ಚಿತ್ರದುರ್ಗ ಆ. 11
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಭೋವಿ ಅಭಿವೃದ್ಧಿ ನಿಗಮವು ಸಮುದಾಯದ ಏಳಿಗೆಗಾಗಿ ಜಾರಿಗೆ ತಂದಿರುವ ವಿವಿಧ ಸೌಲಭ್ಯಗಳು ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿ ಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಸಚಿವರು, ಚಿತ್ರದುರ್ಗ ಜಿಲ್ಲಾ ಪಕೃತಿ ವಿಕೋಪ ಪರಿಹಾರ ಕಾರ್ಯಗಳ ಉಸ್ತುವಾರಿ ಸಚಿವರಾದ ಟಿ.ರಘುಮೂರ್ತಿ ಕರೆ ನೀಡಿದರು.
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ ಭೋವಿ ಜನಾಂಗದ ನಿರುದ್ಯೋಗ ಯುವತಿಯರಿಗೆ 75 ದಿನಗಳ ತರಬೇತಿ ಕಾರ್ಯಕ್ರಮದ ನಂತರ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಸೋಮವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಉಚಿತ ಟೈಲರಿಂಗ್ ಯಂತ್ರೋಪಕರಣ ವಿತರಣೆ ಕಾರ್ಯಕ್ರಮದಲ್ಲಿ ತರಬೇತಿಯನ್ನು ಪಡೆದ ಸಮುದಾಯದ ಯುವತಿಯರಿಗೆ ಹೊಲಿಗೆ ಯಂತ್ರವನ್ನು ವಿತರಣೆ ಮಾಡಿ ಮಾತನಾಡಿದ ಸಚಿವರು. ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ರಾಜ್ಯದಾದ್ಯಂತ ಸುಮಾರು 18 ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ನಿಗಮದ ಯೋಜನೆಗಳನ್ನು ಹಾಗೂ ಜನಾಂಗದ ಸಬಲೀಕರಣದ ಕುರಿತು ಜಾಗೃತಿ ಮೂಡಿಸುತ್ತಿರುವುದನ್ನು ಸಚಿವರು ಶ್ಲಾಘಿಸಿ. ನಿಗಮಕ್ಕೆ ಲಭ್ಯವಿರುವ ಅನುದಾನ ಮತ್ತು ಸರ್ಕಾರದ ನೆರವನ್ನು ಸರಿಯಾದ ರೀತಿಯಲ್ಲಿ ಸಮಾಜದ ಕಟ್ಟಕಡೆಯ ಬಡವರಿಗೆ ತಲುಪಿಸುವ ಕೆಲಸ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
ರಾಜ್ಯ ಸರ್ಕಾರದ ಐದು ಮುಖ್ಯ ಗ್ಯಾರಂಟಿ ಯೋಜನೆಗಳ ಜೊತೆಗೆ, ಭೋವಿ ಅಭಿವೃದ್ಧಿ ನಿಗಮದಿಂದ ಜನಾಂಗದ ಏಳಿಗೆಗಾಗಿ ‘ಆರು ಗ್ಯಾರಂಟಿ’ಗಳ ಮಾದರಿಯಲ್ಲಿ ಯೋಜನೆಗಳನ್ನು ತಲುಪಿಸಲಾಗುತ್ತಿದೆ. ಅವುಗಳೆಂದರೆ ಗಂಗಾ ಕಲ್ಯಾಣ ಯೋಜನೆ, ಉದ್ಯಮಶೀಲತೆ ಅಭಿವೃದ್ಧಿ ಯೋಜನೆ ಸ್ವಾವಲಂಬಿ ಸಾರಥಿ ಯೋಜನೆ ಹೈನುಗಾರಿಕೆ ಯೋಜನೆ ಭೂ ಒಡೆತನ ಯೋಜನೆ ನೇರ ಸಾಲ ಯೋಜನೆಗಳಾಗಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ ನಿಗಮದ ವತಿಯಿಂದ 150 ಜನರಿಗೆ 75 ದಿನಗಳ ಹೊಲಿಗೆ ಹಾಗೂ ವೃತ್ತಿಪರ ತರಬೇತಿಯನ್ನು ನೀಡಲಾಗಿದೆ ಕೇವಲ ಸಾಲ ಅಥವಾ ಹಣ ನೀಡುವ ಬದಲು ಕೌಶಲ್ಯ ಕಲಿಸಿ ಸ್ವಾವಲಂಬಿಗಳನ್ನಾಗಿ ಮಾಡುವುದು ಹೆಚ್ಚು ಉಪಯುಕ್ತವಾದದ್ದು ತರಬೇತಿ ಪಡೆದ ಮಹಿಳೆಯರು ಸ್ವಂತ ಉದ್ಯೋಗ ಪ್ರಾರಂಭಿಸಬಹುದು ಅಥವಾ ಗಾರ್ಮೆಂಟ್ಸ್ ಹಾಗೂ ಇತರ ಕೈಗಾರಿಕೆಗಳಲ್ಲಿ ಉದ್ಯೋಗ ಕಂಡುಕೊಳ್ಳಬಹುದು ಎಂದು ಸಚಿವರು ತಿಳಿಸಿದರು.
ಚಳ್ಳಕೆರೆ ತಾಲೂಕಿನ ಮುದ್ದನಹಳ್ಳಿ ಸಮೀಪದ ಬಳ್ಳಾರಿ ರಸ್ತೆಯಲ್ಲಿ ಅಂತಾರಾಷ್ಟ್ರೀಯ ಶಾಯಿ ಕಂಪನಿಗೆ 20 ಎಕರೆ ಜಮೀನು ನೀಡಲಾಗಿದ್ದು, ಕಾಂಪೌಂಡ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಅಲ್ಲಿ ಗಾರ್ಮೆಂಟ್ಸ್ ತರಬೇತಿ ನೀಡಿ ಸುಮಾರು 8,000 ನಿರುದ್ಯೋಗಿಗಳಿಗೆ ಕೆಲಸ ನೀಡುವ ಯೋಜನೆ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದ ಸಚಿವರು ಮಹಿಳೆಯರು ಮತ್ತು ಯುವತಿಯರು ವೃತ್ತಿ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ತಮ್ಮ ಸಂಸಾರಕ್ಕೆ ಆಸರೆಯಾಗಬೇಕು ಹಾಗೂ ಸ್ವಾವಲಂಬಿ ಜೀವನ ನಡೆಸಬೇಕು ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ಇನ್ನಷ್ಟು ಗಂಭೀರವಾಗಿ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕರಾದ ಕೆ.ಸಿ.ವಿರೇಂದ್ರ ಪಪ್ಪಿ ಮಾತನಾಡಿ, ಮಹಿಳೆಯರು ಹಾಗೂ ಸಾರ್ವಜನಿಕರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂಬ ದೃಷ್ಟಿಯಿಂದ ಡಾ. ರಾಮಪ್ಪ ಉಚಿತ ಹೊಲಿಗೆ ಯಂತ್ರಗಳನ್ನು ನೀಡುತ್ತಿರುವುದಷ್ಟೇ ಅಲ್ಲದೆ, ಅವುಗಳ ಸಮರ್ಪಕ ಬಳಕೆಗೆ ತರಬೇತಿಯನ್ನು ಸಹ ಒದಗಿಸಿದ್ದಾರೆ ಕೇವಲ ಉಚಿತವಾಗಿ ನೀಡುವುದಕ್ಕಿಂತ, ತರಬೇತಿ ನೀಡಿ ಸ್ವಾವಲಂಬಿ ಬದುಕಿಗೆ ದಾರಿ ಮಾಡಿಕೊಡುವುದು ಅವರ ಮುಖ್ಯ ಉದ್ದೇಶವಾಗಿದೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬಂತೆ, ಮಹಿಳೆಯರು ಆರ್ಥಿಕವಾಗಿ ಸಬಲರಾದರೆ ಕುಟುಂಬ ಹಾಗೂ ಸಮಾಜ ಎರಡೂ ವೃದ್ಧಿಸುತ್ತವೆ ಜಿಲ್ಲೆಯಾದ್ಯಂತ ಸುಮಾರು 150 ಜನರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸುವ ಗುರಿ ಹೊಂದಲಾಗಿದ್ದು, ನೂರಾರು ಕುಟುಂಬಗಳು ಇದರಿಂದ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ನೆರವಾಗಲಿದೆ. ಭಾರತದ ಮಾರುಕಟ್ಟೆಯಲ್ಲಿ ಉದ್ಯೋಗ ಮತ್ತು ಉತ್ಪಾದನೆಗೆ ಹೆಚ್ಚಿನ ಬೇಡಿಕೆ ಇದ್ದು, ಹೊಲಿಗೆ ತರಬೇತಿ ಪಡೆದವರು ಮುಂಬರುವ ದಿನಗಳಲ್ಲಿ ಇತರರಿಗೂ ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆಯಬೇಕು ಎಂದು ಕರೆ ನೀಡಲಾಯಿತು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಭೋವಿ ನಿಗಮದ ಮೂಲಕ ಸುಮಾರು 32 ಜನರಿಗೆ 1 ಲಕ್ಷಕ್ಕೂ ಹೆಚ್ಚಿನ ನೇರ ಸಾಲ ಸೌಲಭ್ಯ. 16 ಜನರಿಗೆ ಟ್ಯಾಕ್ಸಿ/ವಾಹನ ಚಾಲನೆಗಾಗಿ ಕಾರುಗಳ ವಿತರಣೆ. 40 ಜನರಿಗೆ ಆರ್ಥಿಕ ನೆರವು/ಸಹಾಯಧನ. 41 ಜನರಿಗೆ 1 ಲಕ್ಷಕ್ಕೂ ಹೆಚ್ಚಿನ ಆರ್ಥಿಕ ನೆರವು. ಪ್ರೇರಣಾ ಯೋಜನೆಯಡಿ 20 ಜನರಿಗೆ ಸೌಲಭ್ಯ. ಗಂಗಾ ಕಲ್ಯಾಣ ಯೋಜನೆಯಲ್ಲಿ 13 ಜನರಿಗೆ ಉಚಿತವಾಗಿ ಸೌಲಭ್ಯ. ದೂರಕಿದೆ ಹಣಕಾಸಿನ ತಾತ್ಕಾಲಿಕ ನೆರವಿಗಿಂತ ಸ್ವಾವಲಂಬಿ ಜೀವನಕ್ಕೆ ದಾರಿ ಮಾಡಿಕೊಡುವುದು ಶ್ರೇಷ್ಠ. ಭೋವಿ ನಿಗಮ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಲಭ್ಯವಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು, ಪ್ರತಿಯೊಬ್ಬರೂ ಸ್ವಾವಲಂಬಿಗಳಾಗಿ ತಮ್ಮ ಜೀವನವನ್ನು ಮುನ್ನಡೆಸಬೇಕು ಹಾಗೂ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಂ. ರಾಮಪ್ಪ, ಮಾತನಾಡಿ, ಕರ್ನಾಟಕ ಸರ್ಕಾರ ಮತ್ತು ಬೋವಿ ಅಭಿವೃದ್ಧಿ ನಿಗಮದ ಜಂಟಿ ಸಹಯೋಗದೊಂದಿಗೆ ಬಡ ಹಾಗೂ ಕಡುಬಡ ಜನರ ಏಳಿಗೆಗಾಗಿ ಪ್ರಸ್ತುತ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಜೊತೆಗೆ ಬೋವಿ ನಿಗಮದ ವತಿಯಿಂದ ಆರು ವಿಶೇಷ ಗ್ಯಾರಂಟಿಗಳನ್ನು ಸೇರಿಸಿ ಒಟ್ಟು 11 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ವಿಶೇಷವಾಗಿ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಈ ಸೌಲಭ್ಯಗಳು ನೈಜ ಫಲಾನುಭವಿಗಳಿಗೆ ತಲುಪಬೇಕು ಎಂಬ ಉದ್ದೇಶದಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತಿದ್ದು, ಈಗಾಗಲೇ 18 ಜಿಲ್ಲೆಗಳ ಪ್ರವಾಸ ಪೂರ್ಣಗೊಂಡಿದೆ. ಇನ್ನು 13 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಬೇಕಾಗಿದೆ ಎಂದು ಮಾಹಿತಿ ನೀಡಿದರು.
ಉತ್ತರ ಕರ್ನಾಟಕದ ಬೀದರ್, ವಿಜಯಪುರ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಿಗೆ ಹೋಲಿಸಿದರೆ ಇತರ ಪ್ರದೇಶಗಳ ಪರಿಸ್ಥಿತಿ ಉತ್ತಮವಾಗಿದೆ. ಅಲ್ಲಿನ ಜನರಿಗೆ ಕನಿಷ್ಠ ಕೂಲಿ ಕೆಲಸವೂ ಸಿಗದಂತಹ ಕಠಿಣ ಸ್ಥಿತಿ ಇದೆ. ಭೂಮಿ, ವಿದ್ಯೆ ಹಾಗೂ ಸೂಕ್ತ ಉದ್ಯೋಗವಿಲ್ಲದ ಇಂತಹ ಸಮುದಾಯದ ಜನರನ್ನು ಆರ್ಥಿಕವಾಗಿ ಮೇಲೆತ್ತುವುದು ನಿಗಮದ ಪ್ರಮುಖ ಆದ್ಯತೆಯಾಗಿದೆ ಎಂದು ಅವರು ಕಳಕಳಿ ವ್ಯಕ್ತಪಡಿಸಿ ಸ್ವಂತ ಉದ್ಯೋಗ ಮಾಡಲು ಇಚ್ಛಿಸುವವರು ಹಾಗೂ ಗಾರ್ಮೆಂಟ್ಸ್ ಸಂಸ್ಥೆಗಳಲ್ಲಿ ಕೆಲಸ ಬಯಸುವ ಫಲಾನುಭವಿಗಳನ್ನು ಪ್ರತ್ಯೇಕಿಸಿ ಪಟ್ಟಿ ಮಾಡಲಾಗುವುದು. ಗಾರ್ಮೆಂಟ್ಸ್ ಕೆಲಸ ಬಯಸುವವರಿಗೆ ನಿಗಮ ಮತ್ತು ತರಬೇತಿ ಸಂಸ್ಥೆಯ ಜಂಟಿ ಪ್ರಮಾಣಪತ್ರದ ಮೂಲಕ ಶೇ. 100 ರಷ್ಟು ಉದ್ಯೋಗ ಭರವಸೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮಾತ್ರ ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯ. ಬಡ ಕುಟುಂಬಗಳ ಮಕ್ಕಳಿಗೆ ಉಚಿತ ವಸತಿನಿಲಯ (ಹಾಸ್ಟೆಲ್) ಹಾಗೂ ಶಾಲೆಗಳಲ್ಲಿ ಪ್ರವೇಶಾವಕಾಶ ಕಲ್ಪಿಸಲು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪೂರ್ಣ ಅಧಿಕಾರವಿದೆ. ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಮನವಿ ಮಾಡಿ ಬೋವಿ ಅಭಿವೃದ್ಧಿ ನಿಗಮದ ಈ ಗ್ಯಾರಂಟಿ ಯೋಜನೆಗಳು ಹಾಗೂ ವೃತ್ತಿಪರ ತರಬೇತಿಗಳು ಶೋಷಿತ ಮತ್ತು ಬಡ ವರ್ಗದ ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುವ ಜೊತೆಗೆ, ಶೈಕ್ಷಣಿಕ ಪ್ರಗತಿಯ ಮೂಲಕ ಅವರ ಜೀವನಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ರಾಮಪ್ಪ ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಜಿ ವಹಿಸಿದ್ದರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಕೆ.ತಾಜ್ಪೀರ್, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಚಂದ್ರನಾಯ್ಕ ಯು, ವ್ಯವಸ್ಥಾಪಕ ಶಿವಸ್ವಾಮಿ, ಭೋವಿ ಸಮಾಜದ ಅಧ್ಯಕ್ಷ ಕೃಷ್ಣಮೂರ್ತಿ, ನಿವೃತ್ತ ಪ್ರಧ್ಯಾಪಕರಾದ ಲಕ್ಷ್ಮಣ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು. ಮುತ್ತು ರಾಜ್ ನಾಡಗೀತೆಯನ್ನು ಹಾಡಿದರೆ, ಕವಿತಾ ಪ್ರಾರ್ಥಿಸಿದರೆ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ರವಿಕುಮಾರ್ ಸ್ವಾಗತಿಸಿದರು, ನವೀನ್ ಮಸ್ಕಲ್ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.