ರಾಜಕೀಯ ಲಾಭ,ಸಚಿವ ಸಂಪುಟ,ಖಾತೆ ಹಂಚಿಕೆಯಲ್ಲೇ ಕಾಲಹರಣ, ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ.
ಚಿತ್ರದುರ್ಗ ಜು. 29
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ರಾಜ್ಯದಲ್ಲಿ ಮಳೆಯಾಗದೆ ಬೆಳೆಗಳು ಒಣಗಿ ರೈತರು ಸಂಕಷ್ಟದಲ್ಲಿದ್ದರೂ, ಸರ್ಕಾರ ಇದುವರೆಗೆ ರಾಜ್ಯವನ್ನು ಬರಪೀಡಿತ ಎಂದು ಘೋಷಿಸದಿರುವುದು ಸರ್ಕಾರದ ನಿರ್ಲಕ್ಷ್ಯ ಮತ್ತು ರೈತ ವಿರೋಧಿ ಧೋರಣೆಯನ್ನು ತೋರಿಸುತ್ತದೆ ಎಂದು ಮಾಜಿ ಕಂದಾಯ ಸಚಿವ ಹಾಗೂ ಶಾಸಕರು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ರಾಜಕೀಯ ಲಾಭ ಹಾಗೂ ಸಚಿವ ಸಂಪುಟ ಮತ್ತು ಖಾತೆ ಹಂಚಿಕೆಯಲ್ಲೇ ಕಾಲಹರಣ ಮಾಡುತ್ತಿದ್ದು, ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಭೀಕರ ಅಭಾವ ಪರಿಸ್ಥಿತಿ ನಿರ್ಮಾಣವಾಗಿದ್ದರೂ ರಾಜ್ಯ ಸರ್ಕಾರ ಇದುವರೆಗೂ ಬರಗಾಲ ಎಂದು ಘೋಷಣೆ ಮಾಡದೆ ನಿರ್ಲಕ್ಷ್ಯ ವಹಿಸಿದೆ ಹಿಂದಿನ ಸರ್ಕಾರದ ಅವಧಿಯಲ್ಲಿ ಎನ್‍ಡಿಆರ್‍ಎಫ್ ನಿಯಮಗಳಿಗಿಂತ ದುಪ್ಪಟ್ಟು ಅಂದರೆ 8,000 ರೂಪಾಯಿ ಇದ್ದ ಪರಿಹಾರವನ್ನು 13,000 ರೂಪಾಯಿಗೆ ಹೆಚ್ಚಿಸಿ ತಕ್ಷಣವೇ ವಿತರಿಸಲಾಗಿತ್ತು. ಆದರೆ ಪ್ರಸ್ತುತ ಸರ್ಕಾರವು ಬರ ಘೋಷಣೆ ಮಾಡದೆ ಕೇಂದ್ರ ಸರ್ಕಾರಕ್ಕೆ 10,000 ಕೋಟಿ ರೂಪಾಯಿ ಅನುದಾನ ನೀಡುವಂತೆ ಕೇಳುತ್ತಿರುವುದು ಯಾವ ಕಾನೂನಿನಡಿಯಲ್ಲಿದೆ ಎಂದು ಪ್ರಶ್ನಿಸಿದರು. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಕೇಂದ್ರದಿಂದ ಬರುವ ಎಸ್‍ಡಿಆರ್‍ಎಫ್ ಹಣಕ್ಕೆ ರಾಜ್ಯ ಸರ್ಕಾರದ ಪಾಲನ್ನು (ಮ್ಯಾಚಿಂಗ್ ಗ್ರಾಂಟ್) ಸೇರಿಸಿ ರೈತರಿಗೆ ವಿತರಿಸಲು ಸರ್ಕಾರಕ್ಕೆ ಏನು ತೊಂದರೆ ಎಂದು ವಾಗ್ದಾಳಿ ನಡೆಸಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು ಮೂರು ಲಕ್ಷ ಎಕರೆಗಿಂತಲೂ ಹೆಚ್ಚು ಜಮೀನಿದ್ದು, ಕೇವಲ ಶೇ. 19 ರಷ್ಟು (ಸುಮಾರು 60,000 ಎಕರೆ) ಮಾತ್ರ ಬಿತ್ತನೆಯಾಗಿದೆ. ಉಳಿದ ಶೇ. 81 ರಷ್ಟು ಜಮೀನಿನಲ್ಲಿ ಬಿತ್ತನೆಯೇ ಆಗಿಲ್ಲ. ಬಿತ್ತನೆ ಮಾಡಿದ ಬೀಜಗಳ ಹಣವನ್ನಾದರೂ ನೀಡಲಿ ಎಂದು ರೈತರು ಬಿತ್ತನೆ ಬೀಜಗಳನ್ನು ವಾಪಸ್ ನೀಡುತ್ತಿದ್ದಾರೆ ಎಂದು ತಿಳಿಸಿದ ಅವರು. ತಾಲೂಕು, ಹೋಬಳಿ ಹಾಗೂ ಜಿಲ್ಲಾವಾರು ಬೆಳೆ ಹಾನಿಯ ನಿಖರವಾದ ಅಂಕಿ-ಅಂಶಗಳು ಅಧಿಕಾರಿಗಳ ಬಳಿ ಇಲ್ಲ ಹಾಗೂ ಕುಡಿಯುವ ನೀರು ಮತ್ತು ಮೇವಿನ ಪೂರೈಕೆಗೆ ಜಿಲ್ಲಾಧಿಕಾರಿಗಳಿಗೆ ಯಾವುದೇ ಸೂಕ್ತ ನಿರ್ದೇಶನ ನೀಡಿಲ್ಲ ಎಂದು ಆರೋಪಿಸಿದರು.
ಜಿಲ್ಲಾಡಳಿತ ಹಾಗೂ ಅಧಿಕಾರಿಗಳ ಬಳಿ ಬೆಳೆ ಹಾನಿ ಮತ್ತು ಮಳೆ ಕೊರತೆಯ ಕುರಿತು ಯಾವುದೇ ಖಚಿತ ಅಂಕಿ-ಅಂಶಗಳಿಲ್ಲ, ಎಲ್ಲವೂ ಅಂದಾಜು ಲೆಕ್ಕದಲ್ಲಿದೆ ಎಂದು ಟೀಕಿಸಿದ ಅವರು, ಗೋಶಾಲೆಗಳನ್ನು ತೆರೆಯಲು ಅಥವಾ ಕುಡಿಯುವ ನೀರು ಹಾಗೂ ಮೇವಿನ ಅಭಾವ ಎದುರಿಸಲು ಆಡಳಿತ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆಪಾದಿಸಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವಾಗಿ ಸರ್ಕಾರ ಪ್ರತಿ ತಾಲೂಕಿಗೆ ಕೇವಲ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಸುಮಾರು 300 ಹಳ್ಳಿಗಳಿರುವ ತಾಲೂಕಿನಲ್ಲಿ 10 ಲಕ್ಷ ವೆಚ್ಚದ ಬೋರ್‍ವೆಲ್ ಕೊರೆಸಿದರೆ ಕೇವಲ 8-9 ಹಳ್ಳಿಗಳಿಗೆ ಮಾತ್ರ ನೀರು ಸಿಗುತ್ತದೆ, ಉಳಿದ ಹಳ್ಳಿಗಳ ಗತಿಯೇನು ಎಂದು ಪ್ರಶ್ನಿಸಿ, ಕನಿಷ್ಠ 50 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದಲ್ಲದೆ, ಗೃಹಲಕ್ಷ್ಮಿ ಯೋಜನೆ ಸೇರಿದಂತೆ ವಿವಿಧ ಪಿಂಚಣಿ ಹಾಗೂ ಧನಸಹಾಯ ಪಾವತಿಗಳು ಬಾಕಿ ಉಳಿದಿದ್ದು, ಸರ್ಕಾರದಲ್ಲಿ ಹಣದ ಅಭಾವವಿರುವುದೇ ಬರ ಘೋಷಣೆ ಮಾಡಲು ವಿಳಂಬ ಮಾಡುತ್ತಿರುವುದಕ್ಕೆ ಕಾರಣ ಎಂದು ಟೀಕಿಸಿದರು.
ದೇಶದಲ್ಲೇ ಅತ್ಯಂತ ವೇಗವಾಗಿ ಬರದ ಪ್ರಭಾವಕ್ಕೆ ಒಳಗಾಗುವ ಪ್ರದೇಶಗಳಲ್ಲಿ ಚಿತ್ರದುರ್ಗ ಎರಡನೇ ಸ್ಥಾನದಲ್ಲಿದೆ ಶೇಕಡಾ 81 ರಷ್ಟು ಜಮೀನಿನಲ್ಲಿ ಬಿತ್ತನೆಯೇ ಆಗಿಲ್ಲ, ಬಿತ್ತನೆಯಾದ ಶೇಕಡಾ 19 ರಷ್ಟು ಬೆಳೆಯೂ ಮಳೆಯಿಲ್ಲದೆ ನಾಶವಾಗಿದೆ ಹೀಗಿದ್ದರೂ ಸರ್ಕಾರ ಬರ ಘೋಷಣೆ ಮಾಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ಕೇಂದ್ರ ಸರ್ಕಾರದಿಂದ ಎಸ್‍ಡಿಆರ್‍ಎಫ್ ನಿಧಿ ಬಿಡುಗಡೆಯಾಗುತ್ತಿದ್ದರೂ, ರಾಜ್ಯ ಸರ್ಕಾರ ತನ್ನ ಪಾಲಿನ ಮ್ಯಾಚಿಂಗ್ ಗ್ರಾಂಟ್ ಸೇರಿಸಿ ರೈತರಿಗೆ ಏಕೆ ಹಂಚಿಲ್ಲ ಎಂದು ಪ್ರಶ್ನಿಸಿದ ಅವರು. ಸರ್ಕಾರವು ತಕ್ಷಣವೇ ಕಾವೇರಿ ನೀರು ಹರಿಸುವುದನ್ನು ತಡೆದು, ಚಿತ್ರದುರ್ಗ ಸೇರಿದಂತೆ ರಾಜ್ಯದ ಬರಪೀಡಿತ ಜಿಲ್ಲೆಗಳಲ್ಲಿ ತಕ್ಷಣವೇ `ಬರಗಾಲ’ ಎಂದು ಘೋಷಿಸಬೇಕು. ರೈತರಿಗೆ ಪರಿಹಾರ ಧನ ವಿತರಿಸುವುದರ ಜೊತೆಗೆ ಕುಡಿಯುವ ನೀರು, ಗೋಶಾಲೆ ಹಾಗೂ ಮೇವಿನ ವ್ಯವಸ್ಥೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಲಾಯಿತು.
ಕಾವೇರಿ ನೀರಿನ ವಿಚಾರವಾಗಿ ಮಾತನಾಡಿದ ಅವರು, ಕಾವೇರಿ ಪ್ರಾಧಿಕಾರವು 3,500 ಕ್ಯೂಸೆಕ್ಸ್ ನೀರು ಬಿಡುವಂತೆ ನೀಡಿರುವ ಆದೇಶಕ್ಕೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ ತಮಿಳುನಾಡಿಗೆ ನೀರು ಹರಿಸುವ ವಿಚಾರದಲ್ಲಿ ಸರ್ಕಾರವು ರಾಜ್ಯದ ಹಿತಾಸಕ್ತಿಯನ್ನು ಬಲಿ ನೀಡುತ್ತಿದೆ ಕಾವೇರಿ ಪ್ರಾಧಿಕಾರದ ಮುಂದೆ ರಾಜ್ಯ ಸರ್ಕಾರ ತನ್ನ ಸ್ಥಿತಿಯನ್ನು ಸಮರ್ಥವಾಗಿ ಮಂಡಿಸುವಲ್ಲಿ ವಿಫಲವಾಗಿದೆ ತಮಿಳುನಾಡಿಗೆ ಪ್ರತಿದಿನ ನೀರು ಹರಿಸಲು ಸಮ್ಮತಿಸಿರುವುದು ರಾಜ್ಯದ ರೈತರಿಗೆ ಎಸಗಿದ ದ್ರೋಹ ಎಂದ ಅವರು, ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಕಾವೇರಿ ಮತ್ತು ಬರ ಪರಿಸ್ಥಿತಿ ಕುರಿತು ಸರ್ಕಾರದ ವಿರುದ್ಧ ನಿಲುವಳಿ ಸೂಚನೆ ತಂದು ಕಟ್ಟುನಿಟ್ಟಿನ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ತಮ್ಮ ನೇತೃತ್ವದ ತಂಡವು ಎರಡು ದಿನಗಳ ಕಾಲ ಈ ಜಿಲ್ಲೆಗಳಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಂಡಿರುವುದಾಗಿ ತಿಳಿಸಿದ ಅವರು, ಈಗಾಗಲೇ ಪ್ರಥಮ ಹಂತದಲ್ಲಿ ಮೈಸೂರು, ಕೆಆರ್‍ಎಸ್ ಹಾಗೂ ಮಂಡ್ಯ ಜಿಲ್ಲೆಗಳ ಒಣಗುತ್ತಿರುವ ಕಬ್ಬಿನ ಗದ್ದೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿತ್ತು ಎರಡನೇ ಹಂತದ ಅಧ್ಯಯನದ ಭಾಗವಾಗಿ ಹಿರಿಯೂರು ತಾಲೂಕಿನ ಸೋರಗೊಂಡನಹಳ್ಳಿ ಗ್ರಾಮದ ರೈತರ ಹೊಲಗಳಿಗೆ ಭೇಟಿ ನೀಡಿದ್ದಾಗಿ ತಿಳಿಸಿದರು. 13 ಎಕರೆ ಕಪ್ಪು ನೆಲದಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಿ 55 ದಿನಗಳಾಗಿದ್ದರೂ ಮಳೆಯಿಲ್ಲದೆ ಬೆಳೆ ಒಣಗಿ ಹೋಗಿದೆ. ಮಳೆ ಬಂದರೂ ಬೆಳೆ ಕೈಗೆ ಸಿಗದ ಸ್ಥಿತಿ ನಿರ್ಮಾಣವಾಗಿದ್ದು, ರೈತರು ಕಣ್ಣೀರಿಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಪತ್ರಿಕಾ ಗೋಷ್ಟಿಯಲ್ಲಿ ಶಾಸಕರುಗಳಾದ ಭೃರತಿ ಬಸವರಾಜು, ಹರೀಶ್, ಕೃಷ್ಣನಾಯಕ್, ಚಂದ್ರ ಲಮಾಣಿ, ವಿಧಾನ ಪರಿಷತ್ಸ ಸದಸ್ಯರಾದ ಕೆ.ಎಸ್.ನವೀನ್, ಮಾಜಿ ಶಾಸಕರುಗಳಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ರಾಜೇಶ್ ಬುರುಡೆಕಟ್ಟೆ, ಜಗದೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್, ಮೋಹನ್,ರೈತ ಮೋರ್ಚಾದ ಮಲ್ಲಿಕಾರ್ಜನ್, ಸಂಪತ್ ಕುಮಾರ್ ವಕ್ತಾರಣಾಗರಾಜ್ ಬೇದ್ರೇ, ತಿಪ್ಪೇಸ್ವಾಮಿ, ಯಶವಂತ ಸೇರಿದಂತೆ ಇತರರು ಉಪಸ್ಥಿತರಿದ್ದರು