ಚಿತ್ರಕಲಾವಿದರಿಗೆ ಪ್ರೋತ್ಸಾಹ, ಸೌಲಭ್ಯ ನೀಡಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಿ ಕಣ್ಮೇಶ್ ಆಗ್ರಹ.
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ: ಇಂದಿನ ತಾಂತ್ರಿಕ ಯುಗದಲ್ಲಿ ಮನುಷ್ಯನು ತನ್ನ ತವರುಮನೆಯ ಬಾಂಧವ್ಯ, ಸಂಬಂಧಗಳು ಹಾಗೂ ಭಾವನಾತ್ಮಕ ಮೌಲ್ಯಗಳನ್ನು ಬದಿಗಿಟ್ಟು ಕೇವಲ ಆಸ್ತಿ, ಅಂತಸ್ತು ಮತ್ತು ಹಣದ ಹಿಂದೆ ಓಡುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ಕಲಾಕೃತಿಗಳು ಹಾಗೂ ಚಿತ್ರಕಲೆಗಳು ಮನುಷ್ಯನ ಅಂತರಂಗದ ಸಂವೇದನೆಗಳನ್ನು ಉದ್ದೀಪಿಸಿ, ಕಳೆದುಹೋಗುತ್ತಿರುವ ಮಾನವೀಯ ಮೌಲ್ಯಗಳನ್ನು ನೆನಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎಂ. ಗುರುನಾಥ್ ತಿಳಿಸಿದರು.
ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದೊಂದಿಗೆ ನಗರದ ಪತ್ರಿಕಾ ಭವನದ ಬಿ.ವಿ. ವೈಕುಂಠರಾಜು ಸಭಾಂಗಣದಲ್ಲಿ ಶನಿವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಶ್ರೀಮತಿ ಶೃತಿ ಎಸ್. ಹೆಗಡೆ ಅವರ ಎರಡು ದಿನಗಳ ‘ಚಿತ್ರ ಕಲರವ’ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾವ್ಯ, ಕಥೆ ಅಥವಾ ಕಾದಂಬರಿಗಳು ಓದುಗನ ಮೇಲೆ ಬೀರುವಷ್ಟೇ ಪ್ರಬಲ ಹಾಗೂ ಅಷ್ಟೇ ಗಟ್ಟಿಯಾದ ಪರಿಣಾಮವನ್ನು ಈ ಚಿತ್ರಕಲೆಗಳು ಉಂಟುಮಾಡುತ್ತವೆ. ಮಾತುಗಳಲ್ಲಿ ವ್ಯಕ್ತಪಡಿಸಲಾಗದ ಭಾವನೆಗಳನ್ನು ರೇಖೆಗಳು ಹಾಗೂ ಬಣ್ಣಗಳ ಮೂಲಕ ವ್ಯಕ್ತಪಡಿಸುವ ಕಷ್ಟದ ಕೆಲಸವನ್ನು ಕಲಾವಿದರು ಯಶಸ್ವಿಯಾಗಿ ಮಾಡಿದ್ದಾರೆ ಎಂದು ಅವರು ಶ್ಲಾಘಿಸಿದರು.
ಮಕ್ಕಳ ಮೇಲಿನ ತಂತ್ರಜ್ಞಾನದ ಪ್ರಭಾವದ ಬಗ್ಗೆ ಕಳವಳ ಇಂದಿನ ಆಧುನಿಕ ಜೀವನಶೈಲಿ ಹಾಗೂ ಮಕ್ಕಳ ಮೇಲಾಗಿರುವ ತಂತ್ರಜ್ಞಾನದ ಪ್ರಭಾವ ಹೆಚ್ಚಾಗಿದೆ. ಇಂದಿನ ಮಕ್ಕಳು ಕೇವಲ ಮೊಬೈಲ್ ಹಾಗೂ ‘ರೀಲ್ಸ್’ಗಳಲ್ಲೇ ಕಾಲ ಕಳೆಯುತ್ತಿದ್ದು, ಅವರಿಗೆ ರಾಮಾಯಣ, ಮಹಾಭಾರತ ಅಥವಾ ನಮ್ಮ ಪರಂಪರೆಯ ಜ್ಞಾನದ ಅರಿವೇ ಇಲ್ಲದಂತಾಗಿದೆ. ಹಿಂದೆ ಅಜ್ಜಿ-ಅಮ್ಮಂದಿರು ಜಾನಪದ ಹಾಡುಗಳು ಹಾಗೂ ಗಾದೆಗಳ ಮೂಲಕ ಮಕ್ಕಳಿಗೆ ಜೀವನದ ವಿವೇಕವನ್ನು ಉಣಿಸುತ್ತಿದ್ದರು. ಆದರೆ ಇಂದು ಅಜ್ಜ-ಅಜ್ಜಿಯಂದಿರ ಸಾಮೀಪ್ಯ ಹಾಗೂ ಅವರ ಸಾಂಪ್ರದಾಯಿಕ ಹಾಡು-ಕಥೆಗಳು ಇಲ್ಲವಾಗಿವೆ ಎಂದು ಬಿ.ಎಂ. ಗುರುನಾಥ್ ಕಳವಳ ವ್ಯಕ್ತಪಡಿಸಿದರು.
ನಗರ ಜೀವನವು ಮಾನವರಲ್ಲಿ ಅನಾಥಪ್ರಜ್ಞೆ ಹಾಗೂ ಒಂಟಿತನವನ್ನು ಸೃಷ್ಟಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕಲಾ ಮಾಧ್ಯಮಗಳು ಮನಸ್ಸಿಗೆ ಶಾಂತಿ ಹಾಗೂ ಧೈರ್ಯವನ್ನು ನೀಡುವ ಶಕ್ತಿಯನ್ನು ಹೊಂದಿವೆ. ಆದ್ದರಿಂದ ಪ್ರತಿಯೊಬ್ಬರೂ ಕಲಾವಿದರು ಹಾಗೂ ಕವಿಗಳೊಂದಿಗೆ ಒಂದಷ್ಟು ಸಮಯವನ್ನು ಕಳೆಯಬೇಕು ಮತ್ತು ಮಕ್ಕಳಿಗೆ ಹಿರಿಯರೊಂದಿಗೆ ಬಾಳುವ ಸಂಸ್ಕೃತಿಯನ್ನು ಕಲಿಸಬೇಕು. ಯಾಂತ್ರಿಕ ಮತ್ತು ನಗರೀಕರಣದ ಓಟದಲ್ಲಿ ಮನುಷ್ಯನು ತನ್ನ ಬೇರುಗಳನ್ನು ಹಾಗೂ ಸಂವೇದನೆಗಳನ್ನು ಕಳೆದುಕೊಳ್ಳುತ್ತಿದ್ದು, ಕಲೆ ಮತ್ತು ಸಾಹಿತ್ಯದ ಮೂಲಕ ಮನುಷ್ಯತ್ವ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಂಡು ಹೋಗುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಅವರು ಕರೆ ನೀಡಿದರು.
ನೈಜ ಕಲಾವಿದರಿಗೆ ಸರ್ಕಾರದ ಪ್ರೋತ್ಸಾಹ ಅಗತ್ಯ ಚಿತ್ರ ಕಲರವದ ಅಧ್ಯಕ್ಷತೆಯನ್ನು ವಹಿಸಿದ್ದ ಲಲಿತಕಲಾ ಅಕಾಡೆಮಿಯ ಸದಸ್ಯ ಸಿ. ಕಣ್ಮೇಶ್ ಮಾತನಾಡಿ, ಶೃತಿ ಹೆಗಡೆ ಅವರು ಮೂಲತಃ ಚಿತ್ರಕಲಾವಿದರಲ್ಲದಿದ್ದರೂ ಕಳೆದ 2-3 ವರ್ಷಗಳಿಂದ ಚಿತ್ರಕಲೆಯನ್ನು ಅಭ್ಯಾಸ ಮಾಡಿ ಅತ್ಯುತ್ತಮ ಕಲಾಕೃತಿಗಳನ್ನು ರಚಿಸಿದ್ದಾರೆ. ಕಲೆಗೆ ವಯಸ್ಸಿನ ಹಂಗಿಲ್ಲ; ಡಾಕ್ಟರ್, ಇಂಜಿನಿಯರ್‌ಗಳೂ ಸೇರಿದಂತೆ ವಿವಿಧ ವೃತ್ತಿಯವರು ಕಲಾಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದನ್ನು ಉಲ್ಲೇಖಿಸಿದ ಅವರು, ಉದಯೋನ್ಮುಖ ಕಲಾವಿದರಿಗೆ ಸೂಕ್ತ ವೇದಿಕೆ ಮತ್ತು ಪ್ರೋತ್ಸಾಹ ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮನವಿ ಮಾಡಿದರು.
ರವೀಂದ್ರನಾಥ ಟ್ಯಾಗೋರ್ ಅವರು ಕೇವಲ ಸಾಹಿತಿ ಅಥವಾ ಕವಿಯಷ್ಟೇ ಅಲ್ಲದೆ, ತಮ್ಮ 63ನೇ ವಯಸ್ಸಿನಲ್ಲಿ ಚಿತ್ರಕಲೆಗೆ ಕಾಲಿಟ್ಟು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧರಾದರು. ಪಿಕಾಸೋ, ವ್ಯಾನ್ ಗೋಹ್ ಅವರಂತಹ ವಿಶ್ವಪ್ರಸಿದ್ಧ ಕಲಾವಿದರ ಸಾಲಿನಲ್ಲಿ ಟ್ಯಾಗೋರ್ ಅವರ ಕಲಾಕೃತಿಗಳೂ ಗುರುತಿಸಿಕೊಂಡಿದ್ದನ್ನು ಅವರು ಪ್ರಸ್ತಾಪಿಸಿದರು. ಕಲಾಕೃತಿಯನ್ನು ಸರಿಯಾಗಿ ಪ್ರಸ್ತುತಪಡಿಸುವುದು ಹಾಗೂ ಅದಕ್ಕೆ ತಕ್ಕ ಮೌಲ್ಯ ದೊರೆಯುವುದು ಮುಖ್ಯ. ಸಂಘ-ಸಂಸ್ಥೆಗಳಿಗೆ ಲಕ್ಷಾಂತರ ರೂಪಾಯಿ ಅನುದಾನ ನೀಡುವ ಬದಲು, ಶ್ರಮಿಸಿ ಕಲಾಪ್ರದರ್ಶನ ಆಯೋಜಿಸುವ ನೈಜ ಚಿತ್ರಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಧನಸಹಾಯ ಹಾಗೂ ಪ್ರೋತ್ಸಾಹ ನೀಡಬೇಕು. ಅಲ್ಲದೆ, ಪತ್ರಕರ್ತರ ಭವನದಲ್ಲಿ ಇಂತಹ ಪ್ರದರ್ಶನಗಳನ್ನು ಆಯೋಜಿಸುವುದರಿಂದ ಉತ್ತಮ ಪ್ರಚಾರ ಸಿಗಲಿದ್ದು, ಬಾಡಿಗೆಯಲ್ಲಿ ಕಲಾವಿದರಿಗೆ ಮತ್ತಷ್ಟು ರಿಯಾಯಿತಿ ಹಾಗೂ ಹೆಚ್ಚಿನ ಪ್ರಚಾರ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದರು.
ಕಲೆ ಎಂಬುದು ಒಂದು ತಪಸ್ಸು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿನಾಯಕ ಮಾತನಾಡಿ, ಚಿತ್ರಕಲೆಯು ಅತ್ಯಂತ ತಾಳ್ಮೆ ಮತ್ತು ಸಮಯವನ್ನು ಬೇಡುವ ಒಂದು ತಪಸ್ಸಾಗಿದ್ದು, ಎಲೆಮರೆ ಕಾಯಿಯಂತಿರುವ ಪ್ರತಿಭಾನ್ವಿತ ಚಿತ್ರಕಲಾವಿದರನ್ನು ಗುರುತಿಸಿ, ಅವರಿಗೆ ಸರ್ಕಾರದ ಹಂತದಲ್ಲಿ ಹೆಚ್ಚಿನ ಸೌಲಭ್ಯ ಹಾಗೂ ಪ್ರೋತ್ಸಾಹ ನೀಡಬೇಕೆಂಬುದು ಈ ಕಾರ್ಯಕ್ರಮದ ಮುಖ್ಯ ಆಶಯವಾಗಿದೆ ಎಂದರು.
ವೇದಿಕೆಯಲ್ಲಿ ಚಿನ್ಮೂಲಾದ್ರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ಶ್ರೀಮತಿ ದಯಾ ಪುತ್ತೂರ್ಕರ್, ಚಿತ್ರಕಲಾವಿದರಾದ ನಾಗರಾಜ್ ಬೇದ್ರೆ, ಹಾಗೂ ನವೀನ್ ಬೇದ್ರೆ ಭಾಗವಹಿಸಿದ್ದರು.
ಎರಡು ದಿನಗಳ ಈ ‘ಚಿತ್ರ ಕಲರವ’ದಲ್ಲಿ ಶ್ರೀಮತಿ ಶೃತಿ ಎಸ್. ಹೆಗಡೆ ಅವರು ರಚನೆ ಮಾಡಿರುವ ಯಕ್ಷಗಾನ, ಸಂಸ್ಕೃತಿ, ಪರಂಪರೆ ಹಾಗೂ ಪ್ರಕೃತಿಗೆ ಸಂಬಂಧಿಸಿದ ಕಲಾಕೃತಿಗಳು ಪ್ರದರ್ಶನಗೊಂಡಿವೆ.
ಕಾರ್ಯಕ್ರಮದ ಆರಂಭದಲ್ಲಿ ಅಂಜನ ನೃತ್ಯ ಕಲಾ ಕೇಂದ್ರದ ವಿದ್ಯಾರ್ಥಿಗಳಾದ ಪ್ರಾರ್ಥನಾ ಮತ್ತು ಸಿಂಧು ಅವರಿಂದ ಪ್ರಾರ್ಥನಾ ನೃತ್ಯ ಜರುಗಿತು. ಬಾಲಚಂದ್ರ ದೀಕ್ಷಿತ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರೆ, ವಿದ್ಯಾ ಬಿ. ದೀಕ್ಷಿತ್ ವಂದಿಸಿದರು.