ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ಏ.18:
ಈಚೆಗೆ ಅಂಬೇಡ್ಕರ್ ಆರಾಧನೆ, ಅವರ ಜಯಂತ್ಯುತ್ಸವ ಹೆಚ್ಚಾಗುತ್ತಿದೆ. ಆದರೆ, ಅವರ ಆಶಯಗಳು, ಚಿಂತನೆಗಳನ್ನು ನಾವು ಎಷ್ಟರಮಟ್ಟಿಗೆ ಬದುಕಿನಲ್ಲಿ ಅಳವಡಿಸಿಕೊಂಡಿದ್ದೇವೆ ಎಂಬ ಪ್ರಶ್ನೇ ಎದುರಾಗುತ್ತದೆ ಎಂದು ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಬಿ.ತಿಪ್ಪೇಸ್ವಾಮಿ ತಿಳಿಸಿದರು.
ಅಂಬೇಡ್ಕರ್ ಮತ್ತು ಬಾಬು ಜಾಗಜೀವನರಾಂ ಜಯಂತ್ಯುತ್ಸವ ಹಿನ್ನೆಲೆಯಲ್ಲಿ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಆಯೋಜಿಸಿದ್ದ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು.ಅಂಬೇಡ್ಕರ್ ಮತ್ತು ಬಾಬೂಜಿ ಇಬ್ಬರಲ್ಲಿ ಯಾರೂ ಶ್ರೇಷ್ಠವೆಂಬ ಪ್ರಶ್ನೇ ಎದುರಾಗುವುದು ಸಹಜ. ಆದರೆ, ಸ್ವಾತಂತ್ರ್ಯ ಪೂರ್ವದಲ್ಲಿ ಶೋಷಿತರು, ಶೂದ್ರರು, ದಲಿತರ ಬದುಕು ಉನ್ನತೀಕರಣಗೊಳಿಸಲು ಆರೋಪಗಳಿಗೆ ಎದೆಗುಂದದೆ ಮುಂದಾದ ಅಂಬೇಡ್ಕರ್ ಅವರ ನಡೆ ಸ್ಮರಣೀಯ ಎಂದರು. ಉಪ್ಪಿನ ಸತ್ಯಾಗ್ರಹ ಸೇರಿ ವಿವಿಧ ಚಳವಳಿ ಮೂಲಕ ಗಾಂಧೀಜಿ, ನೆಹರೂ ಭಾರತಕ್ಕೆ ಸ್ವತಂತ್ರ ತಂದುಕೊಟ್ಟರೇ, ಕೆರೆ ನೀರು ಕುಡಿಯುವ ಚಳವಳಿ ಮೂಲಕ ಅಂಬೇಡ್ಕರ್ ಶೋಷಿತ ವರ್ಗದವರಿಗೆ ಮೂಲ ಹಕ್ಕು ಕೊಡಿಸಲು ಕ್ರಾಂತಿಯ ಕಿಡಿ ಹತ್ತಿಸಿದರು. ಇಂತಹ ವೇಳೆ ಬ್ರಿಟೀಷರ ಏಜೆಂಟ್, ದೇಶದ್ರೋಹಿ ಸೇರಿ ಅನೇಕ ಆರೋಪಗಳನ್ನು ಎದುರಿಸಿದರು. ಆದರೂ ಅಸ್ಪøಶ್ಯ ಜನರ ಬದುಕು ಉನ್ನತೀಕರಿಸಲು ಜೀವನವನ್ನೇ ಮೀಸಲಿಟ್ಟ ಅಂಬೇಡ್ಕರ್ ನಾಡಿನ ಬಹುದೊಡ್ಡ ಮಹಾತ್ಮ ಎಂದು ಬಣ್ಣಿಸಿದರು.
ಪ್ರಕೃತಿ ಎಲ್ಲ ಜೀವಸಂಕುಲಗಳಿಗೆ ಕುಡಿಯುವ ನೀರು, ಗಾಳಿ ಸೇರಿ ಎಲ್ಲವನ್ನು ನೀಡಿದರೆ. ಆದರೆ, ನಾಯಿ-ನರಿ ಕೆರೆ ನೀರು ಕುಡಿಯಬಹುದು. ದಲಿತರು ಬಾವಿ-ಕೆರೆ ನೀರು ಬಳಸುವಂತಿಲ್ಲವೆಂಬ ಅಮಾನವೀಯ ಪದ್ಧತಿ ನಿರ್ಮೂಲನೆಗೆ ಹೋರಾಟ ನಡೆಸಿದರು. ಅವರು ನಡೆಸಿದ ಚಳವಳಿ ಫಲ ನಾವಿದಂದು ನೆಮ್ಮದಿ ಜೀವನ ನಡೆಸುತ್ತಿದ್ದೇವೆ ಎಂದರು.
ಶಿಕ್ಷಣ, ಅಧಿಕಾರ, ಆರ್ಥಿಕ ಸಮಾನತೆ ಆಗಬೇಕು. ಇಲ್ಲದಿದ್ದರೆ ನಾವು ಮುಖ್ಯವಾಹಿನಿಗೆ ಬರಲು ಸಾಧ್ಯವಾಗು ವುದಿಲ್ಲ. ಶ್ರೀಮಂತರು, ಜಮೀನುದಾರರು, ಉದ್ಯಮಿಗಳಿಗೆ ಮಾತ್ರ ಇದ್ದ ಮತಹಕ್ಕನ್ನು ಎಲ್ಲರಿಗೂ ಕಲ್ಪಿಸಿಕೊಟ್ಟರು. ಆದರೆ, ನಾವು ಮತ ಮಾರಾಟ ಮಾಡಿಕೊಳ್ಳುತ್ತಿದ್ದೇವೆ. ಪರಿಣಾಮ ಅಧಿಕಾರದಿಂದ ದೂರವೇ ಉಳಿದಿದ್ದೇವೆ. ಮತ ಮೌಲ್ಯ ಅರಿತರೇ ಶೋಷಿತ ವರ್ಗದ ಕೈಗೆ ಅಧಿಕಾರ ದೊರೆಯಲಿದೆ ಎಂದು ತಿಳಿಸಿದರು.