ಶರಣರ ಕಾಯಕ ತತ್ವ ಇಂದಿನ ಸಮಾಜಕ್ಕೆ ದಾರಿದೀಪ: ಶ್ರೀ ಬಸವಲಿಂಗ ಮಹಾಸ್ವಾಮೀಜಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ: ಬಸವಾದಿ ಶರಣರು ನೀಡಿದ ಕಾಯಕ, ದಾಸೋಹ ಹಾಗೂ ಸಾಹಿತ್ಯ ಸಿದ್ಧಾಂತಗಳು ಇಂದಿನ ಸಮಾಜಕ್ಕೆ ಅತ್ಯಂತ ಅವಶ್ಯಕ ಹಾಗೂ ಮಾರ್ಗದರ್ಶಕವಾಗಿವೆ ಎಂದು ಸಿದ್ದಯ್ಯನಕೋಟೆ ಮಠದ ಶ್ರೀ ಬಸವಲಿಂಗ ಮಹಾಸ್ವಾಮೀಜಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ, ವಿಶ್ವ ಬಂಜಾರ ಕಲಾ ಸಾಹಿತ್ಯಕ ಸಂಘ ಹಾಗೂ ಬರಹವೇ ಶಕ್ತಿ ವೇದಿಕೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ತೃತೀಯ ಸಾಹಿತ್ಯ ಸಮ್ಮೇಳನ, ಕೃತಿ ಲೋಕಾರ್ಪಣೆ ಹಾಗೂ 2026ರ ರಾಜ್ಯ ಮಟ್ಟದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಬಸವಶ್ರೀ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಯಾವುದೇ ಆಧುನಿಕ ಸೌಲಭ್ಯಗಳಿಲ್ಲದಿದ್ದರೂ ಸಾಮಾನ್ಯ ಶರಣ-ಶರಣೆಯರು ಅದ್ಭುತ ವಚನ ಸಾಹಿತ್ಯ ರಚಿಸಿದ್ದರು. ಆದರೆ 21ನೇ ಶತಮಾನದಲ್ಲಿ ಕಾಯಕ ಮಾಡುವವರಿಗಿಂತ ಬೇಡುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಕಳವಳಕಾರಿ ವಿಷಯವಾಗಿದೆ. ಇಂದಿನ ಯುವಜನತೆ ಮೊಬೈಲ್ ಮತ್ತು ದುಶ್ಚಟಗಳಿಗೆ ದಾಸರಾಗದೆ, ಕಾಯಕ ಸಿದ್ಧಾಂತ ಹಾಗೂ ಮನೆಯ ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬೇಕು. ಮಳೆ ಅಭಾವದಿಂದ ಕಷ್ಟದಲ್ಲಿರುವ ಅನ್ನದಾತ ರೈತರ ಹಿತ ಕಾಯುವುದು ಸರ್ಕಾರದ ಮೊದಲ ಕರ್ತವ್ಯ ಎಂದ ಅವರು, ತಾವೇ ಸ್ವತಃ 350 ಚೀಲ ಭತ್ತ ಬೆಳೆದ ಸಾಧನೆಗಾಗಿ ಲಭಿಸಿದ ‘ರೈತ ಪ್ರಶಸ್ತಿ’ಯನ್ನು ದೇಶದ ಸಮಸ್ತ ರೈತರಿಗೆ ಸಮರ್ಪಿಸುವುದಾಗಿ ಘೋಷಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಶ್ರೀ ಬಸವಲಿಂಗ ಮಹಾಸ್ವಾಮೀಜಿ ಅವರು ಕೇವಲ ಇಷ್ಟಲಿಂಗ ಪೂಜೆ ಹಾಗೂ ಪ್ರವಚನಗಳಿಗೆ ಸೀಮಿತವಾಗದೆ, ಸ್ವತಃ ಕೃಷಿ ಮಾಡಿ ಮತ್ತು ಮಠಕ್ಕೆ ಬರುವ ಅತಿಥಿಗಳಿಗೆ ಪ್ರಸಾದ ಬಡಿಸುವ ಮೂಲಕ ಬಸವಣ್ಣನವರ ತತ್ವಗಳನ್ನು ನಿಜವಾದ ಅರ್ಥದಲ್ಲಿ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ ಎಂದರು. ಅಲ್ಲದೆ, ಚಿತ್ರದುರ್ಗದಲ್ಲಿ ರಾಜಾವೀರ ಮದಕರಿ ನಾಯಕರ ಪ್ರತಿಮೆ ನಿರ್ಮಾಣಕ್ಕೆ ಅಹರ್ನಿಶಿ ಶ್ರಮಿಸಿದ ಮಾಜಿ ನಗರಸಭಾಧ್ಯಕ್ಷ ಹೆಚ್.ಜೆ. ಕೃಷ್ಣಮೂರ್ತಿ ಹಾಗೂ ಅವರ ತಂಡದ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

‘ರಾಜಾವೀರ ಮದಕರಿ ನಾಯಕ’ ಪ್ರಶಸ್ತಿ ಸ್ವೀಕರಿಸಿದ ಹೆಚ್.ಜೆ. ಕೃಷ್ಣಮೂರ್ತಿ ಅವರು ಮಾತನಾಡಿ, 1997ರಲ್ಲಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಹಾಗೂ ನಗರಸಭೆಯ 15 ಲಕ್ಷ ರೂ. ಅನುದಾನದಲ್ಲಿ, ಹತ್ತು ಹಲವು ಅಡೆತಡೆಗಳ ನಡುವೆಯೂ ಅಂದಿನ ಮೆಜೆಸ್ಟಿಕ್ ವೃತ್ತದಲ್ಲಿ ಮದಕರಿ ನಾಯಕರ ಬೃಹತ್ ಕಂಚಿನ ಪ್ರತಿಮೆಯನ್ನು ಸ್ಥಾಪಿಸಿದ ಸುದೀರ್ಘ ಹೋರಾಟವನ್ನು ಮೆಲುಕು ಹಾಕಿದರು.

ವೇದಿಕೆಯಲ್ಲಿ ಮುರುಘಾರಾಜೇಂದ್ರ ಬೃಹನ್ಮಠದ ಶ್ರೀ ಬಸವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಸೌಭಾಗ್ಯ ಅಶೋಕ ಕೊಪ್ಪ ವಹಿಸಿದ್ದರು. ಹೆಚ್.ವಾಯ್ ರಾಠೋಡ್, ಬಿ.ಕೆ. ರಹಮತ್ತುಲ್ಲಾ, ಶಾರದಾ ಜೈರಾಂ ಬಿ., ದಯಾ ಪುತ್ತೂರ್ಕರ್, ಯೋಗೇಶ್ ಲಮಾಣಿ, ಹೆಚ್. ಮಂಜಪ್ಪ, ನಿರಂಜನ ಮೂರ್ತಿ, ವೆಂಕಟೇಶ್ ಹಾಗೂ ಮಲ್ಲಿಕಾರ್ಜುನ ಸಜ್ಜನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *