ಚಿತ್ರದುರ್ಗದಲ್ಲಿ ವಿಜೃಂಭಣೆಯ 19ನೇ ವರ್ಷದ ‘ಹಿಂದೂ ಮಹಾಗಣಪತಿ’ ಮಹೋತ್ಸವ: ನಾಳೆ ಪ್ರತಿಷ್ಠಾಪನೆ, ಅಕ್ಟೋಬರ್ 3 ರಂದು ಭವ್ಯ ಶೋಭಾಯಾತ್ರೆ.

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ನೇತೃತ್ವದಲ್ಲಿ ಕಳೆದ 18 ವರ್ಷಗಳಿಂದ ನಿರಂತರವಾಗಿ ಆಚರಿಸಿಕೊಂಡು ಬರLಾಗುತ್ತಿರುವ ಪ್ರತಿಷ್ಠಿತ ‘ಹಿಂದೂ ಮಹಾಗಣಪತಿ’ ಮಹೋತ್ಸವವು ಈ ಬಾರಿ ಅತಿ ವೈಭವದಿಂದ ಜರುಗಲಿದೆ. ಸೆಪ್ಟೆಂಬರ್ 14 ರಂದು ಸೋಮವಾರ ಬೆಳಗ್ಗೆ 9:18 ರಿಂದ 10:45 ರ ಶುಭ ಮುಹೂರ್ತದಲ್ಲಿ ನಗರದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ಹಿಂದೂ ಮಹಾಗಣಪತಿಯ ಪ್ರತಿಷ್ಠಾಪನೆ ನೆರವೇರಲಿದೆ ಎಂದು ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಚನ್ನಕೇಶವ್ ತಿಳಿಸಿದ್ದಾರೆ.

​ದೇಶದ ಎರಡನೇ ಅತಿ ದೊಡ್ಡ ಹಿಂದೂ ಮಹಾಗಣಪತಿ ಉತ್ಸವವೆಂಬ ಖ್ಯಾತಿ ಪಡೆದಿರುವ ಈ ಕಾರ್ಯಕ್ರಮದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಬಾರಿಯ ನೂತನ ಉತ್ಸವ ಸಮಿತಿಯನ್ನು ಈಗಾಗಲೇ ರಚಿಸಲಾಗಿದೆ ಎಂದರು.

​ಪ್ರಮುಖ ದಿನಾಂಕಗಳು ಮತ್ತು ಕಾರ್ಯಕ್ರಮದ ವಿವರ:

  • ಆಗಸ್ಟ್ 26: ನಾಡಿನ ವಿವಿಧ ಮಠಾಧೀಶರು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಗೋಪೂಜೆ ಹಾಗೂ ಧ್ವಜಪೂಜೆ ನೆರವೇರಿಸುವ ಮೂಲಕ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ.
  • ಸೆಪ್ಟೆಂಬರ್ 9: ಹಿಂದೂ ಮಹಾ ಗಣಪತಿಯ ವೈಭವದ ಪುರಪ್ರವೇಶ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದೆ.
  • ಸೆಪ್ಟೆಂಬರ್ 14 (ಸೋಮವಾರ): ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಬೆಳಗ್ಗೆ 9:18 ರಿಂದ 10:45ರ ಶುಭ ಲಗ್ನದಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ.
  • ಅಕ್ಟೋಬರ್ 3 (ಶನಿವಾರ): ಅತ್ಯಂತ ವಿಜೃಂಭಣೆ ಹಾಗೂ ಸಡಗರದಿಂದ ಅಂತಿಮ ಶೋಭಾಯಾತ್ರೆ ಹಾಗೂ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ.

​ರಾಜ್ಯಾದ್ಯಂತ ಹಾಗೂ ಜಿಲ್ಲೆಯಾದ್ಯಂತ ಸಂಭ್ರಮ:

​ಚಿತ್ರದುರ್ಗ ಜಿಲ್ಲಾ ಕೇಂದ್ರ ಮಾತ್ರವಲ್ಲದೆ ಚಳ್ಳಕೆರೆ, ಹೊಳಲ್ಕೆರೆ, ಹಿರಿಯೂರು, ಹೊಸದುರ್ಗ ಹಾಗೂ ಭರಮಸಾಗರ ಸೇರಿದಂತೆ ಎಲ್ಲಾ ತಾಲೂಕು ಕೇಂದ್ರಗಳಲ್ಲೂ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಸಹಯೋಗದಲ್ಲಿ ಹಿಂದೂ ಮಹಾಗಣಪತಿ ಉತ್ಸವ ನಡೆಯಲಿದೆ. ಈ ತಾಲೂಕುಗಳ ಶೋಭಾಯಾತ್ರೆಗಳು ಚಿತ್ರದುರ್ಗದ ಮುಖ್ಯ ಶೋಭಾಯಾತ್ರೆಗಿಂತ ಮುಂಚಿತವಾಗಿ ಮುಕ್ತಾಯಗೊಳ್ಳಲಿವೆ.

​ಕಳೆದ 19 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಈ ಪರಂಪರೆಯ ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಯಶಸ್ವಿಗೊಳಿಸಬೇಕಾಗಿ ಚನ್ನಕೇಶವ್ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *