ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ ಸಡಗರದ ಕೃಷ್ಣ ಜನ್ಮಾಷ್ಟಮಿ: ಸಂಭ್ರಮದಿಂದ ಪಾಲ್ಗೊಂಡ ವಿದ್ಯಾರ್ಥಿಗಳು

ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ ಸೆಪ್ಟೆಂಬರ್ 04 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ಸಡಗರ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು.

ಕೃಷ್ಣ ಜನ್ಮಾಷ್ಟಮಿಯ ಮಹತ್ವ ಹಾಗೂ ವಿಶೇಷತೆ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ಸಂತೋಷ ಮತ್ತು ವೈಭವದಿಂದ ಆಚರಿಸಲಾಗುತ್ತದೆ. ‘ಜನ್ಮ’ ಎಂದರೆ ಹುಟ್ಟು ಹಾಗೂ ‘ಅಷ್ಟಮಿ’ ಎಂದರೆ ಎಂಟನೆಯ ದಿನ. ಭಾದ್ರಪದ ಮಾಸದ ಕೃಷ್ಣ ಪಕ್ಷದ (ಅಂಧಕಾರದ ಹದಿನೈದು ದಿನ) ಎಂಟನೇ ದಿನದಂದು ಭಗವಾನ್ ಶ್ರೀಕೃಷ್ಣನ ಜನನವಾಯಿತು. ಈ ಜನಪ್ರಿಯ ಹಬ್ಬವನ್ನು ‘ಗೋಕುಲಾಷ್ಟಮಿ’ ಹಾಗೂ ‘ಶ್ರೀ ಕೃಷ್ಣ ಜಯಂತಿ’ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ. ಭಗವಾನ್ ಕೃಷ್ಣನ ಜನನದ ಕ್ಷಣವನ್ನು ಸ್ಮರಿಸಲು ಮಧ್ಯರಾತ್ರಿಯ ವಿಶೇಷ ಆಚರಣೆಗಳಿಗಾಗಿ ಶ್ರೀಕೃಷ್ಣನ ದೇವಾಲಯಗಳನ್ನು ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗುತ್ತದೆ.

ಗಣ್ಯರ ನುಡಿನಮನ ಹಾಗೂ ಉಪದೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಇಸ್ಕಾನ್ ಸಂಸ್ಥೆಯ ಪ್ರವಚನಕಾರರಾದ ಎ.ಸಿ. ವಿಶ್ವನಾಥ್ ಅವರು ಉಪಸ್ಥಿತರಿದ್ದರು. ಅವರು ಶ್ರೀ ಕೃಷ್ಣನ ಜನ್ಮ ವೃತ್ತಾಂತವನ್ನು ಎಳೆಎಳೆಯಾಗಿ ವಿವರಿಸಿದರು. ಅಲ್ಲದೆ, ಪುರಾಣಗಳ ನಾಲ್ಕು ಯುಗಗಳಾದ ಕೃತ, ತ್ರೇತಾ, ದ್ವಾಪರ ಹಾಗೂ ಕಲಿಯುಗಗಳ ಬಗ್ಗೆ ನೆರೆದಿದ್ದವರಿಗೆ ಸಂಕ್ಷಿಪ್ತ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಸಂಸ್ಥೆಯ ವ್ಯವಸ್ಥಾಪಕ ಕಾರ್ಯದರ್ಶಿ ಬಿ. ವಿಜಯಕುಮಾರ್ ಅವರು ಮಾತನಾಡಿ, “ಭಗವಾನ್ ಶ್ರೀ ಕೃಷ್ಣ ಎಂದರೆ ಹರ್ಷ ಮತ್ತು ಆನಂದದ ಸಂಕೇತ. ಆತನ ನಾಮಸ್ಮರಣೆ ಮಾಡುವುದರಿಂದ ಭಕ್ತರ ಮನಸ್ಸಿಗೆ ಅತೀವ ನೆಮ್ಮದಿ ದೊರೆಯುತ್ತದೆ,” ಎಂದರು.

ಸಂಸ್ಥೆಯ ಮುಖ್ಯ ಶಿಕ್ಷಕರಾದ ಶ್ರೀ ತಿಪ್ಪೇಸ್ವಾಮಿ ಎನ್.ಜಿ ಅವರು ತಮ್ಮ ಭಾಷಣದಲ್ಲಿ, “ಶ್ರೀಕೃಷ್ಣನು ಜಗತ್ತನ್ನು ಸಲಹುವಾತ ಹಾಗೂ ಕಷ್ಟ ಕಾರ್ಪಣ್ಯಗಳ ನಿವಾರಕ. ಆತನ ದಯೆ ಇದ್ದರೆ ಇಡೀ ಜಗತ್ತನ್ನೇ ಗೆಲ್ಲಬಹುದು. ಕೃಷ್ಣನು ಕೇವಲ ದೇವರಾಗಿರದೆ ಗುರುವಾಗಿಯೂ, ಸ್ನೇಹಿತನಾಗಿಯೂ, ಧರ್ಮ ಪ್ರವರ್ತಕ, ವಾಗ್ಮಿ ಹಾಗೂ ತಂತ್ರಜ್ಞಾನಿಯಾಗಿ ಇಡೀ ವಿಶ್ವಕ್ಕೆ ಭಗವದ್ಗೀತೆಯ ಸಾರಾಂಶವನ್ನು ಉಣಬಡಿಸಿದ ಶ್ರೇಷ್ಠ ವ್ಯಕ್ತಿ. ಪೋಷಕರು ಪ್ರತಿದಿನ ರಾತ್ರಿ ಮಲಗುವ ಮುನ್ನ ಮಕ್ಕಳಿಗೆ ನೀತಿಕಥೆಗಳನ್ನು ಹೇಳಬೇಕು. ಇದರಿಂದ ಮಕ್ಕಳಲ್ಲಿ ಆಧ್ಯಾತ್ಮಿಕ ಮನೋಭಾವದ ಜೊತೆಗೆ ಉತ್ತಮ ಸಂಸ್ಕಾರ ಬೆಳೆಯಲು ಸಹಕಾರಿಯಾಗುತ್ತದೆ,” ಎಂದು ಕಿವಿಮಾತು ಹೇಳಿದರು.

ಐಸಿಎಸ್‌ಇ ವಿಭಾಗದ ಪ್ರಾಚಾರ್ಯರಾದ ಶ್ರೀಮತಿ ಬೀನಾ.ಎ.ಜಾನ್ ಅವರು ಮಾತನಾಡಿ, “ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನು ಬಿತ್ತುವುದು ಕೇವಲ ಶಾಲೆಯಷ್ಟೇ ಅಲ್ಲ, ಕುಟುಂಬದ ಪ್ರಮುಖ ಜವಾಬ್ದಾರಿಯೂ ಆಗಿರುತ್ತದೆ. ಕೃಷ್ಣ ಎಂದರೆ ಕೇವಲ ದೇವನಲ್ಲ, ಕಷ್ಟದಲ್ಲಿರುವವರಿಗೆ ಆಪ್ತ ಗೆಳೆಯ, ಉತ್ತಮ ಸಲಹೆಗಾರ ಹಾಗೂ ರಕ್ಷಕ. ಆದ್ದರಿಂದ ಆತನ ತತ್ವ ಹಾಗೂ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬೆಳೆಯಬೇಕು,” ಎಂದು ತಿಳಿಸಿದರು.

ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಶಾಲೆಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು. ಪುಟ್ಟ ಮಕ್ಕಳು ಆಕರ್ಷಕವಾದ ಬಣ್ಣ ಬಣ್ಣದ ಕೃಷ್ಣ ಮತ್ತು ರಾಧೆಯರ ವೇಷಭೂಷಣಗಳನ್ನು ಧರಿಸಿ ನೃತ್ಯ ಮಾಡುವ ಮೂಲಕ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ರಂಜಿಸಿದರು.

ಈ ಸುಂದರ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *