ಚಿಕ್ಕಬಳ್ಳಾಪುರದ ಕನ್ನಡ ಭವನದಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾರಿ ಹೈಡ್ರಾಮಾ ನಡೆದಿದ್ದು, ಶಾಸಕ ಪ್ರದೀಪ್ ಈಶ್ವರ್ ಅವರು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾರ್ಯಕ್ರಮದ ವೇದಿಕೆಯಿಂದ ಪ್ರದೀಪ್ ಈಶ್ವರ್ ಅವರನ್ನು ಕೆಳಗಿಳಿಯುವಂತೆ ಕುಮಾರಸ್ವಾಮಿ ಹಾಗೂ ಸಂಸದ ಡಾ. ಕೆ. ಸುಧಾಕರ್ ಬೆಂಬಲಿಗರು ಗಲಾಟೆ ಮಾಡಿದ್ದೇ ಈ ಆಕ್ರೋಶಕ್ಕೆ ಕಾರಣವಾಗಿದೆ.
ವೇದಿಕೆಯಲ್ಲಿ ಗಲಾಟೆ, ಶಾಸಕರ ಆಕ್ರೋಶ
ಕಾರ್ಯಕ್ರಮದಲ್ಲಿ ನಡೆದ ಅವಮಾನದಿಂದ ತೀವ್ರ ಅಸಮಾಧಾನಗೊಂಡ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, “ನಾನು ಶೋಷಿತ ಸಮುದಾಯದಿಂದ ಬಂದಿರುವ ಶಾಸಕ. ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಈ ರೀತಿ ಅವಮಾನ ಮಾಡುವುದು ಎಷ್ಟು ಸರಿ? ಈ ಜಿಲ್ಲೆಯಲ್ಲಿ ಶೋಷಿತರು ಮತ್ತು ಅಲ್ಪಸಂಖ್ಯಾತರು ಬದುಕುವಂತಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
‘ನಾವೇನು ನಿಮ್ಮ ಮನೆ ವಾಚ್‌ಮನ್‌ಗಳಾ?’
ಹೆಚ್.ಡಿ. ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, “ಕುಮಾರಣ್ಣ, ನಿಮಗೆ ಡಿ.ಕೆ. ಶಿವಕುಮಾರ್ ಹಾಗೂ ಚಲುವರಾಯಸ್ವಾಮಿ ಅವರ ಬೆಳವಣಿಗೆಯನ್ನೂ ಸಹಿಸಿಕೊಳ್ಳಲು ಆಗುತ್ತಿಲ್ಲ. ಈಗ ಒಬಿಸಿ (OBC) ಶಾಸಕನಾದ ನನ್ನನ್ನೂ ಸಹಿಸುತ್ತಿಲ್ಲ. ನಮ್ಮನ್ನು ನಿಮ್ಮ ಮನೆಯ ಕೂಲಿ ಕಾರ್ಮಿಕರು, ವಾಚ್‌ಮನ್‌ಗಳು ಎಂದುಕೊಂಡಿದ್ದೀರಾ? ನಮ್ಮ ಸಮುದಾಯದ ಕಾರ್ಯಕ್ರಮಗಳಲ್ಲಿ ನಿಮ್ಮನ್ನು ಎಂದಾದರೂ ಅವಮಾನ ಮಾಡಿದ್ದೀವಾ?” ಎಂದು ಕಿಡಿಕಾರಿದ್ದಾರೆ.
ತಾಕತ್ತಿದ್ದರೆ ಇಲ್ಲಿಗೆ ಬಂದು ಸ್ಪರ್ಧಿಸಿ!
“ಕ್ಷೇತ್ರದಲ್ಲಿ ಒಕ್ಕಲಿಗರು ಸೇರಿದಂತೆ ಬೇರೆ ಯಾವ ನಾಯಕರೂ ಬೆಳೆಯಬಾರದಾ? ನಾನು ಒಬ್ಬನೇ ಒಕ್ಕಲಿಗ ನಾಯಕ ಡಿ.ಕೆ. ಶಿವಕುಮಾರ್ ಪರವಾಗಿ ನಿಂತಿರುವುದು. ಖಬರ್ದಾರ್ ಕುಮಾರಣ್ಣ, ನಿನ್ನ ಚೇಲಾಗಳಿಗೆ ಹೆದರುವ ಮಗ ನಾನಲ್ಲ. ಬೇರೆಯವರ ಕೈಯಲ್ಲಿ ಚಾಲೆಂಜ್ ಮಾಡಿಸುವುದಲ್ಲ, ನಿನಗೆ ನಿಜಕ್ಕೂ ತಾಕತ್ತಿದ್ದರೆ ನೇರವಾಗಿ ಬಂದು ಚಿಕ್ಕಬಳ್ಳಾಪುರದಲ್ಲಿ ಚುನಾವಣೆಗೆ ನಿಂತ್ಕೋ” ಎಂದು ಪ್ರದೀಪ್ ಈಶ್ವರ್ ಬಹಿರಂಗ ಸವಾಲು ಹಾಕಿದ್ದಾರೆ.