ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಪದವಿ ಕೋರ್ಸ್ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಏಪ್ರಿಲ್ 23 ಮತ್ತು 24 ರಂದು ರಾಜ್ಯಾದ್ಯಂತ ನಡೆಯಲಿದ್ದು, ಪರೀಕ್ಷಾ ಅಕ್ರಮಗಳನ್ನು ತಡೆಯಲು ಪ್ರಾಧಿಕಾರ ಈ ಬಾರಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.
ರಾಜ್ಯಾದ್ಯಂತ ಒಟ್ಟು 745 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಸೂಕ್ಷ್ಮ ಕೇಂದ್ರಗಳಲ್ಲಿ ಜಾಮರ್ಗಳನ್ನು ಅಳವಡಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ. ಬೆಂಗಳೂರಿನ 163 ಕೇಂದ್ರಗಳಲ್ಲಿ ಅತಿ ಹೆಚ್ಚು, ಅಂದರೆ ಒಟ್ಟು 77,604 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಕಮಾಂಡ್ ಸೆಂಟರ್ ಅನ್ನು ಕೆಇಎ ಕಚೇರಿಯಲ್ಲಿ ಸ್ಥಾಪಿಸಲಾಗಿದ್ದು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಸಿಇಒಗಳು ಮೇಲುಸ್ತುವಾರಿ ವಹಿಸಲಿದ್ದಾರೆ.
ಪರೀಕ್ಷಾ ವೇಳಾಪಟ್ಟಿ:
- ಏಪ್ರಿಲ್ 22: ಹೊರನಾಡು ಮತ್ತು ಗಡಿನಾಡು ಕನ್ನಡಿಗರಿಗೆ ಕನ್ನಡ ಭಾಷಾ ಪರೀಕ್ಷೆ (ಬೆಂಗಳೂರು, ಮಂಗಳೂರು, ವಿಜಯಪುರ ಮತ್ತು ಬೆಳಗಾವಿ ಕೇಂದ್ರಗಳಲ್ಲಿ).
- ಏಪ್ರಿಲ್ 23: ಭೌತ ವಿಜ್ಞಾನ (Physics) ಮತ್ತು ರಸಾಯನ ವಿಜ್ಞಾನ (Chemistry).
- ಏಪ್ರಿಲ್ 24: ಗಣಿತ (Mathematics) ಮತ್ತು ಜೀವ ವಿಜ್ಞಾನ (Biology).
ಅಕ್ರಮಗಳಿಗೆ ಬ್ರೇಕ್: ಬಿಗಿ ಭದ್ರತೆ ಹೇಗಿದೆ?
- ವೆಬ್ ಕಾಸ್ಟಿಂಗ್: ಎಲ್ಲಾ 745 ಪರೀಕ್ಷಾ ಕೇಂದ್ರಗಳ ಮೇಲೆ ವೆಬ್ ಕಾಸ್ಟಿಂಗ್ ಮೂಲಕ ನಿರಂತರ ಕಣ್ಗಾವಲು ಇಡಲಾಗಿದೆ.
- ನೈಜತೆ ಪರಿಶೀಲನೆ: ಮುಖ ಚಹರೆ (Facial Recognition) ಮತ್ತು ಕ್ಯೂಆರ್ ಕೋಡ್ ವ್ಯವಸ್ಥೆ ಮೂಲಕ ಅಭ್ಯರ್ಥಿಗಳ ನೈಜತೆ ಪರಿಶೀಲನೆ. ಬೇರೆಯವರ ಹೆಸರಿನಲ್ಲಿ ಪರೀಕ್ಷೆ ಬರೆಯುವುದನ್ನು ತಡೆಯಲು ಈ ಕ್ರಮ. ಸೀಟು ಹಂಚಿಕೆಯಾಗಿ ಕಾಲೇಜಿಗೆ ಪ್ರವೇಶ ಪಡೆಯುವಾಗಲೂ ಇದೇ ಭಾವಚಿತ್ರವನ್ನು ಹೋಲಿಕೆ ಮಾಡಲಾಗುತ್ತದೆ.
ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು:
- 2 ಗಂಟೆ ಮುಂಚಿತವಾಗಿ ಹಾಜರಾಗಿ: ತೀವ್ರ ತಪಾಸಣೆ ಇರುವ ಕಾರಣ, ವಿದ್ಯಾರ್ಥಿಗಳು ಕನಿಷ್ಠ ಎರಡು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪಬೇಕು.
- ಶ್ರವಣ ಸಾಧನ ಬಳಸುವ ವಿಶೇಷ ಚೇತನ ಅಭ್ಯರ್ಥಿಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕಾಗಿರುವುದರಿಂದ, ಅವರೂ ಸಹ 2 ಗಂಟೆ ಮುಂಚಿತವಾಗಿ ಬರುವುದು ಕಡ್ಡಾಯ (ಈ ಬಾರಿ 970 ವಿಶೇಷ ಚೇತನ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ).
- ಒಎಂಆರ್ ಭರ್ತಿಯಲ್ಲಿ ಎಚ್ಚರ: ಒಎಂಆರ್ ಶೀಟ್ನಲ್ಲಿ ಅಭ್ಯರ್ಥಿಯ ಹೆಸರು, ಸಿಇಟಿ ಸಂಖ್ಯೆ, ವರ್ಷನ್ ಕೋಡ್ ಮತ್ತು ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆಯನ್ನು ಯಾವುದೇ ತಪ್ಪಿಲ್ಲದೆ ನಮೂದಿಸಿ ಶೇಡ್ ಮಾಡಬೇಕು. ಕರಡು ಒಎಂಆರ್ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಮೊದಲೇ ಅಭ್ಯಾಸ ಮಾಡುವುದು ಒಳಿತು.
- ಫೇಲ್ ಆದವರಿಗೂ ಅವಕಾಶ: ದ್ವಿತೀಯ ಪಿಯುಸಿ ಮೊದಲ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವ ಅಥವಾ ಅನುತ್ತೀರ್ಣರಾದವರೂ ಸಹ ಸಿಇಟಿ ಬರೆಯಬಹುದು. ಎರಡನೇ ಪರೀಕ್ಷೆಯ (ಪೂರಕ) ಅಂಕಗಳನ್ನು ಸಿಇಟಿ ಫಲಿತಾಂಶಕ್ಕೆ ಪರಿಗಣಿಸಲಾಗುತ್ತದೆ.
ಕಡ್ಡಾಯ ವಸ್ತ್ರ ಸಂಹಿತೆ (Dress Code):
ಅನಗತ್ಯ ಗೊಂದಲಗಳನ್ನು ತಪ್ಪಿಸಲು ಇದೇ ಮೊದಲ ಬಾರಿಗೆ ಪ್ರತಿ ಕೇಂದ್ರಕ್ಕೂ ಒಬ್ಬ ವಸ್ತ್ರ ಸಂಹಿತೆ ಅಧಿಕಾರಿಯನ್ನು ನೇಮಿಸಲಾಗಿದೆ. ಅಭ್ಯರ್ಥಿಗಳು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು:
- ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕಡ್ಡಾಯವಾಗಿ ಅರ್ಧ ತೋಳಿನ (Half-sleeve) ಬಟ್ಟೆ ಧರಿಸಬೇಕು.
- ಸಾಧ್ಯವಾದಷ್ಟು ಕಾಲರ್ ಇಲ್ಲದ ಉಡುಪುಗಳನ್ನು ಧರಿಸುವುದು ಉತ್ತಮ.
- ಪುರುಷರು ಜೇಬುಗಳಿಲ್ಲದ ಅಥವಾ ಕಡಿಮೆ ಜೇಬುಗಳಿರುವ ಸರಳ ಪ್ಯಾಂಟ್ ಧರಿಸಬೇಕು.
- ಜೀನ್ಸ್ ಪ್ಯಾಂಟ್, ಕುರ್ತಾ ಪೈಜಾಮ ಧರಿಸುವಂತಿಲ್ಲ. ಶೂಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ (ಚಪ್ಪಲಿ/ಸ್ಯಾಂಡಲ್ ಧರಿಸಬಹುದು).
- ಮೊಬೈಲ್, ಬ್ಲೂಟೂತ್, ಇಯರ್ ಫೋನ್, ಸ್ಮಾರ್ಟ್ ವಾಚ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವಂತಿಲ್ಲ.
ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ಯಾವುದೇ ಅನ್ಯಾಯವಾಗದಂತೆ ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ನಿಶ್ಚಿಂತೆಯಿಂದ ಪರೀಕ್ಷೆ ಎದುರಿಸಬಹುದು ಎಂದು ಪ್ರಾಧಿಕಾರ ಅಭಯ ನೀಡಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ಸಮಗ್ರ ಸುದ್ದಿ ಬಳಗದ ಕಡೆಯಿಂದ ಶುಭ ಹಾರೈಕೆಗಳು!

