ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ: ಕಾಂಗ್ರೆಸ್ ಸಿದ್ಧಾಂತ ಹಾಗೂ ಯುವ ಸಂಘಟನೆಗಳ ಮೂಲಕ ಯುವಜನತೆಯನ್ನು ಒಗ್ಗೂಡಿಸಲು ಮತ್ತು ಪಕ್ಷದ ತತ್ವಗಳನ್ನು ತಳಮಟ್ಟಕ್ಕೆ ತಲುಪಿಸಲು ಯುವ ಕಾಂಗ್ರೆಸ್ ಪ್ರಮುಖ ಆದ್ಯತೆ ನೀಡಿದೆ. ಇದಕ್ಕಾಗಿ ರಾಜ್ಯದಲ್ಲಿ ‘ಭಾರತ ಜೋಡೋ ಸಂಘಟನೆ’ಯನ್ನು ರೂಪಿಸಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಾರೇಹಳ್ಳಿ ಉಲ್ಲಾಸ್ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಭಾನುವಾರ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ, ನೂತನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಎಂ. ನಿಶ್ಚಿತ್ (ಚಿಂಟು) ಅವರ ಪದಗ್ರಹಣ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದಲ್ಲಿ ಪ್ರತಿಯೊಬ್ಬರಿಗೂ ಮಾತನಾಡಲು ಹಾಗೂ ಸಮಾಜದಲ್ಲಿ ಸಮಾನವಾಗಿ ಬದುಕಲು ಸಂವಿಧಾನ ವೇದಿಕೆ ಕಲ್ಪಿಸಿದೆ. ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳ ಆಧಾರದ ಮೇಲೆ ಪಕ್ಷವನ್ನು ಬಲಪಡಿಸುವ ಕಾರ್ಯ ನಡೆಯುತ್ತಿದೆ ಎಂದರು.
ಸರ್ಕಾರದ ಗ್ಯಾರಂಟಿಗಳು ಹಾಗೂ 10 ಲಕ್ಷ ರೂ. ಅನುದಾನ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ನುಡಿದಂತೆ ನಡೆದಿದ್ದು, ಉಚಿತ ವಿದ್ಯುತ್, ಉಚಿತ ಅಕ್ಕಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮಿ ಯೋಜನೆಯಡಿ ರೂ. 2,000 ಹಾಗೂ ಯುವನಿಧಿ ಸೇರಿದಂತೆ ಐದು ಮುಖ್ಯ ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ರಾಹುಲ್ ಗಾಂಧಿಯವರ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಐತಿಹಾಸಿಕ ಪಾದಯಾತ್ರೆಯ ಆಶಯವನ್ನು ಮುಂದುವರಿಸಲು ‘ಭಾರತ ಜೋಡೋ ಸಂಘಟನೆ’ ರಚಿಸಲಾಗುತ್ತಿದೆ. ಪ್ರತಿ ಯುವ ಸಂಘಕ್ಕೂ ಕ್ರೀಡೆ, ಸಸಿ ನೆಡುವುದು ಹಾಗೂ ಸಾಂಸ್ಕೃತಿಕ/ಸಾಮಾಜಿಕ ಕಾರ್ಯಕ್ರಮಗಳಿಗಾಗಿ ಮುಖ್ಯಮಂತ್ರಿಗಳು ವರ್ಷಕ್ಕೆ 10 ಲಕ್ಷ ರೂಪಾಯಿ ನೆರವು ನೀಡಲು ನಿರ್ಧರಿಸಿದ್ದಾರೆ. ನಾಳೆಯಿಂದಲೇ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಯುವಕರನ್ನು ನೋಂದಾಯಿಸಲಾಗುವುದು ಎಂದು ಉಲ್ಲಾಸ್ ಸ್ಪಷ್ಟಪಡಿಸಿದರು. ಶ್ರಮಿಸುವ ಸಾಮಾನ್ಯ ಕಾರ್ಯಕರ್ತರು, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಯುವಕರಿಗೆ ನಾಯಕತ್ವ ಬೆಳೆಸಿಕೊಳ್ಳಲು ಅವಕಾಶ ನೀಡಲಾಗುತ್ತಿದೆ. ಚಿಂಟು ಅವರಂತಹ ಯುವ ನಾಯಕರ ಸೇರ್ಪಡೆಯಿಂದ ಪಕ್ಷಕ್ಕೆ ಆನೆಬಲ ಬಂದಿದೆ ಎಂದರು.
ಪ್ರಾಮಾಣಿಕವಾಗಿ ಜವಾಬ್ದಾರಿ ನಿರ್ವಹಿಸುವೆ: ಎಂ. ನಿಶ್ಚಿತ್ ಜಿಲ್ಲಾ ಯುವ ಕಾಂಗ್ರೆಸ್ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಎಂ. ನಿಶ್ಚಿತ್ (ಚಿಂಟು) ಮಾತನಾಡಿ, “ನನ್ನ ಮೇಲಿನ ನಂಬಿಕೆಯಿಂದ ಈ ದೊಡ್ಡ ಜವಾಬ್ದಾರಿ ನೀಡಲಾಗಿದೆ. ಜಿಲ್ಲಾಧ್ಯಕ್ಷರಾದ ಕಾರೇಹಳ್ಳಿ ಉಲ್ಲಾಸ್ ಅವರು ನನ್ನಲ್ಲಿರುವ ಯುವಶಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಿದ್ದಾರೆ. ಈ ಹುದ್ದೆಯನ್ನು ಸವಾಲಾಗಿ ಸ್ವೀಕರಿಸಿ, ಪಕ್ಷವನ್ನು ತಳಮಟ್ಟದಿಂದ ಬಲವಾಗಿ ಸಂಘಟಿಸುತ್ತೇನೆ. ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರ ಒಗ್ಗಟ್ಟಿನೊಂದಿಗೆ ಯುವ ಕಾಂಗ್ರೆಸ್ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸುತ್ತೇನೆ,” ಎಂದು ಭರವಸೆ ನೀಡಿದರು.
ಸಂವಿಧಾನ ರಕ್ಷಣೆಯಲ್ಲಿ ಯುವಕರ ಪಾತ್ರ ಮುಖ್ಯ: ತಾಜ್‌ಪೀರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ತಾಜ್‌ಪೀರ್, ಶಿಕ್ಷಣ ಮತ್ತು ವೃತ್ತಿಪರ ಹಿನ್ನೆಲೆಯುಳ್ಳ ಯುವಕರು ರಾಜಕೀಯಕ್ಕೆ ಬರುತ್ತಿರುವುದು ಪಕ್ಷಕ್ಕೆ ಶಕ್ತಿ ತಂದಿದೆ ಎಂದರು. ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧೀಜಿ, ನೆಹರೂ, ಪಟೇಲ್, ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸ್ವಾತಂತ್ರ್ಯ ತಂದುಕೊಟ್ಟಿದೆ. ಬಿ.ಎಚ್. ಹರಿಪ್ರಸಾದ್, ಡಿ.ಕೆ. ಶಿವಕುಮಾರ್ ಹಾಗೂ ಕೆ.ಜೆ. ಜಾರ್ಜ್ ಅವರಂತಹ ಅನೇಕ ನಾಯಕರು ಯೂತ್ ಕಾಂಗ್ರೆಸ್ ಮೂಲಕವೇ ಬೆಳೆದು ಉನ್ನತ ಸ್ಥಾನಕ್ಕೇರಿದ್ದಾರೆ ಎಂದು ಸ್ಮರಿಸಿದರು.
ಕಾಂಗ್ರೆಸ್ ಪಕ್ಷವು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಾಗೂ ಮಣಿಪುರದಿಂದ ಗುಜರಾತ್‌ವರೆಗೆ 6,000 ಕಿ.ಮೀ. ಪಾದಯಾತ್ರೆ ನಡೆಸಿ ರೈತರು, ಕಾರ್ಮಿಕರು ಹಾಗೂ ಬಡವರ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಯುವಕರು ಕೇವಲ ಉತ್ಸಾಹ ತೋರದೆ ಜವಾಬ್ದಾರಿಯಿಂದ ವರ್ತಿಸಿ, ಸಂವಿಧಾನದ ಉಳಿವಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಸಂಪತ್ ಕುಮಾರ್, ಮಧುಗೌಡ, ವೆಂಕಟೇಶ್, ದಾದಾಪೀರ್, ಲಕ್ಷ್ಮೀಕಾಂತ್, ರಘುಗೌಡ, ದರ್ಶನ್ ಗೌಡ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.