ಗ್ರಾಹಕರಿಗೆ ಬಿಗ್ ಶಾಕ್: ಜುಲೈ 24ರಿಂದ ನಂದಿನಿ ತುಪ್ಪ ಮತ್ತು ಬೆಣ್ಣೆ ದರ ಏರಿಕೆ, ಪರಿಷ್ಕೃತ ದರಗಳೆಷ್ಟು?.

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಕರ್ನಾಟಕ ಹಾಲು ಮಹಾಮಂಡಳ (KMF) ಮತ್ತೊಂದು ಶಾಕ್ ನೀಡಿದೆ. ಸ್ವಲ್ಪ ದಿನಗಳ ಹಿಂದಷ್ಟೇ ಜಿಎಸ್‌ಟಿ ಇಳಿಕೆಯ ಹಿನ್ನೆಲೆಯಲ್ಲಿ ನಂದಿನಿ (Nandini) ಉತ್ಪನ್ನಗಳ ದರವನ್ನು ಕಡಿಮೆ ಮಾಡಿದ್ದ ಕೆಎಂಎಫ್, ಇದೀಗ ದಿಢೀರನೆ ತುಪ್ಪ ಮತ್ತು ಬೆಣ್ಣೆಯ ಬೆಲೆಯನ್ನು ಏರಿಕೆ ಮಾಡಿದೆ. ಈ ಪರಿಷ್ಕೃತ ನೂತನ ದರಗಳು ಜುಲೈ 24 ರಿಂದಲೇ ಅಧಿಕೃತವಾಗಿ ಜಾರಿಗೆ ಬರಲಿವೆ.

ಪರಿಷ್ಕೃತ ದರಗಳ ವಿವರ ಕೆಎಂಎಫ್ ಪ್ರಕಟಣೆಯ ಪ್ರಕಾರ, ನಂದಿನಿ ತುಪ್ಪದ (Nandini Ghee) ಬೆಲೆಯಲ್ಲಿ ಏರಿಕೆ ಮಾಡಲಾಗಿದ್ದು, ಈ ಹಿಂದೆ 700 ರೂ. ಇದ್ದ 1 ಕೆ.ಜಿ ತುಪ್ಪದ ದರ ಇದೀಗ 715 ರೂಪಾಯಿಗಳಿಗೆ (15 ರೂ. ಹೆಚ್ಚಳ) ಏರಿಕೆಯಾಗಿದೆ. ಅದೇ ರೀತಿ ಬೆಣ್ಣೆಯ (Nandini Butter) ಬೆಲೆಯಲ್ಲೂ ಗಣನೀಯ ಹೆಚ್ಚಳವಾಗಿದ್ದು, 610 ರೂಪಾಯಿ ಇದ್ದ 1 ಕೆ.ಜಿ ಬೆಣ್ಣೆಯ ದರ ಇದೀಗ 660 ರೂಪಾಯಿಗಳಿಗೆ ತಲುಪಿದೆ.

ಹೋಟೆಲ್ ತಿಂಡಿ-ತಿನಿಸು ದುಬಾರಿ ಸಾಧ್ಯತೆ ತುಪ್ಪ ಮತ್ತು ಬೆಣ್ಣೆಯ ದರ ಹೆಚ್ಚಳವು ಕೇವಲ ಗೃಹಬಳಕೆಯ ಮೇಲಷ್ಟೇ ಅಲ್ಲದೆ ಹೋಟೆಲ್ ಉದ್ಯಮದ ಮೇಲೂ ನೇರ ಪರಿಣಾಮ ಬೀರಲಿದೆ. ದರ್ಶಿನಿ, ಹೋಟೆಲ್ ಹಾಗೂ ಸಿಹಿ ತಿನಿಸುಗಳ ತಯಾರಿಕೆಯಲ್ಲಿ ತುಪ್ಪ ಮತ್ತು ಬೆಣ್ಣೆಯ ಬಳಕೆ ಅನಿವಾರ್ಯವಾಗಿರುವುದರಿಂದ, ಮುಂದಿನ ದಿನಗಳಲ್ಲಿ ಇವುಗಳಿಂದ ತಯಾರಿಸುವ ಆಹಾರ ಪದಾರ್ಥಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.

ಬೆಲೆ ಏರಿಕೆಯ ಹಿನ್ನೆಲೆ ಕೇಂದ್ರ ಸರ್ಕಾರವು ಸರಕು ಮತ್ತು ಸೇವಾ ತೆರಿಗೆಯಲ್ಲಿ (GST) ಕಡಿತ ಮಾಡಿದ್ದರಿಂದ, ಈ ಹಿಂದೆ ತುಪ್ಪವೂ ಸೇರಿದಂತೆ ವಿವಿಧ ನಂದಿನಿ ಉತ್ಪನ್ನಗಳ ದರವನ್ನು ಕೆಎಂಎಫ್ ಶೇಕಡಾ 7ರಷ್ಟು ಇಳಿಕೆ ಮಾಡಿತ್ತು. ಆ ಬಳಿಕ ಕಳೆದ ವರ್ಷದ ನವೆಂಬರ್‌ನಲ್ಲಿ ತುಪ್ಪದ ಬೆಲೆಯನ್ನು ಶೇ. 15ರಷ್ಟು ಹಾಗೂ ಬೆಣ್ಣೆ ಬೆಲೆಯನ್ನು ಶೇ. 6ರಷ್ಟು ಏರಿಕೆ ಮಾಡಲಾಗಿತ್ತು. ಇದೀಗ ಏಕಾಏಕಿ ಮತ್ತೊಮ್ಮೆ ಬೆಲೆ ಏರಿಕೆ ಮಾಡುವ ಮೂಲಕ ಕೆಎಂಎಫ್ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಿದೆ.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *