ಐಪಿಎಲ್ 2026ರ ರೋಚಕ ಪಂದ್ಯಗಳಲ್ಲಿ ಒಂದಾದ 35ನೇ ಪಂದ್ಯ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಬೌಂಡರಿ, ಸಿಕ್ಸರ್ಗಳ ಸುರಿಮಳೆಯೇ ಹರಿದ ಹೈ-ವೋಲ್ಟೇಜ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 265 ರನ್ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ಪಂಜಾಬ್ ಕಿಂಗ್ಸ್ (PBKS) ಹೊಸ ಇತಿಹಾಸ ಸೃಷ್ಟಿಸಿದೆ. ಇದು ಐಪಿಎಲ್ ಟೂರ್ನಿಯ ಇತಿಹಾಸದಲ್ಲೇ ಅತಿ ದೊಡ್ಡ ರನ್ ಚೇಸ್ ದಾಖಲೆಯಾಗಿದೆ. ಇನ್ನು 7 ಎಸೆತಗಳು ಬಾಕಿ ಇರುವಂತೆಯೇ ಪಂಜಾಬ್ ತಂಡ ಭರ್ಜರಿ ಗೆಲುವಿನ ನಗೆ ಬೀರಿತು.
ಕೆ.ಎಲ್. ರಾಹುಲ್-ನಿತೀಶ್ ರಾಣಾ ಸ್ಫೋಟಕ ಆಟ, ಡೆಲ್ಲಿ ಬೃಹತ್ ಮೊತ್ತ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೇವಲ 28 ರನ್ಗಳಿಗೆ ಆರಂಭಿಕ ಆಟಗಾರ ಪಾಥುಮ್ ನಿಸ್ಸಂಕ (11) ಅವರ ವಿಕೆಟ್ ಕಳೆದುಕೊಂಡಿತು. ಆದರೆ ಆ ಬಳಿಕ ಜೊತೆಯಾದ ಕೆ.ಎಲ್. ರಾಹುಲ್ ಹಾಗೂ ನಿತೀಶ್ ರಾಣಾ ಪಂಜಾಬ್ ಬೌಲರ್ಗಳನ್ನು ಅಕ್ಷರಶಃ ಬೆಂಡೆತ್ತಿದರು. ಮೈದಾನದ ಮೂಲೆ ಮೂಲೆಗೂ ಸಿಕ್ಸರ್ ಬಾರಿಸಿದ ಈ ಜೋಡಿ ಎರಡನೇ ವಿಕೆಟ್ಗೆ ಬರೋಬ್ಬರಿ 192 ರನ್ಗಳ ದಾಖಲೆಯ ಜೊತೆಯಾಟವಾಡಿತು.
- ಕೆ.ಎಲ್ ರಾಹುಲ್ ಶತಕದಾಟ: ಕೇವಲ 67 ಎಸೆತಗಳನ್ನು ಎದುರಿಸಿದ ರಾಹುಲ್ 16 ಬೌಂಡರಿ ಹಾಗೂ 9 ಭರ್ಜರಿ ಸಿಕ್ಸರ್ಗಳ ನೆರವಿನಿಂದ ಅಜೇಯ 152 ರನ್ ಸಿಡಿಸಿ ಮಿಂಚಿದರು.
- ರಾಣಾ ಅಬ್ಬರ: ಮತ್ತೊಂದೆಡೆ ಸಾಥ್ ನೀಡಿದ ನಿತೀಶ್ ರಾಣಾ 44 ಎಸೆತಗಳಲ್ಲಿ 11 ಬೌಂಡರಿ, 4 ಸಿಕ್ಸರ್ ಸಹಿತ 91 ರನ್ ಗಳಿಸಿ ಔಟಾದರು. ಈ ಜೋಡಿಯ ಅಬ್ಬರದ ಫಲವಾಗಿ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ ಓವರ್ಗಳಲ್ಲಿ 265 ರನ್ಗಳ ಹಿಮಾಲಯದಷ್ಟು ಮೊತ್ತ ಪೇರಿಸಿತು.
ಪವರ್ಪ್ಲೇನಲ್ಲೇ ಪಂದ್ಯದ ಗತಿಯನ್ನೇ ಬದಲಿಸಿದ ಪಂಜಾಬ್ ಓಪನರ್ಸ್ 265 ರನ್ಗಳ ಕಠಿಣ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಆರಂಭಿಕರಾದ ಪ್ರಿಯಾಂಶ್ ಆರ್ಯ ಹಾಗೂ ಪ್ರಭ್ಸಿಮ್ರಾನ್ ಸಿಂಗ್ ಸ್ಫೋಟಕ ಆರಂಭ ಒದಗಿಸಿದರು. ಡೆಲ್ಲಿ ಬೌಲರ್ಗಳ ಮೇಲೆ ಮುಗಿಬಿದ್ದ ಈ ಜೋಡಿ ಮೊದಲ 6 ಓವರ್ಗಳ ಪವರ್ಪ್ಲೇನಲ್ಲಿಯೇ ವಿಕೆಟ್ ನಷ್ಟವಿಲ್ಲದೆ 116 ರನ್ ಚಚ್ಚಿದರು. ಇದು ಐಪಿಎಲ್ ಇತಿಹಾಸದಲ್ಲಿ ಪವರ್ಪ್ಲೇನಲ್ಲಿ ದಾಖಲಾದ ಎರಡನೇ ಅತ್ಯಧಿಕ ಸ್ಕೋರ್ ಆಗಿದೆ.
ತಂಡದ ಮೊತ್ತ 126 ರನ್ ಆಗಿದ್ದಾಗ 43 ರನ್ ಗಳಿಸಿದ್ದ ಪ್ರಿಯಾಂಶ್ ಆರ್ಯ ಔಟಾದರು. ಬೆನ್ನಲ್ಲೇ 76 ರನ್ ಸಿಡಿಸಿದ್ದ ಪ್ರಭ್ಸಿಮ್ರಾನ್ ಸಿಂಗ್ ಕೂಡ ಪೆವಿಲಿಯನ್ ಸೇರಿದರು. ನಂತರ ಬಂದ ಕೂಪರ್ ಕೊನೊಲಿ (17) ಹಾಗೂ ನೆಹಲ್ ವದೇರಾ (15 ಎಸೆತಗಳಲ್ಲಿ 25 ರನ್) ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ಪಂದ್ಯ ಡೆಲ್ಲಿ ಪರ ವಾಲುವ ಮುನ್ಸೂಚನೆ ನೀಡಿತ್ತು.
ಕರುಣ್ ನಾಯರ್ ಕೈಚೆಲ್ಲಿದ ಕ್ಯಾಚ್, ಪಂಜಾಬ್ಗೆ ವರದಾನ! ಪಂದ್ಯ ಅತ್ಯಂತ ನಿರ್ಣಾಯಕ ಘಟ್ಟ ತಲುಪಿದ್ದಾಗ ಫೀಲ್ಡಿಂಗ್ ಮಾಡುತ್ತಿದ್ದ ಡೆಲ್ಲಿ ಆಟಗಾರ ಕರುಣ್ ನಾಯರ್ ಮಾಡಿದ ದೊಡ್ಡ ಪ್ರಮಾದ ಪಂದ್ಯದ ಫಲಿತಾಂಶವನ್ನೇ ಬದಲಿಸಿತು. ಕ್ರೀಸ್ನಲ್ಲಿದ್ದ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ನೀಡಿದ ಎರಡು ಸುಲಭ ಕ್ಯಾಚ್ಗಳನ್ನು ಕರುಣ್ ನಾಯರ್ ಕೈಚೆಲ್ಲಿದರು. ಸಿಕ್ಕ ಎರಡು ಜೀವದಾನಗಳನ್ನು ಅದ್ಭುತವಾಗಿ ಬಳಸಿಕೊಂಡ ಶ್ರೇಯಸ್ ಅಯ್ಯರ್, ದೆಹಲಿ ಬೌಲರ್ಗಳನ್ನು ದಂಡಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಡೆಲ್ಲಿ ಪಾಲಿಗೆ ಕರುಣ್ ನಾಯರ್ ವಿಲನ್ ಆದರೆ, ಪಂಜಾಬ್ ಪಾಲಿಗೆ ಐತಿಹಾಸಿಕ ದಾಖಲೆ ನಿರ್ಮಾಣವಾಯಿತು.

