
ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಆಸ್ಟ್ರೇಲಿಯಾ ವಶಪಡಿಸಿಕೊಂಡಿದೆ. ಕ್ಲೀನ್ ಸ್ವೀಪ್ ಉದ್ದೇಶದೊಂದಿಗೆ ಹರಿಣಗಳ ವಿರುದ್ಧ ಮೂರನೇ ಟೆಸ್ಟ್ ಆಡಲು ಕಣಕ್ಕಿಳಿದ್ದಿದ್ದ ಕಾಂಗರೂಗಳಿಗೆ ವರುಣ ರಾಯ ವಿಲನ್ ಆದ. ಸಿಡ್ನಿಯಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟೆಸ್ಟ್ಗೆ ಮಳೆ ಕಾಟಕೊಟ್ಟಿದ್ದರಿಂದ ಎರಡು ದಿನಗಳ ಆಟ ಸಂಪೂರ್ಣವಾಗಿ ರದ್ದಾಯಿತು. ಒಂದು ವೇಳೆ ಈ ಪಂದ್ಯಕ್ಕೆ ಮಳೆ ಎಂಟ್ರಿಕೊಡದಿದ್ದರೆ ಬ್ರಿಸ್ಬೇನ್, ಮೆಲ್ಬೋರ್ನ್ನಂತೆಯೇ ಸಿಡ್ನಿಯಲ್ಲಿಯೂ ದಕ್ಷಿಣ ಆಫ್ರಿಕಾ ಸೋಲನ್ನು ಎದುರಿಸುವ ಸಾಧ್ಯತೆ ಇತ್ತು.
ಆದರೆ, ಇದೀಗ ಸಿಡ್ನಿ ಟೆಸ್ಟ್ ಡ್ರಾಗೊಂಡಿದ್ದು, ಇದರೊಂದಿಗೆ ದಕ್ಷಿಣ ಆಫ್ರಿಕಾದ 46 ಪಂದ್ಯಗಳ ದಾಖಲೆಯೂ ಮುರಿದಿದೆ. ವಾಸ್ತವವಾಗಿ ದಕ್ಷಿಣ ಆಫ್ರಿಕಾ ಆಡಿರುವ 46 ಟೆಸ್ಟ್ ಪಂದ್ಯಗಳಲ್ಲಿ ಒಂದು ನಿರ್ದಿಷ್ಟ ಫಲಿತಾಂಶ ಹೊರಬೀಳುತ್ತಿತ್ತು. ಅಂದರೆ ಈ 46 ಪಂದ್ಯಗಳಲ್ಲಿ ಒಂದೋ ಆಫ್ರಿಕಾ ಸೋಲುತ್ತಿತ್ತು, ಅಥವಾ ಗೆಲ್ಲುತ್ತಿತ್ತು. ಆದರೆ ಈ 47ನೇ ಟೆಸ್ಟ್ ಪಂದ್ಯ ಡ್ರಾದೊಂದಿಗೆ ಅಂತ್ಯಗೊಳ್ಳುವುದರೊಂದಿಗೆ ಒಂದು ನಿರ್ದಿಷ್ಟ ಫಲಿತಾಂಶದ ರೆಕಾರ್ಡ್ ಬ್ರೇಕ್ ಆಗಿದೆ. ಈ ಪಂದ್ಯಕ್ಕೂ ಮೊದಲು ಬ್ರಿಸ್ಬೇನ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 6 ವಿಕೆಟ್ಗಳಿಂದ ಗೆದ್ದುಕೊಂಡಿದ್ದ ಆಸ್ಟ್ರೇಲಿಯಾ, ಆ ಬಳಿಕ ಮೆಲ್ಬೋರ್ನ್ನಲ್ಲಿ ನಡೆದ ಎರಡನೇ ಟೆಸ್ಟ್ನಲ್ಲಿ ಇನ್ನಿಂಗ್ಸ್ ಹಾಗೂ 182 ರನ್ಗಳ ಅಂತರದಿಂದ ಜಯ ಸಾಧಿಸಿತ್ತು.