ಚಿತ್ರದುರ್ಗ ಆ. 3
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ವೀರಶೈವ ಸಮಾಜದ ಬಾಂಧವರಿಂದ ಪ್ರಾರಂಭವಾದ ವೀರಶೈವ ಸೊಸೈಟಿಯು ಜೆ.ಎಂ. ಜಯಕುಮಾರ್ ಇವರ ಅಧ್ಯಕ್ಷತೆಯಲ್ಲಿ 2001ರಲ್ಲಿ ಪ್ರಾರಂಭವಾಗಿ ನಂತರ ಸಂಘದ ಪ್ರಗತಿಯು ಕ್ರಮೇಣ ಏರುಗತಿಯಲ್ಲಿ ಸಾಗುತ್ತಾ ಇಂದು ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ ಎಂದು ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಪಟೇಲ್ ಶಿವಕುಮಾರ್ ತಿಳಿಸಿದರು.
ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಎದುರಿನಲ್ಲಿರುವ ಸೊಸೈಟಿಯ ಆವರಣದಲ್ಲಿ ಸೋಮವಾರ ನಡೆದ ಸೊಸೈಟಿಯ ರಜತ ಮಹೋತ್ಸವ ಸರಳ ಸಮಾರಂಭದಲ್ಲಿ ಸಹಕಾರಿ ಗಳಿಗೆ ಸನ್ಮಾನ ನೇರವೇರಿಸಿ ಮಾತನಾಡಿದ ಅವರು, ಸೊಸೈಟಿಯ ರಜತ ಮಹೋತ್ಸವದ ಆಚರಣೆಯು ಸದಸ್ಯರ, ಗ್ರಾಹಕರ ನಂಬಿಕೆ, ವಿಶ್ವಾಸ, ಆರ್ಥಿಕ ಸ್ಥಿರತೆ ಮತ್ತು ಸಮಾಜಕ್ಕೆ ನೀಡಿರುವ ಅಪಾರ ಕೊಡುಗೆಯ ಸಂಕೇತವಾಗಿದೆ. ಈ 25 ವರ್ಷಗಳ ಅವಧಿಯಲ್ಲಿ ಸೊಸೈಟಿಯು 500 ಜನ ಸದಸ್ಯರ ನೋಂದಣಿಯೊಂದಿಗೆ ಪ್ರಾರಂಭವಾಗಿ ಇಂದು 1702 ಜನ ಸದಸ್ಯರನ್ನು ಹೊಂದಿ ಈ ನಗರಕ್ಕೆ ಒಂದು ಒಳ್ಳೆಯ ಸೊಸೈಟಿಯಾಗಿ ಬೆಳೆದು ನಿಂತಿರುವುದನ್ನು ನಮ್ಮ ಸಂಘ ಅಂತ ಹೆಮ್ಮೆಯಿಂದ ಹೇಳಿಕೊಳ್ಳಬಹುದು ಎಂದರು.
ಈಗಿನ ರಾಷ್ಟ್ರೀಕೃತ ಬ್ಯಾಂಕಿನ ಪೈಪೋಟಿಯಲ್ಲಿ ನಮ್ಮ ಸೊಸೈಟಿಯು ಸ್ಥಳೀಯ ಜನರ ನಂಬಿಕೆಯನ್ನು ಉಳಿಸಿಕೊಂಡು ಬಂದಿರುವುದು ನಮ್ಮ ಸೊಸೈಟಿಯ ಒಂದು ಹೆಗ್ಗಳಿಕೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸದೃಡವಾಗಿ ಬೆಳೆಯಲು ಹೆಚ್ಚಿನ ರೀತಿಯಲ್ಲಿ ಸಹಕಾರಿಯಾಗುತ್ತದೆ ಎಂಬ ಅಚಲ ವಿಶ್ವಾಸ ನಮ್ಮದಾಗಿದೆ. ಆರ್ಥಿಕ ವರ್ಷ 2025-26ನೇ ಸಾಲಿನಲ್ಲಿ ನಮ್ಮ ಸೊಸೈಟಿಯ ಠೇವಣಿಗಳಲ್ಲಿ, ಸಾಲ ಹಾಗೂ ಮುಂಗಡಗಳಲ್ಲಿ ಗಣನೀಯ ಪ್ರಗತಿ ಕಂಡು ಬಂದಿರುತ್ತದೆ. ಈ ಎಲ್ಲಾ ಬೆಳವಣಿಗೆಯ ಹಿಂದೆ ಸದಸ್ಯರ ಸಹಾಯ, ಸಹಕಾರ ಡಿಪಾಜಿಟ್‍ದಾರರು ನಮ್ಮ ಸೊಸೈಟಿಯ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ, ನಂಬಿಕೆಯೇ ಕಾರಣ ಮತ್ತು ಆಡಳಿತ ಮಂಡಲಿ ನಿರ್ದೇಶಕರ ನಿಸ್ವಾರ್ಥ ಸೇವೆ ಹಾಗೂ ಅವಿರತ ಬೆಂಬಲ, ಸ್ಪೂರ್ತಿದಾಯಕ ಹಾರೈಕೆ ಹಾಗೂ ಸಿಬ್ಬಂದಿ ವರ್ಗದವರ ಪ್ರಮಾಣಿಕ ಹಾಗೂ ಅವಿರತ ಸೇವೆಯೇ ಕಾರಣವಾಗಿದೆ ಎಂದು ಪಟೇಲ್ ಶಿವಕುಮಾರ್ ತಿಳಿಸಿದರು.
03/08/2001 ರಲ್ಲಿ ಎಲ್ಲಾ ವೀರಶೈವ ಲಿಂಗಾಯತ ಸಮಾಜ ಬಾಂಧವರಿಂದ 500 ಜನ ಸದಸ್ಯರ ನೋಂದಣಿಯೊಂದಿಗೆ ವೀರಶೈವ ಪತ್ತಿನ ಸಹಕಾರ ಸಂಘವನ್ನು ಪ್ರಾರಂಭಿಸಲಾಯಿತ್ತು. ಈ ಪತ್ತಿನ ಸಂಘಕ್ಕೆ ದಕ್ಷ ಮತ್ತು ಪ್ರಮಾಣಿಕ ವ್ಯಕ್ತಿಯಾದ ಜೆ.ಎಂ. ಜಯಕುಮಾರ್ ಇವರನ್ನು ಸಂಘದ ಪ್ರಾರಂಭಿಕ ಅಧ್ಯಕ್ಷರನ್ನಾಗಿ ಮಾಡಲಾಯಿತು. ತದನಂತರ ನಮ್ಮ ಪತ್ತಿನ ಸಂಘವು ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಎಂಬ ಹೆಸರಿಗೆ ನಾಮಾಂಕಿತಗೊಂಡು 20 ವರ್ಷಗಳ ದಕ್ಷ ಆಡಳಿತದೊಂದಿಗೆ ಸೊಸೈಟಿಯನ್ನು ಮುಂದುವರಿಸುತ್ತಾ, ಎಲ್ಲರ ಸಹಕಾರದಿಂದ 10ನೇ ವರ್ಷಕ್ಕೆ ಸೊಸೈಟಿಯು ಸ್ವಂತ ಕಟ್ಟಡ ನಿರ್ಮಾಣದೊಂದಿಗೆ ಸಂಘವನ್ನು ಪ್ರಗತಿಯತ್ತ ಸಾಗಿಸಿದರು. ತದನಂತರ ಬಂದಂತಹ ನನ್ನ ಅಧ್ಯಕ್ಷತೆಯ ನೇತೃತ್ವದಲ್ಲಿ ಬಂದ ತಂಡ, ತಮ್ಮ ನಿರ್ದೇಶಕರು ಸದಾ ಬೆಂಬಲವಾಗಿ ನಿಂತು ಕಾರ್ಯನಿರ್ವಹಿಸುತ್ತಾ, ಸಂಘವು ಇನ್ನು ಹೆಚ್ಚಿನ ಪ್ರಗತಿಯತ್ತ ಮುನ್ನಡೆಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.