ಚಿತ್ರದುರ್ಗದಲ್ಲಿ 69ನೇ ವರ್ಷದ ಗಣಪತಿ ಮಹೋತ್ಸವ: ಸೆ. 14 ರಿಂದ 24 ರವರೆಗೆ ವಿಜೃಂಭಣೆಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು.

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ: ನಗರದ ಆನೆ ಬಾಗಿಲು ಬಳಿಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ ವತಿಯಿಂದ 69ನೇ ವರ್ಷದ ಗಣಪತಿ ಪೂಜಾ ಮಹೋತ್ಸವವನ್ನು ಸೆಪ್ಟೆಂಬರ್ 14 ರಿಂದ 24 ರವರೆಗೆ ಅತ್ಯಂತ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷರಾದ ಎಲ್.ಎನ್. ರಾಜಕುಮಾರ್ ತಿಳಿಸಿದ್ದಾರೆ.

​ಉತ್ಸವದ ಅಂಗವಾಗಿ ಈಗಾಗಲೇ ಭೂಮಿಪೂಜೆ ನೆರವೇರಿಸಲಾಗಿದ್ದು, ಶಿವಮೊಗ್ಗದ ಶಿಲ್ಪಿ ರಾಮಕೃಷ್ಣ ಪಾಂಡುರಂಗ ಅವರ ಸುಂದರ ಮೂರ್ತಿ ಹಾಗೂ ಜಿ.ಎಂ. ರಾಜು ಅವರ ಆಕರ್ಷಕ ಪೆಂಡಾಲ್ ನಿರ್ಮಾಣ ವಿಶೇಷ ಮೆರುಗು ತಂದಿದೆ. ಹತ್ತು ದಿನಗಳ ಕಾಲ ಪ್ರತಿದಿನವೂ ನವಗ್ರಹ ಹೋಮ, ಸಹಸ್ರನಾಮ ಕುಂಕುಮಾರ್ಚನೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ಜರುಗಲಿದೆ.

​ಹತ್ತು ದಿನಗಳ ಸಾಂಸ್ಕೃತಿಕ ವೈಭವ:

​ಸೆಪ್ಟೆಂಬರ್ 15 ರಿಂದ 23ರ ವರೆಗೆ ಪ್ರತಿದಿನ ಸಂಜೆ 6 ಗಂಟೆಯಿಂದ ವಿವಿಧ ಹೆಸರಾಂತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ:

  • ಸೆ. 15: ಕೆ.ಎ. 16 ತಂಡದ ಉದಯರಾವ್ ಮತ್ತು ಅಭೀಷೇಕ್ ಎಂ. ಮುರುಡರವರಿಂದ ಸಂಗೀತ ಸಂಜೆ.
  • ಸೆ. 16: ಕಲಾಂಜಲಿ ಕರೋಕೆ ವಾದ್ಯಗೋಷ್ಠಿಯಿಂದ ಭಕ್ತಿ ಹಾಗೂ ಚಲನಚಿತ್ರ ಗೀತೆಗಳ ಗಾಯನ.
  • ಸೆ. 17: ಶ್ರೀಕಾಂತ ಮತ್ತು ತಂಡದಿಂದ ‘ಶ್ರೀ ಶಾರದ ಮೆಲೋಡಿಸ್’ ಗಾಯನ ಕಾರ್ಯಕ್ರಮ.
  • ಸೆ. 18: ಶಿವಮೊಗ್ಗದ ವಿದೂಷಿ ಶ್ರೀಮತಿ ಕವಿತರಾಣಿ ಜಗದೀಶ್ ತಂಡದಿಂದ ಭರತನಾಟ್ಯ ಹಾಗೂ ನೃತ್ಯ ವೈಭವ.
  • ಸೆ. 19: ಲಾಸಿಕಾ ಫೌಂಡೇಷನ್‌ನ ವಿದೂಷಿ ಶ್ವೇತಾ ಮಂಜುನಾಥ್ ಮತ್ತು ತಂಡದಿಂದ ನೃತ್ಯ ಸಂಭ್ರಮ.
  • ಸೆ. 20: ಖ್ಯಾತ ಹಾಸ್ಯ ಕಲಾವಿದ ರಿಚರ್ಡ್ ಲೂಯಿಸ್ ತಂಡದಿಂದ ‘ನಗೆ ಹಬ್ಬ’.
  • ಸೆ. 21: ಮಾಸ್ಟರ್ ಶಾಲೋಮ್ ಇವರಿಂದ ಭಕ್ತಿ, ಭಾವ ಹಾಗೂ ಹಳೆ ಚಲನಚಿತ್ರ ಗೀತೆಗಳ ಗಾಯನ.
  • ಸೆ. 22: ಹೊಸನಗರದ ಸಂಗೀತ ಮ್ಯೂಸಿಕಲ್ ಇವೆಂಟ್ಸ್ ವತಿಯಿಂದ ಸಂಗೀತ ಸಂಜೆ.
  • ಸೆ. 23: ಕಿರಣ ಮತ್ತು ಕಲಾ ತಂಡದಿಂದ ಚಿಣ್ಣರ ನೃತ್ಯ ಕಲರವ ಹಾಗೂ ‘ಮಹಿಷಾಸುರ ಮರ್ಧಿನಿ’ ವಿಶೇಷ ನೃತ್ಯ ರೂಪಕ ಪ್ರದರ್ಶನ.

​ಧಾರ್ಮಿಕ ವಿಧಿವಿಧಾನ ಹಾಗೂ ವಿಸರ್ಜನೆ:

​ಸೆಪ್ಟೆಂಬರ್ 23ರಂದು ನವಗ್ರಹ ಹೋಮ, ಸಹಸ್ರ ಮೋದಕ ಗಣಹೋಮ ಹಾಗೂ ಮಧ್ಯಾಹ್ನ ಪೂರ್ಣಹುತಿ ಜರುಗಲಿದೆ. ಸೆಪ್ಟೆಂಬರ್ 24ರ ಸಂಜೆ 6 ಗಂಟೆಯಿಂದ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ರಥದಲ್ಲಿ, ಶ್ರೀ ಶಾರದ ಬ್ರಾಸ್ ಬ್ಯಾಂಡ್ ವಾದ್ಯಗೋಷ್ಠಿಯೊಂದಿಗೆ ಶ್ರೀ ಪ್ರಸನ್ನ ಗಣಪತಿ ಉತ್ಸವ ನಡೆಯಲಿದೆ. ರಾತ್ರಿ 10:30ಕ್ಕೆ ಚಂದ್ರವಳ್ಳಿ ಕರೆಯಲ್ಲಿ ಗಣಪತಿ ವಿಸರ್ಜನಾ ಮಹೋತ್ಸವ ಸಂಪನ್ನಗೊಳ್ಳಲಿದೆ ಎಂದು ಎಲ್.ಎನ್. ರಾಜಕುಮಾರ್ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *