್ಮಣ ಸೌದಿ ಅವರು ಅಥಣಿ ತಾಲೂಕಿನಲ್ಲಿ 165ಕ್ಕೂ ಹೆಚ್ಚು ಸಹಕಾರ ಸಂಘಗಳ ಸ್ಥಾಪನೆಗೆ ಕಾರಣಕರ್ತರಾಗಿದ್ದಾರೆ. ಆದರೆ ಚಿತ್ರದುರ್ಗದಲ್ಲಿ ನಮ್ಮ ಸಮಾಜದ ಒಂದೇ ಒಂದು ಸಹಕಾರ ಬ್ಯಾಂಕ್ ಇಲ್ಲದಿರುವುದು ಬೇಸರದ ಸಂಗತಿ ಎಂದು ವಿಷಾದಿಸಿ ಸಮಾಜದ ಪ್ರತಿಭಾವಂತ ಮಕ್ಕಳಿಗೆ ವೈದ್ಯಕೀಯ, ಇಂಜಿನಿಯರಿಂಗ್ ಶಿಕ್ಷಣದಂತಹ ಉನ್ನತ ವ್ಯಾಸಂಗಕ್ಕೆ ಆರ್ಥಿಕ ನೆರವು ನೀಡಲು ಚಿತ್ರದುರ್ಗದಲ್ಲಿ ಸಮಾಜದ ವತಿಯಿಂದ ಸಹಕಾರ ಬ್ಯಾಂಕ್ ಒಂದನ್ನು ಸ್ಥಾಪಿಸಬೇಕು ಎಂದು ಪ್ರಮುಖರಿಗೆ ಸಲಹೆ ನೀಡಿ ಜೊತೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸುಸಜ್ಜಿತ ವಿದ್ಯಾರ್ಥಿನಿಲಯ ಹಾಗೂ ಸಮುದಾಯ ಭವನಗಳನ್ನು ನಿರ್ಮಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಸಮಾಜದ ಪ್ರತಿಯೊಬ್ಬ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಒಗ್ಗಟ್ಟಿನಿಂದ ಶ್ರಮಿಸಿದಾಗ ಮಾತ್ರ ಸಂಘಟನೆ ಬಲಗೊಳ್ಳಲು ಸಾಧ್ಯ. ಬೇರೆಯವರ ಕಷ್ಟಗಳಿಗೆ ಸ್ಪಂದಿಸುವ ಮತ್ತು ಪರೋಪಕಾರದ ಗುಣವನ್ನು ಬೆಳೆಸಿಕೊಳ್ಳುವವರೇ ನಿಜವಾದ ಗಾಣಿಗರು. ಈ ನಿಟ್ಟಿನಲ್ಲಿ ಸಮಾಜದ ಪ್ರಗತಿಗಾಗಿ, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಎಲ್ಲರೂ ಭೇದಭಾವ ಮರೆತು ಕೈಜೋಡಿಸಬೇಕು ಎಂಬುದೇ ಈ ಸಮಾವೇಶದ ಮುಖ್ಯ ತೀರ್ಮಾನವಾಗಿದೆ ಎಂದು ಶ್ರೀಗಳು ತಿಳಿಸಿದರು. ಇದೇ ಸಂದರ್ಭದಲ್ಲಿ ಉಪನ್ಯಾಸಕರಾದ ಡಾ. ಮೇಘನ.ಜಿ,ರವರು ರಚಿಸಿದ ಕೃತಿ `ಎಣ್ಣೆ ಗಾಣಗಳು ಪ್ರಕರಣ ಅಧ್ಯಯನವನ್ನು ಅಖಿಲ ಭಾರತ ಗಾಣಿಗರ ಸಂಘದ ರಾಜ್ಯಾಧ್ಯಕ್ಷರಾದ ಸುರೇಶ್ ಸಜ್ಜನ್ ಬಿಡುಗಡೆ ಮಾಡಿದರು. ಗಾಣಿಗ ಸಮಾಜದ ವಿದ್ಯಾಮಾನಗಳು ಬಗ್ಗೆ ವಿಜಯಪುರದ ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಎಸ್. ಲೋಣಿ ಉಪನ್ಯಾಸ ನೀಡಿದರು.
ಅಖಿಲ ಕರ್ನಾಟಕ ಗಾಣಿಗ ಸಮೂಹ ಸಂಘದ ರಾಜ್ಯಾಧ್ಯಕ್ಷರು (ರಿ.) ಹಾಗೂ ಚಲನಚಿತ್ರ ನಟ ಮತ್ತು ನಿರ್ಮಾಪಕರಾದ ಮಹಾಂತೇಶ ವಿ. ಚೋಳಚಗುಡ್ಡ, ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷರಾದ ಡಿ.ಎಸ್.ಸುರೇಶ್ಬಾಬು (ಸೈಟ್ ಬಾಬಣ್ಣ), ತಾಲ್ಲೂಕು ಗಾಣಿಗರ ಸಂಘ ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಕೆ.ಸಿ.ವೀಣಾ ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸಿದ್ದರು.
ಸಮಾವೇಶದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸುಮಾರು 35ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನುಹಾಗೂ 60ಕ್ಕೂ ಹೆಚ್ಚು ಸಮುದಾಯದ ವೈದ್ಯರುಗಳನ್ನು ಗೌರವಿಸಿ ಸನ್ಮಾನಿಸಲಾ ಯಿತು. ಉಮೇಶ್ ಪತ್ತರ್ ಪ್ರಾರ್ಥಿಸಿದರೆ, ಪಿ.ವಿರೇಂದ್ರ ಕುಮಾರ್ ಸ್ವಾಗತಿಸಿದರು, ಚಿತ್ರದುರ್ಗ ತಾಲೂಕು ಗಣಿಗಾರರ ಸಂಘದ ಅಧ್ಯಕ್ಷರಾದ ಎ.ಆರ್. ತಿಪ್ಪೇಸ್ವಾಮಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಜ್ಞಾನಮೂರ್ತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.