ಸಿಸಿಎಲ್ 2026: ಕರ್ನಾಟಕ ಬುಲ್ಡೋಜರ್ಸ್ ಚಾಂಪಿಯನ್!

12 ವರ್ಷಗಳ ವನವಾಸ ಅಂತ್ಯ: 3ನೇ ಬಾರಿಗೆ ಸಿಸಿಎಲ್ ಟ್ರೋಫಿ ಗೆದ್ದು ಬೀಗಿದ ಕರ್ನಾಟಕ ಬುಲ್ಡೋಜರ್ಸ್!

ಕೊಯಮತ್ತೂರು: ಚಿತ್ರರಂಗದ ತಾರೆಯರ ಕ್ರಿಕೆಟ್ ಹಬ್ಬವಾದ ‘ಸೆಲೆಬ್ರಿಟಿ ಕ್ರಿಕೆಟ್ ಲೀಗ್’ (ಸಿಸಿಎಲ್) 2026ರ ಫೈನಲ್‌ನಲ್ಲಿ ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಅದ್ಭುತ ಜಯ ಸಾಧಿಸಿದೆ. ಭಾನುವಾರ (ಫೆಬ್ರವರಿ 1) ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಬಂಗಾಳ ಟೈಗರ್ಸ್ ತಂಡವನ್ನು ಮಣಿಸುವ ಮೂಲಕ, ಕರ್ನಾಟಕ ತಂಡ ಬರೋಬ್ಬರಿ 12 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕ್ಕೇರಿದೆ.

ಮೂರನೇ ಬಾರಿಗೆ ಕಪ್ ಎತ್ತಿ ಹಿಡಿದ ಬುಲ್ಡೋಜರ್ಸ್

ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಇದು ಮೂರನೇ ಸಿಸಿಎಲ್ ಪ್ರಶಸ್ತಿಯಾಗಿದೆ. ಇದಕ್ಕೂ ಮೊದಲು 2013 ಮತ್ತು 2014ರಲ್ಲಿ ಸತತವಾಗಿ ಎರಡು ಬಾರಿ ಕಪ್ ಗೆದ್ದಿದ್ದ ತಂಡ, ಆ ಬಳಿಕ ಟ್ರೋಫಿಗಾಗಿ ದಶಕಕ್ಕೂ ಹೆಚ್ಚು ಕಾಲ ಕಾಯಬೇಕಾಯಿತು. ಕಳೆದ 12 ವರ್ಷಗಳಲ್ಲಿ ಆರು ಬಾರಿ ಫೈನಲ್ ತಲುಪಿದ್ದರೂ, ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಗಿತ್ತು. ಆದರೆ, ಈ ಬಾರಿ ಟೂರ್ನಿಯ ಆರಂಭದಿಂದಲೂ ಸಂಘಟಿತ ಹೋರಾಟ ಪ್ರದರ್ಶಿಸಿದ ಸುದೀಪ್ ಪಡೆ, ಕೊನೆಗೂ ಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಬಂಗಾಳ ಟೈಗರ್ಸ್ ಆಟಕ್ಕೆ ಲಗಾಮು

ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬೆಂಗಾಲ್ ಟೈಗರ್ಸ್ ತಂಡಕ್ಕೆ ಕರ್ನಾಟಕದ ಬೌಲರ್‌ಗಳು ಆರಂಭದಲ್ಲೇ ಆಘಾತ ನೀಡಿದರು. ಶಿಸ್ತುಬದ್ಧ ದಾಳಿಯ ಮುಂದೆ ರನ್ ಗಳಿಸಲು ಪರದಾಡಿದ ಬಂಗಾಳ ತಂಡ, ನಿಗದಿತ 20 ಓವರ್‌ಗಳಲ್ಲಿ ಕೇವಲ 129 ರನ್ ಗಳಿಸಲಷ್ಟೇ ಶಕ್ತವಾಯಿತು. ಕರ್ನಾಟಕದ ಪರ ಪ್ರತಾಪ್ 3 ವಿಕೆಟ್ ಪಡೆದು ಮಿಂಚಿದರೆ, ಸುನೀಲ್ 2 ವಿಕೆಟ್ ಕಬಳಿಸಿ ಎದುರಾಳಿಗಳನ್ನು ಕಟ್ಟಿಹಾಕಿದರು.

ರಾಜೀವ್ ಸ್ಫೋಟಕ ಬ್ಯಾಟಿಂಗ್

130 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಕರ್ನಾಟಕಕ್ಕೆ ಆರಂಭಿಕ ಆಘಾತದ ಭಯವಿರಲಿಲ್ಲ. ತಂಡದ ಪ್ರಮುಖ ಆಟಗಾರ ರಾಜೀವ್, ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಪರಾಕ್ರಮ ಮೆರೆದರು. ಕೇವಲ 37 ಎಸೆತಗಳಲ್ಲಿ 69 ರನ್ ಸಿಡಿಸಿದ ರಾಜೀವ್, ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ರಾಜೀವ್ ಔಟಾದ ನಂತರ ಬಂಗಾಳದ ರತನ್‌ದೀಪ್ ಉತ್ತಮ ಬೌಲಿಂಗ್ ಪ್ರದರ್ಶಿಸಿದರೂ, ಕರ್ನಾಟಕದ ಇತರ ಆಟಗಾರರು ಜವಾಬ್ದಾರಿಯುತ ಆಟವಾಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

​ಈ ಗೆಲುವಿನೊಂದಿಗೆ ಕರ್ನಾಟಕ ಬುಲ್ಡೋಜರ್ಸ್ ಅಭಿಮಾನಿಗಳ 12 ವರ್ಷಗಳ ಸುದೀರ್ಘ ಕಾಯುವಿಕೆಗೆ ಅಂತ್ಯ ಹಾಡಿದ್ದು, ಸಿಸಿಎಲ್ ಇತಿಹಾಸದಲ್ಲಿ ಮತ್ತೊಮ್ಮೆ ತಮ್ಮ ಪ್ರಾಬಲ್ಯವನ್ನು ಸಾಬೀತುಪಡಿಸಿದೆ.

Leave a Reply

Your email address will not be published. Required fields are marked *