ಚಿತ್ರದುರ್ಗ,ಜು,27
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗದ ಗಮಕ ಕಲಾಭಿಮಾನಿಗಳ ಸಂಘದವರು ತಮ್ಮ ಸಂಘದ 40 ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಸುತ್ತಿರುವ ಮಾಸಿಕ ಗಮಕ ಕಾರ್ಯಕ್ರಮದ 36ನೇ ಆಧಿವೇಶನವು ದಿನಾಂಕ 26/7/2026ನೇ ಭಾನುವಾರ ಸಂಜೆ ಜೆಸಿಆರ್ ಬಡಾವಣೆಯ ಗಣಪತಿ ದೇವಾಲಯದ ಸಭಾಂಗಣದಲ್ಲಿ ನಡೆಯಿತು.

ಗಮಕಿ ವಿದುಷಿ ಮೀನಾಕ್ಷಿ ಭಟ್ ಅವರು ಕುಮಾರವ್ಯಾಸ ಭಾರತದ ಭೀಷ್ಮನ ಜೀವನದ ವಿಶೇಷಣಗಳನ್ನು ಕುರಿತ ಪದ್ಯಗಳನ್ನು ಗಮಕ ಶೈಲಿಯಲ್ಲಿ ವಾಚನ ಮಾಡಿದರು. ವಿಶೇಷ ಆಹ್ವಾನಿತರಾಗಿದ್ದ ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಲಾ ಕಾಲೇಜಿನ ಪ್ರಾಚಾರ್ಯರದ ಡಾ. ತಾರಿಣಿ ಶುಭದಾಯಿನಿ ಅವರು”ಮಹಾಭಾರತದಲ್ಲಿ ಭೀಷ್ಮನ ವ್ಯಕ್ತಿತ್ವದ” ವಿಶೇಷ ಗುಣಗಳನ್ನು ವರ್ಣಿಸುತ್ತಾ ,ಮಹಾಭಾರತದ ಕುರುಕುಲ ಪಿತಾಮಹ, ಭೀಷ್ಮನ ಹುಟ್ಟು, ಶಿಕ್ಷಣ, ಪ್ರತಿಜ್ಞೆ, ಸಂಘರ್ಷ, ಕರ್ತವ್ಯಪಾಲನೆ ,ಸಂಯಮ, ವೀರತ್ವದರ್ಶನ ,ಅನುಭವ ,ದೈವಭಕ್ತಿ ಮತ್ತು ಸಾವು ಮೊದಲಾದವುಗಳ ವಿಶ್ಲೇಷಣೆ ಅತ್ಯಂತ ಕುತೂಹಲಕಾರಿ ವಿಷಯಗಳನ್ನು ಹೊಮ್ಮಿಸುತ್ತದೆ. ಆತನ ಸಾಂಖ್ಯವು ಶಾಸ್ತ್ರಾಧಾರಿತ ಮತ್ತು ಯೋಗವು ಅನುಭವವಾಧಾರಿತ ಎಂಬ ಮಾತು ಬಹುಜನ ಮಾನ್ಯ. ಅವನ ಶರಶಯ್ಯೆ ಹಾಗೂ ಇಚ್ಛಾಮರಣ ಹಲವು ಚಿಂತನೆಗಳಿಗೆ ಹಚ್ಚುವಂತಹದು ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮ ಕುಮಾರಿ ಸುರಭಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಮೀನಾಕ್ಷಿ ಭಟ್ ಸ್ವಾಗತಿಸಿದರು.ಈ ಸಮಾರಂಭದಲ್ಲಿ ಡಾ. ತಾರಿಣಿ ಶುಭದಾಯಿನಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ವ್ಯಾಖ್ಯಾನಕಾರ ಅನಂತಕೃಷ್ಣ ವಂದಿಸಿದರು. ಬಿ. ಎಲ್. ಉಮಾ ಕಾರ್ಯಕ್ರಮ ನಿರ್ವಹಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕೆ. ಆರ್ .ರಮಾದೇವಿ ವೆಂಕಣ್ಣಾಚಾರ್ ವಿಷಯದ ಮಹತ್ವವನ್ನು ಹಾಗೂ ತಾರಿಣಿ ಶುಭದಾಯಿನಿ ಅವರ ಸಾಧನೆಗಳನ್ನು ಬಣ್ಣಿಸಿದರು.
ಸಭೆಯಲ್ಲಿ ಚಿದಾನಂದಪ್ಪ, ಪ್ರೊ. ಹರೀಶ್ ,ನಾಗರಾಜ್, ಶ್ರೀಮತಿ ಲಕ್ಷ್ಮಿ ಮೊದಲಾದವರು ಉಪಸ್ಥಿತರಿದ್ದರು.
ಮುಂದಿನ ಮಾಸಿಕ:- ಮುಂದಿನ ಮಾಸಿಕ ಗಮಕದ 37ನೇ ಅಧಿವೇಶನವು ಚಿತ್ರದುರ್ಗದ ಹೆಸರಾಂತ ಶಿಕ್ಷಣ ಸಂಸ್ಥೆ ಸಂತ ಜೋಸೆಫರ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ದಿನಾಂಕ 6/8/ 2026ನೇ ಗುರುವಾರ ಮಧ್ಯಾಹ್ನ 2 ಗಂಟೆಯಿಂದ 10ನೇ ತರಗತಿಯ ವಿದ್ಯಾರ್ಥಿನಿಯರಿಗಾಗಿ ಪಠ್ಯದ ಭಾಗವಾದ “ಕೌರವೇಂದ್ರನ ಕೊಂದೆ ನೀನು” ಮತ್ತು ರನ್ನನ “ಸಾಹಸ ಭೀಮ ವಿಜಯದ ಛಲಮನೆ ಮೆರೆವೆಂ”ಎಂಬ ಕಾವ್ಯ ಭಾಗಗಳ ವಾಚನ ವ್ಯಾಖ್ಯಾನ ನಡೆಯಲಿದೆ. ವಿದುಷಿ ಮೀನಾಕ್ಷಿ ಭಟ್ ಕವನ ವಾಚನ ಮಾಡಿದರೆ, ಕೆ .ಆರ್. ರಮಾದೇವಿ ವ್ಯಾಖ್ಯಾನ ಮಾಡಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.