ಗಣಿಲಾರಿಗಳ ಸಂಚಾರಕ್ಕೆ ಕಡಿವಾಣ, ರಸ್ತೆ ದುರಸ್ತಿಗೆ ಆಗ್ರಹ: ಭೀಮಸಮುದ್ರದಲ್ಲಿ ರೈತರ ಅನಿರ್ದಿಷ್ಟ ಸತ್ಯಾಗ್ರಹ.

ರಸ್ತೆ ನಿರ್ಮಾಣ ಮಾಡದಿದ್ದರೆ ರಸ್ತೆಯಲ್ಲೇ ಉರುಳು ಸೇವೆ: ರೈತ ಸಂಘದ ಅಧ್ಯಕ್ಷ ಶಂಕರಮೂರ್ತಿ ಎಚ್ಚರಿಕೆ.

ವರದಿ ಮತ್ತು ಫೋಟೋ ಕೃಪೆ ವೇದಮೂರ್ತಿ ಭೀಮಸಮುದ್ರ ಮೊ : 8088076203

ಚಿತ್ರದುರ್ಗ:

ಭೀಮಸಮುದ್ರ ಗ್ರಾಮದಲ್ಲಿ ಹದಗೆಟ್ಟಿರುವ ರಸ್ತೆ ದುರಸ್ತಿ ಹಾಗೂ ಗಣಿಲಾರಿಗಳ ಸಂಚಾರ ನಿಯಂತ್ರಣಕ್ಕೆ ಆಗ್ರಹಿಸಿ ಭೀಮಸಮುದ್ರ ರೈತ ಸಂಘ ಮತ್ತು ಗಣಿವಾದಿತ ಪರಿಸರ ಹಾಗೂ ಜನ ಬದುಕಿನ ಪುನಶ್ಚೇತನ ಹೋರಾಟ ಸಮಿತಿ ವತಿಯಿಂದ ಗುರುವಾರದಿಂದ ಅನಿರ್ದಿಷ್ಟ ಸತ್ಯಾಗ್ರಹ ಆರಂಭಿಸಲಾಗಿದೆ.

ಭೀಮಸಮುದ್ರ ಗ್ರಾಮದ ವಿ.ಪಾಳ್ಯ ಗೇಟ್‌ನಿಂದ ಭೀಮಸಮುದ್ರದವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಗ್ರಾಮಸ್ಥರು ಹಾಗೂ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ರಸ್ತೆಯಲ್ಲಿ ಭಾರಿ ಪ್ರಮಾಣದ ಗಣಿಲಾರಿಗಳು ಸಂಚರಿಸುತ್ತಿರುವುದರಿಂದ ರಸ್ತೆ ಮತ್ತಷ್ಟು ಹದಗೆಡುತ್ತಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.

ವಿ.ಪಾಳ್ಯ ಗೇಟ್‌ನಿಂದ ಭೀಮಸಮುದ್ರದವರೆಗೆ ರಸ್ತೆ ದುರಸ್ತಿ ಮಾಡಬೇಕು ಹಾಗೂ ಗ್ರಾಮದಲ್ಲಿ ಗಣಿಲಾರಿಗಳ ಸಂಚಾರಕ್ಕೆ ಕಡಿವಾಣ ಹಾಕಬೇಕು ಎಂಬುದು ಹೋರಾಟಗಾರರ ಪ್ರಮುಖ ಬೇಡಿಕೆಯಾಗಿದೆ. ರಸ್ತೆ ದುರಸ್ತಿಗೆ ಆಗ್ರಹಿಸಿ ಭೀಮಸಮುದ್ರ ರೈತ ಸಂಘದ ವತಿಯಿಂದ ಈ ಹಿಂದೆ ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ನಡೆಸಿ ಮನವಿ ಸಲ್ಲಿಸಲಾಗಿತ್ತು. ಆದರೂ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಅನಿರ್ದಿಷ್ಟ ಸತ್ಯಾಗ್ರಹ ಆರಂಭಿಸಲಾಗಿದೆ ಎಂದು ಸಂಘದ ಮುಖಂಡರು ತಿಳಿಸಿದ್ದಾರೆ.

ಗಣಿಲಾರಿಗಳ ಸಂಚಾರದಿಂದ ರಸ್ತೆ ಹಾಳಾಗಿದೆ

ಭೀಮಸಮುದ್ರ ರೈತ ಸಂಘದ ಅಧ್ಯಕ್ಷ ಶಂಕರಮೂರ್ತಿ ಮಾತನಾಡಿ, ರೈತರು ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್‌ಗಳನ್ನು ಸಂಚರಿಸುವ ರಸ್ತೆಯಲ್ಲಿ ಗಣಿಲಾರಿಗಳು ಭಾರಿ ಪ್ರಮಾಣದ ಭಾರ ಹೊತ್ತು ಸಾಗುತ್ತಿರುವುದರಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದರು. “ರೈತರ ಎತ್ತಿನಗಾಡಿ ಮತ್ತು ಟ್ರ್ಯಾಕ್ಟರ್‌ಗಳ ಸಂಚಾರಕ್ಕೆ ಅನುಕೂಲವಾಗುವಂತೆ ನಿರ್ಮಿಸಿರುವ ರಸ್ತೆಯಲ್ಲಿ ಗಣಿಲಾರಿಗಳು ಅತಿಯಾದ ಭಾರ ಹೊತ್ತು ಸಂಚರಿಸುತ್ತಿವೆ. ಇದರಿಂದ ರಸ್ತೆ ನಿರಂತರವಾಗಿ ಹಾಳಾಗುತ್ತಿದೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಈ ಸಮಸ್ಯೆಯ ಬಗ್ಗೆ ಗಮನ ಹರಿಸಬೇಕು,” ಎಂದು ಒತ್ತಾಯಿಸಿದರು.

ರಸ್ತೆ ನಿರ್ಮಾಣದ ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ಅಗತ್ಯವಾದರೆ ರಸ್ತೆಯಲ್ಲೇ ಉರುಳು ಸೇವೆ ಮಾಡುವಂತಹ ಹೋರಾಟಕ್ಕೂ ರೈತರು ಸಿದ್ಧರಿದ್ದಾರೆ ಎಂದು ಶಂಕರಮೂರ್ತಿ ಎಚ್ಚರಿಕೆ ನೀಡಿದರು.

ರೈತರ ಹೋರಾಟದ ಸಂದರ್ಭದಲ್ಲಿ ಪೊಲೀಸರು ಕೆಲ ರೈತರನ್ನು ವಶಕ್ಕೆ ಪಡೆದು ರಾತ್ರಿ ವೇಳೆ ಬಿಡುಗಡೆ ಮಾಡಿರುವ ಘಟನೆಯನ್ನೂ ಅವರು ಪ್ರಸ್ತಾಪಿಸಿದರು. ಯಾವುದೇ ರೀತಿಯ ತೊಂದರೆ ಎದುರಾದರೂ ರಸ್ತೆ ನಿರ್ಮಾಣವಾಗುವವರೆಗೆ ಸತ್ಯಾಗ್ರಹದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮೂಲಸೌಕರ್ಯಕ್ಕಾಗಿ ಹೋರಾಟ ಅನಿವಾರ್ಯ

ಭೀಮಸಮುದ್ರ ರೈತ ಸಂಘದ ಮುಖಂಡ ಎಸ್. ಶೈಲೇಂದ್ರ ಪಟೇಲ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ಹಲವು ದಶಕಗಳು ಕಳೆದರೂ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಮತ್ತು ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ ಎಂದು ಹೇಳಿದರು.

ಗ್ರಾಮದಿಂದ ಸುಮಾರು 200 ಮೀಟರ್ ದೂರದಲ್ಲಿ ಪರ್ಯಾಯ ರಸ್ತೆ ನಿರ್ಮಿಸಿ ಗಣಿಲಾರಿಗಳನ್ನು ಸಂಚರಿಸುವಂತೆ ಮಾಡಬಹುದಾಗಿದೆ. ಆದರೆ ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಇದುವರೆಗೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ. ಹೀಗಾಗಿ ಸತ್ಯಾಗ್ರಹದ ಹಾದಿ ಹಿಡಿಯುವುದು ಅನಿವಾರ್ಯವಾಗಿದೆ ಎಂದು ಹೇಳಿದರು. ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಭೀಮಸಮುದ್ರ ಗ್ರಾಮದ ರಸ್ತೆ ಸಮಸ್ಯೆ ಮತ್ತು ಗಣಿಲಾರಿಗಳ ಸಂಚಾರದ ಬಗ್ಗೆ ತಕ್ಷಣ ಗಮನ ಹರಿಸಿ, ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಶೈಲೇಂದ್ರ ಪಟೇಲ್ ಒತ್ತಾಯಿಸಿದರು.

ಸತ್ಯಾಗ್ರಹದಲ್ಲಿ ಭೀಮಸಮುದ್ರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು, ಸಾರ್ವಜನಿಕರು, ವಿ.ಪಾಳ್ಯ, ನಲ್ಲಿಕಟ್ಟೆ ಹಾಗೂ ಭೀಮಸಮುದ್ರದ ರೈತ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *